ಸುಮಾರು 200 ವರ್ಷಗಳಷ್ಟು ಪುರಾತನವಾದ ಶ್ರೀ ಭದ್ರೀಯ ಮಾತಾಜಿ ದೇವಾಲಯದ ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಹಾಡುಗಾರರ ಸ್ವರ ಮಂದವಾಗುತ್ತಾ ಹೋಯಿತು. ಇದ್ದಕ್ಕಿದ್ದಂತೆ ಎಲ್ಲಾ ಶಬ್ದಗಳೂ ಸಂಪೂರ್ಣ ಮಾಯವಾಗುವಾಗ ನಾವು 20 ಅಡಿ ಕೆಳಗೆ ನೆಲದ ಮೇಲಿದ್ದೆವು.
ಮುಂದೆ 15,000 ಚದರ ಅಡಿಗಳಷ್ಟು ವಿಸ್ತಾರವಾದ ಚಕ್ರವ್ಯೂಹದಂತ ಗ್ರಂಥಾಲಯವೊಂದು ತೆರೆದುಕೊಳ್ಳುತ್ತದೆ. ಕಿರಿದಾದ ಕಾರಿಡಾರ್‌ಗಳಲ್ಲಿ 562 ಕಪಾಟುಗಳನ್ನು ಮೇಲೆ ಎರಡು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಜೋಡಿಸಲಾಗಿತ್ತು. ಲೆದರ್- ಬೈಂಡ್ ಮಾಡಿರುವ ಪುಸ್ತಕಗಳು, ತೊಗಟೆ ಮೇಲೆ ಬರೆದಿರುವ ಹಳೆಯ ಹಸ್ತಪ್ರತಿ, ಹಿಂದೂ ಧರ್ಮ, ಇಸ್ಲಾಂ, ಕ್ರಿಶ್ಚಿಯಾನಿಟಿ ಮತ್ತು ಇತರ ಧರ್ಮಗಳಿಂದ ಹಿಡಿದು ಕಾನೂನು, ವೈದ್ಯಕೀಯ, ತತ್ವಶಾಸ್ತ್ರ, ಭೂಗೋಳ, ಇತಿಹಾಸ ಮೊದಲಾದ ಬಗ್ಗೆ ಇರುವ ಪುಸ್ತಕಗಳು ಇಲ್ಲಿವೆ. ಫಿಕ್ಷನ್ ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಕ್ಲಾಸಿಕ್ ಹಾಗೂ ಹೊಸ ಹೊಸ ಕಾದಂಬರಿಗಳು ಇಲ್ಲಿವೆ. ಹೆಚ್ಚಿನ ಪುಸ್ತಕಗಳು ಹಿಂದಿಯಲ್ಲಿದ್ದು, ಕೆಲವು ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿವೆ.
ಈ ಗ್ರಂಥಾಲಯದ ಆಲೋಚನೆ ಪಂಜಾಬ್‌ನ ಧಾರ್ಮಿಕ ವಿದ್ವಾಂಸರಾದ ಹರ್ವಂಶ್ ಸಿಂಗ್ ನಿರ್ಮಲ್ ಅವರದ್ದು. 25 ವರ್ಷಗಳಿಂದ ದೇವಾಲಯದ ಆವರಣದಲ್ಲಿರುವ ಗುಹೆಯಲ್ಲಿ ಏಕಾಂತದಲ್ಲಿದ್ದ ಇವರು ಅದರ ಕೆಳಗೆ ಗ್ರಂಥಾಲಯವನ್ನು ನಿರ್ಮಿಸಲು ನಿರ್ಧರಿಸಿದರು ಎಂದು ಹೇಳಲಾಗುತ್ತದೆ. ಆದರೆ 2010 ರಲ್ಲಿ, ಶಿಕ್ಷಣ ಮತ್ತು ಪಶು ಕಲ್ಯಾಣಕ್ಕಾಗಿ ಹಣವನ್ನು ಸಂಗ್ರಹಿಸಿದ ನಂತರವೇ, ಅವರು ನಿಧನರಾದರು.
“ಅವರು ಮಹಾನ್ ಮಾನವತಾವಾದಿಯಾಗಿದ್ದರು. ಎಲ್ಲಾ ಧರ್ಮಗಳು ಒಂದೇ ನೀತಿಯನ್ನು ಹೇಳುತ್ತವೆ: ಮನುಷ್ಯನ ಚರ್ಮದ ಬಣ್ಣ ಬೇರೆ ಬೇರೆ ಇರಬಹುದು, ಕೂದಲಿನ ಬಣ್ಣ ವಿಭಿನ್ನವಾಗಿರಬಹುದು, ಆಂತರ್ಯದಲ್ಲಿ ನಾವೆಲ್ಲರೂ ಒಂದೇ,” ಎಂದು ದೇವಸ್ಥಾನ ಮತ್ತು ಗ್ರಂಥಾಲಯದ ಟ್ರಸ್ಟ್ ಶ್ರೀ ಜಗದಂಬಾ ಸೇವಾ ಸಮಿತಿಯ ಕಾರ್ಯದರ್ಶಿ ಜುಗಲ್ ಕಿಶೋರ್ ಹೇಳುತ್ತಾರೆ. 40,000 ಕ್ಕೂ ಹೆಚ್ಚು ಗೋವುಗಳಿಗೆ ಈ ಟ್ರಸ್ಟ್ ಆಶ್ರಯ ನೀಡಿದೆ.

ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಧೋಲಿಯಾ ಸಮೀಪ ಇರುವ ಶ್ರೀ ಭದ್ರೀಯ ಮಾತಾಜಿ ದೇವಸ್ಥಾನದಲ್ಲಿ ನೆಲದಡಿಯಲ್ಲಿ ಇರುವ ಗ್ರಂಥಾಲಯ


ಎಡ: ದಿವಂಗತ ಶ್ರೀ ಹರ್ವಂಶ್ ಸಿಂಗ್ ನಿರ್ಮಲ್, ಗ್ರಂಥಾಲಯವನ್ನು ಸ್ಥಾಪಿಸಿರುವ ಧಾರ್ಮಿಕ ವಿದ್ವಾಂಸ. ಬಲ: ದೇವಸ್ಥಾನ, ಗ್ರಂಥಾಲಯ ಮತ್ತು ಗೋಶಾಲೆಯನ್ನು ನಡೆಸುತ್ತಿರುವ ಟ್ರಸ್ಟ್ ಶ್ರೀ ಜಗದಂಬಾ ಸೇವಾ ಸಮಿತಿಯ ಕಾರ್ಯದರ್ಶಿ ಜುಗಲ್ ಕಿಶೋರ್
ಗ್ರಂಥಾಲಯದ ನಿರ್ಮಾಣವು 1983 ರಲ್ಲಿ ಪ್ರಾರಂಭವಾಗಿ 1998 ರ ಹೊತ್ತಿಗೆ ಪೂರ್ತಿಯಾಯಿತು. ನಂತರ ಪುಸ್ತಕಗಳನ್ನು ಸಂಗ್ರಹಿಸುವ ಕೆಲಸ ಆರಂಭವಾಯಿತು. "ಅವರು [ನಿರ್ಮಲ್] ಇದನ್ನು ಜ್ಞಾನದ ಕೇಂದ್ರ, ವಿಶ್ವವಿದ್ಯಾನಿಲಯವನ್ನಾಗಿ ಮಾಡಬೇಕೆಂಬ ಕನಸು ಕಂಡಿದ್ದರು," ಎಂದು ಕಿಶೋರ್ ಹೇಳುತ್ತಾರೆ, " ಜನರೇ ಈ ಸ್ಥಳವನ್ನು ಹುಡುಕಿ ಬರಬೇಕು ಮತ್ತು ಅರಿವಿನ ಹುಡುಕಾಟದಲ್ಲಿರುವವರಿಗೆ ಇಲ್ಲಿ ಎಲ್ಲಾ ಜ್ಞಾನವೂ ಸಿಗಬೇಕು ಎಂಬುದು ಮಹಾರಾಜ ಜೀಯವರ ಆಶಯವಾಗಿತ್ತು," ಎನ್ನುತ್ತಾರೆ ಕಿಶೋರ್.
ಪೋಕರನ್ ನಿಂದ 10 ಕಿಲೋಮೀಟರ್ ದೂರದಲ್ಲಿರುವ ಭಾರತೀಯ ಸೇನೆಯ ಫೈರಿಂಗ್ ವ್ಯಾಪ್ತಿಗೆ ಬರುವ ಈ ಜಾಗದಲ್ಲಿ ರಾಜಸ್ಥಾನದ ಹುಲ್ಲುಗಾವಲುಗಳಲ್ಲಿ ಗಾಳಿ ಬೀಸಿದಾಗ ಎಲ್ಲೆಡೆ ಧೂಳು ಏಳುವ ಕಾರಣ ಧೂಳಿನಿಂದ ಹಾನಿಯಾಗದಂತೆ ಪುಸ್ತಕಗಳನ್ನು ರಕ್ಷಿಸಲು ನೆಲದಡಿಯ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂದು ಗ್ರಂಥಾಲಯದ ನಿರ್ವಾಹಕರು ಹೇಳುತ್ತಾರೆ.
ಅಶೋಕ್ ಕುಮಾರ್ ದೇವಪಾಲ್ ಅವರು ಗ್ರಂಥಾಲಯ ನಿರ್ವಹಣೆ ತಂಡದಲ್ಲಿ ಕೆಲಸ ಮಾಡುತ್ತಾರೆ. ಆರು ದೊಡ್ಡ ಎಕ್ಸಾಸ್ಟ್ ಫ್ಯಾನ್‌ಗಳನ್ನು ಬಳಸಿ ಒಣ ವಾತಾವರಣವನ್ನು ಸೃಷ್ಟಿಸಲಾಗಿದೆ. ಗಾಳಿಯಲ್ಲಿ ಕರ್ಪೂರವನ್ನು ಉರಿಸಲಾಗುತ್ತದೆ. ಪುಟಗಳು ಅಂಟಿಕೊಳ್ಳದಂತೆ ತಡೆಯಲು, “ನಾವು ಪುಸ್ತಕಗಳನ್ನು ತೆರೆದಿಟ್ಟು ಗಾಳಿಯಾಡಲು ಬಿಡುತ್ತೇವೆ. ನಮ್ಮಲ್ಲಿರುವ ಏಳರಿಂದ ಎಂಟು ಮಂದಿ ಈ ಕೆಲಸವನ್ನು ಎರಡು ತಿಂಗಳು ಮಾಡುತ್ತೇವೆ,” ಎನ್ನುತ್ತಾರೆ.


ಎಡ: ಪುಸ್ತಕಗಳ ಸಂಗ್ರಹ. ಬಲ: ಗ್ರಂಥಾಲಯ ನಿರ್ವಹಣಾ ತಂಡದಲ್ಲಿ ಕೆಲಸ ಮಾಡುವ ಅಶೋಕ್ ಕುಮಾರ್ ದೇವಪಾಲ್
ದೇವಸ್ಥಾನದ ಟ್ರಸ್ಟ್ ಗೆ ಸೇರಿದ ಈ 1.25 ಲಕ್ಷ ಬಿಘಾಸ್ (ಸುಮಾರು 20,000 ಎಕರೆ) ಭೂಮಿಯ ಭದರಿಯಾ ಓರಾನ್ (ದೇವರ ಬನ) ನಲ್ಲಿ ಹಿಂದಿನಿಂದಲೇ ನಡೆದು ಬಂದಂತೆ "ಒಂದೇ ಒಂದು ಕೊಂಬೆಯನ್ನೂ ಕತ್ತರಿಸಬಾರದು" ಎಂದು ಎಪ್ಪತ್ತರ ಹರೆಯದ ಕಿಶೋರ್ ಹೇಳುತ್ತಾರೆ. ಇಲ್ಲಿ 40,000 ಕ್ಕೂ ಹೆಚ್ಚು ಹಸುಗಳಿಗೆ. ವರ್ಷಾವರ್ಷ ಬರುವ ನಾಲ್ಕು ಹಬ್ಬಗಳಿಗೆ ರಜಪೂತರು, ಬಿಷ್ಣೋಯಿಗಳು ಮತ್ತು ಜೈನರು ಸೇರಿದಂತೆ ಒಂದು ವರ್ಷದಲ್ಲಿ ಸರಿಸುಮಾರು 2-3 ಲಕ್ಷ ಜನರು ಭೇಟಿ ನೀಡುತ್ತಾರೆ. ಈ ಸಮಯದಲ್ಲಿ, ಗ್ರಂಥಾಲಯವು ಉದ್ಘಾಟನೆಯಾದಾಗಿನಿಂದ, ಈ ಗ್ರಂಥಾಲಯವನ್ನು ನೋಡಲು ಜನ ಬರುತ್ತಿದ್ದಾರೆ.
ಗ್ರಂಥಾಲಯ ಮಾತ್ರವಲ್ಲ, 150 ಸಿಬ್ಬಂದಿಗಳಿಂದ ನಿರ್ವಹಿಸಲ್ಪಡುವ ವಿಸ್ತಾರವಾದ ಒಂದು ಗೋಶಾಲೆ ಕೂಡ ಇಲ್ಲಿದೆ. ಗಿರ್, ಥಾರ್ಪಾರ್ಕರ್, ರಾಠಿ ಮತ್ತು ನಾಗೋರಿ ಸೇರಿದಂತೆ ಹತ್ತಾರು ಹಸುಗಳು ಮತ್ತು ವಿವಿಧ ತಳಿಗಳ ಎತ್ತುಗಳು ಇಲ್ಲಿವೆ. "ಒರಾನ್ ಇರುವುದೇ ಪಕ್ಷಿಗಳು ಮತ್ತು ಪ್ರಾಣಿಗಳಿಗೆ" ಎಂದು ಟ್ರಸ್ಟ್‌ನ ಆಡಳಿತಾಧಿಕಾರಿ ಅಶೋಕ್ ಸೋಡಾನಿ ಹೇಳುತ್ತಾರೆ. ಇನ್ನು ನಿರುಪಯೋಗಿ, ಅದರಲ್ಲೂ ಶೇ.90 ರಷ್ಟು ಗಂಡು ಹಸುಗಳನ್ನು ಇಲ್ಲಿಗೆ ತಂದು ಬಿಡುತ್ತಾರೆ. "ನಮ್ಮ ಗೋಶಾಲೆಯಲ್ಲಿ 14 ಕೊಳವೆಬಾವಿಗಳಿವೆ ಮತ್ತು ಟ್ರಸ್ಟ್ ವಾರ್ಷಿಕವಾಗಿ ಸುಮಾರು 25 ಕೋಟಿ ರುಪಾಯಿಗಳನ್ನು ಮೇವಿಗಾಗಿ ಖರ್ಚು ಮಾಡುತ್ತದೆ" ಎಂದು ಸೋಡಾನಿ ಹೇಳುತ್ತಾರೆ. "ಹರಿಯಾಣ, ಪಂಜಾಬ್ ಮತ್ತು ಮಧ್ಯಪ್ರದೇಶದಿಂದ ಪ್ರತಿದಿನ 3-4 ಟ್ರಕ್‌ಲೋಡ್‌ಗಳು ಇಲ್ಲಿಗೆ ಬರುತ್ತವೆ." ದೇಣಿಗೆಯಿಂದ ಬರುವ ಹಣದಿಂದ ಇದನ್ನು ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ.
ನಮ್ಮ ಮೇಲೆ ಸೂರ್ಯ ಕಿರಣಗಳು ಬೀಳುತ್ತಿದ್ದಂತೆ ಧೋಳಿ ಸಮುದಾಯದ ಪ್ರೇಮ್ ಚೌಹಾಣ್ ಮತ್ತು ಲಕ್ಷ್ಮಣ್ ಚೌಹಾಣ್ ದೇವಸ್ಥಾನದ ಸುತ್ತಮುತ್ತಿಲಿನ ಪ್ರದೇಶದ ಅಧಿದೇವತೆಯಾದ ಶ್ರೀ ಭದರಿಯಾ ಮಾತೆಯನ್ನು ಹಾರ್ಮೋನಿಯಂ ಬಾರಿಸುತ್ತಾ ಸ್ತುತಿಸಿ ಹಾಡುತ್ತಿದ್ದರು.

ವರ್ಷವಿಡೀ ಅನೇಕ ಭಕ್ತರನ್ನು ತನ್ನೆಡೆಗೆ ಸೆಳೆಯುವ ಈ ದೇವಾಲಯಕ್ಕೆ ಬರುವವರಲ್ಲಿ ಕೆಲವರು ಗ್ರಂಥಾಲಯಕ್ಕೂ ಭೇಟಿ ನೀಡುತ್ತಾರೆ

ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಶ್ರೀ ಭದ್ರೀಯ ಮಾತಾ ಜಿ ದೇವಸ್ಥಾನದ ಪ್ರವೇಶದ್ವಾರ

ದೇವಾಲಯಕ್ಕೆ ಭೇಟಿ ನೀಡುವವರು ಗ್ರಂಥಾಲಯಕ್ಕೂ ಬರುತ್ತಾರೆ, ಈಗ ಇದೊಂದು ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿದೆ

15,000 ಚದರ ಅಡಿಗಳಲ್ಲಿ ಹರಡಿರುವ ಈ ಗ್ರಂಥಾಲಯದ ಕಿರಿದಾದ ಕಾರಿಡಾರ್ ಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿರುವ 562 ಕಪಾಟುಗಳಿವೆ

ಪ್ರಾಚೀನ ಗ್ರಂಥಗಳನ್ನು ಬೀಗಹಾಕಿ ಇಡಲಾಗಿದೆ

1,000 ವರ್ಷಗಳಷ್ಟು ಹಳೆಯ ಕೆಲವು ಹಸ್ತಪ್ರತಿಗಳನ್ನು ಗ್ರಂಥಾಲಯದ ಸಿಬ್ಬಂದಿ ಮಾತ್ರ ತೆರೆಯಬಹುದಾದ ಪೆಟ್ಟಿಗೆಗಳಲ್ಲಿ ಇರಿಸಲಾಗಿದೆ

ಹಿಂದೂ ಧರ್ಮ, ಇಸ್ಲಾಂ, ಕ್ರಿಶ್ಚಿಯನ್ ಧರ್ಮ ಮತ್ತು ಇತರ ಧರ್ಮಗಳ ಧಾರ್ಮಿಕ ಪಠ್ಯಗಳು

ಕುರಾನ್ ನ ಪ್ರತಿಗಳು ಮತ್ತು ಹಿಂದಿ, ಉರ್ದು ಹಾಗೂ ಇಂಗ್ಲೀಷ್ ಪುಸ್ತಕಗಳು

ಪ್ರೇಮಚಂದ್ ಅವರ ಪುಸ್ತಕಗಳ ಸಂಗ್ರಹ

ಅಮೆರಿಕದ ಮತ್ತು ಇಂಗ್ಲೆಂಡ್ ಇತಿಹಾಸದ ಪುಸ್ತಕಗಳು

ಮಾಧ್ಯಮ ಮತ್ತು ಪತ್ರಿಕೋದ್ಯಮದ ಪುಸ್ತಕಗಳು

ಗ್ರಂಥಾಲಯದ ಸಂಸ್ಥಾಪಕ ಹರ್ವಂಶ್ ಸಿಂಗ್ ನಿರ್ಮಲ್ ಅವರ ಸಮಾಧಿ

ಗ್ರಂಥಾಲಯದ ಸಂಸ್ಥಾಪಕ ಹರ್ವಂಶ್ ಸಿಂಗ್ ನಿರ್ಮಲ್ ಅವರ ಸಹಿ ಇರುವ ಪತ್ರಗಳು

ಗೋಶಾಲೆಯಲ್ಲಿ ಗಿರ್, ಥಾರ್ಪಾಕರ್, ರಾಠಿ ಮತ್ತು ನಾಗೋರಿ ಸೇರಿದಂತೆ ಸುಮಾರು 44,000 ಹಸುಗಳು ಮತ್ತು ವಿವಿಧ ತಳಿಗಳ ಎತ್ತುಗಳಿವೆ

ದೇವಾಲಯದ
ಹೊರಗೆ
ಪೂಜೆ,
ಆಟಿಕೆಗಳು
ಮತ್ತು
ತಿಂಡಿ
ಮೊದಲಾದ
ವಸ್ತುಗಳನ್ನು
ಮಾರುವ
ಗದ್ದಲದ
ಮಾರುಕಟ್ಟೆ
ಅನುವಾದ: ಚರಣ್ ಐವರ್ನಾಡು