"ಮಳೆಗಾಲದ ಮೊದಲು ನಾವು ಗ್ರಾಮಸಭೆ ಕಟ್ಟಡವನ್ನು ದುರಸ್ತಿ ಮಾಡಲು ಸಾಧ್ಯವಾದರೆ ತುಂಬಾ ಒಳ್ಳೆಯದು" ಎಂದು ಸರಿತಾ ಅಸುರ್ ಲುಪುಂಗ್ಪಾಟ್ ಜನರನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಸ್ವಲ್ಪ ಸಮಯದ ಹಿಂದೆ ಸಾರುವವನ ಘೋಷಣೆಯ ನಂತರ ಇದೀಗಲಷ್ಟೇ ಸಭೆ ಆರಂಭಗೊಂಡಿತ್ತು. ಊರಿನ ಗಂಡಸರು ಮತ್ತು ಹೆಂಗಸರು ತಮ್ಮ ಮನೆಗಳಿಂದ ಹೊರಬಂದು ಗ್ರಾಮಸಭೆ ನಡೆಯುವ ಸಭಾಂಗಣದಲ್ಲಿ ಬಂದು ಕುಳಿತಿದ್ದರು. ಸರಿತಾ ಇದೇ 2 ಕೋಣೆಯ ಕಟ್ಟಡದ ದುರಸ್ತಿಗಾಗಿ ಹಣದ ಬೇಡಿಕೆ ಇಡುತ್ತಿದ್ದರು.
ಜಾರ್ಖಂಡ್ ರಾಜ್ಯದ ಗುಮ್ಲಾ ಜಿಲ್ಲೆಯ ಈ ಊರಿನ ಜನರು ಸರಿತಾ ಅವರ ಪ್ರಸ್ತಾಪವನ್ನು ತಕ್ಷಣ ಒಪ್ಪುತ್ತಾರೆ ಮತ್ತು ಅದರೊಂದಿಗೆ ನಿರ್ಣಯವು ಅಂಗೀಕಾರಗೊಂಡಿತು.
ಮಾಜಿ ಹಾಕಿ ಆಟಗಾರರಾದ ಅವರು ನಂತರ ಈ ವರದಿಗಾರನೊಡನೆ ಮಾತನಾಡುತ್ತಾ, “ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಜವಾಬ್ದಾರಿ ನಮ್ಮದೇ ಎನ್ನುವುದು ನಮಗೆ ತಿಳಿದಿದೆ. ಮತ್ತು ನಮ್ಮ ಗ್ರಾಮಸಭೆ ನಮ್ಮ ಊರನ್ನು ಅಭಿವೃದ್ಧಿಗೊಳಿಸಬಲ್ಲದು. ಇದು ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸಿದೆ” ಎಂದು ಸರಿತಾ ಹೇಳುತ್ತಾರೆ.


ಎಡ: ಸರಿತಾ ಅಸುರ್ ಲುಪುಂಗ್ಪಾಟ್ ಗ್ರಾಮದ ಗ್ರಾಮ ಸಭಾ ಕಚೇರಿಯ ಹೊರಗೆ. ಬಲ: ಗ್ರಾಮಸಭೆಯು ನೀರಿನ ಭದ್ರತೆ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸುತ್ತದೆ
ಗುಮ್ಲಾ ಜಿಲ್ಲೆಯ ಲುಪುಂಗ್ಪಾಟ್ ಗ್ರಾಮದ ಗ್ರಾಮಸಭೆಯು ಈಗ ಜಾರ್ಖಂಡಿನಲ್ಲಿ ಚರ್ಚೆಯ ವಿಷಯವಾಗಿದೆ. ಜಿಲ್ಲಾ ಕೇಂದ್ರದಿಂದ ಒಂದು ಗಂಟೆ ಪ್ರಯಾಣದಷ್ಟು, ಮತ್ತು ರಾಜಧಾನಿ ರಾಂಚಿಯಿಂದ ಸುಮಾರು 165 ಕಿಲೋಮೀಟರ್ ದೂರದಲ್ಲಿರುವ, ಈ ಪುಟ್ಟ ಹಳ್ಳಿಯನ್ನು ತಲುಪುವುದು ಸುಲಭದ ಕೆಲಸವಲ್ಲ. ಈ ಊರಿ ಕಾಡಿನೊಳಗಿದ್ದು ಮೊದಲು ಬೆಟ್ಟವೊಂದನ್ನು ಏರಿ ನಂತರ ಕಚ್ಚಾ ರಸ್ತೆಯಲ್ಲಿ ಕೆಳಗಿಳಿಯಬೇಕು. ದೊಡ್ಡ ಸಾರ್ವಜನಿಕ ಸಾರಿಗೆ ವಾಹನಗಳು ಇಲ್ಲಿಗೆ ಸುಲಭದಲ್ಲಿ ಲಭ್ಯವಿಲ್ಲ. ಆದರೆ ಆಟೋ ಮತ್ತು ಸಣ್ಣ ವಾಹನಗಳು ಕಾಣಿಸಿಕೊಳ್ಳುತ್ತವೆಯಾದರೂ ಅದು ಅಪರೂಪ.
ಈ ಗ್ರಾಮವು ಅಸುರ್ ಸಮುದಾಯದ ಸುಮಾರು 100 ಕುಟುಂಬಗಳಿಗೆ ನೆಲೆಯಾಗಿದೆ - ಇದನ್ನು ಪಿವಿಟಿಜಿ (ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು) ಎಂದು ಪಟ್ಟಿ ಮಾಡಲಾಗಿದೆ. ಗುಮ್ಲಾ ಹೊರತುಪಡಿಸಿ, ಈ ಬುಡಕಟ್ಟು ಜನಾಂಗದವರು ಜಾರ್ಖಂಡ್ ರಾಜ್ಯದ ಲೋಹರ್‌ದಾಗ, ಪಲಮು ಮತ್ತು ಲತೇಹರ್ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ರಾಜ್ಯದಲ್ಲಿ ಅವರ ಒಟ್ಟು ಜನಸಂಖ್ಯೆ 22,459 ( ಭಾರತದಲ್ಲಿ ಎಸ್ಟಿ ಸಮುದಾಯಗಳ ಅಂಕಿಅಂಶ ಪ್ರೊಫೈಲ್, 2013 ).
ಸರಿಸುಮಾರು ಅರ್ಧದಷ್ಟು ಗ್ರಾಮವು ಸಾಕ್ಷರವಾಗಿದೆ, ಆದರೂ ಎಲ್ಲಾ ಗ್ರಾಮಸಭೆ ಕೆಲಸಗಳ ದಾಖಲೀಕರಣ ಕೈಗೊಳ್ಳಲಾಗುತ್ತದೆ. "ಎಲ್ಲವನ್ನೂ ದಾಖಲಿಸಲಾಗುತ್ತಿದೆ. ಕಾರ್ಯಸೂಚಿಯನ್ನು ನಿಗದಿಪಡಿಸಲಾಗುತ್ತಿದೆ, ಮತ್ತು [ನಾವು] ಜನರ ಕಾಳಜಿಯ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ " ಎಂದು ಕ್ರಿಯಾತ್ಮಕ ಯುವ ನಾಯಕ ಮತ್ತು ಮಾಜಿ ಫುಟ್ಬಾಲ್ ಆಟಗಾರ ಸಂಚಿತ್ ಅಸುರ್ ಹೇಳುತ್ತಾರೆ. "ಗ್ರಾಮಸಭೆಯು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸೇರಿದೆ" ಎಂದು ಅವರು ಹೇಳುತ್ತಾರೆ, ಹೆಚ್ಚು ಲಿಂಗ-ಸಮಾನತೆಗೆ ಒತ್ತು ಕೊಟ್ಟಿರುವುದನ್ನು ಒತ್ತಿಹೇಳುತ್ತಾರೆ.
ಹಿಂದಿನ ಗ್ರಾಮಸಭೆ ಸಭೆಗಳಲ್ಲಿ ಪುರುಷರು ಮಾತ್ರ ಭಾಗವಹಿಸುತ್ತಿದ್ದರು ಎಂದು ಸರಿತಾ ಹೇಳಿದರು. "ಏನು ಚರ್ಚಿಸಲಾಯಿತು ಎಂಬುದರ ಬಗ್ಗೆ ನಮಗೆ ಮಹಿಳೆಯರಿಗೆ ತಿಳಿಯುತ್ತಿರಲಿಲ್ಲ" ಎಂದು ಮಾಜಿ ರಾಷ್ಟ್ರೀಯ ಹಾಕಿ ಆಟಗಾರ್ತಿ ಹೇಳುತ್ತಾರೆ. ಸಭೆಗಳು ಮುಖ್ಯವಾಗಿ ಹಳ್ಳಿಯ ಕುಟುಂಬಗಳ ನಡುವಿನ ಜಗಳಗಳನ್ನು ಪರಿಹರಿಸುವತ್ತ ಕೇಂದ್ರೀಕೃತವಾಗಿದ್ದವು.
ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ನಾವು ಗ್ರಾಮ ಸಭೆಯಲ್ಲಿ ಭಾಗವಹಿಸುತ್ತಿದ್ದೇವೆ ಮತ್ತು ಪ್ರತಿಯೊಂದು ವಿಷಯವನ್ನು ಚರ್ಚಿಸುತ್ತಿದ್ದೇವೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ನಮ್ಮ ಅಭಿಪ್ರಾಯವೂ ಮುಖ್ಯವಾಗಿದೆ" ಎಂದು ಸರಿತಾ ಸಂತೋಷದಿಂದ ಹೇಳುತ್ತಾರೆ.


ಗ್ರಾಮಸಭೆಯ ಸಭೆಗಳಲ್ಲಿ ವಯಸ್ಸು, ಲಿಂಗ ಮತ್ತು ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲರೂ ಭಾಗವಹಿಸುತ್ತಾರೆ. ಬಲ: ಮೊದಲು ಗ್ರಾಮವು ಈ ನೈಸರ್ಗಿಕ ನೀರಿನ ತೊರೆಯನ್ನು ಅವಲಂಬಿಸಿತ್ತು, ಮತ್ತು ಮಹಿಳೆಯರು ತಮ್ಮ ಮನೆಗಳಿಗೆ ನೀರನ್ನು ಸಂಗ್ರಹಿಸಲು ಪ್ರತಿದಿನ ಇಲ್ಲಿಗೆ ಓಡಾಡಬೇಕಾಗಿತ್ತು


ಲುಪುಂಗ್ಪಾಟ್ ಗ್ರಾಮದಲ್ಲಿ ನೀರು ಒಂದು ಪ್ರಮುಖ ವಿಷಯವಾಗಿದೆ, ಮತ್ತು ಗ್ರಾಮ ಸಭೆ ಇದನ್ನು ಕೈಗೆತ್ತಿಕೊಂಡಿದೆ. ಹಳೆಯ ಬಾವಿ (ಎಡ) ಮತ್ತು ಹಳ್ಳಿಯ ಪ್ರಮುಖ ನೀರಿನ ಮೂಲ
ಊರಿನ ಇತರ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಭಾಗವಹಿಸುವುದನ್ನು ಆನಂದಿಸುತ್ತಿರುವುದು ಮಾತ್ರವಲ್ಲದೆ ಅದರ ಮೂಲಕ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳುತ್ತಾರೆ. "ನಾವು ನಮ್ಮ ನೀರಿನ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಮೊದಲು ನಮ್ಮ ಮಹಿಳೆಯರು ನೀರು ತರಲು ಬಹಳಷ್ಟು ಓಡಾಡಬೇಕಿತ್ತು. ಈಗ ಹಳ್ಳಿಯ ಬೀದಿಯಲ್ಲಿ ನೀರು ಸರಬರಾಜು ಇದೆ, ನಾವು ಪಡಿತರವನ್ನು ಸಂಗ್ರಹಿಸಲು ಬೇರೆ ಹಳ್ಳಿಗೆ ಹೋಗುತ್ತಿದ್ದೆವು, ಆದರೆ ಈಗ ಅದು ನಮಗೆ ಹತ್ತಿರ ಬರುತ್ತಿದೆ " ಎಂದು ಬೆನೆಡಿಕ್ಟ್ ಅಸುರ್ ಹೇಳುತ್ತಾರೆ. "ಅಷ್ಟೇ ಅಲ್ಲ, ನಾವು ನಮ್ಮ ಹಳ್ಳಿಯನ್ನು ಗಣಿಗಾರಿಕೆಯಿಂದ ರಕ್ಷಿಸಿದ್ದೇವೆ."
ಕಾಡಿನಲ್ಲಿ ಬಾಕ್ಸೈಟ್ ಗಣಿಗಾರಿಕೆಗಾಗಿ ಸಮೀಕ್ಷೆ ನಡೆಸುತ್ತಿರುವ ಹೊರಗಿನವರನ್ನು ಕಂಡು, ಎಚ್ಚರಿಕೆಯನ್ನು ಮೊಳಗಿಸಲಾಯಿತು, ನಂತರ ಅನೇಕ ಗ್ರಾಮಸ್ಥರು ಒಟ್ಟುಗೂಡಿ ಅವರನ್ನು ಓಡಿಸಿದೆವು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.
ಮೂಲ ಸೌಕರ್ಯ ಸಮಿತಿ, ಸಾರ್ವಜನಿಕ ಸಂಪತ್ತು ಸಮಿತಿ, ಕೃಷಿ ಸಮಿತಿ, ಆರೋಗ್ಯ ಸಮಿತಿ, ಗ್ರಾಮ ರಕ್ಷಾ ಸಮಿತಿ, ಶಿಕ್ಷಣ ಸಮಿತಿ ಮತ್ತು ಜಾಗೃತ ಸಮಿತಿ - ಗ್ರಾಮಸಭೆ ಸಮಿತಿಯ ಜೊತೆಗೆ ಲುಪುಂಗ್ಪಾಟ್ ಗ್ರಾಮಸ್ಥರು ಏಳು ಸಮಿತಿಗಳನ್ನು ರಚಿಸಿದ್ದಾರೆ.
"ಪ್ರತಿ ಸಮಿತಿಯು ಸಂಬಂಧಿತ ಸಮಸ್ಯೆಗಳು ಮತ್ತು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಚರ್ಚಿಸುತ್ತದೆ. ನಂತರ ಅವರು ತಮ್ಮ ನಿರ್ಧಾರವನ್ನು ಮೂಲಭೂತ ಮೂಲಸೌಕರ್ಯ ಸಮಿತಿಗೆ ಕಳುಹಿಸುತ್ತಾರೆ, ಅದು ಅದನ್ನು ಗ್ರಾಮಾಭಿವೃದ್ಧಿ ಸಮಿತಿಗೆ ಕಳುಹಿಸುತ್ತದೆ " ಎಂದು ಗ್ರಾಮ ಸಭೆಯ ಸದಸ್ಯ ಕ್ರಿಸ್ಟೋಫರ್ ವಿವರಿಸುತ್ತಾರೆ. "ನಾವು ಸ್ಥಳೀಯ ಮಟ್ಟದಲ್ಲಿ ಪ್ರಜಾಸತ್ತಾತ್ಮಕ ಅಭ್ಯಾಸಗಳನ್ನು ಬಲಪಡಿಸಿದರೆ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯ ಬೇರೂರುತ್ತದೆ" ಎಂದು ಅಜೀಂ ಪ್ರೇಮ್ಜಿ ಫೌಂಡೇಶನ್‌ನ ಸೆಂಟರ್ ಫಾರ್ ಡೆವಲಪ್ಮೆಂಟ್ ಮುಖ್ಯಸ್ಥ ಪ್ರೊಫೆಸರ್ ಅಶೋಕ್ ಸಿರ್ಕಾರ್ ಹೇಳುತ್ತಾರೆ.
ಗ್ರಾಮಸಭೆಯ ಸಮಿತಿಯು ಎಲ್ಲಾ ಗ್ರಾಮಸ್ಥರಿಗೆ ಮುಕ್ತವಾಗಿರುವುದರಿಂದ, ಅವರೆಲ್ಲ ಸೇರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ನಂತರ ಅದನ್ನು ಗ್ರಾಮದ ಮುಖ್ಯಸ್ಥರು ಮತ್ತು ವಾರ್ಡ್ ಸದಸ್ಯರು ಚೈನ್ಪುರದ ಬ್ಲಾಕ್ ಕಚೇರಿಗೆ ಕೊಂಡೊಯ್ಯುತ್ತಾರೆ.


ಎಡ: ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ಈ ಊರಿನ ಒಂದು ಪ್ರಮುಖ ಆದ್ಯತೆಯಾಗಿದೆ. ಹಳ್ಳಿಯಿಂದ ಶಾಲೆಗೆ ನಡೆದುಕೊಂಡು ಹೋಗುತ್ತಿರುವ ಹುಡುಗಿಯರ ಗುಂಪು. ಬಲ: ಲುಪುಂಗ್ಪಾಟ್ ಗ್ರಾಮದ ನೋಟ
"ಸಾಮಾಜಿಕ ಪಿಂಚಣಿಗಳು, ಆಹಾರ ಭದ್ರತೆ ಮತ್ತು ಪಡಿತರ ಚೀಟಿಗಳಿಗೆ ಸಂಬಂಧಿಸಿದ ಯಾವುದೇ ಯೋಜನೆಗಳು ಗ್ರಾಮಕ್ಕಾಗಿ ಇದ್ದರೂ, ಎಲ್ಲವನ್ನೂ ಗ್ರಾಮ ಸಭೆಯು ಅನುಮೋದಿಸುತ್ತಿದೆ ಮತ್ತು ಅದರ ನಂತರ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಗುಮ್ಲಾ ಜಿಲ್ಲೆಯ ಚೈನ್ಪುರ್ ಬ್ಲಾಕಿನ ಬ್ಲಾಕ್ ಡೆವಲಪ್ಮೆಂಟ್ ಆಫೀಸರ್ (ಬಿಡಿಒ) ಡಾ.ಶಿಶಿರ್ ಕುಮಾರ್ ಸಿಂಗ್ ಹೇಳುತ್ತಾರೆ.
ಕೋವಿಡ್ -19ರ ಸಮಯದಲ್ಲಿ, ಅನೇಕ ವಲಸಿಗರು ಮನೆಗೆ ಮರಳಿದರು ಮತ್ತು ಅವರಿಗಾಗಿ ಗ್ರಾಮ ಸಭೆಯು ಕ್ವಾರಂಟೈನ್ ಕೇಂದ್ರವನ್ನು (ಸಚಿವಾಲಯ್) ಆಯೋಜಿಸಿತು ಮತ್ತು ನಾಗರಿಕ ಸಮಾಜಗಳ ಸಹಾಯದಿಂದ ಆಹಾರ, ನೀರು ಮತ್ತು ಔಷಧಿಗಳನ್ನು ಒದಗಿಸಿತು.
ದಾರಿ ತಪ್ಪಿ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳಿಗೆಂದು, ಗ್ರಾಮ ಸಭೆಯ ಅಡಿಯಲ್ಲಿ ಗ್ರಾಮ ಶಿಕ್ಷಣ ಸಮಿತಿಯು ಒಂದು ವಿಶಿಷ್ಟ ಪರಿಹಾರವನ್ನು ಕಂಡುಹಿಡಿದಿದೆ: "ಊರಿನ ವಿದ್ಯಾವಂತ ಯುವಕನೊಬ್ಬನನ್ನು ಅವರಿಗೆ ವಿದ್ಯೆ ಕಲಿಸಲೆಂದು ನೇಮಿಸಿದ್ದೇವೆ. ಆ ಯುವಕನಿಗೆ ಊರಿನ ಎಲ್ಲಾ ಮನೆಗಳು ಒಬ್ಬ ವಿದ್ಯಾರ್ಥಿಗೆ ದಿನಕ್ಕೆ ಒಂದು ರೂಪಾಯಿಯಂತೆ ಪಾವತಿಸುತ್ತದೆ" ಎಂದು ಕ್ರಿಸ್ಟೋಫರ್ ಅಸುರ್ ವಿವರಿಸಿದರು.
"ಈ ಹಿಂದೆ, ಗ್ರಾಮಸಭೆಯ ಹೆಸರಿನಲ್ಲಿ, ಬ್ಲಾಕ್ ಅಧಿಕಾರಿಗಳು ರಿಜಿಸ್ಟರ್ ಪುಸ್ತಕದೊಂದಿಗೆ ನಮ್ಮ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು, ಮತ್ತು ಯೋಜನೆಗಳು, ಫಲಾನುಭವಿಗಳು ಇತ್ಯಾದಿಗಳ ಆಯ್ಕೆಯನ್ನು ನಿರ್ವಹಿಸುತ್ತಿದ್ದರು ಮತ್ತು ರಿಜಿಸ್ಟರ್ ಪುಸ್ತಕವನ್ನು ತಮ್ಮೊಂದಿಗೆ ತೆಗೆದುಕೊಂಡು ಹಿಂದಿರುಗುತ್ತಿದ್ದರು" ಎಂದು ಕ್ರಿಸ್ಟೋಫರ್ ಹೇಳುತ್ತಾರೆ, ಈ ಮೂಲಕ ಅನೇಕ ಅರ್ಹ ಜನರಿಗೆ ಸಾಮಾಜಿಕ ಯೋಜನೆಗಳ ಪ್ರಯೋಜನಗಳನ್ನು ನಿರಾಕರಿಸಲಾಗುತ್ತಿತ್ತು.
ಲುಪುಂಗ್ಪಾಟ್ ಗ್ರಾಮ ಸಭೆ ಈಗ ಅದೆಲ್ಲವನ್ನೂ ಬದಲಾಯಿಸಿದೆ.
ಅನುವಾದ: ಶಂಕರ. ಎನ್. ಕೆಂಚನೂರು