ಖೇಲಾ ಹೋಬೆ (ಆಟ ನಡೆಯುತ್ತಿದೆ) ಮತ್ತು ಅಬ್ಕಿ ಬಾರ್ 400 ಪಾರ್ (ಈ ಬಾರಿ ನಾವು 400 ಗಡಿ ದಾಟುತ್ತೇವೆ) ನಡುವೆ ಸಿಲುಕಿರುವ ನಮ್ಮ ತವರು ರಾಜ್ಯವೆನ್ನುವುದು ಸಣ್ಣ ಭಾರತ, ಇದೊಂದು ಸರ್ಕಾರಿ ಯೋಜನೆಗಳು, ಸಿಂಡಿಕೇಟ್ ಮಾಫಿಯಾಗಳು, ಸರ್ಕಾರದ ಕೊಡುಗೆಗಳು ಮತ್ತು ಭಿನ್ನಾಭಿಪ್ರಾಯದ ಆಂದೋಲನಗಳ ಕುತೂಹಲಕಾರಿ ಮಿಶ್ರಣ.
ಉದ್ಯೋಗದಲ್ಲಿ ಸಿಲುಕಿರುವ ನಿರಾಶ್ರಿತ ವಲಸಿಗರು ಮತ್ತು ತಾಯ್ನಾಡಿನಲ್ಲಿರುವ ಹತಾಶ ನಿರುದ್ಯೋಗಿ ಯುವಕರು, ಕೇಂದ್ರ ಮತ್ತು ರಾಜ್ಯ ನಡುವಿನ ಸಂಘರ್ಷದಲ್ಲಿ ಸಿಲುಕಿರುವ ಸಾಮಾನ್ಯ ಜನರು, ಹವಾಮಾನ ಬದಲಾವಣೆಯಿಂದ ಕಂಗೆಟ್ಟಿರುವ ರೈತರು ಮತ್ತು ಮೂಲಭೂತವಾದಿ ಭಾಷಣಗಳ ವಿರುದ್ಧ ಹೋರಾಡುತ್ತಿರುವ ಅಲ್ಪಸಂಖ್ಯಾತರು ಇಲ್ಲಿದ್ದಾರೆ. ಜಾತಿ, ವರ್ಗ, ಲಿಂಗ, ಭಾಷೆ, ಜನಾಂಗೀಯತೆ, ಧರ್ಮ, ಎಲ್ಲವೂ ಮುಖ್ಯ ರಸ್ತೆಗಳಲ್ಲಿ ಗದ್ದಲ ಮಾಡುತ್ತಿವೆ.
ಈ ಹುಚ್ಚು ಜಗತ್ತಿನ ನಡುವೆ ಬದುಕುವಾಗ ಸಂಪೂರ್ಣವಾಗಿ ಗೊಂದಲಕ್ಕೊಳಗಾದ, ಅಸಹಾಯಕ, ಭ್ರಮನಿರಸನಗೊಂಡ ಧ್ವನಿಗಳು ಮತ್ತು ಅಧಿಕಾರದಲ್ಲಿರುವವರ ಮೋಡಿ ಮಾತುಗಳಿಗೆ ಮರುಳಾಗದ ಜನರೂ ಸಿಗುತ್ತಾರೆ. ಸಂದೇಶ್ ಖಾಲಿಯಿಂದ ಹಿಮಾಲಯದ ಚಹಾ ತೋಟಗಳವರೆಗೆ, ಕೋಲ್ಕತ್ತಾದಿಂದ ರಾರ್ಹ್ ರೀತಿಯ ಮರೆತುಹೋದ ಪ್ರದೇಶಗಳವರೆಗೆ ಸುತ್ತಾಡುತ್ತಾ ಜನರ ಮಾತು ಕೇಳಿದ್ದೇವೆ, ಚಿತ್ರಗಳನ್ನು ಕ್ಲಿಕ್ಕಿಸಿದ್ದೇವೆ ಮತ್ತು ಮಾತನಾಡಿದ್ದೇವೆ.
ನಾವು ಪಶ್ಚಿಮ ಬಂಗಾಳದ ಸುಂದರ್ಬನ್ ಅಳಿವೆ ಪ್ರದೇಶದ ಸಂದೇಶ್ ಖಾಲಿ ಎಂಬ ಅಸ್ಪಷ್ಟ ದ್ವೀಪದಿಂದ ಪ್ರಾರಂಭಿಸುತ್ತೇವೆ, ಈ ಪ್ರದೇಶ ಆಗಾಗ ಭೂಮಿ ಮತ್ತು ಮಹಿಳೆಯರ ದೇಹದ ಮೇಲಿನ ನಿಯಂತ್ರಣಕ್ಕಾಗಿ ರಾಜಕೀಯ ಯುದ್ಧಗಳಲ್ಲಿ ಸಿಲುಕಿಕೊಳ್ಳುತ್ತದೆ.
ಚದುರಂಗ
ವೆನಿ ವೀಚಿ ವೀದಿ
ಅಗೋ ಬಂದಿತು ಇಡಿ
ಸಂದೇಶ್ ಖಾಲಿಯಲ್ಲೊಂದು ಹಳ್ಳಿ
ರಾತ್ರಿ ಈಗಷ್ಟೇ ಆಕಳಿಸುತ್ತಿದೆ
ಮಹಿಳೆಯರೇ ಇಲ್ಲಿ ಆಟದ ವಸ್ತುಗಳು
ಟಿವಿ ನಿರೂಪಕರು ಕೂಗುತ್ತಿದ್ದಾರೆ “ರಾಮ ರಾಮ, ಅಲಿ ಅಲಿ”

'ಖೇಲಾ ಹೋಬೆ' (ಆಟ ಆರಂಭ) ಎನ್ನುವ ಟಿಎಮ್‌ಸಿ ಪಕ್ಷದ ಘೋಷಣೆಯುಳ್ಳ ಗೋಡೆ ಬರಹ

ಮುರ್ಷಿದಾಬಾದ್ನ ಗೋಡೆಯ ಮೇಲೆ ರಾಜಕೀಯ ಗೀಚುಬರಹ: 'ನೀವು ಕಲ್ಲಿದ್ದಲನ್ನು ನುಂಗಿದ್ದೀರಿ, ಹಸುಗಳನ್ನು ಕದ್ದಿದ್ದೀರಿ. ಅದನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. ಆದರೆ ನೀವು ನದಿ ಪಾತ್ರಗಳಲ್ಲಿನ ಮರಳನ್ನು ಸಹ ಬಿಡಲಿಲ್ಲ. ನಮ್ಮ ಹೆಂಡತಿಯರು ಮತ್ತು ಹೆಣ್ಣುಮಕ್ಕಳನ್ನು ಸಹ ಬಿಡಲಿಲ್ಲ – ಎಂದು ಸಂದೇಶ್ ಖಾಲಿ ಹೇಳುತ್ತಿದೆʼ


ಎಡಕ್ಕೆ: ಕೋಲ್ಕತಾ ಉತ್ತರದ ಪೂಜಾ ಪಂಡಾಲ್ ಮಹಿಳೆಯರ ಮೇಲಿನ ಹಿಂಸಾಚಾರದ ವಿರುದ್ಧ ದನಿಯೆತ್ತಿದ್ದಾರೆ: ಫಂಡಿ ಕೋರೆ ಬಂದಿ ಕರೋ, ಎಂದು ಚಿತ್ರ ಹೇಳುತ್ತದೆ (ನೀವು ನನ್ನನ್ನು ಗುಲಾಮಗಿರಿಗೆ ಒಳಗಾಗಿಸಿದ್ದೀರಿ). ಬಲ: ಸುಂದರ್ಬನ್ ಪ್ರದೇಶದ ಬಾಲಿ ದ್ವೀಪದ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಚಿತ್ರಿಸಿರುವ ಪೋಸ್ಟರ್ ಮಹಿಳೆಯರ ಮೇಲಿನ ಹಿಂಸಾಚಾರದ ಬಗ್ಗೆ ಮಾತನಾಡುತ್ತದೆ. ಅಮ್ರಾ ನಾರಿ, ಅಮ್ರಾ ನಾರಿ-ನಿರ್ಜಾತನ್ ಬಂದೋ ಕೊರ್ತೆ ಪರಿ (ನಾವು ಮಹಿಳೆಯರು. ನಾವು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಬಲ್ಲೆವು)
*****
ಜಂಗಲ್ ಮಹಲ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಪ್ರದೇಶದಿಂದ ಬಂಕುರಾ, ಪುರುಲಿಯಾ, ಪಶ್ಚಿಮ ಮಿಡ್ನಾಪುರ ಮತ್ತು ಜಾರ್ಗ್ರಾಮ್ ಜಿಲ್ಲೆಗಳ ಮೂಲಕ ಪ್ರಯಾಣಿಸುವಾಗ, ನಾವು ಮಹಿಳಾ ರೈತರು ಮತ್ತು ವಲಸೆ ಕೃಷಿ ಕಾರ್ಮಿಕರನ್ನು ಭೇಟಿಯಾದೆವು.
ಝುಮುರ್
ವಲಸೆ ಕಾರ್ಮಿಕರು
ಮರಳಿನಲ್ಲಿ ಹೂತು ಹೋದರು,
ಇದು ಟೆರಾಕೋಟಾ ನೆಲದ ಕತೆ.
ಇಲ್ಲಿ ʼಪಾನಿʼ ಎನ್ನುವುದು ದರ್ಮನಿಂದನೆ
ಜಲ್ ಎನ್ನಬೇಕು,
ಹೀಗಿದೆ ಜಂಗಲ್ ಮಹಲ್ಲಿನ ಬಾಯಾರಿಕೆ.


ಪುರುಲಿಯಾದಲ್ಲಿನ ರೈತ ಮಹಿಳೆಯರು ತೀವ್ರ ನೀರಿನ ಕೊರತೆ, ಕೃಷಿಯ ಕುಸಿತ, ಜೀವನೋಪಾಯದ ಸಮಸ್ಯೆಗಳ ನಡುವೆ ಬದುಕು ನಡೆಸಲಾಗದೆ ಹೆಣಗಾಡುತ್ತಿದ್ದಾರೆ
*****
ಡಾರ್ಜಿಲಿಂಗ್ ಎನ್ನುವುದು ಜಗತ್ತಿನ ಪಾಲಿಗೆ 'ಬೆಟ್ಟಗಳ ರಾಣಿ' ಆಗಿರಬಹುದು, ಆದರೆ ಇಲ್ಲಿನ ಸುಂದರವಾದ ತೋಟಗಳಲ್ಲಿ ದುಡಿಯುವ ಆದಿವಾಸಿ ಮಹಿಳೆಯರ ಅನುಭವ ಇಲ್ಲಿ ಹಾಗಿಲ್ಲ, ಅವರಿಗೆ ಇಲ್ಲಿ ನಿರಾಳರಾಗಲು ಪಡೆಯಲು ಶೌಚಾಲಯಗಳಿಲ್ಲ. ಈ ಪ್ರದೇಶದಲ್ಲಿ ಅಸಮಾನತೆ ಮತ್ತು ಮಹಿಳೆಯರು ತಮ್ಮ ಭವಿಷ್ಯಕ್ಕಾಗಿ ನಡೆಸುತ್ತಿರುವ ಹೋರಾಟವು ಗೋಡೆಯ ಮೇಲಿನ ಬರಹದಂತೆ ಸ್ಪಷ್ಟವಿದೆ!
ಬ್ಲಡಿ ಮೇರಿ
ಒಂದು ಲೋಟ ಚಹಾ ಕುಡಿಯುತ್ತೀರಾ?
ವೈಟ್ ಪಿಯೋನಿ, ಊಲಾಂಗ್ ಚಹಾ
ಹುರಿದಿರುವುದು, ಟೋಸ್ಟ್ ಮಾಡಿರುವುದು
ಮೇಲ್ವರ್ಗದವರ ಅಭಿರುಚಿಗೆ ತಕ್ಕಂತೆ.
ಒಂದು ಲೋಟ ರಕ್ತ ಕುಡಿಯುವಿರಾ?
ಅಥವಾ ದುಡಿಮೆಯಿಂದ ದಣಿದ
ಆದಿವಾಸಿ ಹುಡುಗಿಯಾಗಬಹುದೆ ನಿಮಗೆ?
“ಆಗಬಹುದು! ಆಗಬಹುದು!”

ಡಾರ್ಜಿಲಿಂಗ್ ಪ್ರದೇಶದಲ್ಲಿನ ಈ ಗೋಡೆ ಬರಹವನ್ನು ನೀವು ನೋಡಲೇಬೇಕು
*****
ಮುರ್ಷಿದಾಬಾದ್ ಎನ್ನುವುದು ಕೇವಲ ಬಂಗಾಳದ ಹೃದಯಭಾಗ ಮಾತ್ರವಲ್ಲ, ಇಲ್ಲಿ ಮತ್ತೊಂದು ರೀತಿಯ ಬಿರುಗಾಳಿಯಿದೆ, ಇಲ್ಲಿ ಶಿಕ್ಷಕರ ಕೆಲಸಕ್ಕೆ ಲಂಚ ನೀಡಿದ ಹಗರಣದ ಚರ್ಚೆಯಿದೆ. ಇಲ್ಲಿ ರಾಜ್ಯ ಶಾಲಾ ಸೇವಾ ಆಯೋಗ (ಎಸ್ಎಸ್‌ಸಿ) ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಿಗೆ ಮಾಡಿದ್ದ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯ ದೊಡ್ಡ ಸಂಖ್ಯೆಯ ಮೋಸದ ನೇಮಕಾತಿಗಳನ್ನು ಹೈಕೋರ್ಟ್ ಅಮಾನ್ಯಗೊಳಿಸಿದೆ. ಇದು ಈ ಊರಿನ ಯುವ ಮನಸ್ಸುಗಳನ್ನು ಅನುಮಾನಕ್ಕೆ ದೂಡಿದೆ. ಇಲ್ಲಿನ ಬೀಡಿ ತಯಾರಿಕಾ ಘಟಕಗಳಲ್ಲಿ ಕೆಲಸ ಮಾಡುವ 18 ವರ್ಷದ ಯುವಕರಿಗೆ ಶಿಕ್ಷಣ ತಮ್ಮ ಅದೃಷ್ಟ ಬದಲಾಯಿಸಬಲ್ಲದು ಎನ್ನುವ ಕುರಿತು ಅನುಮಾನಗಳಿವೆ. ಹೀಗಾಗಿ ಅವರು ಬೇಗನೇ ಯಾವುದೋ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಅಥವಾ ಉತ್ತಮ ಅವಕಾಶ ಹುಡುಕಿಕೊಂಡು ವಲಸೆ ಹೋಗುತ್ತಾರೆ
ಅರ್ಹ ಅಭ್ಯರ್ಥಿಗಳು
ಅವರು ಧರಣಿ ಕುಳಿತರು,
ʼತಾನಾಶಾಹಿ ಆರ್ ನಾ!ʼ
ಮಿಲಿಟರಿ ಬೂಟು ತೊಟ್ಟ ಪೊಲೀಸರು ಬಂದಿಳಿದರು
ಸರ್ಕಾರಿ ಕೆಲಸ!
ಅದೂ ಈಗ ಸುಮ್ಮನೆ ಸಿಗುವುದಿಲ್ಲ!
ಇಲ್ಲಿ ಬಹುಮಾನ ಮತ್ತು ಶಿಕ್ಷೆ ಎರಡೂ ಪಾಲುದಾರಿಕೆಯಲ್ಲಿವೆ.

ಶಾಲೆಯಿಂದ ಹೊರಗುಳಿದಿರುವ ಹೆಚ್ಚಿನ ಹದಿಹರೆಯದ ಮಕ್ಕಳು ಮುರ್ಷಿದಾಬಾದ್‌ನ ಬೀಡಿ ತಯಾರಿಕ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ʼದೊಡ್ಡ ದೊಡ್ಡ ಡಿಗ್ರಿ ಇರುವ ಜನರೇ ಸುಮ್ಮನೆ ಕುಳಿತಿದ್ದಾರೆ. ಕೆಲಸಕ್ಕೆ ಆಯ್ಕೆಯಾದವರೂ ಈಗ ಎಸ್ಎಸ್‌ಸಿ ಅಡಿಯಲ್ಲಿ ದೊರಕಿದ್ದ ಕೆಲಸ ಕೊಡುವಂತೆ ಕೇಳಿ ಬೀದಿಯಲ್ಲಿ ಕುಳಿತು ಪ್ರತಿಭಟಿಸುತ್ತಿದ್ದಾರೆ. ಹೀಗಿರುವಾಗ ನಾವು ಓದಿ ಏನು ಮಾಡಬೇಕು?ʼ
*****
ಅದು ವರ್ಷದ ಯಾವುದೇ ಸಮಯವಿರಲಿ ಕೊಲ್ಕತ್ತದ ಬೀದಿಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರತಿಭಟನಾ ಸಭೆಗಳು ಕಂಡು ಬರುತ್ತವೆ. ಇಲ್ಲಿ ಅನ್ಯಾಯದ ಕಾನೂನುಗಳು ಮತ್ತು ಮೌಲ್ಯಗಳನ್ನು ಪ್ರತಿಭಟಿಸಲು ರಾಜ್ಯದ ಮೂಲೆ ಮೂಲೆಗಳಿಂದ ಜನರು ಬಂದು ಸೇರಿರುತ್ತಾರೆ.
ಪೌರತ್ವ
ಇಗೋ ಬಂದ ದಾಖಲೆ ಕೇಳುವವ
ಸಾಧ್ಯವಾದರೆ ಓಡು ಓಡು
ಬಾಂಗ್ಲಾದೇಶಿ, ಬಾಂಗ್ಲಾದೇಶಿ ಹೋಗಿ ತಲೆ ಮರೆಸಿಕೋ
ನಿಮ್ಮ ಸಿಎಎಗೆ ಧಿಕ್ಕಾರ;
ನಾವು ಓಡಿ ಹೋಗುವವರಲ್ಲ
ಬಾಂಗ್ಲಾದೇಶಿ! ಬಾಂಗ್ಲಾದೇಶಿ! ನಾವು ತಲೆ ಬಾಗುವವರಲ್ಲ

2019ರಲ್ಲಿ ಕೋಲ್ಕತ್ತಾದಲ್ಲಿ ವಿವಿಧ ಮಹಿಳಾ ಸಂಘಟನೆಗಳು ಕರೆ ನೀಡಿದ್ದ ಮಹಿಳಾ ಮೆರವಣಿಗೆಗಾಗಿ ತಯಾರಿಸಲಾಗಿದ್ದ ಕಟೌಟುಗಳು

ಮಹಿಳೆಯರ ಮೆರವಣಿಗೆ 2019, ಕೋಲ್ಕತ್ತಾ: ಧರ್ಮ, ಜಾತಿ ಮತ್ತು ಲಿಂಗದ ಆಧಾರದ ಮೇಲೆ ದ್ವೇಷ ಮತ್ತು ತಾರತಮ್ಯವನ್ನು ಕಡೆಗಾಣಿಸುವಂತೆ ವಿವಿಧ ಸಾಮಾಜಿಕ ಹಿನ್ನೆಲೆಯ ಮಹಿಳೆಯರು ಬೀದಿಗಿಳಿದು ಕರೆ ನೀಡಿದರು

ಸಿಎಎ-ಎನ್ಆರ್‌ಸಿ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯ ಸಂದರ್ಭದಲ್ಲಿ ಕೋಲ್ಕತ್ತಾದ ಪಾರ್ಕ್ ಸರ್ಕಸ್ ಮೈದಾನದಲ್ಲಿ ಮುಸ್ಲಿಂ ಮಹಿಳೆಯರಿಂದ ಧರಣಿ ಪ್ರತಿಭಟನೆ
*****
ಕೃಷಿ ಮೇಲೆ ಅವಲಂಬಿತರಾಗಿದ್ದ ಭಿರ್ಬುಮ್ ಪ್ರದೇಶದ ಹಳ್ಳಿಗಳ ಭೂರಹಿತ ಆದಿವಾಸಿ ಮಹಿಳೆಯರನ್ನು ನಾವು ಮಾತನಾಡಿಸಿದೆವು. ಭೂಮಿಯನ್ನು ಹೊಂದಿರುವ ಮಹಿಳೆಯರು ಸಹ ಕೃಷಿಯ ಕುರಿತು ಹೆಚ್ಚೇನೂ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿಲ್ಲ.
ಶೂದ್ರಾಣಿ
ಓ ಬಾಬೂ, ಇಲ್ಲಿದೆ ನೋಡಿ ನನ್ನ ಕೊಳೆಯಾದ ಓಲ್ ಪಟ್ಟಾ-
ನನ್ನ ದುಪ್ಪಟ್ಟಾದಂತೆಯೇ ಹರಿದು ಚೂರಾಗಿದೆ.
ಒಂದು ತುತ್ತು ಅನ್ನ ಕೊಡಿ ನನಗೆ, ಬದುಕು ಕೊಡಿ ನನಗೆ
ನಾನು ರೈತ ಮಹಿಳೆ, ರೈತನ ಹೆಂಡತಿಯಲ್ಲ.
ನನ್ನ ಭೂಮಿ ಇಲ್ಲವಾಗಿದೆ
ಬರದಿಂದ ಭೂಮಿ ಇಲ್ಲವಾಗಿದೆ…
ಈಗ ನಾನು ರೈತಳೋ ಅಥವಾ ಸರ್ಕಾರಿ ಅನುಮಾನವೋ?


ʼನಮ್ಮ ಹೆಸರಿನಲ್ಲಿ ಭೂಮಿಯಿಲ್ಲ. ಹೊಲಗಳಲ್ಲಿ ಕೆಲಸ ಮಾಡುತ್ತೇವೆ ಆದರೆ ಒಂದು ಮುಷ್ಟಿ ಕಾಳಿಗಾಗಿ ಭಿಕ್ಷೆ ಬೇಡುತ್ತೇವೆ. ಎಂದು ಪಶ್ಚಿಮ ಬಂಗಾಳದ ಬಿರ್ಭುಮ್ನಲ್ಲಿ ಭತ್ತವನ್ನು ಕೊಯ್ಲು ಮಾಡುತ್ತಿದ್ದ ಸಂತಾಲಿ ಕೃಷಿ ಕಾರ್ಮಿಕರೊಬ್ಬರು ಹೇಳುತ್ತಾರೆ
*****
ಅಧಿಕಾರದಲ್ಲಿರುವವರನ್ನು ಉತ್ತರದಾಯಿಗಳನ್ನಾಗಿ ಮಾಡಲು ಇಲ್ಲಿನ ಜನ ಸಾಮಾನ್ಯರು ಚುನಾವಣಾ ಸಮಯಕ್ಕಾಗಿ ಕಾಯುವುದಿಲ್ಲ. ಮುರ್ಷಿದಾಬಾದ್, ಹೂಗ್ಲಿ, ನಾಡಿಯಾದ ಮಹಿಳೆಯರು ಮತ್ತು ರೈತರು ರಾಷ್ಟ್ರವ್ಯಾಪಿ ಆಂದೋಲನಗಳನ್ನು ಬೆಂಬಲಿಸಲು ಮತ್ತೆ ಮತ್ತೆ ಮುಂದೆ ಬಂದಿದ್ದಾರೆ.
ಸುತ್ತಿಗೆಗಳು
ಪ್ರಿಯ ಅಶ್ರುವಾಯು
ಪ್ರಚೋದನೆಯಿಂದ ಕಾರ್ಖಾನೆಗಳು ಮುಚ್ಚುತ್ತಿವೆ
ಭೂಮಾಲಿಕರು ತೇಲುತ್ತಿದ್ದಾರೆ.
ಕಪ್ಪು ಕಪ್ಪು ತಡೆಗೋಡೆಗಳು.
ಕನಿಷ್ಠ ವೇತನ ಕೇಸರಿ ಕ್ರೋಧದಲ್ಲಿ
ನಲುಗುತ್ತಿದೆ ಸಿಲುಕಿದೆ ನರೇಗಾ.


ಎಡ: ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಮಹಿಳಾ ಕಿಸಾನ್ ದಿವಸ್ ರ್ಯಾಲಿ ಜನವರಿ 18, 2021. ಬಲ: 'ಅವರು ನಮ್ಮ ಬಳಿಗೆ ಬರುವುದಿಲ್ಲ. ಹೀಗಾಗಿ, ನಮಗೆ ಏನು ಬೇಕು ಎನ್ನುವುದನ್ನು ಅವರಿಗೆ ತಿಳಿಸಲು ಇಲ್ಲಿಗೆ ಬಂದಿದ್ದೇವೆ" ಎಂದು ಸೆಪ್ಟೆಂಬರ್ 19, 2023ರಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಮೆರವಣಿಗೆಯಲ್ಲಿದ್ದ ಪ್ರತಿಭಟನಾ ನಿರತ ರೈತರು ಹೇಳುತ್ತಾರೆ
ಅನುವಾದ: ಶಂಕರ. ಎನ್. ಕೆಂಚನೂರು