"ಯೆ ಬಾರಾ ಲಾಖ್ ವಾಲಾ ನಾ? ಇಸೀ ಕೀ ಬಾತ್ ಕರ್ ರಹೇ ಹೈ ನಾ?" 30 ವರ್ಷದ ಶಾಹಿದ್ ಹುಸೇನ್ ನನ್ನ ಮುಂದೆ ತನ್ನ ಫೋನ್ ಹಿಡಿದು ವಾಟ್ಸಾಪ್ ಸಂದೇಶವನ್ನು ತೋರಿಸಿದರು. ನಾವು ಆದಾಯ ತೆರಿಗೆ ವಿನಾಯಿತಿಯನ್ನು 12 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಬಗ್ಗೆ ಚರ್ಚಿಸುತ್ತಿದ್ದೆವು. ಶಾಹಿದ್ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಕ್ರೇನ್ ಆಪರೇಟರ್ ಆಗಿದ್ದು, ಬೆಂಗಳೂರಿನ ಮೆಟ್ರೋ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದಾರೆ.
"ಈ 12 ಲಕ್ಷ ತೆರಿಗೆ ಮುಕ್ತ ಬಜೆಟ್ ಬಗ್ಗೆ ನಾವು ಸಾಕಷ್ಟು ಸುದ್ದಿಗಳನ್ನು ಕೇಳುತ್ತಿದ್ದೇವೆ" ಎಂದು ಅದೇ ಸೈಟಿನಲ್ಲಿದ್ದ ಬ್ರಿಜೇಶ್ ಯಾದವ್ ಗೇಲಿ ಮಾಡಿದರು. "ಇಲ್ಲಿ ಯಾರೂ ವಾರ್ಷಿಕವಾಗಿ 3.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸುವುದಿಲ್ಲ." 20ರ ಹರೆಯದ ಬ್ರಿಜೇಶ್ ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯ ದುಮಾರಿಯಾ ಗ್ರಾಮದ ಕೌಶಲರಹಿತ ವಲಸೆ ಕಾರ್ಮಿಕ.
"ಈ ಕೆಲಸ ಇರುವ ತನಕ, ನಾವು ತಿಂಗಳಿಗೆ ಸುಮಾರು 30,000 ರೂಪಾಯಿಗಳನ್ನು ಗಳಿಸುತ್ತೇವೆ" ಎಂದು ಬಿಹಾರದ ಕೈಮೂರ್ (ಭಬುವಾ) ಜಿಲ್ಲೆಯ ಬಿಯೂರ್ ಎನ್ನುವ ಊರಿನವರಾದ ಶಾಹಿದ್ ಹೇಳುತ್ತಾರೆ. ಅವರು ಕೆಲಸ ಹುಡುಕಿಕೊಂಡು ಅನೇಕ ರಾಜ್ಯಗಳಿಗೆ ಹೋಗಿದ್ದಾರೆ. "ಈ ಕೆಲಸದ ನಂತರ, ಕಂಪನಿಯು ನಮ್ಮನ್ನು ಬೇರೆಡೆಗೆ ಕಳುಹಿಸುತ್ತದೆ, ಅಥವಾ ನಾವು 10-15 ರೂಪಾಯಿ ಹೆಚ್ಚು ಸಿಗುವ ಇತರ ಕೆಲಸವನ್ನು ಹುಡುಕುತ್ತೇವೆ."


ಕ್ರೇನ್ ಆಪರೇಟರ್ ಶಾಹಿದ್ ಹುಸೇನ್ (ಕಿತ್ತಳೆ ಶರ್ಟ್), ಬ್ರಿಜೇಶ್ ಯಾದವ್ (ನೀಲಿ ಶರ್ಟ್, ಕೌಶಲರಹಿತ ಕೆಲಸಗಾರ) ಬೆಂಗಳೂರಿನ ಎನ್ಎಚ್ 44ರ ಉದ್ದಕ್ಕೂ ಆರಂಭಗೊಂಡಿರುವ ಮೆಟ್ರೋ ಮಾರ್ಗದಲ್ಲಿ ಕೆಲಸ ಮಾಡುತ್ತಾರೆ. ಈ ಸ್ಥಳದಲ್ಲಿ ಕೆಲಸ ಮಾಡುವ ಯಾರೂ ವರ್ಷಕ್ಕೆ 3.5 ಲಕ್ಷಕ್ಕಿಂತ ಹೆಚ್ಚು ಸಂಪಾದಿಸುವುದಿಲ್ಲ ಎಂದು ಅವರು ಹೇಳುತ್ತಾರೆ


ಉತ್ತರ ಪ್ರದೇಶದ ದಿಂದ ವಲಸೆ ಬಂದಿರುವ ನಫೀಜ್ ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿ. ಅವರು ಜೀವನೋಪಾಯಕ್ಕಾಗಿ ತಮ್ಮ ಹಳ್ಳಿಯಿಂದ 1,700 ಕಿಲೋಮೀಟರ್ ದೂರ ಬಂದಿದ್ದಾರೆ. ಬದುಕು ನಡೆಸುವ ಒತ್ತಡದ ಪ್ರಶ್ನೆಗಳಲ್ಲಿ ಸಿಲುಕಿರುವ ಅವ ರಿ ಗೆ ಬಜೆಟ್ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಸಮಯವಿಲ್ಲ
ಟ್ರಾಫಿಕ್ ಜಂಕ್ಷನ್ ಒಂದರಲ್ಲಿ ಇನ್ನೋರ್ವ ಉತ್ತರ ಪ್ರದೇಶದ ವಲಸಿಗ ರಸ್ತೆಯ ಉದ್ದಗಲಕ್ಕೂ ಓಡಾಡುತ್ತಾ ಸಿಗ್ನಲ್ಲಿನಲ್ಲಿ ನಿಂತಿದ್ದ ಕಾರುಗಳ ಕಿಟಕಿಯ ಬಳಿ ನಿಂತು ಕಾರ್ ಸೀಟಿನಲ್ಲಿ ಕತ್ತಿನ ಬೆಂಬಲಕ್ಕೆ ಬಳಸುವ ವಸ್ತು, ಮೈಕ್ರೋಫೈಬರ್ ಬಟ್ಟೆ ಇತ್ಯಾದಿ ವಸ್ತುಗಳನ್ನು ಮಾರುತ್ತಿದ್ದರು. ಹೀಗೆ ರಸ್ತೆಯಲ್ಲಿ ಓಡಾಡುವ ಕೆಲಸವನ್ನು ಅವರು ದಿನದಲ್ಲಿ ಒಂಬತ್ತು ಗಂಟೆಗಳ ಕಾಲ ಮಾಡುತ್ತಾರೆ. “ಅರ್ರೇ ಕಾ ಬಜಟ್ ಬೋಲೇ? ಕಾ ನ್ಯೂಸ್ [ಓಹ್! ಯಾವ ಬಜೆಟ್, ನಾನು ಆ ಬಗ್ಗೆ ಏನು ಮಾತನಾಡಲಿ?” ಎಂದು ನನ್ನ ಪ್ರಶ್ನೆಯಿಂದ ಕಿರಿಕಿರಿಗೆ ಒಳಗಾದ ನಫೀಜ್ ಕೇಳಿದರು.
ಅವರ ಏಳು ಜನರ ಕುಟುಂಬದಲ್ಲಿ ಸಂಪಾದನೆ ಇರುವವರೆಂದರೆ ಅವರು ಮತ್ತು ಅವರ ಸಹೋದರ ಮಾತ್ರ. ಅವರು 1,700 ಕಿಲೋಮೀಟರ್ ದೂರದಲ್ಲಿರುವ ಉತ್ತರ ಪ್ರದೇಶದ ಪ್ರಯಾಗ್ರಾಜ್ ಜಿಲ್ಲೆಯ ಭರತಗಂಜ್ ಎನ್ನುವ ಊರಿನವರು. "ನಾವು ಏನು ಮಾಡುತ್ತೇವೆ ಎಂಬುದು ನಮ್ಮ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ. ಆಜ್ ಹುವಾ ತೋ ಹುವಾ, ನಹೀ ಹುವಾ ತೋ ನಹೀ ಹುವಾ. [ಇಂದು ಸಂಪಾದಿಸಿದರೆ ಇದೆ, ಇಲ್ಲದಿದ್ದರೆ ಇಲ್ಲ.] ಸಂಪಾದನೆ ಇದ್ದರೆ ಒಂದು ದಿನಕ್ಕೆ 300 ರೂಪಾಯಿ ಸಂಪಾದಿಸುತ್ತೇನೆ ವಾರಾಂತ್ಯಗಳಲ್ಲಿ ಇದು 600 ರೂಪಾಯಿಗಳ ತನಕ ತಲುಪುತ್ತದೆ.
"ನಮಗೆ ಊರಿನ ಭೂಮಿಯಿಲ್ಲ. ನಾವು ಇನ್ನೊಬ್ಬರ ಹೊಲಗಳನ್ನು ಗೇಣಿಗೆ ತೆಗೆದುಕೊಂಡು ಬೇಸಾಯ ಮಾಡಿದರೆ, ಅದು '50:50 ವ್ಯವಸ್ಥೆ'. ಅಂದರೆ, ಅವರು ಎಲ್ಲಾ ವೆಚ್ಚಗಳ ಅರ್ಧದಷ್ಟು ಭರಿಸುತ್ತಾರೆ - ನೀರು, ಬೀಜಗಳು ಮತ್ತು ಹೆಚ್ಚಿನವು. "ಕೆಲಸವೆಲ್ಲ ನಮ್ಮದು - ಆದರೂ ನಾವು ಅರ್ಧದಷ್ಟು ಬೆಳೆಯನ್ನು ಬಿಟ್ಟುಕೊಡುತ್ತೇವೆ. ಇದರಲ್ಲಿ ಏನೂ ಗಿಟ್ಟುವುದಿಲ್ಲ. ಬಜೆಟ್ ಬಗ್ಗೆ ಏನು ಹೇಳುವುದು? ನಫೀಝ್ ತಾಳ್ಮೆ ಕಳೆದುಕೊಂಡಿದ್ದರು. ಬೆಳಕು ಮತ್ತೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಸಿಗ್ನಲ್ ಹಸಿರಾಗುವುದನ್ನೇ ಕಾಯುತ್ತಾ ಕಾರಿನ ಗ್ಲಾಸ್ ಏರಿಸಿಕೊಂಡು ಕುಳಿತುಕೊಂಡ ಸಂಭಾವ್ಯ ಗ್ರಾಹಕರತ್ತ ಅವರು ನಡೆಯತೊಡಗಿದರು.
ಅನುವಾದ: ಶಂಕರ. ಎನ್. ಕೆಂಚನೂರು