“ಬಾಲ್ಯದಿಂದಲೂ ನನಗೆ ಚಿತ್ರಕಲೆಯೆಂದರೆ ಇಷ್ಟ. ಶಾಲೆಯಲ್ಲಿ ಕೋ ಶ್ರೇಣಿಯಲ್ಲಿ [1ನೇ ತರಗತಿ] ಇದ್ದಾಗ ಶಿಕ್ಷಕರು ಕುಂಬಳಕಾಯಿ, ಕಿತ್ತಳೆ ಹಣ್ಣಿನ ಚಿತ್ರ ಬಿಡಿಸಲು ಹೇಳುತ್ತಿದ್ದರು. ಆಗ ನಾನು ಎಲ್ಲರಿಗಿಂತಲೂ ಬೇಗ ಬಿಡಿಸುತ್ತಿದ್ದೆ.” ಎಂದು ರಮೇಶ್ ದತ್ತಾ ಹೇಳುತ್ತಾರೆ. "ಹೀಗೆ ಇವೆಲ್ಲವೂ ಪ್ರಾರಂಭವಾಯಿತು."
ಇಂದು ಅವರು ಅಸ್ಸಾಂನ ಹಲವಾರು ವೈಷ್ಣವ ಮಠಗಳಲ್ಲಿ ಒಂದಾದ ಮಜುಲಿಯ ಗರಮೂರ್ ಸರು ಸತ್ರದಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಪ್ರಾಥಮಿಕ ಸೆಟ್ ಡಿಸೈನರ್ ಮತ್ತು ಮುಖವಾಡ ತಯಾರಕರಾಗಿದ್ದಾರೆ. 52 ವರ್ಷದ ಅವರನ್ನು ಸಮುದಾಯದಲ್ಲಿ ಪ್ರೀತಿಯಿಂದ ರಮೇಶ್ ದಾ ಎಂದು ಸಂಬೋಧಿಸಲಾಗುತ್ತದೆ, ಅವರು ಕಡಿಮೆ ಮಾತಿನ ಮನುಷ್ಯ ಆದರೆ ಬ್ರಹ್ಮಪುತ್ರದ ಅತಿದೊಡ್ಡ ದ್ವೀಪವಾದ ಮಜುಲಿಯಲ್ಲಿ ಸ್ಥಳೀಯ ರಂಗಭೂಮಿ, ಕಲೆ ಮತ್ತು ಸಂಗೀತವನ್ನು ಅಭಿವೃದ್ಧಿ ಹೊಂದುವಂತೆ ಮಾಡಬಲ್ಲ ಅನೇಕ ಪ್ರತಿಭೆಗಳನ್ನು ಹೊಂದಿದ್ದಾರೆ.
"ಬಾಲ್ಯದಲ್ಲಿ ಬೊಂಬೆಯಾಟ ಪ್ರದರ್ಶನಗಳಿಂದ ಆಕರ್ಷಿತನಾಗಿದ್ದೆ" ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಬೇರೆಯವರು ಬೊಂಬೆಗಳನ್ನು ತಯಾರಿಸುವುದನ್ನು ನೋಡುತ್ತಿದ್ದೆ. ಇದು ಕಲೆಯ ಕಲಿಕೆಗೆ ದಾರಿಯಾಯಿತು. ಆ ಸಮಯದಲ್ಲಿ ನಾನು 2ನೇ ತರಗತಿಯಲ್ಲಿದ್ದೆ. ಶಾಲೆಯಲ್ಲಿ ಬೊಂಬೆಗಳನ್ನು ತಯಾರಿಸಿ ತೋರಿಸುತ್ತಿದ್ದೆ."
ಅವರು ತಯಾರಿಸಿದ ಕಲಾ ಸಾಮಾಗ್ರಿಗಳಿಗೆ ಮಜುಲಿಯ ಸುತ್ತಮುತ್ತ ಪ್ರದರ್ಶನ ಕಾರ್ಯಕ್ರಮವಿಲ್ಲದ ಸಮಯದಲ್ಲಿ, ಮನೆಯ ಪಕ್ಕದ ತೆರೆದ ಶೆಡ್ಡಿನಲ್ಲಿ ಸಂಗ್ರಹಿಸಲಾಗುತ್ತದೆ. ನಾವು ಅವರನ್ನು ಭೇಟಿ ಮಾಡಿದಾಗ, ವೇದಿಕೆ ಮೇಲೆ ನಿಂತಿರುವ ತಲೆಕೆಳಗಾಗಿರುವ ಕೈ ದೋಣಿಯನ್ನು ಸಹ ನಾವು ನೋಡಿದೆವು. ರಮೇಶ್ ದಾ ತಯಾರಿಸಿದ ಮುಖವಾಡಗಳ ಪಕ್ಕದಲ್ಲಿ ಬ್ರಶ್ಶುಗಳು ಮತ್ತು ಪೇಂಟ್ ಕ್ಯಾನುಗಳನ್ನು ಸಂಗ್ರಹಿಸಲಾಗಿತ್ತು. ಇವುಗಳಲ್ಲಿ ರಾಸ್ ಮಹೋತ್ಸವಕ್ಕಾಗಿ ತಯಾರಿಸಿದ ಕೊಕ್ಕರೆಯ ಚಲಿಸುವ ಮುಖವಾಡವೂ ಸೇರಿದೆ. (ಓದಿ: ಮಜುಲಿಯ ಅನೇಕ ಮುಖವಾಡಗಳು )


ರಮೇಶ್ ದತ್ತಾ (ಎಡ) ರಾಸ್ ಮಹೋತ್ಸವಕ್ಕಾಗಿ ತಾವು ಕೈಯಿಂದ ಬರೆದ ಸೆಟ್ ವಿನ್ಯಾಸವನ್ನು ತೋರಿಸುತ್ತಿದ್ದಾರೆ. ಗರಮೂರ್ ಸರು ಸತ್ರದ ಆಡಿಟೋರಿಯಂನಲ್ಲಿ 2022ರ ರಾಸ್ ಪ್ರದರ್ಶನಗಳಿಗಾಗಿ ಸೆಟ್ ಸಿದ್ಧಪಡಿಸುತ್ತಿದ್ದಾರೆ


ಎಡ: ಕಲಾವಿದರೊಬ್ಬರು ಒಂದು ಜೋಡಿ ಕೋಲುಗಳನ್ನು ಬಳಸಿಕೊಂಡು ಶಿಲ್ಪವನ್ನು ಹೇಗೆ ನಡೆಸುವುದು ಎಂಬುದನ್ನು ಪ್ರದರ್ಶಿಸುತ್ತಿದ್ದಾರೆ. ಬಲ: ರಾಸ್ ಸಮಯದಲ್ಲಿ ಬಳಸಬೇಕಾದ ಕೊಕ್ಕರೆ ವೇಷಭೂಷಣಕ್ಕೆ ಅಂತಿಮ ರೂಪ ನೀಡುತ್ತಿರುವಾಗ ಮಕ್ಕಳು ಮೈಯೆಲ್ಲ ಕುತೂಹಲವಾಗಿ ನೋಡುತ್ತಿರುವುದು
ಇಂದು ಅವರು ಹೆಚ್ಚು ಮುಖವಾಡಗಳನ್ನು ತಯಾರಿಸದಿದ್ದರೂ, ರಮೇಶ್ ದಾ ಕಲಾ ಪ್ರಕಾರವನ್ನು ಮತ್ತು ಅದನ್ನು ಅಭ್ಯಾಸ ಮಾಡುವ ಪದ್ಮಶ್ರೀ ಪ್ರಶಸ್ತಿ ವಿಜೇತ ಹೇಮ್ ಚಂದ್ರ ಗೋಸ್ವಾಮಿಯಂತಹವರನ್ನು ಮೆಚ್ಚುತ್ತಾರೆ. "ಅವರ ಮುಖವಾಡಗಳು ಕಣ್ಣು ಮಿಟುಕಿಸಬಲ್ಲವು ಮತ್ತು ತುಟಿಗಳನ್ನು ಚಲಿಸಬಲ್ಲವು" ಎಂದು ಅವರು ಹೇಳುತ್ತಾರೆ. "ಅವರು ಮುಖವಾಡಗಳ ಕಲೆಯನ್ನು ವಿಶ್ವಪ್ರಸಿದ್ಧ ಮತ್ತು ಜನಪ್ರಿಯಗೊಳಿಸಿದ್ದಾರೆ. ಅವರಿಗೆ ಈಗ ಅನೇಕ ವಿದ್ಯಾರ್ಥಿಗಳಿದ್ದಾರೆ."
ರಾಸ್ ಉತ್ಸವದ ಸಮಯದಲ್ಲಿ, ದತ್ತಾ ಗರಮೂರ್ ಸರು ಸತ್ರದಲ್ಲಿನ ಪ್ರದರ್ಶನಗಳಿಗಾಗಿ ಸೆಟ್ ವಿನ್ಯಾಸ ಮತ್ತು ವೇದಿಕೆ ಕಲಾ ಸಾಮಾಗ್ರಿಗಳ ಕೆಲಸ ಮಾಡುವುದರ ಜೊತೆಗೆ ಮುಖವಾಡಗಳ ದುರಸ್ತಿ ಕಾರ್ಯವನ್ನು ಸಹ ಕೈಗೊಳ್ಳುತ್ತಾರೆ. "ರಾಸ್ ಹಬ್ಬಕ್ಕೆ ಕೇವಲ ಒಂದು ದಿನದಲ್ಲಿ ನಾನು ಸೆಟ್ ತಯಾರಿಸುತ್ತಿದ್ದೆ. ಹಬ್ಬದ ಮುಂಚಿನ ದಿನ ಇದರ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದೆ" ಎಂದು ಅವರು ಆತ್ಮವಿಶ್ವಾಸದಿಂದ ಘೋಷಿಸುತ್ತಾರೆ. (ಓದಿ: ರಾಸ್ ಮಹೋತ್ಸವ್ ಮತ್ತು ಮಜುಲಿಯ ಸತ್ರಗಳು )
ಸತ್ರದಲ್ಲಿ ಸತ್ರದಲ್ಲಿ ನಡೆಯುವ ವಿವಿಧ ವೈಷ್ಣವ ಸತ್ರಿಯಾ ಪ್ರದರ್ಶನಗಳಲ್ಲಿಯೂ ದತ್ತಾ ಭಾಗವಹಿಸುತ್ತಾರೆ. ಗಾಯನ್ - ಬಯಾನ್, ಭಾವೋನಾಸ್ ಅವುಗಳಲ್ಲಿ ಕೆಲವು. ಮೊದಲನೆಯದು ಗಾಯಕರು (ಗಾಯನ್) ಮತ್ತು ವಾದಕರು (ಬಯಾನ್) ಸೇರಿ ನೀಡುವ ಜಾನಪದ ಪ್ರದರ್ಶನವಾದರೆ, ಎರಡನೆಯದು ನಾಟಕದ ಒಂದು ರೂಪವಾಗಿದೆ. ಸತ್ರಿಯಾ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾದ ಈ ಪ್ರದರ್ಶನಗಳನ್ನು 15ನೇ ಶತಮಾನದಲ್ಲಿ ಸಮಾಜ ಸುಧಾರಕ ಮತ್ತು ಸಂತ ಶ್ರೀಮಂತ ಶಂಕರದೇವ ಪರಿಚಯಿಸಿದರು. ಸತ್ರದಲ್ಲಿ ನಡೆಯುವ ಪ್ರದರ್ಶನಗಳಿಗೆ ಸಂಗೀತದ ಜೊತೆಗಾರಿಕೆಯನ್ನು ಒದಗಿಸುವ ಜವಾಬ್ದಾರಿಯನ್ನು ಗಾಯನರು ಮತ್ತು ಬಯಾನರು ಹೊಂದಿದ್ದಾರೆ.
"1984ರಲ್ಲಿ ಪೀತಾಂಬರ ದೇವ್ ಸಾಂಸ್ಕೃತಿಕ ವಿದ್ಯಾಲಯದಲ್ಲಿ ಗಾಯನ್-ಬಯಾನ್ ಕಲಿಯಲು ಪ್ರಾರಂಭಿಸಿದೆ. ಆಗ ನನಗೆ 13 ವರ್ಷ" ಎಂದು ಅವರು ಹೇಳುತ್ತಾರೆ. "ಆರಂಭದಲ್ಲಿ ಗಾಯನ್ ಮತ್ತು ಬಯಾನ್ ಎರಡನ್ನೂ ಕಲಿತಿದ್ದೆ ಆದರೆ ನಂತರ ಗುರುಗಳು ಗಾಯನ್ ಆಗಲು ಹೇಳಿದರು. ಕೊನೆಗೆ ಅದನ್ನೇ ಕಲಿತೆ."


ದತ್ತಾ ತಮ್ಮ 13ನೇ ವಯಸ್ಸಿನಲ್ಲಿ ಗಾಯನ್-ಬಾಯನ್ ಕಲಿಯಲು ಪ್ರಾರಂಭಿಸಿದರು. ಇಲ್ಲಿ, ಅವರು ಗರಮೂರ್ ಸರು ಸತ್ರದ ನಾಮಘರ್ ಗುಂಪಿನ ಉಳಿದವರೊಂದಿಗೆ ಗಯಾನ್ (ಗಾಯಕ) ಆಗಿ ಪ್ರದರ್ಶನ ನೀಡುತ್ತಾರೆ


ಎಡಕ್ಕೆ: ಗರಮೂರ್ ಸರು ಸತ್ರದಲ್ಲಿ, ದತ್ತಾ ಅಘಾಸುರ ಎಂಬ ಸರ್ಪ ರಾಕ್ಷಸನ ಪಾತ್ರವನ್ನು ನಿರ್ವಹಿಸಲು ತಯಾರಿ ನಡೆಸುತ್ತಿದ್ದಾರೆ. ಬಲ: ಬೋರಾಹೊ (ಎಡ) ಪಾತ್ರದಲ್ಲಿ, ಅವರು ನರಸಿಂಹ ಜಾತ್ರಾ ಎಂಬ ನಾಟಕದಲ್ಲಿ ಅಸುರ (ರಾಕ್ಷಸ) ಹಿರಣ್ಯಾಕ್ಷನೊಂದಿಗೆ ಹೋರಾಡುತ್ತಾರೆ
*****
ನಾವು ಕುಳಿತುಕೊಂಡ ಕೋಣೆಯು ಮಂದ ಬೆಳಕಿನಿಂದ ಕೂಡಿತ್ತು. ಗೋಡೆಗಳನ್ನು ಮರಳು ಮತ್ತು ಸಿಮೆಂಟ್ ಬಳಸಿ ಗಾರೆ ಮಾಡಿ ಅವುಗಳಿಗೆ ಹಸಿರು ಬಣ್ಣ ಬಳಿಯಲಾಗಿದೆ. ರಮೇಶ್ ದಾ ಅವರ ಹಿಂದೆ ಒಂದು ಪರಿಸರದ ದೃಶ್ಯವಿರುವ ಚಿತ್ರ ನೇತಾಡುತ್ತಿತ್ತು. ಗೋಡೆಗಳ ಮೇಲೆ ಪ್ರದರ್ಶಿಸಲಾದ ಎಲ್ಲಾ ವರ್ಣಚಿತ್ರಗಳನ್ನು ತನ್ನ ತಂದೆ ಬಿಡಿಸಿದ್ದು ಎಂದು ಅವರ ಆರು ವರ್ಷದ ಮಗಳು ಅನುಷ್ಕಾ ಹೇಳಿದಳು.
ಮನೆಯಲ್ಲಿರುವ ದನದ ಕೊಟ್ಟಿಗೆಯ ಒಂದು ಭಾಗವನ್ನೇ ಅವರ ಸ್ಟುಡಿಯೋವನ್ನಾಗಿ ರೂಪಿಸಲಾಗಿದೆ. ಅಂದು ಮಧ್ಯಾಹ್ನ ಪೂರ್ತಿ ಅವರು ಜೋಡಿ ಶಿಲ್ಪಗಳನ್ನು ತಯಾರು ಮಾಡುವುದನ್ನು ನಾವು ನೋಡಿದೆವು - ನಾಮಘರ್ [ಪ್ರಾರ್ಥನಾ ಮಂದಿರ] ಬಾಗಿಲಿನ ಜಯ್-ಬಿಜೋಯ್ (ಜಯ-ವಿಜಯ) ಆಕೃತಿಗಳು. ರಮೇಶ್ ದಾ ಅವರು 20 ವರ್ಷಗಳಿಂದ ಈ ರೀತಿಯ ಶಿಲ್ಪಗಳನ್ನು ತಯಾರಿಸುತ್ತಿದ್ದಾರೆ. ಒಂದು ಶಿಲ್ಪವನ್ನು ತಯಾರಿಸಲು ಸುಮಾರು 20 ದಿನಗಳು ಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.
"ಮೊದಲಿಗೆ, ಮರವನ್ನು ಬಳಸಿ ಫ್ರೇಮ್ ತಯಾರಿಸುತ್ತೇನೆ. ನಂತರ ಮರಳು ಮತ್ತು ಸಿಮೆಂಟ್ ಮಿಶ್ರಣವನ್ನು ಫ್ರೇಮಿಗೆ ಸುರಿದು ಒಣಗಲು ಬಿಡಲಾಗುತ್ತದೆ" ಎಂದು ಅವರು ಜಯ್-ಬಿಜೋಯ್ ಪ್ರತಿಮೆಗಳ ಮುಂಡವನ್ನು ಕರಣಿಯಿಂದ ಆಕಾರಗೊಳಿಸುತ್ತಾ ವಿವರಿಸುತ್ತಾರೆ. "ಕೆಲವು ದಿನಗಳ ನಂತರ, ಶಿಲ್ಪಗಳನ್ನು ರೂಪಿಸಲು ಪ್ರಾರಂಭಿಸುತ್ತೇನೆ. ಸೂಕ್ಷ್ಮ ವಿವರಗಳನ್ನು ಕೊನೆಯದಾಗಿ ಚಿತ್ರಿಸಲಾಗುತ್ತದೆ."
ಕೈಕಾಲುಗಳಂತಹ ಆಕೃತಿಗಳ ಕೆಲವು ಭಾಗಗಳಿಗೆ ಬಾಳೆ ಗಿಡದ ಕಾಂಡಗಳ ತುಂಡುಗಳಿಂದ ಮಾಡಿದ ಕ್ಯಾಸ್ಟ್‌ಗಳನ್ನು ಬಳಸಿ ಆಕಾರವನ್ನು ನೀಡಲಾಗುತ್ತದೆ. "ಮೂರ್ತಿ ತಯಾರಿಸಲು ನಾನು ಸ್ಥಳೀಯ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸುತ್ತೇನೆ" ಎಂದು ರಮೇಶ್ ದಾ ಮಾತು ಮುಂದುವರಿಸುತ್ತಾರೆ. "ಈ ದಿನಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಬಣ್ಣಗಳನ್ನು ಬಳಸುತ್ತೇವೆ. ಈ ಮೊದಲು ಡಿಸ್ಟೆಂಪರ್ ಬಣ್ಣಗಳನ್ನು ಬಳಸುತ್ತಿದ್ದೆವು, ಆದರೆ ಅವು ಮಸುಕಾಗುತ್ತವೆ."
ಅವರು ತಾನು ತಯಾರಿಸುತ್ತಿದ್ದ ಮೂರ್ತಿಗಳಿಂದ ದೂರ ಸರಿದು ಅವುಗಳ ಪ್ರಮಾಣವನ್ನು ನಿರ್ಧರಿಸತೊಡಗಿದರು. ನಂತರ ಮತ್ತೊಂದು ಬ್ಯಾಚ್ ಕಾಂಕ್ರೀಟ್ ತಯಾರಿಸಿ ತಮ್ಮ ಕೆಲವನ್ನು ಮುಂದುವರೆಸತೊಡಗಿದರು. “ಅವರು ಕೆಲಸ ಮಾಡುವಾಗ ಯಾರ ಬಳಿಯೂ ಮಾತನಾಡುವುದಿಲ್ಲ. ಇದರಿಂದ ಅವರ ಗಮನ ಬೇರೆಡೆ ಹೋಗುತ್ತದೆ” ಎನ್ನುತ್ತಾರೆ ಅವರಿಗೆ ಕೆಲಸದಲ್ಲಿ ಸಹಾಯ ಮಾಡುವ ಅವರ ಪತ್ನಿ ನೀತಾ. “ಅವರು ಕೆಲಸದಲ್ಲಿ ಮುಳುಗಿರುವ ಹೊತ್ತಿನಲ್ಲಿ ಬೇರೆಯದೇ ಜಗತ್ತಿನಲ್ಲಿರುತ್ತಾರೆ” ಎಂದು ಅವರು ಮುಗುಳ್ನಗುತ್ತಾರೆ.


ಎ: ದತ್ತಾ ತನ್ನ ಪತ್ನಿ ನೀತಾ ಮತ್ತು ಮಗಳು ಅನುಷ್ಕಾ ಅವರೊಂದಿಗೆ ಮಜುಲಿಯ ಗರಮೂರ್‌ನಲ್ಲಿರುವ ಮನೆಯಲ್ಲಿ. ಬಲ: ಕೊಕ್ಕರೆ ಮುಖವಾಡಕ್ಕಾಗಿ ಚಲಿಸುವ ಕೊಕ್ಕನ್ನು ತಾನು ಹೇಗೆ ವಿನ್ಯಾಸಗೊಳಿಸಿದೆ ಎನ್ನುವುದನ್ನು ಪ್ರದರ್ಶಿಸುತ್ತಿದ್ದಾರೆ


ಕಲಾವಿದ ತನ್ನ ಮನೆಯ ಹೊರಗೆ ಜಯ-ವಿಜಯರ ಜೋಡಿ ಶಿಲ್ಪ ತಯಾರಿಕೆಯಲ್ಲಿ ತೊಡಗಿದ್ದಾರೆ. ಈ ವಿಗ್ರಹಗಳು ನಾಮಗೃಹದ ಕಾವಲುಗಾರರು. ಮೊದಲು ಮರದ ಫ್ರೇಮುಗಳು ಮತ್ತು ಕಾಂಕ್ರೀಟ್ ಬಳಸಿ ಮೂರ್ತಿಗಳನ್ನು ತಯಾರಿಸುತ್ತಾರೆ. ನಂತರ ಅವುಗಳಿಗೆ ಮಸುಕಾಗದ ಪ್ಲಾಸ್ಟಿಕ್ ಬಣ್ಣ ಬಳಸಿ ರೂಪ ನೀಡುತ್ತಾರೆ
ಗರಮೂರ್ ಬಳಿಯ ಖರ್ಜನ್ಪರ್ ಪ್ರದೇಶದಲ್ಲಿ ನಾಮಘರ್ ಒಂದಕ್ಕಾಗಿ ನಿರ್ಮಿಸಿದ ಗುರು ಆಕ್ಸಾನ್ (ಗುರುವಿನ ಆಸನ) ಕುರಿತು ದತ್ತಾ ಅವರಿಗೆ ವಿಶೇಷ ಹೆಮ್ಮೆಯಿದೆ. ಆಕ್ಸಾನ್ ಎಂಬುದು ಪ್ರಾರ್ಥನಾ ಮಂದಿರದ ಒಳ ಗರ್ಭಗುಡಿಯೊಳಗೆ ಇರಿಸಲಾಗುವ ನಾಲ್ಕು ಮುಖಗಳ ಪೀಠದಂತಹ ರಚನೆಯಾಗಿದೆ. "ಆಸನವನ್ನು ಮೊದಲು ಸಿಮೆಂಟಿನಿಂದ ತಯಾರಿಸಿ ನಂತರ ಅದು ಮರದಂತೆ ಕಾಣುವ ಹಾಗೆ ಪೇಂಟ್ ಮಾಡಿದೆ. ಆಕ್ಸಾನ್ ಪ್ರತಿಷ್ಠಾಪಿಸಿ ಉದ್ಘಾಟಿಸಿದ ಸತ್ರಾಧಿಕಾರಿ [ಸತ್ರದ ಮುಖ್ಯಸ್ಥ] ಅದನ್ನು ಮರದಿಂದ ತಯಾರಿಸಲಾಗಿದೆ ಎಂದುಕೊಂಡಿದ್ದರು" ಎಂದು ಅವರು ಸಂತೋಷದಿಂದ ಹೇಳುತ್ತಾರೆ.
ಅವರು ತಮ್ಮ ಕುಟುಂಬಕ್ಕಾಗಿ ಮನೆ ನಿರ್ಮಿಸುವಲ್ಲಿಯೂ ನಿರತರಾಗಿದ್ದಾರೆ. "ಇದು ಮಳೆಗಾಲ, ಹೀಗಾಗಿ ಪೂರ್ಣಗೊಳ್ಳಲು ಹೆಚ್ಚು ಸಮಯ ಹಿಡಿಯುತ್ತಿದೆ" ಎಂದು ನೀತಾ ಹೇಳುತ್ತಾರೆ.
ಕುಟುಂಬದ ನಾಲ್ವರು ಒಡಹುಟ್ಟಿದವರಲ್ಲಿ ಹಿರಿಯರಾದ ದತ್ತಾ ಕುಟುಂಬದಲ್ಲಿ ಕಲೆಯನ್ನು ಜೀವನೋಪಾಯದ ಮಾಧ್ಯಮವಾಗಿ ಅಳವಡಿಸಿಕೊಂಡ ಏಕೈಕ ವ್ಯಕ್ತಿ. ಎಂಟನೇ ತರಗತಿಯಲ್ಲಿರುವಾಗಲೇ ಶಿಲ್ಪಕಲೆ ಅವರ ವೃತ್ತಿಯಾಗಿತ್ತು. “ಇದು ನನ್ನ ಉದ್ಯೋಗ. ಕೃಷಿ ಮಾಡಲು ನನ್ನ ಬಳಿ ಜಮೀನಿಲ್ಲ" ಎಂದು ಅವರು ಹೇಳುತ್ತಾರೆ. "ನಮಗೆ ಕೆಲಸವಿಲ್ಲದಿದ್ದಾಗ, ನಮ್ಮ ಉಳಿತಾಯದ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಜೀವನ ಹೀಗೆ ಸಾಗುತ್ತಿರುತ್ತದೆ. ಕೆಲವೊಮ್ಮೆ ಜನರು ಭೋವಾನಾ [ಸಾಂಪ್ರದಾಯಿಕ ನಾಟಕ] ಪ್ರದರ್ಶನಕ್ಕೆ ನನ್ನನ್ನು ಆಹ್ವಾನಿಸುತ್ತಾರೆ. ಅವರಿಗೆ ಸಹಾಯ ಬೇಕಿರುತ್ತದೆ, ನಾನು ಸಹಾಯ ಮಾಡುತ್ತೇನೆ.
“ಪ್ರತಿಯಾಗಿ ಕೆಲವರು 1,000 ರೂಪಾಯಿಗಳನ್ನು ನೀಡಿದರೆ, ಇನ್ನೂ ಕೆಲವರು 1,500 ರೂಪಾಯಿಗಳನ್ನು ನೀಡುತ್ತಾರೆ. ಮತ್ತೆ ಕೆಲವರು ಕೇವಲ 300 ರೂ. ಕೊಡುತ್ತಾರೆ. ಏನು ಹೇಳಲು ಸಾಧ್ಯ ಅವರಿಗೆ? ಇದು ರಜಹುವಾ ಕಾಮ್ [ಸಮುದಾಯ ಸೇವೆ]. "ನಾನು ನನ್ನ ಸಂಭಾವನೆಯನ್ನು ಹೇಳುತ್ತೇನೆ, ಆದರೆ ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪಾವತಿಸುತ್ತಾರೆ."


ಮಜುಲಿಯಲ್ಲಿ ಖರ್ಜನ್‌ಪರ್ ಎನ್ನುವಲ್ಲಿನ ನಾಮಘರ್‌ಗಾಗಿ ದತ್ತಾ ಮಾಡಿದ ಗುರುವಿನ ಆಸನ. ಈ ಆಸನಗಳನ್ನು ಸಾಮಾನ್ಯವಾಗಿ ಮರದಿಂದ ಮಾಡಲಾಗಿರುತ್ತದೆ, ಆದರೆ ದತ್ತಾ ಅವುಗಳನ್ನು ಮಾಡಲು ಕಾಂಕ್ರೀಟ್ ಬಳಸಿದ್ದಾರೆ ಮತ್ತು ನಂತರ ಅವುಗಳನ್ನು ಮರದಿಂದ ಮಾಡಲ್ಪಟ್ಟಂತೆ ಕಾಣುವ ರೀತಿಯಲ್ಲಿ ಪೇಂಟ್ ಮಾಡಿದ್ದಾರೆ


ಅಘಾಸುರನ ಬೃಹತ್ ವೇಷಭೂಷಣದ ಪಕ್ಕದಲ್ಲಿ ಅನುಷ್ಕಾ ದತ್ತಾ ನಿಂತಿದ್ದಾಳೆ. ರಾಸ್ ಹಬ್ಬಕ್ಕಾಗಿ ಆಕೆಯ ತಂದೆ ಈ ವೇಷಭೂಷಣವನ್ನು ಸಿದ್ಧಪಡಿಸಿದ್ದಾರೆ. ಆರು ವರ್ಷದ ಅನುಷ್ಕಾ ತನ್ನ ತಂದೆ ಮನೆಯ ಹೊರಗೆ ಶಿಲ್ಪಕಲೆಯಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡುತ್ತಿದ್ದಾಳೆ
ಇಂತಹ ಮಿತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ದತ್ತಾ, “ಅರ್ಥ [ಹಣ] ಇಲ್ಲದೆ ಏನನ್ನೂ ಮಾಡಲಾಗುವುದಿಲ್ಲ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು, ಹಣದ ಅಗತ್ಯವಿರುತ್ತದೆ ಮತ್ತು ಕೆಲವೊಮ್ಮೆ ಹಣವನ್ನು ಕೂಡಿಸುವುದು ಅತ್ಯಂತ ಕಷ್ಟಕರವಾದ ಕೆಲಸ.”
ಈ ಸಮಸ್ಯೆಗಳನ್ನು ನಿಭಾಯಿಸಲು ಅವರು ಹೊಂದಿರುವ ಒಂದು ಪರಿಹಾರವೆಂದರೆ ಮುಖವಾಡಗಳು ಮತ್ತು ಇತರ ಕಲಾಕೃತಿಗಳನ್ನು ಬಾಡಿಗೆಗೆ ನೀಡುವುದು, ಉದಾಹರಣೆಗೆ ಮತ್ಸ್ಯೊ - 2014ರಲ್ಲಿ ತಮ್ಮ ಕೈಯಾರೆ ತಯಾರಿಸಿದ ವಿಷ್ಣುವಿನ ಮೀನಿನ ಅವತಾರ. "ಅವುಗಳನ್ನು ತಯಾರಿಸಲು ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ನನಗೆ ಅನೇಕ ಬಾರಿ 400 ರೂಪಾಯಿಗಳು ಬೇಕಾಗುತ್ತವೆ ಮತ್ತು ಕೆಲವೊಮ್ಮೆ ಈ 400 ರೂಪಾಯಿಗಳಿಗೆ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತದೆ." ಆದರೆ, ಈ ಮುಖವಾಡ ತಯಾರಿಸಿ ಆರು ವರ್ಷ ಕಳೆದಿದ್ದು, ಇಲ್ಲಿಯವರೆಗೆ ಬಾಡಿಗೆ ನೀಡಿ ಸುಮಾರು 50 ಸಾವಿರ ರೂ. ಸಂಪಾದಿಸಿದ್ದಾರೆ.
ದತ್ತ ಅವರ ಯಾವ ಕೆಲಸಕ್ಕೂ ನಿಗದಿತ ದರವಿಲ್ಲ. ಅನೇಕ ಬಾರಿ ವಿಗ್ರಹವು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ, ಆದರೆ ಅದನ್ನು ತಯಾರಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ. "ಹಲವು ಬಾರಿ ಹಝಿರಾ [ಸಂಭಾವನೆ] ಸಾಕಾಗುವುದಿಲ್ಲ," ಎಂದು ಅವರು ವಿವರಿಸುತ್ತಾರೆ.
“ಇದು ಇಸ್ಪೀಟ್ ಆಟದಂತೆ. ಹತಾಶೆಯಲ್ಲೂ ನೀವು ಭರವಸೆಯನ್ನು ಉಳಿಸಿಕೊಳ್ಳಬೇಕು.

ಗರ್ಮೂರ್ ಸರು ಸತ್ರದ ಸಭಾಂಗಣದಲ್ಲಿ ದತ್ತಾ ಅವರು ತಮ್ಮ ಗಾಯನ ಪ್ರದರ್ಶನಕ್ಕಾಗಿ ವೇದಿಕೆಯ ಹಿಂದೆ ಕಾಯುತ್ತಿದ್ದಾರೆ

ನರಸಿಂಹ ಜಾತ್ರಾ ನಾಟಕದ ದೃಶ್ಯವೊಂದರಲ್ಲಿ ನಟನಿಗೆ ಅರ್ಧ ಸಿಂಹ, ಅರ್ಧ ಮನುಷ್ಯನ ವೇಷವಾದ ನರಸಿಂಹನ ಮುಖವಾಡ ಧರಿಸಲು ದತ್ತಾ (ಬಲ) ಸಹಾಯ ಮಾಡುತ್ತಿರುವುದು

ರಾಸ್ ಪ್ರಸ್ತುತಿಯಲ್ಲಿ ಕಾಲಿಯಾ ನಾಗ್ ದೃಶ್ಯಕ್ಕಾಗಿ ದತ್ತಾ ಸೆಟ್ ಸಿದ್ಧಪಡಿಸುತ್ತಿದ್ದಾರೆ. ಈ ದೃಶ್ಯದಲ್ಲಿ ಶ್ರೀಕೃಷ್ಣನು ಯಮುನಾ ನದಿಯಲ್ಲಿ ವಾಸಿಸುವ ಕಾಲಿಯಾ ನಾಗನನ್ನು ಸೋಲಿಸುತ್ತಾನೆ

ಬೊರಾಹೊ ಪಾತ್ರದ ನಂತರ ದತ್ತಾ ಪ್ರಾರ್ಥನೆಯಲ್ಲಿ ಧೂಪ ಹಾಕುತ್ತಿರುವುದು
ಈ ಲೇಖನಕ್ಕೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಬೆಂಬಲ ಪಡೆಯಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು