ಉದ್ದನೆಯ ಡೀಪ್ ಬ್ಲ್ಯೂ ಕುರ್ತಾ, ಎಂಬ್ರಾಯಿಡರಿ ಮಾಡಲಾದ ಲುಂಗಿ ಮತ್ತು ಮುಡಿಗೆ ಮಲ್ಲಿಗೆ ಮಾಲೆ ಮುಡಿದ ಎಮ್ ಪಿ ಸೆಲ್ವಿ ತಮ್ಮ ದೊಡ್ಡ ಅಡುಗೆ ಮನೆ ಪ್ರವೇಶಿಸುವುದನ್ನು ನೋಡುವುದೇ ಒಂದು ಚಂದ. ಅವರು ಕರುಂಬುಕಡೈ ಎನ್ನುವ ಪ್ರದೇಶದಲ್ಲಿರುವ ದೊಡ್ಡ ಅಡುಗೆ ಮನೆಯೊಂದರ ಬಿರಿಯಾನಿ ಮಾಸ್ಟರ್. ಎಮ್ ಪಿ ಸೆಲ್ವಿ ಒಳಗೆ ಬರುತ್ತಿದ್ದ ಹಾಗೆ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದ ಅವರ ಕ್ಯಾಟರಿಂಗ್ ಘಟಕದ ಕೆಲಸಗಾರರು ತಮ್ಮ ಮಾತು ನಿಲ್ಲಿಸಿ, ನಮಸ್ಕರಿಸಿ ಅವರ ಕೈಯಲ್ಲಿದ್ದ ಚೀಲವನ್ನು ತೆಗೆದುಕೊಳ್ಳುತ್ತಾರೆ.
ಸೆಲ್ವಿಯವರು 60ಕ್ಕೂ ಹೆಚ್ಚು ಜನರು ಕೆಲಸ ಮಾಡುವ ಈ ದೊಡ್ಡ ಅಡುಗೆ ಮನೆಯಲ್ಲಿ ಬಿರಿಯಾನಿ ಮಾಸ್ಟರ್ ಆಗಿರುವ ಕಾರಣ ಅವರಿಗೆ ಗೌರವ ಎನ್ನುವುದು ತಂತಾನೆ ಸಿಗುತ್ತದೆ. ಕೆಲವೇ ಕ್ಷಣಗಳಲ್ಲಿ ಅಲ್ಲಿದ್ದವರು ಮತ್ತೆ ತಮ್ಮ ತಮ್ಮ ಕೆಲಸಗಳಲ್ಲಿ ಶೃದ್ಧೆಯಿಂದ ತೊಡಗಿಕೊಳುತ್ತಾರೆ. ಒಲೆಗಳಲ್ಲಿ ದೊಡ್ಡ ಬೆಂಕಿ ಕಾಣಿಸತೊಡಗುತ್ತದೆ.
ಈಗ ದಂತಕತೆಯಾಗಿರುವ ಈ ಬಿರಿಯಾನಿಯನ್ನು ಸೆಲ್ವಿಯವರು ಕಳೆದ ಮೂರು ದಶಕಗಳಿಂದ ತಯಾರಿಸುತ್ತಿದ್ದಾರೆ. ಅವರು ತಯಾರಿಸುವ ಮಟನ್ ದಮ್ ಬಿರಿಯಾನಿಯನ್ನು ಮಾಂಸ ಮತ್ತು ಅಕ್ಕಿ ಒಟ್ಟಿಗೆ ಹಾಕಿ ಬೇಯಿಸಲಾಗುತ್ತದೆ. ಬೇರೆ ವಿಧಾನಗಳಲ್ಲಿ ಇವೆರಡನ್ನು ಬೇರೆ ಬೇರೆ ಬೇಯಿಸಲಾಗುತ್ತದೆ.
“ನಾನು ಕೊಯಮತ್ತೂರು ದಮ್ ಬಿರಿಯಾನಿ ಸ್ಪೆಷಲಿಸ್ಟ್” ಎನ್ನುತ್ತಾರೆ ಈ 50 ವರ್ಷದ ಟ್ರಾನ್ಸ್ ಮಹಿಳೆ. “ಇದನ್ನು ನಾನೊಬ್ಬಳೇ ನೋಡಿಕೊಳ್ಳುತ್ತೇನೆ. ಎಲ್ಲವೂ ನನ್ನ ತಲೆಯಲ್ಲಿರುತ್ತದೆ. ಕೆಲವೊಮ್ಮ ನಮಗೆ ಆರು ಮೊದಲೇ ಬೇಡಿಕೆ ಬಂದಿರುತ್ತದೆ.”
ಅವರು ನಮ್ಮೊಂದಿಗೆ ಮಾತನಾಡುತ್ತಿರುವಾಗ ಅವರ ಕೈಗೆ ಒಂದು ಸತುವಮ್ (ದೊಡ್ಡ ಸೌಟು) ತಂದು ಕೊಡಲಾಯಿತು. ಅದರಲ್ಲಿ ತೊಟ್ಟಿಕ್ಕುತ್ತಿದ್ದ ಮಸಾಲೆಯ ರುಚಿ ನೋಡಿದ ಅವರು “ಓಕೆ” ಎಂದು ತಲೆಯಾಡಿಸಿದರು. ಅದು ಇಡೀ ಅಡುಗೆ ಪ್ರಕ್ರಿಯೆಯ ಕೊನೆಯ ರುಚಿ ಪರೀಕ್ಷೆ. ಮುಖ್ಯ ಅಡುಗೆಯವರು ರುಚಿಯನ್ನು ಒಕೆ ಎಂದಾಕ್ಷಣ ಉಳಿದವರು ನೆಮ್ಮದಿಯ ನಿಟ್ಟುಸಿರಿಟ್ಟರು.
“ಎಲ್ಲರೂ ನನ್ನನ್ನು ʼಸೆಲ್ವಿ ಅಮ್ಮʼ ಎಂದು ಕರೆಯುತ್ತಾರೆ. ʼಅಮ್ಮʼ ಎಂದು ಕರೆಯಿಸಿಕೊಳ್ಳುವುದರಲ್ಲಿ ʼತಿರುನಂಗೈʼ [ಟ್ರಾನ್ಸ್ ಮಹಿಳೆ] ಗೆ ಸಂತೋಷವಿದೆ” ಎಂದು ಅವರು ಸಂಭ್ರಮದಿಂದ ಹೇಳುತ್ತಾರೆ.


ಎಡ: ಆಹಾರದ ರುಚಿ ನೋಡಿ ಅದಕ್ಕೆ ಒಪ್ಪಿಗೆ ಮುದ್ರೆ ನೀಡುತ್ತಿರುವ ಸೆಲ್ವಿ ಅಮ್ಮ. ಬಲ: ಆಹಾರ ತಯಾರಾಗುವುದನ್ನೇ ಕಾಯುತ್ತಿರುವ ಬಿರಿಯಾನಿ ಮಾಸ್ಟರ್


ಎಡ: ಸೆಲ್ವಿ ಅಮ್ಮ ಜೊತೆ ಕೆಲಸ ಮಾಡುವವರು ತೊಳೆದ ಅಕ್ಕಿ ಹಾಗೂ ಮೊದಲೇ ತಯಾರಿಸಿಟ್ಟ ಮಸಾಲೆಯಮ್ಮಿ ಬೆರೆಸುತ್ತಿದ್ದಾರೆ. ಬಲ: ಸೆಲ್ವಿ ಅಮ್ಮ ಅಡುಗೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ
ಅವರು ಪುಲ್ಲುಕಾಡು ಎನ್ನುವ ಪ್ರದೇಶದಲ್ಲಿರುವ ತಮ್ಮದೇ ಮನೆಯಲ್ಲಿ ಕ್ಯಾಟರಿಂಗ್ ಸೇವೆಯನ್ನು ನಡೆಸುತ್ತಾರೆ. ಅವರ ಬಳಿ ಟ್ರಾನ್ಸ್ ಸಮುದಾಯದ 15 ಜನರು ಸೇರಿದಂತೆ ಒಟ್ಟು 60 ಜನರು ಕೆಲಸಕ್ಕಿದ್ದಾರೆ. ಒಂದು ವಾರದಲ್ಲಿ ಈ ತಂಡವು 1,000 ಕಿಲೋ ತನಕ ಬಿರಿಯಾನಿ ತಯಾರಿಸುತ್ತದೆ. ಕೆಲವೊಮ್ಮೆ ಇದಕ್ಕೆ ಇನ್ನಷ್ಟು ಮದುವೆ ಆರ್ಡರ್ ಸೇರಿಕೊಳ್ಳುತ್ತದೆ. ಒಮ್ಮೆ ಸೆಲ್ವಿಯವರು ಹತ್ತಿರದ ಮಸೀದಿಗಾಗಿ 20,00 ಸಾವಿರ ಜನರಿಗೆ ಬಡಿಸಲು 3,500 ಕಿಲೋ ಬಿರಿಯಾನಿ ತಯಾರಿಸಿದ್ದರು.
“ನನಗೆ ಅಡುಗೆ ಮಾಡುವುದೆಂದರೆ ಏಕೆ ಇಷ್ಟ? ಒಮ್ಮೆ ಅಬ್ದಿನ್ ಎನ್ನುವ ಗ್ರಾಹಕರೊಬ್ಬರು ನಾನು ಮಾಡಿದ ಬಿರಿಯಾನಿ ತಿಂದು ಫೋನ್ ಮಾಡಿ, ʼಎಂತಹ ಅದ್ಭುತ ರುಚಿ! ಮೂಳೆಯಿಂದ ಮಾಂಸ ಹಾಗೇ ಹೂ ಉದುರಿದಂತೆ ಉದುರುತ್ತದೆʼ.” ಎಂದು ಹೊಗಳಿದ್ದರು. ಆದರೆ ರುಚಿಯೊಂದೇ ಇವರ ಬಿರಿಯಾನಿಯ ವಿಶೇಷತೆಯಲ್ಲ. “ನನ್ನ ಗ್ರಾಹಕರು ಟ್ರಾನ್ಸ್‌ಜೆಂಡರ್ ವ್ಯಕ್ತಿಯೊಬ್ಬರು ತಯಾರಿಸಿದ ಬಿರಿಯಾನಿ ತಿನ್ನುತ್ತಾರೆ. ಅದು ಅವರ ಪಾಲಿಗೆ ಆಶೀರ್ವಾದವಿದ್ದಂತೆ.”
ನಾನು ಇಲ್ಲಿಗೆ ಭೇಟಿ ನೀಡಿದ ದಿನ ಮದುವೆಯೊಂದರಲ್ಲಿ ಬಡಿಸಲೆಂದು 400 ಕಿಲೋ ಬಿರಿಯಾನಿ ತಯಾರಾಗುತ್ತಿತ್ತು. “ನನ್ನ ಪ್ರಸಿದ್ಧ ಬಿರಿಯಾನಿಯಲ್ಲಿ ʼಸೀಕ್ರೆಟ್ʼ ಮಸಾಲೆ ಎನ್ನುವುದೆಲ್ಲ ಇಲ್ಲ” ಎನ್ನುತ್ತಾರೆ ಸೆಲ್ವಿ ಅಮ್ಮ. ತಾನು ಬಿರಿಯಾನಿ ತಯಾರಿಕೆ ಸಣ್ಣ ವಿವರಕ್ಕೂ ಪ್ರಾಶಸ್ತ್ಯ ನೀಡುವುದರಿಂದಾಗಿ ಆ ರುಚಿ ಬರುತ್ತದೆ ಎನ್ನುವುದು ಅವರ ಬಲವಾದ ನಂಬಿಕೆ. “ನನ್ನ ಗಮನ ಯಾವಾಗಲೂ ಬಿರಿಯಾನಿ ಪಾತ್ರೆಯ ಕಡೆಗೇ ಇರುತ್ತದೆ. ನಾನು ಇದಕ್ಕೆ ಕೊತ್ತಂಬರಿ ಪುಡಿ, ಗರಮ್ ಮಸಾಲಾ, ಮತ್ತು ಏಲಕ್ಕಿಯಂತಹ ಮಸಾಲೆ ಪದಾರ್ಥಗಳನ್ನು ಸೇರಿಸುತ್ತೇನೆ” ಎಂದು ಸಾವಿರಾರು ಜನರಿಗೆ ಅಡುಗೆ ಮಾಡಿದ ಕೈಯಲ್ಲಿ ಅಳತೆಗಳನ್ನು ತೋರಿಸುತ್ತಾ ಅವರು ಹೇಳುತ್ತಾರೆ.
ಮದುವೆ ಬಿರಿಯಾನಿಗೆ ಬೇಕಾದ ಮಸಾಲೆಯನ್ನು ಅವರ ಬಳಿ ಕೆಲಸ ಮಾಡುವ ಇಬ್ಬರು ಅಣ್ಣ-ತಮ್ಮಂದಿರು ತಯಾರಿಸುತ್ತಿದ್ದರು. ಇಬ್ಬರಿಗೂ ಮೂವತ್ತರ ಆಸುಪಾಸಿನ ಪ್ರಾಯ – ತಮಿಳರಸ್ ಮತ್ತು ಎಳವರಸನ್. ಅವರು ತರಕಾರಿ ಕತ್ತರಿಸುವುದು, ಮಸಾಲೆ ಬೆರೆಸುವುದು, ಒಲೆಯ ಸೌದೆ ಗಮನಿಸುವುದನ್ನು ಮಾಡುತ್ತಿದ್ದರು. ದೊಡ್ಡ ಸಮಾರಂಭಗಳಿಗೆ ಬಿರಿಯಾನಿ ತಯಾರಿಸಲು ಒಂದು ಹಗಲು ಮತ್ತು ಒಂದು ರಾತ್ರಿ ಬೇಕಾಗುತ್ತದೆ.


ಎಡ: ಮಾಂಸವನ್ನು ಸ್ವಚ್ಛಗೊಳಿಸಲಾಗುತ್ತಿದೆ. ನಂತರ ಅಕ್ಕಿ ಮತ್ತು ಮಸಾಲೆಯೊಡನೆ ಹಾಕಿ ನೀರು ಸೇರಿ ಬೆರೆಸಲಾಗುತ್ತದೆ. ಬಲ: ಅಡುಗೆಯವರು ಬಿರಿಯಾನಿಗೆ ಮಸಾಲೆ ಸೇರಿಸುತ್ತಿದ್ದಾರೆ


ಎಡ: ಸೆಲ್ವಿ ಅಮ್ಮ ಅಡುಗೆಯವರೊಬ್ಬರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾರೆ. ಬಲ: ಎಲ್ಲಾ ಅಡುಗೆಗೂ ಉಪ್ಪು ಹಾಕುವುದು ಅವರು ಮಾತ್ರ
ಸೆಲ್ವಿ ಅಮ್ಮನ ವೃತ್ತಿ ದಿನಗಳು ಎಪ್ರಿಲ್, ಮೇ ತಿಂಗಳ ರಜಾ ಸಮಯದಲ್ಲಿ ಬಹಳ ತುರುಸಿನಿಂದ ಕೂಡಿರುತ್ತದೆ. ಆ ಸಮಯದಲ್ಲಿ ಅವರಿಗೆ 20ರ ತನಕ ಆರ್ಡರ್ ಬರುತ್ತದೆ. ಅವರು ನಿಯಮಿತ ಗ್ರಾಹಕರಲ್ಲಿ ಬಹುತೇಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಅವರು ಹೆಚ್ಚಾಗಿ ಮದು ಹಾಗೂ ನಿಶ್ಚಿತಾರ್ಥಗಳಿಗೆ ಬಿರಿಯಾನಿ ಮತ್ತು ಇತರ ಆಹಾರಗಳನ್ನು ಸರಬರಾಜು ಮಾಡುತ್ತಾರೆ. “ಎಂತಹ ದೊಡ್ಡ ಕೋಟ್ಯಧೀಶರೇ ಆಗಿರಲಿ ನನ್ನನ್ನು ಅಮ್ಮ ಎಂದೇ ಕರೆಯುತ್ತಾರೆ” ಎಂದು ಅವರು ಹೇಳುತ್ತಾರೆ.
ಇವರ ಬಳಿ ಮಟನ್ ಬಿರಿಯಾನಿ ಬಹಳ ಜನಪ್ರಿಯ. ಆದರೆ ಇದರ ಜೊತೆಗೆ ಸೆಲ್ವಿಯವರು ಚಿಕನ್, ಬೀಫ್ ಬಿರಿಯಾನಿಗಳನ್ನು ಸಹ ಸರಬರಾಜು ಮಾಡುತ್ತಾರೆ. ಒಂದು ಕೇಜಿ ಬಿರಿಯಾನಿಯನ್ನು ಆರರಿಂದ ಎಂಟು ಜನರು ತಿನ್ನಬಹುದು. ಒಂದು ಕೇಜಿ ಬಿರಿಯಾನಿ ತಯಾರಿಸಲು ಅವರು 120 ರೂಪಾಯಿ ಚಾರ್ಜ್ ಮಾಡುತ್ತಾರೆ. ಉಳಿದಂತೆ ಮಸಾಲೆಗಳಿಗೆ ಪ್ರತ್ಯೇಕ ಬೆಲೆಯಿದೆ.
ನಾಲ್ಕು ಗಂಟೆಗಳ ಕಾಲ ಬಿರಿಯಾನಿ ತಯಾರಿಸಿದ ನಂತರ ಸೆಲ್ವಿ ಅಮ್ಮನ ಬಟ್ಟೆಗಳ ಮೇಲೆ ಅಡುಗೆಗೆ ಬಳಸಲಾದ ಮಸಾಲೆ ಮತ್ತು ಎಣ್ಣೆ ಬಿದ್ದು ಕಲೆಯಾಗಿದ್ದವು. ಅಡುಗೆ ಮನೆಯ ಬೆಂಕಿಯ ಕಾವಿಗೆ ಮುಖದ ಮೇಲೆ ಬೆವರು ಬಂದು ಅವರ ಮುಖ ಹೊಳೆಯುತ್ತಿತ್ತು. ಅವರ ಹಿಂದಿನ ಕೋಣೆಯಲ್ಲಿ ದೊಡ್ಡ ದೊಡ್ಡ ಒಲೆಗಳ ಮೇಲೆ ಡೇಗ್ಚಾ [ಅಡುಗೆ ಪಾತ್ರೆ] ಗಳಲ್ಲಿ ಅಡುಗೆ ಬೇಯುತ್ತಿತ್ತು.
“ಇಲ್ಲಿ ಕೆಲಸದವರು ಹೆಚ್ಚು ಕಾಲ ನಿಲ್ಲುವುದಿಲ್ಲ. ನಮ್ಮ ಕೆಲಸಕ್ಕೆ ಜನರನ್ನು ಹುಡುಕುವುದು ಸುಲಭವಲ್ಲ” ಎಂದು ಅವರು ಹೇಳುತ್ತಾರೆ. “ನಾವು ಭಾರ ಎತ್ತಬೇಕು, ಬೆಂಕಿಯ ಮುಂದೆಗಂಠೆಗಳ ಕಾಲ ನಿಲ್ಲಬೇಕು. ನನ್ನ ಬಳಿ ಕೆಲಸ ಮಾಡಲು ಬಯಸುವವರು ಕಷ್ಟದ ಕೆಲಸಗಳನ್ನು ಮಾಡಲು ತಯಾರಿರಬೇಕು. ಹಾಗೆ ಮಾಡಲು ಸಾಧ್ಯವಿಲ್ಲದವರು ಓಡಿ ಹೋಗುತ್ತಾರೆ.”
ಹಲವು ಗಂಟೆಗಳ ಅಡುಗೆಯ ನಂತರ ಎಲ್ಲರೂ ತಿಂಡಿಗಾಗಿ ಕುಳಿತರು. ಆ ದಿನ ತಿಂಡಿಗಾಗಿ ಪಕ್ಕದ ಹೋಟೆಲ್ಲಿನಿಂದ ಪರೋಟಾ ಹಾಗೂ ಬೀಫ್ ಕುರ್ಮಾ ತರಿಸಲಾಗಿತ್ತು.


ಎಡ ಮತ್ತು ಬಲ: ಅಡುಗೆಯವರ ಕಾಲು ಮತ್ತು ಕೈಗಳಿಗೆ ಅಂಟಿಕೊಂಡಿರುವ ಸುಟ್ಟ ಕಟ್ಟಿಗೆಯ ಬೂದಿ


ಎಡ: ಸೆಲ್ವಿ ಅಮ್ಮ ಉರಿಯನ್ನು ಸರಿಪಡಿಸುತ್ತಿರುವುದು. ಬಲ: ಅಡುಗೆ ತಯಾರಾದ ನಂತರ ಎಲ್ಲರೂ ಒಟ್ಟಿಗೆ ಕುಳಿತು ತಿಂಡಿ ತಿನ್ನುತ್ತಿರುವುದು
ಸೆಲ್ವಿ ಅಮ್ಮ ಸಣ್ಣವರಿರುವಾಗ ಆಹಾರವಿಲ್ಲ ದಿನಗಳನ್ನು ಕಂಡವರು. “ನಮ್ಮ ಕುಟುಂಬಕ್ಕೆ ಆಹಾರ ಸಿಗುವುದು ಬಹಳ ಕಷ್ಟವಿತ್ತು. ನಾವು ಕೇವಲ ಜೋಳ ತಿಂದು ದಿನ ಕಳೆಯುತ್ತಿದ್ದೆವು. ಅನ್ನ ಎಂದರೆ ಅದು ನಾವು ಆರು ತಿಂಗಳಿಗೊಮ್ಮೆ ಕಾಣುತ್ತಿದ್ದ ಭಾಗ್ಯವಾಗಿತ್ತು” ಎಂದು ಅವರು ಹೇಳುತ್ತಾರೆ.
ಅವರು 1974ರಲ್ಲಿ ಕೊಯಮತ್ತೂರಿನ ಪುಲ್ಲುಕಾಡು ಎನ್ನುವಲ್ಲಿ ಕೃಷಿ ಕೂಲಿ ಕುಟುಂಬವೊಂದರಲ್ಲಿ ಜನಿಸಿದರು. ಅವರಿಗೆ ತಾನು ಟ್ರಾನ್ಸ್‌ಜೆಂಡರ್ [ಹುಟ್ಟಿನಿಂದ ಗಂಡು ನಂತರ ಹೆಣ್ಣಾಗಿ ಗುರುತಿಸಿಕೊಂಡರು] ಎನ್ನುವುದು ಅರಿವಿಗೆ ಬಂದ ನಂತರ ಹೈದರಾಬಾದಿಗೆ ಹೋದರು. ಅಲ್ಲಿಂದ ನಂತರ ಮುಂಬಯಿ ಹಾಗೂ ದೆಹಲಿಗೆ ತೆರಳಿದರು. “ನನಗೆ ಅಲ್ಲೆಲ್ಲ ಇರುವುದು ಹಿಡಿಸಲಿಲ್ಲ. ಕೊನೆಗೆ ಕೊಯಮತ್ತೂರಿಗೆ ಮರಳಿದವಳು ಇನ್ನೆಂದೂ ಬೇರೆಡೆ ಹೋಗದಿರಲು ತೀರ್ಮಾನಿಸಿದೆ. ಈಗ ನನಗೆ ಓರ್ವ ಟ್ರಾನ್ಸ್‌ಜೆಂಡರ್ ಮಹಿಳೆಯಾಗಿ ಕೊಯಮತ್ತೂರಿನಲ್ಲಿ ಘನತೆಯಿಂದ ಬದುಕಲು ಸಾಧ್ಯವಾಗಿದೆ” ಎಂದು ಅವರು ಹೇಳುತ್ತಾರೆ.
ಸೆಲ್ವಿಯವರು 10 ಟ್ರಾನ್ಸ್ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು, ಅವರೆಲ್ಲರೂ ಇದೇ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. “ಟ್ರಾನ್ಸ್ ಮಹಿಳೆಯರು ಮಾತ್ರವಲ್ಲ, ಅವರೊಂದಿಗೆ ಇತರ ಗಂಡಸರು ಮತ್ತು ಹೆಂಗಸರು ಸಹ ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ತಿನ್ನಬೇಕು. ಅವರೆಲ್ಲರೂ ಖುಷಿಯಾಗಿರಬೇಕು ಎನ್ನುವುದು ನನ್ನ ಬಯಕೆ.”
*****
ಸೆಲ್ವಿ ಅಮ್ಮನಿಗೆ ಅಡುಗೆ ಕಲಿಸಿಕೊಟ್ಟವರು ಸಹ ಓರ್ವ ಟ್ರಾನ್ಸ್ ಮಹಿಳೆ. 30 ವರ್ಷಗಳ ಹಿಂದೆ ಕಲಿತ ಈ ಅಡುಗೆ ಕೌಶಲವನ್ನು ಅವರು ಇಂದಿಗೂ ಮರೆತಿಲ್ಲ. “ನಾನು ಮೊದಲಿಗೆ ಸಹಾಯಕಿಯಾಗಿ ಹೋಗಿದ್ದೆ ನಂತರ ಅಸಿಸ್ಟೆಂಟ್ ಆಗಿ ಆರು ವರ್ಷ ಕೆಲಸ ಮಾಡಿದೆ. ಎರಡು ದಿನಗಳ ಕೆಲಸಕ್ಕೆ ನನಗೆ 20 ರೂಪಾಯಿ ಕೊಡುತ್ತಿದ್ದರು. ಅದೊಂದು ಸಣ್ಣ ಮೊತ್ತ, ಆದರೂ ನನಗೆ ಅದರಲ್ಲಿ ಸಂತೋಷ ಸಿಗುತ್ತಿತ್ತು.”
ಸೆಲ್ವಿ ಅಮ್ಮ ತಾನು ಕಲಿತ ವಿದ್ಯೆಯನ್ನು ತನ್ನ ದತ್ತು ಮಗಳಾದ ಸರೋ ಅವರಿಗೂ ಕಲಿಸಿದ್ದಾರೆ. ಸರೋ ಇಂದು ಓರ್ವ ಅನುಭವಿ ಬಿರಿಯಾನಿ ಮಾಸ್ಟರ್. ಅವರೇ ಸ್ವತಃ ಬಿರಿಯಾನಿ ತಯಾರಿಸಬಲ್ಲರು. “ಸಾವಿರ ಕೇಜಿಯವರೆಗೆ ಬಿರಿಯಾನಿ ತಯಾರಿಸುವ ಸಾಮರ್ಥ್ಯ ಅವಳಿಗಿದೆ” ಎಂದು ಹೆಮ್ಮೆಯಿಂದ ಸೆಲ್ವಿ ಅಮ್ಮ ಹೇಳುತ್ತಾರೆ.


ಎಡ: ಕನಿಹಾ ಓರ್ವ ಟ್ರಾನ್ಸ್ ಮಹಿಳೆಯಾಗಿದ್ದು, ಅವರು ಸೆಲ್ವಿ ಅಮ್ಮನೊಂದಿಗೆ ಇರುತ್ತಾರೆ. ಬಲ: ಸೆಲ್ವಿ ಅಮ್ಮನ ಮಗಳಾದ ಮಾಯಕ್ಕ (ಅಥಿರಾ) ಬೆಣ್ಣೆ ತೆಗೆಯಲು ಮಜ್ಜಿಗೆಯನ್ನು ಕಡೆಯುತ್ತಿರುವುದು
“ನಮ್ಮ ಟ್ರಾನ್ಸ್‌ಜೆಂಡರ್ ಸಮುದಾಯದಲ್ಲಿ ಮಗಳು ಹಾಗೂ ಮೊಮ್ಮಗಳ ಪರಿಕಲ್ಪನೆಯಿದೆ. ನಾವು ಅವರಿಗೆ ಒಂದು ಕೌಶಲವನ್ನು ಕಲಿಸಿದರೆ ಅವರ ಬದುಕು ಚೆನ್ನಾಗಿರುತ್ತದೆ” ಎನ್ನುವ ಸೆಲ್ವಿ ಅಮ್ಮ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ತಮ್ಮ ಕಾಲಿನ ಮೇಲಿನ ನಿಲ್ಲುವುದು ಬಹಳ ಮುಖ್ಯ ಎನ್ನುತ್ತಾರೆ. “ಇಲ್ಲವಾದರೆ ನಾವು ದಂಧಾ [ಸೆಕ್ಸ್ ವರ್ಕ್] ಅಥವಾ ಯಸಕ್ಕಮ್ [ಭಿಕ್ಷೆ ಬೇಡುವುದು] ಮಾಡಬೇಕಾಗುತ್ತದೆ.”
ಅವರು ತನ್ನನ್ನು ಕೇವಲ ಟ್ರಾನ್ಸ್ ಮಹಿಳೆಯರಷ್ಟೇ ಅವಲಂಬಿಸಿಲ್ಲ (ಈತರ ಗಂಡಸರು ಮತ್ತು ಹೆಂಗಸರು ಸಹ ಜೊತೆಗಿದ್ದಾರೆ) ಎಂದು ಹೇಳುತ್ತಾರೆ. ವಳ್ಳಿ ಅಮ್ಮ ಮತ್ತು ಸುಂದರಿ ಅವರ ಜೊತೆ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. “ನಾನು ಸೆಲ್ವಿ ಅಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಇನ್ನೂ ಚಿಕ್ಕವರು” ಎನ್ನುವ ವಳ್ಳಿಯಮ್ಮ ತನ್ನ ಮಾಲಕರಿಗಿಂತಲೂ ಹಿರಿಯರು. “ನನ್ನ ಮಕ್ಕಳು ಸಣ್ಣವರಿದ್ದರು. ಆಗ ನನಗಿದ್ದ ದುಡಿಮೆಯ ದಾರಿಯೆಂದರೆ ಇದೊಂದೇ. ಈಗ ನನ್ನ ಮಕ್ಕಳು ದೊಡ್ಡವರಾಗಿ ದುಡಿಯುತ್ತಿದ್ದಾರೆ. ಅವರು ನನ್ನ ಬಳಿ ಈಗ ಮನೆಯಲ್ಲಿದ್ದು ವಿಶ್ರಾಂತಿ ತೆಗೆದುಕೊಳ್ಳಲು ಹೇಳುತ್ತಿದ್ದಾರೆ. ಆದರೆ ನನಗೆ ಕೆಲಸ ಮಾಡುವುದೆಂದರೆ ಇಷ್ಟ. ನನ್ನ ಸಂಪಾದನೆಯ ಹಣ ನನಗೆ ಸ್ವಾತಂತ್ರ್ಯ ಕೊಡುತ್ತದೆ. ಅದನ್ನು ನನಗೆ ಬೇಕಾದಂತೆ ಖರ್ಚು ಮಾಡಬಹುದು. ಪ್ರವಾಸಕ್ಕೂ ಹೋಗಬಹುದು!”
ಒಬ್ಬ ಉದ್ಯೋಗಿಗೆ ದಿನಕ್ಕೆ 1,250 ರೂಪಾಯಿ ಸಂಬಳ ನೀಡುವುದಾಗಿ ಹೇಳುತ್ತಾರೆ. ದೊಡ್ಡ ದೊಡ್ಡ ಆರ್ಡರ್ ಇದ್ದ ಸಮಯದಲ್ಲಿ ತಂಡ ದಿನದ 24 ಗಂಟೆಯೂ ಕೆಲಸ ಮಾಡುತ್ತದೆ. “ಒಂದು ವೇಳೆ ಬೆಳಗಿನ ಕಾರ್ಯಕ್ರಮಕ್ಕೆ ಅಡುಗೆ ಮಾಡಬೇಕಿದ್ದಲ್ಲಿ ನಾವು ಮಲಗುವುದಿಲ್ಲ” ಎನ್ನುತ್ತಾರೆ. ಅಂತಹ ಸಂದರ್ಭಗಳಲ್ಲಿ ಸಂಬಳ 2,500 ರೂಪಾಯಿಗೆ ಏರುತ್ತದೆ. “ಈ ಕೆಲಸಕ್ಕೆ ಅಷ್ಟು ಹಣ ಕೊಡಲೇಬೇಕು. ಇದು ಸುಲಭದ ಕೆಲಸವಲ್ಲ. ನಾವು ಬೆಂಕಿಯ ಬಳಿ ಕೆಲಸ ಮಾಡುತ್ತೇವೆ!” ಎಂದು ದೃಢವಾಗಿ ಹೇಳುತ್ತಾರೆ.
ಅಡುಗೆ ಮನೆಯ ಪ್ರತಿ ಮೂಲೆಯಲ್ಲೂ ಒಲೆ ಉರಿಯುತ್ತಿರುತ್ತದೆ. ಬಿರಿಯಾನಿ ಬೇಯುವಾಗ ಉರಿಯುವ ಕಟ್ಟಿಗೆಗಳನ್ನು ಬಿರಿಯಾನಿ ಡೇಕ್ಸಾದ ಮೇಲೆಯೂ ಇರಿಸಲಾಗುತ್ತದೆ. “ಬೆಂಕಿಗೆ ಹೆದರುವಂತಿಲ್ಲ” ಎನ್ನುತ್ತಾರೆ ಸೆಲ್ವಿಯಮ್ಮ. ಹಾಗೆಂದು ಬೆಂಕಿ ಸುಡುವುದಿಲ್ಲ ಎಂದು ಅರ್ಥವಲ್ಲ. “ಸುಡುವ ಸಾಧ್ಯತೆ ಇರುತ್ತದೆ, ಕೆಲವೊಮ್ಮೆ ಸುಡುತ್ತದೆ. ಹೀಗಾಗಿ ನಾವು ಎಚ್ಚರಿಕೆಯಿಂದ ಇರಬೇಕು” ಎಂದು ಅವರು ಎಚ್ಚರಿಕೆ ನೀಡುತ್ತಾರೆ. “ನಾವು ಬೆಂಕಿಯೊಂದಿಗೆ ಹೋರಾಡುತ್ತೇವೆ. ಆದರೆ ಆ ಹೋರಾಟದಿಂದ ನೂರು ರೂಪಾಯಿ ಸಂಪಾದನೆಯಾಗುತ್ತದೆ, ಅದನ್ನು ಬಳಸಿ ವಾರವಿಡೀ ಸಂತೋಷದಿಂದ ಊಟ ಮಾಡಬಹುದು ಎನ್ನುವುದನ್ನು ಯೋಚಿಸಿದಾಗ ನೋವೆಲ್ಲಾ ಮಾಯವಾಗುತ್ತದೆ.”


ಎಡ: ಬಿರಿಯಾನಿಯನ್ನು ಮಣ್ಣಿನ ಮಡಕೆಯಲ್ಲಿ ಸಣ್ಣ ಉರಿಯಲ್ಲಿ ಬೇಯಿಸಲಾಗುತ್ತದೆ. ಅದರ ಬಾಯಿಗೆ ಹಿಟ್ಟು ಮೆತ್ತಿ ಮುಚ್ಚಲಾಗಿರುತ್ತದೆ. ಬಲ: ಅಡುಗೆಯವರೊಬ್ಬರು ಒಲೆಯ ಉರಿಯನ್ನು ಸರಿಪಡಿಸುತ್ತಿರುವುದು

ಸೆಲ್ವಿ ಅಮ್ಮ ಪದಾರ್ಥಗಳನ್ನು ಬೆರೆಸುತ್ತಿರುವುದು
*****
ಮುಖ್ಯ ಅಡುಗೆಯವರಾದ ಸೆಲ್ವಿ ಅಮ್ಮನ ದಿನ ಬೆಳಗ್ಗೆ ಬಹಳ ಬೇಗನೆ ಆರಂಭವಾಗುತ್ತದೆ. ಬೆಳಗ್ಗೆ 7 ಗಂಟೆಗೆ ಅವರು ಕರುಂಬುಕಡೈ ಬಳಿ ಇರುವ ತಮ್ಮ ಮನೆಯಿಂದ ಅಡುಗೆಮನೆಗೆ ಆಟೋ ಬಳಸಿ 15 ನಿಮಿಷದ ಪ್ರಯಾಣ ಮಾಡುತ್ತಾರೆ. ಆದರೆ ಅವರು ಮನೆಯಲ್ಲಿ ಬೆಳಗ್ಗೆ 5 ಗಂಟೆಗೆ ಅಥವಾ ಕೆಲವೊಮ್ಮೆ ಅದಕ್ಕೂ ಮೊದಲು ಏಳುತ್ತಾರೆ. ಎದ್ದ ನಂತರ ಅವರು ತಾನು ಮನೆಯಲ್ಲಿ ಸಾಕಿರುವ ದನಗಳು, ಮೇಕೆ, ಕೋಳಿ ಹಾಗೂ ಬಾತುಕೋಳಿಗಳ ಆರೈಕೆ ಮಾಡುತ್ತಾರೆ. ಇವುಗಳಿಗೆ ಮೇವು ಹಾಕಲು, ಹಾಲು ಕರೆಯಲು ಮತ್ತು ಮೊಟ್ಟೆಗಳನ್ನು ಸಂಗ್ರಹಿಸಲು ಸೆಲ್ವಿ ಅಮ್ಮನ ದತ್ತು ಮಗಳಾದ ಮಾಯಕ್ಕ (40) ಸಹಾಯ ಮಾಡುತ್ತಾರೆ. “ಇಡೀ ದಿನದ ಅಡುಗೆ ಮನೆಯ ಕೆಲಸದಿಂದ ಉಂಟಾಗುವ ಒತ್ತಡವನ್ನು ಪರಿಹರಿಸಲು ಈ ಪ್ರಾಣಿಗಳೊಂದಿಗೆ ಒಡನಾಟ ಸಹಾಯ ಮಾಡುತ್ತದೆ” ಎಂದು ಸೆಲ್ವಿ ಅಮ್ಮ ಹೇಳುತ್ತಾರೆ.
ಮನೆಗೆ ಬಂದ ನಂತರವೂ ಬಿರಿಯಾನಿ ಮಾಸ್ಟರ್ ಆಗಿ ಅವರ ಕೆಲಸ ಮುಗಿಯುವುದಿಲ್ಲ. ಅವರು ಅಲ್ಲಿ ತನಗೆ ಬಂದಿರುವ ಬೇಡಿಕೆಗಳನ್ನು ನಂಬಿಕೆಯುಳ್ಳ ಸ್ನೇಹಿತರೊಂದಿಗೆ ಸೇರಿ ಡೈರಿಯೊಂದರಲ್ಲಿ ಬರೆದಿಡುವ ಮೂಲಕ ನಿರ್ವಹಿಸುತ್ತಾರೆ. ಜೊತೆಗೆ ಮರುದಿನಕ್ಕೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ಸಹ ಒಟ್ಟುಗೂಡಿಸುತ್ತಾರೆ.
“ನನಗೆ ನಂಬಿಕೆಯಿರುವವರಿಂದ ಮಾತ್ರ ನಾನು ಕೆಲಸ ಮಾಡಿಸುತ್ತೇನೆ. ಏನೂ ಕೆಲಸ ಮಾಡದೆ ಸುಮ್ಮನೆ ತಿಂದು ಮಲಗುವುದೆಂದರೆ ನನಗೆ ಆಗುವುದಿಲ್ಲ” ಎಂದ ಸೆಲ್ವಿ ಅಮ್ಮ ತಮ್ಮ ರಾತ್ರಿಯ ಊಟಕ್ಕೆ ಅಡುಗೆಯನ್ನು ತಯಾರಿಸತೊಡಗಿದರು.
ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಮೂರು ವರ್ಷ ಸೆಲ್ವಿಯವರ ಉದ್ಯಮ ಮುಚ್ಚಿತ್ತು. “ನಮಗೆ ಬದುಕಲು ಬೇರೆ ದಾರಿಯಿರಲಿಲ್ಲ, ಹೀಗಾಗಿ ನಾವು ಹಾಲಿಗಾಗಿ ಒಂದು ದನವನ್ನು ಕೊಂಡೆವು. ಈಗ ನಮಗೆ ದಿನಕ್ಕೆ ಮೂರು ಲೀಟರ್ ಹಾಲು ಬೇಕಾಗುತ್ತದೆ. ಏನಾದರೂ ಉಳಿದರೆ ಅದನ್ನು ಮಾರುತ್ತೇವೆ” ಎಂದು ಅವರು ಹೇಳುತ್ತಾರೆ.


ಬೆಳಗಿನ ಜಾವ ಸೆಲ್ವಿ ದನಕ್ಕೆ ಮೇವು ಹಾಕುತ್ತಿದ್ದಾರೆ (ಎಡ). ತನ್ನ ಗ್ರಾಹಕರ ಬೇಡಿಕೆಗಳ ಪಟ್ಟಿಯನ್ನು ನಿರ್ವಹಿಸಲು ಅವರು ಅದನ್ನು ಡೈರಿಯೊಂದರಲ್ಲಿ ಬರೆದಿಡುತ್ತಾರೆ


ಎಡ: ಸೆಲ್ವಿ ತನ್ನ ನಾಯಿ ಅಪ್ಪುವಿನೊಂದಿಗೆ. ಬಲ: ಸೆಲ್ವಿ ಅಮ್ಮ ತಮಿಳುನಾಡು ನಗರ ಆವಾಸ ಅಭಿವೃದ್ಧಿ ಇಲಾಖೆ ನೀಡಿರುವ ಮನೆಯೊಂದರಲ್ಲಿ ಬದುಕುತ್ತಿದ್ದಾರೆ. ʼಇಲ್ಲಿನ ಜನರು ನಮ್ಮನ್ನು ಘನತೆಯೊಂದಿಗೆ ನಡೆಸಿಕೊಳ್ಳುತ್ತಾರೆʼ ಎಂದು ಅವರು ಹೇಳುತ್ತಾರೆ
ಅವರು ಇರುವ ಮನೆ ತಮಿಳುನಾಡು ನಗರ ಆವಾಸ ಅಭಿವೃದ್ಧಿ ಇಲಾಖೆ ನೀಡಿರುವ ಕ್ವಾರ್ಟ್ರಸ್. ಇಲ್ಲಿನ ಬಹುತೇಕ ಮನೆಗಳು ಪರಿಶಿಷ್ಟ ಜಾತಿಗೆ ಸೇರಿವೆ ಮತ್ತು ಅವರೆಲ್ಲರೂ ದಿನಗೂಲಿ ನಂಬಿ ಬದುಕು ನಡೆಸುವವರು. “ಇಲ್ಲಿ ಶ್ರೀಮಂತರಿಲ್ಲ. ಎಲ್ಲರೂ ದುಡಿದು ತಿನ್ನುವವರು. ಅವರ ಮಕ್ಕಳಿಗೆ ಒಳ್ಳೆಯ ಹಾಲು ಬೇಕೆನ್ನುವ ಕಾರಣಕ್ಕೆ ನನ್ನ ಬಳಿ ಬರುತ್ತಾರೆ.”
“ನಾವು ಇಲ್ಲಿ ಕಳೆದ 25 ವರ್ಷಗಳಿಂದ ಬದುಕುತ್ತಿದ್ದೇವೆ. ನಮ್ಮ ಜಮೀನನ್ನು ಸರ್ಕಾರ ರಸ್ತೆ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿತು. ಅದಕ್ಕೆ ಬದಲಾಗಿ ಈ ಮನೆಗಳನ್ನು ಕಟ್ಟಿಕೊಟ್ಟಿತು” ಎನ್ನುವ ಅವರು “ಇಲ್ಲಿನ ಜನರು ನಮ್ಮನ್ನು ಘನತೆಯಿಂದ ನಡೆಸಿಕೊಳ್ಳುತ್ತಾರೆ” ಎನ್ನುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು