ಮೊನ್ಪಾ ಸಮುದಾಯದ ಮದುವೆಗಳಲ್ಲಿ ಕರ್ಚುಂಗ್ ಸೋಬಾನೆಯಂತಹ ಹಾಡುಗಳನ್ನು ಹಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಅವರು ಬೇಯಿಸಿದ ಕುರಿಯ ಒಂದು ಭಾಗವನ್ನು ಪಡೆಯುತ್ತಾರೆ. ಅವರ ಹಾಡುಗಾರಿಕೆಯನ್ನು ಮದುವೆ ಮನೆಗೆ ಗೌರವ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಅವರನ್ನು ಹೆಣ್ಣಿನ ಕಡೆಯವರು ಹಾಡಲು ಆಹ್ವಾನಿಸುತ್ತಾರೆ.
ಮೊನ್ಪಾ ಸಮುದಾಯದಲ್ಲಿ ಗಂಡು ಹೆಣ್ಣು ಮದುವೆಗೆ ಒಪ್ಪಿದ ನಂತರ ಒಟ್ಟು ಎರಡು ದಿನಗಳ ಮದುವೆ ಆಚರಣೆಯನ್ನು ನಡೆಸಲಾಗುತ್ತದೆ. ಈ ಆಚರಣೆಯು ವರನು ಸ್ಥಳೀಯ ಮದ್ಯವಾದ ಆರಾ ಕುಡಿದು ಹೆಣ್ಣಿನ ಮನೆಗೆ ಹೊರಡುವುದರೊಂದಿಗೆ ಆರಂಭವಾಗುತ್ತದೆ. ಅಲ್ಲಿ ಸಂಬಂಧಿಕರೆಲ್ಲ ಸೇರಿ ಕುಣಿದು ಔತಣ ನಡೆಸುತ್ತಾರೆ. ಈ ಸಮಾರಂಭದಲ್ಲೇ ಕರ್ಚುಂಗ್ ತಾನು ಯಾವುದೇ ಪಕ್ಕವಾದ್ಯಗಳಿಲ್ಲ ಪ್ರದರ್ಶನ ನೀಡುತ್ತಾರೆ. ಮರುದಿನ ಮದುವೆ ಗಂಡು ಹೆಣ್ಣಿನೊಂದಿಗೆ ತನ್ನ ಮನೆಗೆ ಬರುತ್ತಾನೆ.
ಕರ್ಚುಂಗ್ ಅವರ ನಿಜವಾದ ಹೆಸರು ರಿಂಚಿನ್ ತಾಶಿ. ಆದರೆ ಊರಿನಲ್ಲಿ ಎಲ್ಲರೂ ಅವರನ್ನು ಕರ್ಚುಂಗ್ ಎನ್ನುವ ಅಡ್ಡ ಹೆಸರಿನಿಂದಲೇ ಗುರುತಿಸುತ್ತಾರೆ. ಅವರು ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯ ಚಾಂಗ್ಪಾ ರಸ್ತೆಯಲ್ಲಿ ಸಣ್ಣ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅವರು ಕೆಲಸ ಮಾಡುವಾಗ ಹಿನ್ನೆಲೆಯಲ್ಲಿ ರೇಡಿಯೋ ಮೂಲಕ ಹೊರ ಹೊಮ್ಮುವ ಜನಪ್ರಿಯ ಗೀತೆಗಳು ಅವರ ಸಂಗೀತ ಪ್ರೀತಿಯನ್ನು ತೋರಿಸುತ್ತದೆ. ಕರ್ಚುಂಗ್ ಆರಾ ಕುರಿತಾಗಿಯೂ ಹಾಡುತ್ತಾರೆ. “ಅದನ್ನು ನಾನು ಸಾಮಾನ್ಯವಾಗಿ ಕೃಷಿ ಮಾಡುವಾಗ ಅಥವಾ ಸ್ನೇಹಿತರೊಂದಿಗೆ ಮಾತನಾಡುವಾಗ ಹಾಡುತ್ತೇನೆ” ಎಂದು ಹೇಳುತ್ತಾರೆ.
53
ವರ್ಷದ ಅವರು ತಮ್ಮ ಪತ್ನಿ ಪೆಮ್ ಜೊಂಬಾ ಅವರೊಂದಿಗೆ ಇರುತ್ತಾರೆ. ತಾನೇ ಕುಟುಂಬದ ಬಾಸ್
ಎಂದು ಹೇಳುತ್ತಾರೆ. ಆದರೆ ಇಲ್ಲಿನ ಫಲವತ್ತಾದ ಕಣಿವೆಯಲ್ಲಿ ತಮ್ಮ ಸರಿಸುಮಾರು
ಒಂದು ಎಕರೆ ಭೂಮಿಯನ್ನು ಕೃಷಿ ಮಾಡುವುದು ಪೆಮ್.
"ನಾವು ಭತ್ತ, ಮೆಕ್ಕೆಜೋಳ, ಬದನೆಕಾಯಿ, ಕಹಿ ಬದನೆಕಾಯಿ, ಲೈ ಸಾಗ್ (ಸಾಸಿವೆ ಎಲೆ), ಈರುಳ್ಳಿ ಮತ್ತು ಹೂಕೋಸು ಬೆಳೆಯುತ್ತೇವೆ" ಎಂದು
ಅವರು ಹೇಳುತ್ತಾರೆ. ಬೆಳೆದ ಭತ್ತ, ಧಾನ್ಯ ಹಾಗೂ ತರಕಾರಿಗಳನ್ನು
ಬಹುತೇಕ ಕುಟುಂಬವೇ ಬಳಸುತ್ತದೆ. ಉಳಿಕೆಯನ್ನು ಅಲ್ಲಿನ ದಿರಾಂಗ್ ಬ್ಲಾಕ್ ಬಳಿಯ ರಾಮ ಕ್ಯಾಂಒ ವಾರದ
ಸಂತೆಯಲ್ಲಿ ಮಾರುತ್ತಾರೆ.

ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯ ಚಾಂಗ್ಪಾ ರಸ್ತೆಯಲ್ಲಿರುವ ತಮ್ಮ ಅಂಗಡಿಯ ಮುಂದೆ ಲೀಕಿ ಖಂಡು ಮತ್ತು ಅವರ ತಂದೆ ಕರ್ಚುಂಗ್


ಕರ್ಚುಂಗ್ ಇಲ್ಲಿ ಹಬ್ಬಗಳಲ್ಲಿ ನುಡಿಸಲು ಬಳಸಲಾಗುವ ಡೋಲು ತಯಾರಿಸುತ್ತಿದ್ದಾರೆ. ಬಲ: ಅವರ ಮಗ ಲೀಕಿ ಖಂಡು ದಾದರ್ ಎನ್ನುವ ಧಾರ್ಮಿಕ ಬಾಣವನ್ನು ತೋರಿಸುತ್ತಿದ್ದಾರೆ. ಜೀವ ಶಕ್ತಿ, ದೀರ್ಘಾಯುಷ್ಯ, ಅದೃಷ್ಟ ಮತ್ತು ಸಮೃದ್ಧಿಯನ್ನು ಕರೆಯಲು ಬಳಸಲಾಗುತ್ತದೆ. ಇದಕ್ಕೆ ಜೋಡಿಸಲಾದ ವರ್ಣರಂಜಿತ ರಿಬ್ಬನ್ ಗಳು ಐದು ಅಂಶಗಳನ್ನು ಪ್ರತಿನಿಧಿಸುತ್ತವೆ. ಇದನ್ನು ಆಚರಣೆಗಳು ಮತ್ತು ಬೌದ್ಧ ದೇವಾಲಯಗಳಲ್ಲಿ ಗಡಿಯಾರದ ದಿಕ್ಕಿನಲ್ಲಿ ತಿರುಗಿಸಲಾಗುತ್ತದೆ
ಈ ದಂಪತಿಗೆ ಐವರು ಮಕ್ಕಳಿದ್ದಾರೆ - ಇಬ್ಬರು ಹೆಣ್ಣುಮಕ್ಕಳು ಮತ್ತು ಮೂವರು ಗಂಡು ಮಕ್ಕಳು. ರಿಂಚಿನ್ ವಾಂಗ್ಮು ಮತ್ತು ಸಾಂಗ್ ಡ್ರೆಮಾ ಹೆಸರಿನ ಇಬ್ಬರೂ ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ ಮತ್ತು ಅಪರೂಪಕ್ಕೆ ಇಲ್ಲಿಗೆ ಬರುತ್ತಾರೆ. ಹಿರಿಯ ಮಗ ಪೆಮ್ ಡೊಂಡಪ್ ಮುಂಬೈಯಲ್ಲಿ ವಾಸಿಸುತ್ತಿದ್ದು ಅಲ್ಲಿ ಹೋಟೆಲ್ ಒಂದರಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಾರೆ ಮತ್ತು ಎರಡು ವರ್ಷಗಳಿಗೊಮ್ಮೆ ಮಾತ್ರ ಊರಿಗೆ ಭೇಟಿ ನೀಡುತ್ತಾರೆ. ಮಧ್ಯದ ಮಗ ಲೀಕಿ ಖಂಡು ಸಂಗೀತಗಾರ ಮತ್ತು ಕಣಿವೆಯಲ್ಲಿ ಸುಸ್ಥಿರ ಪ್ರವಾಸೋದ್ಯಮ ಉಪಕ್ರಮದ ಭಾಗವಾಗಿದ್ದಾರೆ. ಅವರ ಕಿರಿಯ ಮಗ ನಿಮ್ ತಾಶಿ ದಿರಾಂಗ್ ಪಟ್ಟಣದಲ್ಲಿ ಕೆಲಸ ಮಾಡುತ್ತಾರೆ.
ಮೊನ್ಪಾ ಸಮುದಾಯವು ತನ್ನನ್ನು ಟಿಬೆಟ್ ಟಿಬೆಟ್ ಮೂಲದೊಂದಿಗೆ ಗುರುತಿಸಿಕೊಳ್ಳುತ್ತದೆ, ಮತ್ತು ಅನೇಕರು ಬೌದ್ಧರು, ಮರದ ಕೆಲಸ, ನೇಯ್ಗೆ ಮತ್ತು ಚಿತ್ರಕಲೆಯಲ್ಲಿ ಪರಿಣತರು. 2013ರ ಸರ್ಕಾರದ ವರದಿಯ ಪ್ರಕಾರ ಅವರ ಸಂಖ್ಯೆ 43,709.
ಕರ್ಚುಂಗ್ ಸಂಗೀತಗಾರ ಮಾತ್ರವಲ್ಲ, ತಮ್ಮ ಬಿಡುವಿನ ವೇಳೆಯಲ್ಲಿ ವಾದ್ಯಗಳನ್ನೂ ತಯಾರಿಸುತ್ತಾರೆ. "ಒಂದು ಡೋಲು [ಸ್ಥಳೀಯವಾಗಿ ಚಿಲ್ಲಿಂಗ್ ಎಂದು ಕರೆಯಲಾಗುತ್ತದೆ] ಮಾರುಕಟ್ಟೆಯಲ್ಲಿ ಸುಮಾರು 10,000 ರೂಪಾಯಿಗಳ ಬೆಲೆಬಾಳುತ್ತದೆ. ನನ್ನ ಬಿಡುವಿನ ವೇಳೆಯಲ್ಲಿ, ನಾನು ನನಗಾಗಿ ತಯಾರಿಸಿಕೊಳ್ಳುತ್ತೇನೆ" ಎಂದು ಅವರು ಪರಿಗೆ ಹೇಳಿದರು.
ನಾವು ಅವರನ್ನು ಹಾಡುವಂತೆ ವಿನಂತಿಸಿದಾಗ, ಅವರು ತನ್ನ ಅಂಗಡಿಯ ಹಿತ್ತಲಿನಲ್ಲಿ ಕುಳಿತು ಹಾಡತೊಡಗಿದರು. ಅಲ್ಲಿ ಸುತ್ತಲೂ ಅವರು ಬೆಳೆಯುವ ತರಕಾರಿಗಳು ಮತ್ತು ಜೋಳ ಬೆಳೆಯಿದ್ದವು. ಈ ಮೌಖಿಕ ಹಾಡುಗಳು ತಲೆಮಾರುಗಳಿಂದ ಹರಿದು ಬಂದಿವೆ. ಈ ಹಾಡುಗಳಲ್ಲಿ ಕೆಲವು ಟಿಬೆಟಿಯನ್ ಮೂಲದ ಪದಗಳೂ ಇವೆ, ಅವುಗಳ ಅರ್ಥವನ್ನು ನಮಗೆ ವಿವರಿಸಲು ಅವರು ಹೆಣಗಾಡಿದರು.
ಮೊನ್ಪಾ ಮದುವೆ ಹಾಡು:
ಸುಂದರ ಸದ್ಗುಣಿ ತಾಯಿಯ ಮಗಳು
ಅವಳ ಕಣ್ಣು ಚಿನ್ನದಂತೆ
ಸುಂದರ ಉಡುಪು ತೊಟ್ಟಿರುವಳು
ಹುಡುಗಿ
ಅವಳೆಂದರೆ ಎಲ್ಲರಿಗೂ ಮೆಚ್ಚು
ದಾದರ್* ಬಾಣವ ತೊಟ್ಟಿಹಳು
ಅದರಿಂದ ಇನ್ನೂ ಸುಂದರ ಕಾಣುತಿಹಳು
ಲೋಹದಿಂದ ಮಾಡಿದ ದಾದರ್
ದೇವರೇ ತಯಾರಿಸಿಹ ಅವಳ ಲೋಹದ
ಆಭರಣ
ದಾದರಿನ ಬಿದಿರು
ಲ್ಹಾಸದಿಂದ (ಟಿಬೆಟ್) ತರಿಸಿದ್ದು
ದಾದರ್ ಮೇಲಿನ ಕಲ್ಲು
ಯೇಶಿ ಖಂಡ್ರೋಮಾ ದೇವದೂತನ ಹಾಲಿನ ಕಲ್ಲು
ಮೇಲ್ಭಾಗದ ಗರಿ
ತುಂಗ್ ತುಂಗ್ ಕಾರ್ಮೊದಿಂದ ತಂದಿದ್ದು**
* ದಾದರ್ ಎನ್ನುವುದು ಒಂದು ಧಾರ್ಮಿಕ ಬಾಣ. ಜೀವಶಕ್ತಿಗಳು, ದೀರ್ಘಾಯುಷ್ಯ, ಅದೃಷ್ಟ ಮತ್ತು ಸಮೃದ್ಧಿಯನ್ನು ಒಟ್ಟುಗೂಡಿಸಲು ಇದನ್ನು ಬಳಸಲಾಗುತ್ತದೆ. ವರ್ಣರಂಜಿತ ರಿಬ್ಬನ್ನುಗಳು ಐದು ಅಂಶಗಳು ಮತ್ತು ಐದು ಡಾಕಿನಿಗಳನ್ನು ಪ್ರತಿನಿಧಿಸುತ್ತವೆ. ಆಚರಣೆಗಳು ಮತ್ತು ಬೌದ್ಧ ದೇವಾಲಯಗಳಲ್ಲಿ ದಾದರ್ ಬಾಣವನ್ನು ಗಡಿಯಾರದ ದಿಕ್ಕಿನಲ್ಲಿ ತಿರುಗಿಸಲಾಗುತ್ತದೆ
** ತುಂಗ್ ತುಂಗ್ ಕಾರ್ಮೊ ಅಥವಾ ಕಪ್ಪು ಕುತ್ತಿಗೆಯ ಕೊಕ್ಕರೆ ಗರಿ - ಎತ್ತರದ ಪ್ರದೇಶಗಳಲ್ಲಿ ದೀರ್ಘ ಪ್ರಯಾಣಕ್ಕೆ ಹೆಸರುವಾಸಿಯಾದ ಹಿಮಾಲಯದ ಪಕ್ಷಿ
ಅನುವಾದ: ಶಂಕರ. ಎನ್. ಕೆಂಚನೂರು