“ನಮ್ಮ ತಲೆಮಾರಿನ ಮಹಿಳೆಯರು ಕಲಿತವರಾಗಿದ್ದಿದ್ದರೆ ಇಂದು ಪರಿಸ್ಥಿತಿ ಬೇರೆಯೇ ರೀತಿ ಇರುತ್ತಿತ್ತು” ಎಂದು ಸುರ್ಜೀತ್ ಕೌರ್ ಹೇಳಿದರು. ಅವರು ಕಿಶನ್ ಗಢ್ ಸೇಧಾ ಸಿಂಗ್ ವಾಲಾದ ಜಗಲಿ ಮೇಲೆ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು. ಸುರ್ಜಿತ್ ಕೌರ್ 5ನೇ ತರಗತಿಯಲ್ಲಿರುವಾಗ ಅನಿವಾರ್ಯವಾಗಿ ಶಾಲೆ ಬಿಡಬೇಕಾಗಿ ಬಂತು. ಆಗ ಅವರಿಗೆ ಅವರ ಮೊಮಕ್ಕಳ ವಯಸ್ಸು.
“ಓದು ಮನುಷ್ಯನ ಮೂರನೇ ಕಣ್ಣನ್ನು ತೆರೆಸುತ್ತದೆ” ಎಂದು 63 ವರ್ಷದ ಅವರು ಒತ್ತಿಹೇಳುತ್ತಾರೆ.
ಅವರ ನೆರೆಯವರಾದ 75 ವರ್ಷದ ಜಸ್ವಿಂದರ್ ಕೌರ್ ತಮ್ಮ ಗೆಳತಿಯ ಮಾತಿಗೆ ತಲೆದೂಗುತ್ತಾ ಹೌದೆಂದರು. “ಹೆಂಗಸರು ಮನೆಯಿಂದ ಹೊರಬಿದ್ದಾಗ ಅವರಿಗೆ ಜಗತ್ತಿನ ಬಗ್ಗೆ ತಿಳಿಯುತ್ತದೆ” ಎಂದು ಅವರು ಹೇಳಿದರು.
ಆದರೆ ಅವರಿಗೆ ಶಾಲೆಯಲ್ಲಿ ಕಲಿಯಲು ಸಾಧ್ಯವಾಗದೆ ಹೋಗಿದ್ದನ್ನು ಘಟನೆಯೊಂದು ಕಲಿಸಿತು. 2020-2021ರಲ್ಲಿ ಐತಿಹಾಸಿಕ ರೈತರ ಪ್ರತಿಭಟನೆಯ ಸಮಯದಲ್ಲಿ ದೆಹಲಿ ಗಡಿಯಲ್ಲಿ 13 ತಿಂಗಳ ಕಾಲ ಕ್ಯಾಂಪ್ ಮಾಡಿದ ಊರಿನ 16 ಮಹಿಳೆಯರಲ್ಲಿ ಸುರ್ಜೀತ್ ಮತ್ತು ಜಸ್ವಿಂದರ್ ಸೇರಿದ್ದಾರೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಖಾಸಗಿ ವ್ಯಾಪಾರಿಗಳು ಮತ್ತು ಕಾರ್ಪೊರೇಟ್‌ಗಳಿಗೆ ಲಾಭ ಮಾಡಿಕೊಡುತ್ತದೆ ಎಂಬ ಭಯದಿಂದ ಅವರಂತಹ ಲಕ್ಷಾಂತರ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯ ಗಡಿಗಳಲ್ಲಿ ಸೇರಿದ್ದರು. ಈ ಭಯಕ್ಕೆ ಕಾರಣವಾಗಿದ್ದ ಕೇಂದ್ರ ಸರ್ಕಾರ ಪರಿಚಯಿಸಿದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಅವರು ಅಲ್ಲಿ ನೆಲೆಯೂರಿದ್ದರು. ಈ ಪ್ರತಿಭಟನೆಗಳಿಗೆ ಸಂಬಂಧಿಸಿದ ಪರಿಯ ವರದಿಗಳನ್ನು ನೀವು ಇಲ್ಲಿ ಓದಬಹುದು.
ಈ ವರದಿಗಾರರು ಕಿಶನ್ ಗಢ್ ಸೇಧಾ ಸಿಂಗ್ ವಾಲಾಗೆ ಭೇಟಿ ನೀಡಿದ ಸಂದರ್ಬದಲ್ಲಿ ಪಂಜಾಬಿನ ಇತರೆಡೆಗಳಂತೆ ಈ ಊರು ಕೊಯ್ಲಿನ ಗಡಿಬಿಡಿಯಲ್ಲಿತ್ತು. ಜೊತಗೆ ಇಲ್ಲಿನ ನಿವಾಸಿಗಳು ಆಡಳಿತ ಪಕ್ಷದ ರೈತ ವಿರೋಧಿ ಕ್ರಮಗಳ ವಿರುದ್ಧ ಪ್ರತಿತಿಭಟನೆಯಲ್ಲೂ ತೊಡಗಿದ್ದ ಕಾರಣ ರಾಜಕೀಯ ವಾತವಾರಣವೂ ಬಿಸಿಯಾಗಿತ್ತು. ಜೂನ್ 1ಕ್ಕೆ ಇಲ್ಲಿ ಮತದಾನ ನಿಗದಿಯಾಗಿತ್ತು.
"ಬಿಜೆಪಿ ಮತ್ತೆ ಗೆದ್ದರೆ, ಅವರು ಮತ್ತೆ ಈ [ಕೃಷಿ] ಕಾನೂನುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ತರುತ್ತಾರೆ" ಎನ್ನುತ್ತಾರೆ ಕಿಶನ್ ಗಢ್ ಸೇಧಾ ಸಿಂಗ್ ವಾಲಾದಲ್ಲಿ 10 ಎಕರೆ ಭೂಮಿಯನ್ನು ಹೊಂದಿರುವ 60 ವರ್ಷದ ಜರ್ನೈಲ್ ಕೌರ್. “ನಾವು ಬುದ್ಧವಂತಿಕೆಯಿಂದ ಮತ ಚಲಾಯಿಸಬೇಕಿದೆ.”
(ಶಿರೋಮಣಿ ಅಕಾಲಿದಳದ ಹರ್‌ಸಿಮ್ರತ್ ಕೌರ್ ಬಾದಲ್ 2024ರ ಚುನಾವಣೆಯಲ್ಲಿ ಭಟಿಂಡಾ ಲೋಕಸಭಾ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಜೂನ್ 4, 2024ರಂದು ಫಲಿತಾಂಶಗಳು ಹೊರಬಿದ್ದವು.)


ಎಡ: ಕಿಶನ್‌ಗಢ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಸುರ್ಜೀತ್ ಕೌರ್. ಬಲ: ಜಸ್ವಿಂದರ್ ಕೌರ್ ಅವರು ಪಂಜಾಬಿನ ಮಾನ್ಸಾ ಜಿಲ್ಲೆಯ ಅದೇ ಹಳ್ಳಿಯವರು
2021ರ ಡಿಸೆಂಬರ್ ತಿಂಗಳಿಗೆ ಕೊನೆಯಾದ ಕೃಷಿ ಹೋರಾಟ ಕಲಿಸಿದ ಪಾಠಗಳು ಈಗಲೂ ಊರಿನಲ್ಲಿ ಪ್ರತಿಧ್ವನಿಸುತ್ತಿದೆ. “ಸರ್ಕಾರವು ನಮ್ಮ ಜೀವನೋಪಾಯವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ನಾವು ಅದನ್ನು ನೋಡುತ್ತಾ ಸುಮ್ಮನಿರು ಸಾಧ್ಯವೇ?” ಎಂದು ಜಸ್ವಿಂದರ್ ಕೌರ್ ಕೇಳಿದರು.
ಜೊತೆಗೆ ಇಲ್ಲಿನ ಜನರನ್ನು ಇತರ ಚಿಂತೆಗಳೂ ಕಾಡುತ್ತಿವೆ. “ಕೆಲವೇ ವರ್ಷಗಳ ಕೆಳಗೆ ಕಿಶನ್ ಗಢ್ ಸೇದಾವಾಲದ ಮಕ್ಕಳು ಕೆಲಸ ಹುಡುಕೊಕೊಂಡು ವಿದೇಶಕ್ಕೆ ಹೋಗುತ್ತಿರಲಿಲ್ಲ” ಎನ್ನುತ್ತಾರೆ ಸುರ್ಜೀತ್. ಇತ್ತೀಚೆಗೆ ಉನ್ನತ ಶಿಕ್ಷಣದ ಸಲುವಾಗಿ ಕೆನಾಡಕ್ಕೆ ಹೋದ ತನ್ನ ಸೋದರ ಸೊಸೆ ಕುಶಾಲ್ ದೀಪ್ ಕೌರ್ ಅಗಲುವಿಕೆಯ ನೋವು ಅವರ ಮಾತಿನಲ್ಲಿ ಧ್ವನಿಸುತ್ತಿತ್ತು. “ನಿರುದ್ಯೋಗವೇ ಇದಕ್ಕೆ ಕಾರಣ. ಇಲ್ಲಿಯೇ ಕೆಲಸ ಸಿಗುವಂತಿದ್ದರೆ ಅವರು ವಿದೇಶಕ್ಕೆ ಯಾಕೆ ಹೋಗುತ್ತಿದ್ದರು?” ಎಂದು ಅವರು ಕೇಳುತ್ತಾರೆ.
ಇದೆಲ್ಲ ಕಾರಣದಿಂದಾಗಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಮಕ್ಕಳು ಮತ್ತು ಮೊಮ್ಮಕ್ಕಳ ಉದ್ಯೋಗ ಮುಂಬರುವ ಚುನಾವಣೆಯಲ್ಲಿ ಈ ಗ್ರಾಮದ ಮತದಾರರಿಗೆ ನಿರ್ಣಾಯಕ ವಿಷಯಗಳಾಗಿ ಹೊರಹೊಮ್ಮಿವೆ.
"ಅವರು (ರಾಜಕಾರಣಿಗಳು) ಪ್ರತಿ ಚುನಾವಣೆಯಲ್ಲೂ ವೃದ್ಧಾಪ್ಯ ಪಿಂಚಣಿ, ರಸ್ತೆಗಳು ಮತ್ತು ಒಳಚರಂಡಿಯ ಸಮಸ್ಯೆಗಳಲ್ಲಿಯೇ ನಮ್ಮನ್ನು ಮುಳುಗಿಸುತ್ತಾರೆ" ಎಂದು ಸುರ್ಜೀತ್ ಹೇಳುತ್ತಾರೆ. "ನನಗೆ ನೆನಪಿರುವೆಂತೆ ಹಳ್ಳಿಗಳ ಜನರು ಕಾಲದಿಂದಲೂ ಈ ವಿಷಯಗಳ ಮೇಲೆ ಮತ ಚಲಾಯಿಸುತ್ತಿದ್ದಾರೆ."


ಎಡ: ಸುರ್ಜೀತ್ ಕೌರ್ ತನ್ನ ಜಮೀನಿನಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬೆಳೆಯುತ್ತಿದ್ದಾರೆ. ಬಲ: ಇಲ್ಲಿ ಅವರು ಕೊಯ್ಲಿಗೆ ಸಿದ್ಧವಾಗಿರುವ ತನ್ನ ಜಮೀನಿನಲ್ಲಿನ ಬೆಳೆಗಳ ನಡುವೆ ನಡೆಯುತ್ತಿರುವುದನ್ನು ಕಾಣಬಹುದು


ಎಡ: ಯಂತ್ರಗಳಿಂದಾಗಿ ಮಹಿಳೆಯರಿಗೆ ಹೊಲದ ಕೆಲಸದಲ್ಲಿ ಸಾಕಷ್ಟು ಸಮಯ ಉಳಿಯುತ್ತಿದೆ. ಅವರು ಪ್ರತಿಭಟನೆಗಳಲ್ಲಿ ಭಾಗವಹಿಸಲು ಮತ್ತು ಭಾಗವಹಿಸಲು ಸಾಧ್ಯವಾಗಲು ಇದು ಒಂದು ದೊಡ್ಡ ಕಾರಣವಾಗಿದೆ. ಬಲ: ಕೊಯ್ಲಿನಿಂದ ಸಂಗ್ರಹಿಸಲಾಗುತ್ತಿರುವ ಹುಲ್ಲು
*****
ಪಂಜಾಬ್ ಮಾನ್ಸಾ ಜಿಲ್ಲೆಯ ದಕ್ಷಿಣದಲ್ಲಿರುವ ಕಿಶಶ್ ಗಢ್ ಸೇಧಾ ಸಿಂಗ್ ವಾಲಾ ಎಂಬ ಹಳ್ಳಿಯು ಬಿಸ್ವೇದಾರಿ ವ್ಯವಸ್ಥೆಯ ವಿರುದ್ಧ ನಡೆದ ಪಿಇಪಿಎಸ್‌ಯು ಮುಜಾರಾ ಚಳವಳಿಯಲ್ಲಿ ಪ್ರಮುಖ ಪಾತ್ರ ವನ್ನು ವಹಿಸಿದೆ, ಈ ದೀರ್ಘ ಹೋರಾಟದ ನಂತರ 1952ರಲ್ಲಿ ಭೂರಹಿತ ರೈತರು ಮಾಲೀಕತ್ವದ ಹಕ್ಕುಗಳನ್ನು ಪಡೆದರು. ಮಾರ್ಚ್ 19, 1949ರಂದು, ನಾಲ್ಕು ಪ್ರತಿಭಟನಾಕಾರರನ್ನು ಇಲ್ಲಿ ಕೊಲ್ಲಲಾಯಿತು ಮತ್ತು 2021-2021ರ ದೆಹಲಿ ಕೃಷಿ ಪ್ರತಿಭಟನೆಯ ಸಮಯದಲ್ಲಿ ಅವರ ವಂಶಸ್ಥರನ್ನು ಗೌರವಿಸಲಾಯಿತು.
ಹಳ್ಳಿಯ ಐತಿಹಾಸಿಕ ಚಳವಳಿ ಹಿನ್ನೆಲೆಯ ಹೊರತಾಗಿಯೂ, ಇತ್ತೀಚಿನ ಕೃಷಿ ಆಂದೋಲನಕ್ಕೂ ಮೊದಲು ಹೆಚ್ಚಿನ ಮಹಿಳೆಯರು ಪ್ರತಿಭಟನೆಯಲ್ಲಿ ಎಂದೂ ಭಾಗವಹಿಸಿದವರಲ್ಲ. ಈಗ, ಅವರು ತಿಳುವಳಿಕೆ ನೀಡುವ ಇಂತಹ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. "ಈ ಮೊದಲು, ನಮಗೆ ಸಮಯವಿರಲಿಲ್ಲ" ಎಂದು ಸುರ್ಜೀತ್ ಕೌರ್ ಹೇಳುತ್ತಾರೆ. "ಹೊಲಗಳಲ್ಲಿ ಕೆಲಸ ಮಾಡುತ್ತಿದ್ದೆವು, ಹತ್ತಿ ಕೊಯ್ಲು ಮಾಡುತ್ತಿದ್ದೆವು ಮತ್ತು ದಾರಗಳನ್ನು ನೇಯುತ್ತಿದ್ದೆವು. ಆದರೆ ಈಗ ಅದೆಲ್ಲವನ್ನೂ ಯಂತ್ರಗಳಿಂದ ಮಾಡಲಾಗುತ್ತದೆ."
ಅವರ ಅತ್ತಿಗೆ ಮಂಜೀತ್ ಕೌರ್ ಹೇಳುತ್ತಾರೆ, "ಈಗ ಊರಿನಲ್ಲಿ ಹತ್ತಿ ಬೆಳೆಯುತ್ತಿಲ್ಲ. ಜನರು ಖದ್ದರ್ [ಹತ್ತಿ] ಬಟ್ಟೆ ಧರಿಸುವುದನ್ನು ಬಿಟ್ಟಿದ್ದಾರೆ. ಹೀಗಾಗಿ ಮನೆಯಲ್ಲಿ ಹತ್ತಿಯನ್ನು ನೇಯುವ ಸಂಪೂರ್ಣ ಪ್ರಕ್ರಿಯೆಯೂ ಕಾಣೆಯಾಗಿದೆ” ಕಾಣೆಯಾಗಿದೆ ಎನ್ನುವ ಅವರು ಇದರಿಂದಾಗಿ ಮಹಿಳೆಯರಿಗೆ ಪ್ರತಿಭಟನೆಗಳಲ್ಲಿ ಭಾಗವಹಿಸುವುದು ಸುಲಭವಾಗಿದೆ ಎನ್ನುತ್ತಾರೆ.
ಈ ಹಳ್ಳಿಯ ಕೆಲವು ಮಹಿಳೆಯರು ನಾಯಕತ್ವದಲ್ಲಿ ಪಾಲು ಹೊಂದಿದ್ದಾರಾದರೂ ಅದು ಹೆಸರಿಗಷ್ಟೇ ಎನ್ನುವುದು ಅವರ ಮಾತುಗಳಿಂದ ತಿಳಿಯುತ್ತದೆ.


ದಕ್ಷಿಣ ಪಂಜಾಬಿನ ಮಾನ್ಸಾ ಜಿಲ್ಲೆಯ ಕಿಶನ್‌ಗಢ ಸೇಧಾ ಸಿಂಗ್ ವಾಲಾ ಎಂಬ ಗ್ರಾಮವು 1952ರಲ್ಲಿ ಭೂರಹಿತ ರೈತರು ಮಾಲೀಕತ್ವದ ಹಕ್ಕುಗಳನ್ನು ಗೆದ್ದ ಪಿಇಪಿಎಸ್‌ಯು ಮುಜಾರಾ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಬಲ: ಒಂದೇ ಮನೆಯ ಸೊಸೆಯರಾದ ಸುರ್ಜೀತ್ ಕೌರ್ ಮತ್ತು ಮಂಜೀತ್ ಕೌರ್ ಲಘು ಸಂಭಾಷಣೆಯಲ್ಲಿ


ಎಡಕ್ಕೆ: ಮಂಜೀತ್ ಕೌರ್ ಮನೆಯಲ್ಲಿ ಹೆಣಿಗೆ ಮಾಡುತ್ತಿದ್ದಾರೆ. ಬಲ: ಮಂಜೀತ್ ಕೌರ್ ಅವರ ಪತಿ ಕುಲ್ವಂತ್ ಸಿಂಗ್ (ಮೈಕ್ ಬಳಿ) ಬಿಕೆಯು (ಏಕ್ತಾ) ದಕೌಂಡಾ - ಧನೇರ್ ಬಣದ ನಾಯಕರಾ
ಮಂಜೀತ್ 6,000 ಜನಸಂಖ್ಯೆಯನ್ನು ಹೊಂದಿರುವ ಕಿಶನ್ ಗಢ್ ಸೇಧಾ ಸಿಂಗ್ ವಾಲಾ ಗ್ರಾಮದ ಸರಪಂಚ್ ಆಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ. ಇಬ್ಬರೂ ಮಹಿಳೆಯರು ಅಣ್ಣ ತಮ್ಮಂದಿರನ್ನು ಮದುವೆಯಾಗಿದ್ದಾರೆ. "ಮೊದಲ ಬಾರಿಗೆ ಸ್ಪರ್ಧಿಸಿದಾಗ ಸರ್ವಾನುಮತದಿಂದ ಆಯ್ಕೆಯಾಗಿದ್ದೆ." 1998ರಲ್ಲಿ ಈ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿತ್ತು. "ಮುಂದಿನ ಚುನಾವಣೆಯಲ್ಲಿ, ಗಂಡಸರ ವಿರುದ್ಧ ಸ್ಪರ್ಧಿಸಿ 400-500 ಮತಗಳಿಂದ ಗೆದ್ದಿದ್ದೆ" ಎಂದು ಮಂಜೀತ್ ನೆನಪಿಸಿಕೊಳ್ಳುತ್ತಾರೆ.
ಇತರ 12 ಮಹಿಳೆಯರು ಸಹ ಈ ಪಾತ್ರವನ್ನು ನಿರ್ವಹಿಸಿದ್ದರೂ, ನಿರ್ಧಾರಗಳನ್ನು ಹೆಚ್ಚಾಗಿ ಗಂಡಸರೇ ತೆಗೆದುಕೊಳ್ಳುತ್ತಾರೆ ಎಂದು ಮಂಜೀತ್ ಹೇಳುತ್ತಾರೆ. "ಕೆಲಸಗಳನ್ನು ಹೇಗೆ ಮಾಡಬೇಕೆಂದು ನನಗೆ ಮಾತ್ರ ತಿಳಿದಿತ್ತು" ಎಂದು ಅವರು ಹೇಳುತ್ತಾರೆ, ತನ್ನ 10ನೇ ತರಗತಿ ಶಿಕ್ಷಣ ಮತ್ತು ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ) ದಕೌಂಡಾದ ಪ್ರಮುಖ ನಾಯಕ ಮತ್ತು ಮಾಜಿ ಸರಪಂಚ್ ಕುಲ್ವಂತ್ ಸಿಂಗ್ ಅವರ ಬೆಂಬಲದಿಂದಾಗಿ ಇದು ಸಾಧ್ಯವಾಯಿತು ಎಂದು ಅವರು ಹೇಳುತ್ತಾರೆ. ಅವರು 1993ರಿಂದ ಐದು ವರ್ಷಗಳ ಕಾಲ ಸರಪಂಚನಾಗಿ ಸೇವೆ ಸಲ್ಲಿಸಿದ್ದರು.
ಆದರೆ ಸುರ್ಜೀತ್ ಹೇಳುವಂತೆ “ಈ ಚುನಾವಣೆಗಳು ಬಹಳ ಕಷ್ಟ. ಜನರು ನಿರ್ದಿಷ್ಟ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಪರಸ್ಪರ ಒತ್ತಾಯಿಸುತ್ತಾರೆ. ಮಹಿಳೆಯರನ್ನು ಅವರ ಗಂಡಂದಿರು ಅಥವಾ ಅವರ ಸಂಬಂಧಿಕರು ನಿರ್ದಿಷ್ಟ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಒತ್ತಡ ಹೇರುತ್ತಾರೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಹೀಗಾಗುವುದಿಲ್ಲ.”
2009ರಿಂದ ಶಿರೋಮಣಿ ಅಕಾಲಿ ದಳದ ಹರಸಿಮ್ರತ್ ಕೌರ್ ಬಾದಲ್ ಬಟಿಂಡಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಮರು ಆಯ್ಕೆ ಬಯಸಿದ್ದಾರೆ. ಇಲ್ಲಿ ಬಿಜೆಪಿಯಿಂದ ಪರಂಪಾಲ್ ಕೌರ್ ಸಿಧು, ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಜೀತ್ ಮೊಹಿಂದರ್ ಸಿಂಗ್ ಸಿಧು ಮತ್ತು ಆಮ್ ಆದ್ಮಿ ಪಕ್ಷದಿಂದ ಪಂಜಾಬ್ ಕೃಷಿ ಸಚಿವ ಗುರ್ಮೀತ್ ಸಿಂಗ್ ಖುದ್ದಿಯಾನ್ ಕಣದಲ್ಲಿದ್ದಾರೆ.


ಎಡ: ಬಿಕೆಯು (ಏಕ್ತಾ) ದಕೌಂಡಾ ಅಧ್ಯಕ್ಷ ಮಂಜೀತ್ ಸಿಂಗ್ ಧನೇರ್ ಅವರ ನೇತೃತ್ವದಲ್ಲಿ ಮಾರ್ಚ್ 2024ರಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಿಶನ್‌ಗಢ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು. ಬಲ-: ಮಂಜೀತ್ ಕೌರ್ (ಎಡಕ್ಕೆ ತುದಿ) ಮತ್ತು ಸುರ್ಜೀತ್ ಕೌರ್ (ಮಂಜೀತ್ ಪಕ್ಕದಲ್ಲಿ ನಿಂತಿರುವವರು) ಮತ್ತು ಈ ವರ್ಷದ ಆರಂಭದಲ್ಲಿ ಲುಧಿಯಾನದ ಜಾಗ್ರಾಣ್ ಎನ್ನುವಲ್ಲಿ ನಡೆದ ಕಿಸಾನ್-ಮಜ್ದೂರ್ ಮಹಾಪಂಚಾಯತ್ ಸಭೆಯಲ್ಲಿ ಭಾಗವಹಿಸಿದ್ದ ತಮ್ಮ ಗ್ರಾಮದ ಇತರ ಮಹಿಳೆಯರೊಂದಿಗೆ
2020-2021ರ ದೆಹಲಿ ಪ್ರತಿಭಟನೆಗಳು ಬಹಳಷ್ಟು ಮಹಿಳೆಯರ ಪಾಲಿಗೆ ಕಣ್ತೆರೆಸಿದ ಘಟನೆಯಾಗಿ ಪರಿಣಮಿಸಿದೆ. ಅವರು ಈ ಬಾರಿ ತಮ್ಮ ಮತ ಹಾಕುವ ವಿಷಯದಲ್ಲಿ ತಮ್ಮನ್ನು ಯಾರೂ ಪ್ರಭಾವಿಸಲು ಸಾಧ್ಯವಿಲ್ಲ ಎನ್ನುತ್ತಾರೆ. "ಮಹಿಳೆಯರು ಮನೆಯಲ್ಲಿ ಖೈದಿಗಳಿದ್ದಂತೆ. ನಮಗೆ ಶಾಲೆಗಳಂತಿರುವ ಈ ಪ್ರತಿಭಟನೆಗಳು ನಮಗೆ ಬಹಳಷ್ಟು ಕಲಿಸಿವೆ" ಎಂದು ಸುರ್ಜೀತ್ ಹೇಳುತ್ತಾರೆ.
ನವೆಂಬರ್ 26, 2020ರಂದು ತಾನು ದೆಹಲಿಗೆ ಹೋಗಿದ್ದನ್ನು. "ನಾವು ಯಾವುದೇ ಸಿದ್ಧತೆಯಿಲ್ಲದೆ ಹೋಗಿದ್ದೆವು. ಅವರು (ಭದ್ರತಾ ಪಡೆಗಳು) ರೈತರನ್ನು ಮುಂದೆ ಹೋಗಲು ಬಿಡುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು ಮತ್ತು ನಾವು ಎಲ್ಲಿ ತಡೆದು ನಿಲ್ಲಿಸಿದರೂ ಅಲ್ಲಿಯೇ ಹೋರಾಟಕ್ಕೆ ಕುಳಿತುಕೊಳ್ಳಲು ನಿರ್ಧರಿಸಿದ್ದೆವು" ಎಂದು ಬಹದ್ದೂರ್‌ಗಢದ ಬಳಿಯ ಟಿಕ್ರಿ ಗಡಿಯಲ್ಲಿ ತಮ್ಮ ದೀರ್ಘಕಾಲದ ಶಿಬಿರಕ್ಕಾಗಿ ಅವರು ಒಯ್ಯುತ್ತಿದ್ದ ಕನಿಷ್ಠ ವಸ್ತುಗಳನ್ನು ಉಲ್ಲೇಖಿಸಿ ಅವರು ಹೇಳುತ್ತಾರೆ. "ನಮ್ಮಲ್ಲಿ ಆಹಾರವನ್ನು ತಯಾರಿಸಲು ಉಪಕರಣಗಳಿರಲಿಲ್ಲ, ಹೇಗೋ ನಾವು ವ್ಯವಸ್ಥೆ ಮಾಡಿಕೊಂಡೆವು. ಅಲ್ಲಿ ಶೌಚಾಲಯ ಅಥವಾ ಸ್ನಾನದ ಮನೆಯೂ ಇದ್ದಿರಲಿಲ್ಲ.” ಇಷ್ಟೆಲ್ಲ ಕೊರತೆಗಳ ನಡುವೆಯೂ ಅವರು ಅಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಉಳಿದಿದ್ದರು. ಅವರ ಈ ನಿರ್ಧಾರ ಮೂರು ಕಾನೂನುಗಳನ್ನು ರದ್ದುಗೊಳಿಸಲು ಕಾರಣವಾಯಿತು.
ಉನ್ನತ ಶಿಕ್ಷಣದ ಕೊರತೆಯ ಹೊರತಾಗಿಯೂ, ಸುರ್ಜೀತ್ ಅವರು ಯಾವಾಗಲೂ ಓದು ಮತ್ತು ಬರಹದಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದರು, "ಮಹಿಳೆಯರು ತಾವು ವಿದ್ಯಾವಂತರಾಗಿದ್ದರೆ, ಪ್ರತಿಭಟನೆಗೆ ಇನ್ನಷ್ಟು ಉತ್ತಮ ಕೊಡುಗೆ ನೀಡಬಹುದಿತ್ತು ಎನ್ನುವ ಭಾವನೆ ಹೊಂದಿದ್ದರು" ಎಂದು ಹೇಳುತ್ತಾರೆ.
*****
ಹರ್‌ಸಿಮ್ರತ್ ಕೌರ್ ಬಾದಲ್ ಇತ್ತೀಚೆಗೆ ಪ್ರಚಾರಕ್ಕಾಗಿ ಗ್ರಾಮಕ್ಕೆ ಭೇಟಿ ನೀಡಿದ್ದರು. "ಅವರು ಚುನಾವಣೆಯ ಸಮಯದಲ್ಲಿ ಮಾತ್ರ ಬರುತ್ತಾರೆ" ಎಂದು ಸುರ್ಜೀತ್ ಕೌರ್ ತಮ್ಮ ಹೊಲದಲ್ಲಿದ್ದ ಬೆರಳೆಣಿಕೆಯಷ್ಟು ಹಿಪ್ಪುನೇರಳೆ ಗಿಡಗಳ ನೋಟವನ್ನು ಆನಂದಿಸುತ್ತಾ ಹೇಳುತ್ತಾರೆ.


ಎಡ: ಸುರ್ಜೀತ್ ಕೌರ್ ತನ್ನ ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ, ಅವರ ಜಮೀನಿನ ಬಳಿ. ಬಲ: ಸುರ್ಜೀತ್ ಕೌರ್ ತನ್ನ ಜಮೀನಿನಲ್ಲಿ ಹಿಪ್ಪುನೇರಳೆ ಕೀಳುತ್ತಿದ್ದಾರೆ
ಸೆಪ್ಟೆಂಬರ್ 2020ರಲ್ಲಿ, ರೈತ ವಿರೋಧಿ ಸುಗ್ರೀವಾಜ್ಞೆಗಳು ಮತ್ತು ಶಾಸನಗಳನ್ನು ವಿರೋಧಿಸಿ ಬಾದಲ್ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು. "ರೈತರು ಅವರ ವಿರುದ್ಧ (ಶಿರೋಮಣಿ ಅಕಾಲಿ ದಳ) ಆಂದೋಲನ ಪ್ರಾರಂಭಿಸಿದ ನಂತರವೇ ಅವರು ರಾಜೀನಾಮೆ ನೀಡಿದರು" ಎಂದು ರಾಜೀನಾಮೆಯ ಬಗ್ಗೆ ಅನುಮಾನ ಹೊಂದಿರುವ ಸುರ್ಜೀತ್ ಹೇಳುತ್ತಾರೆ. "ಅದಕ್ಕೂ ಮೊದಲು, ಅವರು ಮತ್ತು ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮೂರು ಕೃಷಿ ಕಾನೂನುಗಳ ಪ್ರಯೋಜನಗಳ ಬಗ್ಗೆ ರೈತರಿಗೆ ಹೇಳುತ್ತಿದ್ದರು" ಎಂದು ಅವರು ಕೋಪದಿಂದ ಹೇಳುತ್ತಾರೆ.
ಸಹ ರೈತರೊಂದಿಗೆ ಒಗ್ಗಟ್ಟಿನಿಂದ 13 ತಿಂಗಳ ಕಠಿಣ ಪರಿಸ್ಥಿತಿಗಳನ್ನು ಸಹಿಸಿ ಹೋರಾಟ ಮುಗಿಸಿದ ನಂತರ, ಸುರ್ಜೀತ್ ಬಾದಲ್ ಅವರ ಪ್ರಸ್ತುತ ಪ್ರಚಾರದಿಂದ ವಿಚಲಿತರಾಗಲಿಲ್ಲ. "ನಾನು ಆಕೆಯ ಭಾಷಣ ಕೇಳಲು ಹೋಗಲಿಲ್ಲ" ಎಂದು ಅವರು ದೃಢವಾಗಿ ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು