ಅದು ಮೇ ತಿಂಗಳ ಬಿರು ಬಿಸಿಲಿನ ಒಂದು ಮಧ್ಯಾಹ್ನವಾಗಿತ್ತು. ಆದರೆ ಆ ಬಿಸಿಲಿನಲ್ಲೂ ಮೊಹ್ ಎನ್ನುವ ಊರಿನಲ್ಲಿನ ಹಜರತ್ ಸೈಯದ್ ಅಲ್ವಿ (ರಹಮತುಲ್ಲಾ ಅಲೆಹಿ) ದರ್ಗಾದಲ್ಲಿ ಜನ ಜಂಗುಳಿ ಸೇರುತ್ತಿತ್ತು. ನಲವತ್ತು ಕುಟುಂಬಗಳು ಕಂದೂರಿ ಎನ್ನುವ ವಾರ್ಷಿಕ ಹಬ್ಬದ ತಯಾರಿಲ್ಲಿದ್ದವು. ಇಲ್ಲಿ ವಿಶೇಷವೆಂದರೆ ಮುಸ್ಲಿಮರ ಕುಟುಂಬಗಳಿಗಿಂತಲೂ ಹಿಂದೂ ಕುಟುಂಬಗಳೇ ಹೆಚ್ಚಿದ್ದವು. ಧೊಬಾಲೆ ಕುಟುಂಬವೂ ಇಲ್ಲಿ ಹಬ್ಬ ಮಾಡಲು ಬಂದಿದ್ದ ಕುಟುಂಬಗಳಲ್ಲಿ ಒಂದಾಗಿದ್ದವು. ನಾವು ಅವರ ಅತಿಥಿಗಳಾಗಿ ಅಲ್ಲಿಗೆ ಹೋಗಿದ್ದೆವು.
ಬೇಸಿಗೆ ತಿಂಗಳುಗಳಲ್ಲಿ ರೈತರು ಬಿಡುವಾಗಿರುತ್ತಾರೆ. ಈ ತಿಂಗಳುಗಳಲ್ಲಿ ಒಸ್ಮನಾಬಾದ್, ಲಾತೂರ್, ಮತ್ತು ಇತರ ಆರು ಜಿಲ್ಲೆಗಳಾದ ಬೀಡ್, ಜಲ್ನಾ, ಔರಂಗಾಬಾದ್, ಪರ್ಭಾನಿ, ನಾಂದೇಡ್ ಹಾಗೂ ಹಿಂಗೋಲಿಯಲ್ಲಿನ ಪೀರ್‌ಗಳ ದರ್ಗಾಗಳು ಚಟುವಟಿಕೆಯಿಂದ ಕೂಡಿರುತ್ತವೆ. ಗುರುವಾರ ಮತ್ತು ಭಾನುವಾರಗಳಂದು ಇಲ್ಲಿ ಕುಟುಂಬಗಳು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರುತ್ತವೆ. ಗಂಡು ಕುರಿಯನ್ನು ಇಲ್ಲಿ ಬಲಿ ಕೊಟ್ಟು ಅದನ್ನು ಬೇಯಿಸಿ ನೈವೇದ್ಯವಾಗಿ ಸಂತರಿಗೆ (ಪೀರ್) ಅರ್ಪಿಸಿ ನಂತರ ಎಲ್ಲರೂ ಸೇರಿ ಊಟ ಮಾಡಿ ಇತರರಿಗೂ ಬಡಿಸುತ್ತಾರೆ.
“ನಾವು ಇದನ್ನು [ ಕಂದೂರಿ] ತಲೆಮಾರುಗಳಿಂದ ಮಾಡಿಕೊಂಡು ಬಂದಿದ್ದೇವೆ” ಒಸ್ಮನಾಬಾದ್ ಬಳಿಯ ಯೇದ್ಶಿ (ಯೆಡ್ಸಿ ಎಂದೂ ಕರೆಯಲಾಗುತ್ತದೆ) ನಮ್ಮ ಸಂಬಂಧಿಯಾದ ಭಾಗೀರತಿ ಕದಮ್ ಹೇಳುತ್ತಾರೆ. ಈ ಮರಾಠವಾಡಾ ಭಾಗವು ಆರು ನೂರು ವರ್ಷಗಳ ಕಾಲ (224 ವರ್ಷಗಳ ಕಾಲದ ಹೈದರಾಬಾದ್ ನಿಜಾಮರ ಆಡಳಿತವೂ ಸೇರಿ) ಇಸ್ಲಾಮಿಕ್ ಆಡಳಿತಕ್ಕೆ ಒಳಪಟ್ಟಿತ್ತು. ಈ ದರ್ಗಾಗಳಿಗೆ ನಡೆದುಕೊಳ್ಳುವುದು ಮತ್ತು ಅದರ ಆಚರಣೆಗಳು ಜನರ ಬದುಕಿನಲ್ಲಿ ಮಿಳಿತಗೊಂಡಿದ್ದು, ಸೌಹಾರ್ದ ಪರಂಪರೆಯ ಪ್ರತೀಕವಾಗಿ ಉಳಿದುಕೊಂಡಿದೆ.
"ನಾವು ಗಡ್ ದೇವದರಿಯಲ್ಲಿ ಪೂಜಿಸುತ್ತೇವೆ. ತವರಾಜ್ ಖೇಡಾದಿಂದ ಬಂದವರು ಇಲ್ಲಿಗೆ ಬರುತ್ತಾರೆ ಮತ್ತು ನಿಮ್ಮ ಊರಿನ (ಲಾತೂರ್ ಜಿಲ್ಲೆಯ ಬೊರ್ಗಾಂವ್ ಬಿಕೆ) ಜನರು ಶೇರಾಗೆ ಭೇಟಿ ನೀಡಬೇಕಾಗುತ್ತದೆ" ಎಂದು ಭಾಗ ಮಾವ್ಶಿ ಎಂದು ಪ್ರೀತಿಯಿಂದ ಕರೆಯಲ್ಪಡುವ ಭಾಗೀರಥಿ ಹೇಳುತ್ತಾರೆ.
ಇಲ್ಲಿನ ಮೊಹಾದ ರೆಹಮತುಲ್ಲಾ ದರ್ಗಾದಲ್ಲಿ , ಪ್ರತಿ ಮರದ ಕೆಳಗೆ ಮತ್ತು ತಗಡಿನ ಛಾವಣಿಗಳು ಅಥವಾ ಟಾರ್ಪಾಲಿನ್ ಶೀಟುಗಳ ಆಶ್ರಯದಲ್ಲಿ, ಜನರು ಚುಲ್ಹಾಗಳನ್ನು (ತಾತ್ಕಾಲಿಕ ಒಲೆಗಳು) ಸ್ಥಾಪಿಸಿದ್ದಾರೆ ಮತ್ತು ದರ್ಗಾದಲ್ಲಿ ಆಚರಣೆಗಳ ಸಮಯದಲ್ಲಿ ಇಲ್ಲಿ ಆಹಾರವನ್ನು ಬೇಯಿಸಲಾಗುತ್ತದೆ. ಈ ನಡುವೆ ಪುರುಷರು ಮತ್ತು ಮಹಿಳೆಯರು ಮಾತಿನಲ್ಲಿ ಮುಳುಗಿದ್ದರೆ ಮಕ್ಕಳು ಓಡಾಡುತ್ತಾ ಆಟವಾಡುತ್ತಿದ್ದರು. ವಾತಾವರಣದ ಗಾಳಿಯಲ್ಲಿ ಬಿಸಿಯ ಅಂಶವಿತ್ತಾದರೂ ಆಕಾಶದಲ್ಲಿ ಒಟ್ಟುಗೂಡುತ್ತಿದ್ದ ಮೋಡಗಳು ಹಾಗೂ ಪ್ರವೇಶದ್ವಾರದಲ್ಲಿ ಸಾಲಾಗಿ ನಿಂತಿದ್ದ ಹುಣಿಸೆ ಮರಗಳು ಸಾಕಷ್ಟು ನೆರಳು ನೀಡಿದ್ದವು. ದರ್ಗಾದ ನೀರಿನ ಮೂಲವಾದ ಅಲ್ಲಿನ 90 ಅಡಿ ಆಳದ ಬಾರವ್ ಎಂದು ಕರೆಯಲ್ಪಡುವ ಬಾವಿಯ ನೀರು ಒಣಗಿತ್ತು. “ಮಳೆಗಾಲದಲ್ಲಿ ಈ ಬಾವಿ ತುಂಬಿರುತ್ತದೆ” ಎಂದು ಭಕ್ತರೊಬ್ಬರು ಹೇಳಿದರು.


ಎಡ: ಪುರುಷರು ಮೊಹಾದಲ್ಲಿರುವ ಹಜರತ್ ಸಯ್ಯದ್ ಅಲ್ವಿ ರೆಹಮತುಲ್ಲಾ (ರಹಮತುಲ್ಲಾ ಅಲೆಹಿ) ದರ್ಗಾದ (ಮಂದಿರ) ಮಜರ್ನಲ್ಲಿ ನಿವಾದ್ (ನೈವೇದ್ಯ) ಅರ್ಪಿಸುತ್ತಾರೆ ಮತ್ತು ಆಚರಣೆಗಳನ್ನು ಮಾಡುತ್ತಾರೆ. ಬಲ: ಮಹಿಳೆಯರು ಮಝಾರ್ ನ ಹೊರಗೆ ಮೆಟ್ಟಿಲುಗಳ ಮೇಲೆ ಕುಳಿತು ವೀಕ್ಷಿಸುತ್ತಾರೆ ಮತ್ತು ಆಶೀರ್ವಾದ ಪಡೆಯುತ್ತಾರೆ; ತರ ಮಂದಿರಗಳಂತೆ ಇಲ್ಲಿಯೂ ಹೆಂಗಸರು ತಲೆಯನ್ನುಸೆರಗಿನಿಂದ ಮುಚ್ಚಿಕೊಳ್ಳುತ್ತಾರೆ


ಎಡ: ಊಟ ತಯಾರಾಗುವಾಗ ಜನರು ಪರಸ್ಪರ ಮಾತುಕತೆಯಲ್ಲಿ ತೊಡಗಿಕೊಂಡಿರುವುದು. ಬಲ: ಒಸ್ಮಾನಾಬಾದ್ ಜಿಲ್ಲೆಯ ಮೊಹಾದ ದರ್ಗಾದಲ್ಲಿ ಆಯೋಜಿಸಲಾದ ಕಂದೂರಿ ಹಬ್ಬದಲ್ಲಿ ಜನರು ಊಟ ಮಾಡುತ್ತಿರುವುದು
ಅರವತ್ತು-ಅರವತೈದು ವರ್ಷದ ವ್ಯಕ್ತಿಯೊಬ್ಬರು ತನ್ನ ವಯಸ್ಸಾದ ತಾಯಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ದರ್ಗಾದ ಒಳಗೆ ಬಂದರು. ಬದುಕಿನ ಒಂಬತ್ತನೇ ದಶಕದ ಹತ್ತಿರವಿದ್ದ ಆ ಮಹಿಳೆ ಈ ಪ್ರದೇಶದ ಹಿಂದೂ ಮತ್ತು ಮುಸ್ಲಿಂ ಮಹಿಳೆಯರು ಧರಿಸುವ ಮಸುಕಾದ ಒಂಬತ್ತು ಯಾರ್ಡ್ ತಿಳಿ ಹಸಿರು ಇರ್ಕಾಲ್ ಸೀರೆಯನ್ನು ಆ ಮಹಿಳೆ ಧರಿಸಿದ್ದರು. ಮಗ ಮಜರ್ (ಸಂತರ ಸಮಾಧಿ) ನ ಐದು ಮೆಟ್ಟಿಲುಗಳನ್ನು ಏರುತ್ತಿದ್ದಂತೆ, ತಾಯಿಯ ಕಣ್ಣುಗಳು ತುಂಬಿ ಬಂದವು. ಆಕೆ ತನ್ನ ಎರಡೂ ಕೈಗಳನ್ನು ಜೋಡಿಸಿ ವಿನಮ್ರವಾಗಿ ಪ್ರಾರ್ಥಿಸತೊಡಗಿದರು.
ಇತರ ಭಕ್ತರೂ ಬರುತ್ತಿದ್ದರು. ನಲವತ್ತರ ಹರೆಯದ ಅನಾರೋಗ್ಯ ಪೀಡಿತ ಮತ್ತು ಅಸ್ವಸ್ಥರಾಗಿದ್ದ ಮಹಿಳೆ ತನ್ನ ತಾಯಿಯೊಂದಿಗೆ ಅಲ್ಲಿಗೆ ಬಂದಿದ್ದರು. ಪ್ರವೇಶದ್ವಾರದಿಂದ ಮಜರ್‌ಗೆ 500 ಮೀಟರ್ ದೂರವಿದ್ದು ಇಬ್ಬರೂ ಅಲ್ಲಿಗೆ ಸಣ್ಣ ಸಣ್ಣ ಹೆಜ್ಜೆಗಳೊಡನೆ ನಡೆಯಲಾರಂಭಿಸಿದರು. ಅವರು ಮಜರ್ ಬಳಿ ಹೂವು, ಕಾಯಿ ಇಟ್ಟು ಊದುಬತ್ತಿ ಹಚ್ಚಿದರು.
ಮುಜಾವರ್ (ಉಸ್ತುವಾರಿ) ಒಡೆದ ತೆಂಗಿನಕಾಯಿ ಹಿಂತಿರುಗಿಸಿ, ಅನಾರೋಗ್ಯ ಪೀಡಿತ ಮಹಿಳೆಯ ಮಣಿಕಟ್ಟಿಗೆ ಕಟ್ಟಲೆಂದು ದಾರವನ್ನು ನೀಡಿದರು. ಸುಟ್ಟ ಧೂಪದ್ರವ್ಯದ ಬೂದಿಯನ್ನು ತಾಯಿ ತನ್ನ ಮಗಳ ಹಣೆಯ ಮೇಲೆ ಹಚ್ಚಿದರು. ಇಬ್ಬರೂ ಹುಣಸೆ ಮರದ ಕೆಳಗೆ ಸ್ವಲ್ಪ ಸಮಯ ಕುಳಿತು ನಂತರ ಹೊರಟರು.
ಮಜರ್ ಹಿಂಭಾಗದ ಲೋಹದ ಜಾಲರಿಗೆ ತಿಳಿಹಸಿರು ಮತ್ತು ನಿಯಾನ್ ಬಣ್ಣದ ಬಳೆಗಳನ್ನು ಕಟ್ಟಲಾಗಿತ್ತು. ಇದನ್ನು ಎಲ್ಲಾ ಧರ್ಮಗಳ ಮಹಿಳೆಯರು, ತಮ್ಮ ಹೆಣ್ಣುಮಕ್ಕಳಿಗೆ ಸೂಕ್ತವಾದ ಸಂಗಾತಿಯ ನಿರೀಕ್ಷೆಯಲ್ಲಿ ಇವುಗಳನ್ನು ಕಟ್ಟುತ್ತಾರೆ. ಒಂದು ಮೂಲೆಯಲ್ಲಿ, ಒಂದು ದೊಡ್ಡ ಮರದ ಕುದುರೆಯನ್ನು ನಿಲ್ಲಿಸಲಾಗಿದೆ ಮತ್ತು ಮುಂಭಾಗದಲ್ಲಿ ಕೆಲವು ಜೇಡಿಮಣ್ಣಿನ ಕುದುರೆ ಪ್ರತಿಮೆಗಳಿವೆ. "ತಮ್ಮ ಜೀವಿತಾವಧಿಯಲ್ಲಿ ಕುದುರೆ ಸವಾರಿ ಮಾಡಿದ ಪೂಜ್ಯ ಮುಸ್ಲಿಂ ಸಂತರ ನೆನಪಿಗಾಗಿ ಇವುಗಳನ್ನು ಅರ್ಪಿಸಲಾಗುತ್ತದೆ" ಎಂದು ಭಾಗ ಮಾವ್ಶಿ ವಿವರಗಳನ್ನು ನೀಡಿದರು.
ನನಗೆ ಅತ್ತೆಯ ಮನೆಯಲ್ಲಿ ಪ್ರತಿದಿನ ಪೂಜಿಸಲಾಗುವ ಎರಡು ಕುದುರೆಗಳು ನೆನಪಾದವು. ಇದ್ದಕ್ಕಿದ್ದಂತೆ ಅವುಗಳಿಗೆ ನನಗೆ ಅರ್ಥ ಹೊಳೆಯಿತು. ಅವುಗಳಲ್ಲಿ ಒಂದು ಹಿಂದೂ ದೇವತೆಯಾದ ಭೈರೋಬಾನಿಗೆ ಸೇರಿದ್ದು, ಇನ್ನೊಂದು ಪೂಜ್ಯ ಮುಸ್ಲಿಂ ಫಕೀರನಿಗೆ (ಭಿಕ್ಷುಕ) ಸೇರಿದ್ದು.


ಎಡ: ತಮ್ಮ ಹೆಣ್ಣುಮಕ್ಕಳಿಗೆ ಜೋಡಿಯನ್ನು ಹುಡುಕುತ್ತಿರುವ ಮಹಿಳೆಯರು ತಿಳಿ ಹಸಿರು ಅಥವಾ ನಿಯಾನ್ ಬಳೆಗಳ ಗೊಂಚಲುಗಳನ್ನು ಮಜರ್ ಹಿಂಭಾಗದ ಲೋಹದ ಬೇಲಿಗೆ ಕಟ್ಟುತ್ತಾರೆ. ಬಲ: ನಂಬಿಗಸ್ತ ಕುದುರೆಗಳನ್ನು ಸವಾರಿ ಮಾಡಿದ ಪೂಜ್ಯ ಸಂತರ ನೆನಪಿಗಾಗಿ ಕೆಲವು ಜೇಡಿಮಣ್ಣಿನ ಕುದುರೆ ಪ್ರತಿಮೆಗಳನ್ನು ಹಾಗೂ ದೊಡ್ಡ ಮರದ ಕುದುರೆಯನ್ನು ಜನರು ಅರ್ಪಿಸುತ್ತಾರೆ
*****
ಮಾಂಸದ ಸಾರು ಮತ್ತು ಭಕ್ರಿ ಸೇರಿದಂತೆ ವಾರ್ಷಿಕ ಕಂದೂರಿ ಹಬ್ಬಕ್ಕೆ ಅನೇಕ ಮಹಿಳೆಯರು ಮಧ್ಯರಾತ್ರಿಯಿಂದ ತಯಾರಿ ನಡೆಸುತ್ತಿದ್ದರು. ಆದರೆ ಅವರಲ್ಲಿ ಕೆಲವರು ಮಟನ್ ತಿನ್ನುವುದಿಲ್ಲ ಏಕೆಂದರೆ ಗುರುವಾರಗಳು ಅವರ ಕ್ಯಾಲೆಂಡರಿನಲ್ಲಿ ಮಾಂಸವಿಲ್ಲದ ದಿನಗಳಾಗಿವೆ. "ತಿನ್ನುವುದು ಅಷ್ಟು ಮುಖ್ಯವಲ್ಲ" ಎಂದು ಮಹಿಳೆಯರಲ್ಲಿ ಒಬ್ಬರು ನನಗೆ ಹೇಳಿದರು. " ಹೇ ದೇವಚಾ ಕಾಮ್ ಆ ಹೆ, ಮಾಯ್ [ನಾವು ಇದನ್ನು ದೇವರಿಗಾಗಿ ಮಾಡುತ್ತೇವೆ, ಮಗಳೇ].
ಮಹಿಳೆಯರ ದುಡಿಮೆಯೇ ಇಂತಹ ಹಬ್ಬಗಳ ಬೆನ್ನೆಲುಬಾಗಿರುತ್ತದೆ, ಆದರೆ ಆಹಾರವನ್ನು ಸೇವಿಸದ ಅನೇಕರು ಕೆಲವು ಸಸ್ಯಾಹಾರಿಗಳಿಗೆ ಮತ್ತು ಉಪವಾಸ ಮಾಡುವವರಿಗೆ ಬೇಯಿಸಿದ ಉಪ್ವಾಸ್ ಆಹಾರ ವನ್ನು ತಯಾರಿಸಲಾಗಿತ್ತು . ಅವರೆಲ್ಲ ಅದನ್ನೇ ಸಂತೋಷದಿಂದ ತಿಂದರು. ಮಾಂಸ ಮತ್ತು ಅದನ್ನು ಒಂದೇ ಚ್ಹುಲಾದಲ್ಲಿ ಬೇಯಿಸಲಾಗಿತ್ತು. ಅದೇ ತಟ್ಟೆಗಳಲ್ಲಿ ತಿನ್ನಲಾಗುತ್ತಿತ್ತು ಆದರೆ ಅವರ್ಯಾರಿಗೂ ಅದು ಸಮಸ್ಯೆಯಾಗಿ ಕಾಡಿರಲಿಲ್ಲ, ಅವರ ಕೋಪವನ್ನು ಕೆರಳಿಸಿರಲಿಲ್ಲ.
ಲಕ್ಷ್ಮಿ ಕದಮ್ ಪುಣೆಯಲ್ಲಿ ವಾಸಿಸುತ್ತಿದ್ದು, ಹಬ್ಬಕ್ಕೆ ಬಂದು ಈಗ ದಣಿದಿದ್ದಾರೆ, ಅವರು ನೂರಾರು ಭಕ್ರಿಗಳನ್ನು ತಯಾರಿಸಿದ್ದಾರೆ, ಪಲ್ಯಕ್ಕಾಗಿ ಮಸಾಲೆಗಳನ್ನು ರುಬ್ಬುವುದು, ಪಾತ್ರೆ ತೊಳೆಯುವುದು ಮತ್ತು ಸ್ವಚ್ಛಗೊಳಿಸುವ ಕೆಲಸಗಳನ್ನು ಮಾಡಿದ್ದಾರೆ. "ನಾನು ಅವರ [ಮುಸ್ಲಿಂ] ಮಹಿಳೆಯರ ಬಗ್ಗೆ ಅಸೂಯೆ ಪಡುತ್ತೇನೆ" ಎಂದು ಅವರು ದಣಿದ ದನಿಯಲ್ಲಿ ಹೇಳಿದರು. "ಒಂದು ದೊಡ್ಡ ಪಾತ್ರೆಯಲ್ಲಿ ಬಿರಿಯಾನಿ ಬೇಯಿಸಿದರೆ ಕೆಲಸ ಮುಗಿದಂತೆ! ಹ ಅಸ್ಲಾ ರಾಡಾ ನಕೊ ನಾ ಕಹಿ ನಕೋ [ಅವರು ನಾವು ಮಾಡುವಷ್ಟು ಕೆಲಸವನ್ನು ಮಾಡಬೇಕಾಗಿಲ್ಲ].
"ಅವರ ಕೆನ್ನೆಗಳನ್ನು ನೋಡು, ಸುಂದರವಾಗಿವೆ ಮತ್ತು ಗುಲಾಬಿ ಬಣ್ಣ ಹೊಂದಿವೆ!" ಅವರ ಅಸೂಯೆ ಈಗ ಆಲೋಚನೆಗಳು ಮತ್ತು ಕಲ್ಪನೆಗೆ ಕಾರಣವಾಯಿತು. ನಮ್ಮ ಸುತ್ತಲಿನ ಹೆಚ್ಚಿನ ಮಹಿಳೆಯರು ತೆಳ್ಳಗಿದ್ದರು, ಅತಿಯಾಗಿ ಕೆಲಸ ಮಾಡುವವರಾಗಿದ್ದರು, ಶ್ರೀಮಂತ, ಮೇಲ್ಜಾತಿಯ ಕುಟುಂಬಗಳಿಂದ ಬಂದ ಕೆಲವರನ್ನು ಹೊರತುಪಡಿಸಿ, ಅಲ್ಲಿದ್ದವರು ಲಕ್ಷ್ಮಿಯವರು ಕಲ್ಪಿಸಿಕೊಂಡ "ಗುಲಾಬಿ ಕೆನ್ನೆ" ಹೊಂದಿರುವ ಮಹಿಳೆಯರಾಗಿರಲಿಲ್ಲ.


ಎಡ: ಪುರುಷರು ಮಾಂಸದ ಅಡುಗೆ ಮತ್ತು ಅದನ್ನು ಬಡಿಸುವ ಉಸ್ತುವಾರಿಯನ್ನು ಹೊಂದಿರುತ್ತಾರೆ. ಬಲ: ಪುರುಷರು ಮಟನ್ ಖಾದ್ಯವನ್ನು ಬಡಿಸುತ್ತಿದ್ದಾರೆ; ಮಹಿಳೆಯರು ನೂರಾರು ಭಕ್ರಿ ಮಾಡಿದ ನಂತರ ಊಟ ಮಾಡುತ್ತಾರೆ


ಎಡ: ಹಬ್ಬದ ನಂತರ ಪುರುಷರು ಕುಳಿತು ಹರಟೆ ಹೊಡೆಯುತ್ತಾರೆ, ಎಲೆಯಡಿಕೆ ತಿನ್ನುತ್ತಾ, ನಗುತ್ತಾ ಕಾಲ ಕಳೆಯುತ್ತಿದ್ದಾರೆ. ಬಲ: ಮರಾಠಾವಾಡ ಪ್ರದೇಶವು 600 ವರ್ಷಗಳಿಗೂ ಹೆಚ್ಚು ಕಾಲ ಇಸ್ಲಾಮಿಕ್ ಆಳ್ವಿಕೆಯಲ್ಲಿತ್ತು. ಈ ಇಸ್ಲಾಮಿಕ್ ದೇವಾಲಯಗಳಲ್ಲಿನ ನಂಬಿಕೆ ಮತ್ತು ಆರಾಧನೆಯು ಜನರ ನಂಬಿಕೆ ಮತ್ತು ಆಚರಣೆಗಳಲ್ಲಿ ಬೇರೂರಿದೆ - ಇದು ಸಮಕಾಲೀನ ಜೀವನ ವಿಧಾನವನ್ನು ಪ್ರತಿನಿಧಿಸುತ್ತದೆ
ಮಾಂಸದಡುಗೆ ಮಾಡುವುದು ಈ ಹಬ್ಬಗಳ ಸಮಯದಲ್ಲಿ ಗಂಡಸರು ಪ್ರತ್ಯೇಕವಾಗಿ ಮಾಡುವ ಕೆಲಸವಾಗಿದೆ. ಬಾಯಲ್ಲಿ ನೀರೂರಿಸುವ ಮತ್ತು ಸುವಾಸನೆಯುಕ್ತ ಬಿರಿಯಾನಿಯನ್ನು ಮುಸ್ಲಿಂ ಭಕ್ತರು ಬಡಿಸುತ್ತಿದ್ದರು.
ದರ್ಗಾದಲ್ಲಿ ಮುಜಾವರ ರಿಗೆ ಐದು ಭಕ್ರಿಗಳು, ಪಾತ್ರೆ ತುಂಬಾ ಸಾರು ಮತ್ತು ಮಾಂಸದ ಆಯ್ದ ಭಾಗಗಳು ಮತ್ತು ಪುಡಿಮಾಡಿದ ಗೋಧಿ ಚಪಾತಿ, ತುಪ್ಪ ಮತ್ತು ಸಕ್ಕರೆ ಅಥವಾ ಬೆಲ್ಲದಿಂದ ಮಾಡಿದ ಸಿಹಿ ಮಲಿಡಾವನ್ನು ನಿವಾದ್ ಆಗಿ ನೀಡಲಾಗುತ್ತದೆ. ಪುರುಷರು ಮಜರ್ ಬಳಿ ಹೋಗಿ ನಿವಾದ್ ( ನೈವೇದ್ಯ)ವನ್ನು ಅರ್ಪಿಸುತ್ತಾರೆ. ಹೆಂಗಸರು ಮೆಟ್ಟಿಲುಗಳ ಮೇಲೆ ಕುಳಿತು ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ, ತಮ್ಮ ಸೆರಗಿನ ತುದಿಯಿಂದ ತಲೆಯನ್ನು ಮುಚ್ಚಿಕೊಂಡು ದೇವಾಲಯದಲ್ಲಿರುವಂತೆ ಕಾಣುತ್ತಾರೆ.
ಪ್ರಾರ್ಥನೆಗಳು ಮುಗಿದು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡ ನಂತರ, ಔತಣ ಪ್ರಾರಂಭವಾಗುತ್ತದೆ. ಮಹಿಳೆಯರು ಮತ್ತು ಪುರುಷರು ಪ್ರತ್ಯೇಕ ಸಾಲುಗಳಲ್ಲಿ ಕುಳಿತು ತಿನ್ನುತ್ತಾರೆ. ಉಪವಾಸ ಇರುವವರು ಉಪ್ವಾಸ್ ಆಹಾರವನ್ನು ಸೇವಿತ್ತಾರೆ. ದರ್ಗಾದಲ್ಲಿ ಕೆಲಸ ಮಾಡುವ ಐದು ಫಕೀರರು ಮತ್ತು ಐದು ಮಹಿಳೆಯರಿಗೆ ಆಹಾರವನ್ನು ಬಡಿಸಿದ ನಂತರವೇ ಹಬ್ಬವು ಔಪಚಾರಿಕವಾಗಿ ಕೊನೆಗೊಳ್ಳುತ್ತದೆ.
*****
ಕೆಲವು ವಾರಗಳ ನಂತರ, ನನ್ನ 75 ವರ್ಷದ ಅತ್ತೆ, ಗಯಾಬಾಯಿ ಕಾಳೆ ಮನೆಯ ಹತ್ತಿರದ ದರ್ಗಾದಲ್ಲಿ ಔತಣಕೂಟವನ್ನು ಆಯೋಜಿಸಿದ್ದರು. ಅವರು ಈಗ ಇತ್ತೀಚಿನ ವರ್ಷಗಳಲ್ಲಿ ಇದನ್ನು ಆಯೋಜಿಸುತ್ತಿದ್ದಾರೆ ಮತ್ತು ಈ ವರ್ಷ (2023), ಅವರು ಮಹಾರಾಷ್ಟ್ರದ ಲಾತೂರಿನ ರೆನಾಪುರ ಬ್ಲಾಕಿಲ್ಲಿರುವ ಸಣ್ಣ ಹಳ್ಳಿಯಾದ ಶೇರಾದಲ್ಲಿ ತಮ್ಮ ಕಿರಿಯ ಮಗಳು ಜುಂಬಾರ್ ಅವರೊಂದಿಗೆ ಸೇರಿಕೊಂಡು ಆಚರಿಸುತ್ತಿದ್ದಾರೆ.


ಎಡ: ಶೇರಾದ ದವಲ್ ಮಲಿಕ್ ದರ್ಗಾದ ಮಹಿಳಾ ಭಕ್ತರೊಬ್ಬರು ಮಜರ್ ಬಳಿ ಪ್ರಾರ್ಥನೆ ಸಲ್ಲಿಸಿದ ನಂತರ ಹೊರಬರುತ್ತಿದ್ದಾರೆ. ಬಲ: ತಮ್ಮ ಸಮಯವನ್ನು ಆನಂದಿಸುತ್ತಿರುವ ಶ್ರೀರಾಮ್ ಕಾಂಬ್ಳೆ (ನೆಲದ ಮೇಲೆ ಕುಳಿತಿರುವವರು) ಮತ್ತು (ತನ್ನ ಹೆಸರನ್ನು ಹಂಚಿಕೊಳ್ಳಲು ಬಯಸದ) ಅವರ ಸ್ನೇಹಿತ


ಎಡ: ಲಾತೂರ್ ಜಿಲ್ಲೆಯ ದಾವಲ್ ಮಲಿಕ್ ದರ್ಗಾದಲ್ಲಿ ನಡೆಯುವ ವಾರ್ಷಿಕ ಕಂದೂರಿಯನ್ನು ಗಯಾಬಾಯಿ ಕಾಳೆ ತನ್ನ ಮಗಳು ಜುಂಬಾರ್ ಅವರೊಂದಿಗೆ ಸೇರಿ ಆಚರಿಸುತ್ತಿದ್ದಾರೆ. ಬಲ: ಆಲದ ಮರವು ಮಾಂಸದ ಅಡುಗೆ ಮಾಡುವ ಕುಟುಂಬಗಳಿಗೆ ಮತ್ತು ದರ್ಗಾದಲ್ಲಿ ನಿವಾದ್ ಮತ್ತು ಪ್ರಾರ್ಥನೆ ಸಲ್ಲಿಸಲು ಕಾಯುತ್ತಿರುವ ಕುಟುಂಬಗಳಿಗೆ ಸ್ವಲ್ಪ ನೆರಳು ಮತ್ತು ವಿರಾಮವನ್ನು ನೀಡುತ್ತದೆ
ಈ ದಾವಲ್ ಮಲಿಕ್ ದರ್ಗಾ , ಮೊಹಾದಲ್ಲಿರುವ ದರ್ಗಾಕ್ಕಿಂತ ಚಿಕ್ಕದು. ನಾವು ವಿವಿಧ ಜಾತಿಗಳಿಗೆ ಸೇರಿದ 15 ಹಿಂದೂ ಕುಟುಂಬಗಳನ್ನು ಇಲ್ಲಿ ಭೇಟಿಯಾದೆವು. ಮಹಿಳೆಯರ ಒಂದು ಗುಂಪು ಮಝಾರ್ ನ ಮುಂದೆ ಕುಳಿತು ಕೆಲವು ಭಜನೆಗಳನ್ನು, ಹಿಂದೂ ದೇವರುಗಳನ್ನು ಪೂಜಿಸುವ ಭಕ್ತಿಗೀತೆಗಳನ್ನು ಹಾಡುತ್ತಿತ್ತು; ಕೆಲವರು ಹಿರಿಯ ಮುಸ್ಲಿಂ ಫಕೀರನೊಂದಿಗೆ ಮಾತನಾಡುತ್ತಾ ಅವರಿಂದ ಕೌಟುಂಬಿಕ ವಿಷಯಗಳ ಬಗ್ಗೆ ಸಲಹೆ ಪಡೆಯುತ್ತಿದ್ದರು. ಅನೇಕ ದೇವಾಲಯಗಳಲ್ಲಿ ಈಗಲೂ ಸ್ವಾಗತ ಸಿಗದ ಹುಡುಗರ ಗುಂಪು, ಹೆಚ್ಚಾಗಿ ದಲಿತರು, ಇಲ್ಲಿ ಜನರು ನಿವಾದ್ ಸಲ್ಲಿಸುವಾಗ ಹಲ್ಗಿ ( ತಮಟೆ ) ನುಡಿಸುತ್ತಾರೆ.
ಗಯಾಬಾಯಿಯ ಹಿರಿಯ ಮಗ ಬಾಳಾಸಾಹೇಬ್ ಕಾಳೆ ಅಡುಗೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಲಾತೂರಿನ ಬೋರ್ಗಾಂವ್ ಬಿಕೆಯ ಸಣ್ಣ ರೈತ, ಆಡುಗಳನ್ನು ಕೊಲ್ಲಲು ಸಹಾಯ ಮಾಡಿದರು. ಅವರು ಮಸಾಲೆಯುಕ್ತ, ರುಚಿಕರವಾದ ಅಡುಗೆಯನ್ನು ಸಹ ತಯಾರಿಸುತ್ತಾರೆ. ತಾಯಿ-ಮಗಳು ಇಬ್ಬರೂ ನಿವಾದ್ ನೀಡಿ ನಂತರ ಅಲ್ಲಿರುವ ಜನರೊಡನೆ ಆಹಾರವನ್ನು ಹಂಚಿಕೊಂಡು ಕುಟುಂಬವೂ ಊಟ ಮಾಡುತ್ತದೆ .
ಎರಡು ದರ್ಗಾಗಳಲ್ಲಿ ನಾನು ಭೇಟಿಯಾದ ಮಹಿಳೆಯರ ಪಾಲಿಗೆ, ಪ್ರಾರ್ಥನೆ ಮತ್ತು ಔತಣಕೂಟವನ್ನು ಸಲ್ಲಿಸುವ ಈ ಆಚರಣೆಯು ಭರವಸೆಯಂತಿದೆ, ಅದನ್ನು ಉಳಿಸಿಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯ. "ಇದು ಆಯ್ಕೆಯಲ್ಲ. ವಜ್ರ ಅಸತಾ, ಉತಾರವ ಲಗ ತಾ [ಹೊರೆಯನ್ನು ಇಳಿಸುವವರೊಬ್ಬರು ಬೇಕೇ ಬೇಕು]. ಆ ಭರವಸೆಯನ್ನು ಉಳಿಸಿಕೊಳ್ಳದಿದ್ದರೆ ಭಯಂಕರವಾದದ್ದು ಸಂಭವಿಸುತ್ತದೆ ಎಂದು ಅವರು ಹೆದರುತ್ತಾರೆ.
ಇಲ್ಲಿನ ಭೇಟಿ, ಅಡುಗೆ, ಔತಣಕೂಟ ಮತ್ತು ಪ್ರಸಾದ ಹಂಚಿಕೆಯ ನಂತರವೂ, ಅವರು ಹಿಂದೂವಾಗಿಯೇ ಉಳಿದಿರುತ್ತಾರೆ ಮತ್ತು ಅವರು ಈ ಮಂದಿರಗಳನ್ನು ತಮ್ಮದೇ ಆದ ಪೂಜ್ಯ ಪೂಜಾ ಸ್ಥಳಗಳನ್ನಾಗಿ ನೋಡುತ್ತಾರೆ.
"ಇದು [ಪೀರ್] ನನ್ನ ದೇವರು, ನಾನು ಅದನ್ನು ಪೂಜಿಸುತ್ತಲೇ ಇರುತ್ತೇನೆ. ನನ್ನ ಅಜ್ಜ, ನನ್ನ ತಂದೆ ಇದನ್ನು ಮಾಡಿದ್ದರು ಮತ್ತು ನಾನು ಅದನ್ನು ಮುಂದುವರಿಸುತ್ತೇನೆ" ಎಂದು ಗಯಾಬಾಯಿ ದೃಢನಿಶ್ಚಯ ಮತ್ತು ಅಚಲ ನಂಬಿಕೆಯೊಂದಿಗೆ ಹೇಳುತ್ತಾರೆ.


ಎಡ: ಕಂದೂರಿ ಹಬ್ಬಕ್ಕಾಗಿ ಮಹಿಳೆಯರು ನೂರಾರು ಭಕ್ರಿಗಳನ್ನು ತಯಾರಿಸುತ್ತಾ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಬಲ: ಗಯಾಬಾಯಿಯವರ ಸಹೋದರ ಮಾರುತಿ ಫೆರೆ ಅವರಂತಹ ಪುರುಷರು ಮಾಂಸವನ್ನು ಸಿದ್ಧಪಡಿಸುತ್ತಿದ್ದಾರೆ


ಎಡ: ದರ್ಗಾ ದಾವಲ್ ಮಲಿಕ್ ನಲ್ಲಿ ಮಾಂಸದಡುಗೆಯ ಉಸ್ತುವಾರಿಯನ್ನು ಬಾಳಾಸಾಹೇಬ್ ಕಾಳೆ ವಹಿಸಿಕೊಂಡಿದ್ದಾರೆ. ಬಲ: ಮಜರ್ ನಲ್ಲಿ ಪ್ರಾರ್ಥನೆ ಮತ್ತು ನಿವಾದವನ್ನು ಅರ್ಪಿಸಿದ ನಂತರ ಕಾಳೆ ಕುಟುಂಬವು ಕಂದೂರಿ ಊಟದಲ್ಲಿ ತೊಡಗುತ್ತದೆ
*****
ಗಯಾಬಾಯಿ, ಭಾಗಾ ಮಾವ್ಶಿ ಮತ್ತು ಇತರರು ತಮ್ಮ ಹರಕೆಗಳನ್ನು ಈಡೇರಿಸಲು 500 ಕಿಲೋಮೀಟರ್ ದೂರದಲ್ಲಿರುವ ದರ್ಗಾಗಳಿಗೆ ಭೇಟಿ ನೀಡುತ್ತಿದ್ದ ಅದೇ ತಿಂಗಳು ( ಮೇ 2023) ತ್ರಯಂಬಕೇಶ್ವರದ ನಿವಾಸಿ ಅರವತ್ತರ ಆಸುಪಾಸಿನಲ್ಲಿರುವ, ಸಲೀಮ್ ಸಯ್ಯದ್ ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರ ದೇವಾಲಯದ ಪ್ರವೇಶದ್ವಾರದಲ್ಲಿ ಶ್ರೀಗಂಧ - ಧೂಪವನ್ನು ಅರ್ಪಿಸಲು ಹೋದರು. 100 ವರ್ಷಗಳಿಗಿಂತಲೂ ಹೆಚ್ಚಿನ ಈ ಅಭ್ಯಾಸವನ್ನು ಅನುಸರಿಸಿ ಹೋದ ಅವರೊಂದಿಗೆ ಇತರರು ಸಹ ಸೇರಿಕೊಂಡರು.
ಅವರು ತಮ್ಮದೇ ಆದ 'ತ್ರಯಂಬಕ ರಾಜ'ನಲ್ಲಿ ಅಚಲ ನಂಬಿಕೆಯನ್ನು ಹೊಂದಿದ್ದರು ಮತ್ತು ಆದ್ದರಿಂದ ಚಾದರ್ ಅರ್ಪಿಸಲು ವಾರ್ಷಿಕ ಉರು ಸ್ಸಿಗೆ ಹೋಗಿದ್ದರು .
ಆದರೆ ಸಯ್ಯದ್ ಮತ್ತಿತರರನ್ನು ಈ ಬಾರಿ ಪ್ರವೇಶದ್ವಾರದಲ್ಲೇ ಅಸಭ್ಯವಾಗಿ ತಡೆಯಲಾಯಿತು ಮತ್ತು ಬಲವಂತವಾಗಿ ದೇವಸ್ಥಾನ ಪ್ರವೇಶಿಸಿದರು ಎಂದು ಆರೋಪಿಸಲಾಯಿತು. ಮತಾಂಧ ಹಿಂದೂ ಮುಖಂಡರೊಬ್ಬರು ಮುಸ್ಲಿಂ ಪುರುಷರಿಗೆ 'ಅವರ ಪೂಜೆಯನ್ನು ತಮ್ಮ ಸ್ವಂತ ದೇವಾಲಯಗಳಿಗೆ ಸೀಮಿತಗೊಳಿಸಿ' ಎಂದು ಹೇಳಿದರು. ಅಲ್ಲಿ ಪೂಜಿಸುತ್ತಿದ್ದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪವನ್ನು ಅವರ ಮೇಲೆ ಹೊರಿಸಲಾಯಿತು. ಈ 'ಭಯೋತ್ಪಾದನಾ ಕೃತ್ಯ'ದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಸಹ ರಚಿಸಲಾಯಿತು.
ಇದರಿಂದ ಆಘಾತಕ್ಕೊಳಗಾದ ಸಯ್ಯದ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು. ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ತಾನು ಶತಮಾನಗಳಷ್ಟು ಹಳೆಯದಾದ ಈ ಅಭ್ಯಾಸವನ್ನು ನಿಲ್ಲಿಸುವುದಾಗಿ ಭರವಸೆ ನೀಡಿದರು, ಇದು ಯಾರು ಗುರುತಿಸದೇ ಉಳಿದುಹೋದ ವಿಪರ್ಯಾಸವಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು