ಅದೊಂದು ದೆಹಲಿಯ ಚಳಿಗಾಲದ ಆಲಸಿ ಮಧ್ಯಾಹ್ನ. ಜನವರಿ ತಿಂಗಳ ಸೂರ್ಯ ಅತಿಥಿಯಂತೆ ವರಾಂಡದಲ್ಲಿ ಕುಳಿತಿದ್ದ. ಅಲ್ಲೇ ಕುಳಿತಿದ್ದ ಖಮರ್ ತನ್ನ ತಾಯಿಗೆ ಫೋನ್ ಮಾಡಿದರು. ಅಲ್ಲಿಂದ ಸಾವಿರ ಕಿಲೋಮೀಟರ್ ದೂರದಲ್ಲಿರು 75 ವರ್ಷದ ಅಮ್ಮನ ದನಿ ಕೇಳುತ್ತಿದ್ದಂತೆ ಅವರು ತನ್ನ ಬಾಲ್ಯದ ದಿನಗಳಿಗೆ ಜಾರಿದರು. ಅವರ ಅಮ್ಮ ಶಮೀಮಾ ಖತೂನ್ ಅವರ ಮನೆಯಿರುವುದು ಬಿಹಾರದ ಸೀತಾಮಡಿ ಜಿಲ್ಲೆಯ ಬರಿ ಫುಲ್ವಾರಿಯಾ ಗ್ರಾಮದಲ್ಲಿ.
ಅವರಿಬ್ಬರೂ ಫೋನ್ ಮೂಲಕ ಮಾತನಾಡಿಕೊಂಡಿದ್ದನ್ನು ಕೇಳಿದ್ದರೆ ನಿಮಗೂ ವಿಚಿತ್ರ ಎನ್ನಿಸುತ್ತಿತ್ತು. ಸ್ಪಷ್ಟ ಉರ್ದುವಿನಲ್ಲಿ ಮಾತನಾಡಿದ ಅವರು ಕೇಳಿದರು, “”ಅಮ್ಮಿ ಜರಾ ಯೇ ಬತಾಯಿಯೇಗಾ, ಬಚ್ಪನ್ ಮೇ ಜೋ ಮೇರೆ ಸರ್ ಪೇ ಝಖಮ್ ಹೋತಾ ತಾ ಉಸ್ಕಾ ಇಲಾಜ್ ಕೈಸೇ ಕರ್ತೇ ತೇ?” (ಅಮ್ಮ ನಾನು ಸಣ್ಣವನಿದ್ದಾಗ ತಲೆಯಲ್ಲಿ ಕಜ್ಜಿ ಆಗ್ತಿತ್ತಲ್ಲ ಅದರ ಇಲಾಜು ಹೇಗೆ ಮಾಡ್ತಿದ್ರಿ?”
“ಸೀರ್ ಮೇ ಜೋ ಹೋ ಜಾಹಾಯಿ – ತೋರೊಹೋ ಹೋಲಾ – ಬಟ್ಕೋರಾ ಕಹಾ ಹಾಯಿ ಒಕೋ ಇಧರ್. ರೆಹ್ ಚಿಕ್ನಿ ಮಿಟ್ಟಿ ಲಗಾಕೆ ಧೋಲಿಯಾ ರಹಾ, ಮಗರ್ ಲಗಾ ಹಯಿ ಬಹುತ್. ತಾ ಚೂಟ್ ಗೆಲಾಯಿ” [ತಲೆಯಲ್ಲಿ ಆಗ್ತಿದ್ದ ಆ ಕಜ್ಜಿ – ನಿನಗೂ ಆಗಿತ್ತು – ಅದನ್ನ ಬಟ್ಖೋರಾ ಅಂತಿದ್ರು. ನಾನು ನಿನಗೆ ರೆಹ್ (ಉಪ್ಪಿನ ಅಂಶವಿರುವ ಮಣ್ಣು ಮತ್ತು ಚಿಕ್ಣಿ ಮಿಟ್ಟಿ (ಜೇಡಿ ಮಣ್ಣು) ಹಾಕಿ ಸ್ನಾನ ಮಾಡಿಸುತ್ತಿದ್ದೆ, ಆದರೆ ಅದರಿಂದ ಬಹಳ ನೋವಾಗುತ್ತಿತ್ತು. ಕಡೆಗೂ ಅದು ಗುಣ ಆಯ್ತು.]” ಎಂದು ಅವರು ನಗುತ್ತಾ ಹೇಳಿದರು. ಅವರ ಭಾಷೆ ಖಮರ್ ಅವರ ಉರ್ದುವಿಗಿಂತ ಭಿನ್ನವಾಗಿತ್ತು.
ಅದರಲ್ಲಿ ವಿಶೇಷವೇನೂ ಇಲ್ಲ ಮೊದಲಿನಿಂದಲೂ ಖಮರ್ ಮತ್ತು ಅವರ ತಾಯಿ ಬೇರೆ ಬೇರೆ ಭಾಷೆಗಳಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು.
“ನನಗೆ ಅವಳ ಮಾತು ಅರ್ಥ ಆಗುತ್ತೆ ಆದರೆ ಆ ಶೈಲಿಯಲ್ಲಿ ಮಾತನಾಡಲು ಬರುವುದಿಲ್ಲ. ನಾನು ನನ್ನ ಮಾತೃಭಾಷೆ ಉರ್ದು ಎಂದು ಹೇಳುತ್ತೇನೆ. ಆದರೆ ನನ್ನಮ್ಮನ ಭಾಷೆ ಉರ್ದುವಲ್ಲ” ಎಂದು ಅವರು ನಮ್ಮ ಪರಿಭಾಷಾ ತಂಡದ ಮೀಟಿಂಗಿನಲ್ಲಿ ಹೇಳಿದ್ದರು. ಅಂದು ನಾವು ಮಾತೃಭಾಷಾ ದಿನಕ್ಕೆ ಯಾವ ವಿಷಯವನ್ನು ಆಯ್ದುಕೊಳ್ಳುವುದು ಎನ್ನುವುದರ ಕುರಿತು ಚರ್ಚಿಸುತ್ತಿದ್ದೆವು. “ಅವರು ಮಾತನಾಡುವ ಭಾಷೆ ಹೆಸರು ಯಾರಿಗೂ ಗೊತ್ತಿಲ್ಲ. ಅಮ್ಮನಿಗಾಗಲೀ ಅಥವಾ ಮನೆಯಲ್ಲಿನ ಇತರರಿಗಾಗಲಿ ಆ ಭಾಷೆಯ ಹೆಸರು ಗೊತ್ತಿಲ್ಲ. ಅವರ ಮನೆಯಿಂದ ಕೆಲಸಕ್ಕಾಗಿ ಹೊರಗೆ ಬಂದ ಗಂಡಸರು ಎಂದರೆ ಅವರ ತಂದೆ, ಅವರ ಅಣ್ಣನಿಗೂ ಈ ಭಾಷೆ ಬರುವುದಿಲ್ಲ” ಎಂದು ಅವರು ಹೇಳುತ್ತಾರೆ. ಖಮರ್ ಅವರ ಮಕ್ಕಳು ಈ ಭಾಷೆಯಿಂದ ಇನ್ನಷ್ಟು ದೂರವಿದ್ದಾರೆ. ಅವರಿಗೆ ತಮ್ಮ ಅಜ್ಜಿ ಮಾತನಾಡುವ ಭಾಷೆ ಅರ್ಥವೇ ಆಗುವುದಿಲ್ಲ.

ಪಶ್ಚಿಮ ಮಹಾರಾಷ್ಟ್ರದ ಗ್ರಾಮೀಣ ಕುಸ್ತಿ ಶಾಲೆಯ ಪ್ರವೇಶದ್ವಾರದಲ್ಲಿರುವ ಬೋರ್ಡಿನಲ್ಲಿ ತಲೀಮ್ (ಶಿಕ್ಷಣಕ್ಕಾಗಿ ಉರ್ದು) ಎಂದು ಬರೆಯಲಾಗಿದೆ. ಆದರೆ ನೀವು ಒಳಗೆ ನೋಡುವ ಮೊದಲ ವಿಷಯವೆಂದರೆ ಕುಸ್ತಿಪಟುಗಳ (ಪೆಹೆಲ್ವಾನ್) ದೇವತೆಯಾದ ಹನುಮಾನ್ ಚಿತ್ರ. ಇದು ಸಂಸ್ಕೃತಿಗಳ ಮಿಶ್ರಣದ ಬಗ್ಗೆ ಮಾತನಾಡುವ ಚಿತ್ರವಾಗಿದೆ
“ಈ ಕುರಿತು ತಿಳಿದುಕೊಳ್ಳಲು ನಾನು ಸಾಕಷ್ಟು ಪ್ರಯತ್ನಿಸಿದ್ದೇನೆ” ಎನ್ನುತ್ತಾರೆ ಖಮರ್. “ಅಲಿಘರ್ ಮುಸ್ಲಿಂ ಯುನಿವರ್ಸಿಟಿಯ ಭಾಷಾ ತಜ್ಞರಾದ ಮಹಮದ್ ಜಹಂಗೀರ್ ಇದನ್ನು ʼಮೈಥಿಲಿ ಉರ್ದುʼ ಎನ್ನುತ್ತಾರೆ, ಇನ್ನೊಬ್ಬ ಪ್ರೊಫೆಸರ್ ಜೆಎನ್‌ಯು ವಿಶ್ವವಿದ್ಯಾಲಯದ ರಿಜ್ವಾನುರ್ ರಹಮಾನ್ ಹೇಳುವಂತೆ ಇಲ್ಲಿನ ಮುಸ್ಲಿಂರು ತಮ್ಮ ಮಾತೃಭಾಷೆಯನ್ನು ಉರ್ದು ಎಂದು ಬರೆಯಿಸುತ್ತಾರಾದರೂ ಮನೆಯಲ್ಲಿ ಬೇರೆಯದೇ ಭಾಷೆ ಮಾತನಾಡುತ್ತಾರೆ. ಈ ಭಾಷೆ ಉರ್ದು, ಪರ್ಷಿಯನ್, ಅರೇಬಿಕ್, ಹಿಂದಿ ಮತ್ತು ಮೈಥಿಲಿ ಭಾಷೆಯ ಮಿಶ್ರಣದಂತಿದೆ.”
ಮಾತೃಭಾಷೆಯೆನ್ನುವುದು ತಲೆಮಾರಿನಿಂದ ತಲೆಮಾರಿಗೆ ನಾಶವಾಗುತ್ತ ಬರುವ ವಿದ್ಯಮಾನ.
ಇದರೊಂದಿಗೆ ನಾವು ನಮ್ಮ ನಮ್ಮ ಮಾತೃಭಾಷೆಯಲ್ಲಿ ಇಲ್ಲವಾಗುತ್ತಿರುವ ಪದಗಳ ಕುರಿತು ಬರೆಯಲು ನಿರ್ಧರಿಸಿದೆವು. ಹೀಗೆ ಕಳೆದು ಹೋಗುತ್ತಿರುವ ಪದಗಳ ಜಾಡು ಹಿಡಿದ ನಾವು ನಮಗೆ ಗೊತ್ತಿಲದೆಯೇ ಬೋರ್ಗೆಸ್ ಅಲೆಫ್ ಅವರತ್ತ ಕಣ್ಣು ನೆಟ್ಟಿದ್ದೆವು.
*****
ಈ ಕುರಿತು ಮೊದಲು ಮಾತನಾಡಿದ್ದು ರಾಜಾ. “ತಮಿಳಿನ ನುಡಿಗಟ್ಟುಗಳ ಕುರಿತಾದ ಒಂದು ತಿರುಕ್ಕುರಳ್ ಇದೆ” ಎಂದು ಅವರು ತಮ್ಮ ಮಾತು ಆರಂಭಿಸಿದರು.
“ಮಯಿರ್
ನೀಪ್ಪಿನ್ ವಾಳ ಕವರಿಮಾ ಅನ್ನಾರ್
ಉಯಿರ್‌ನೀಪ್ಪರ್ ಮನಮ್ ವರಿನ್ [
ಕುರಳ್ # 969
]
ಇದನ್ನು ಹೀಗೆ ಅನುವಾದಿಸಬಹುದು: ಜಿಂಕೆಯ ಮೈಯಿಂದ ಕೂದಲು ಕಿತ್ತರೆ ಅದು ಸಾಯುತ್ತದೆ. ಹಾಗೆಯೇ ಗೌರವ ಕಳೆದುಕೊಂಡ ಜನರು ಅಪಮಾನದಿಂದ ಸಾಯುತ್ತಾರೆ.
“ಈ ದ್ವಿಪದಿ ಮನುಷ್ಯನ ಸ್ವಾಭಿಮಾನವನ್ನು ಜಿಂಕೆಯ ಕೂದಲಿಗೆ ಹೋಲಿಸುತ್ತದೆ. ಅಥವಾ ಮು. ವರದರಾಸನರ್ ಅವರ ಅನುವಾದ ಹಾಗೆನ್ನುತ್ತದೆ” ಎಂದು ರಾಜಾ ಸಂಗೀತಮ್ ಹಿಂಜರಿಕೆಯಿಂದ ಹೇಳುತ್ತಾರೆ. “ಆದರೆ ಜಿಂಕೆಯ ಕೂದಲು ಕಿತ್ತರೆ ಅದು ಯಾಕೆ ಸಾಯುತ್ತದೆ? ನಂತರ ಕಿತ್ತುಕೊಂಡರೆ ಜಿಂಕೆ ಏಕೆ ಸಾಯುತ್ತದೆ? ನಂತರ ಇಂಡಾಲಜಿಸ್ಟ್ ಆರ್.ಬಾಲಕೃಷ್ಣನ್ ಅವರ 'ಸಿಂಧೂ ಕಣಿವೆಯ ತಮಿಳು ಹಳ್ಳಿಗಳ ಹೆಸರುಗಳು ' ಎಂಬ ಲೇಖನವನ್ನು ಓದಿದಾಗ, ಈ ದ್ವಿಪದಿ ಯಾಕ್ ಎನ್ನುವ ಉದ್ದ ಕೂದಲಿನ ಪ್ರಾಣಿಯ ಕುರಿತಾಗಿ ಎಂದರೆ ಅದು ʼಕವರಿಮಾʼ ಬದಲು ʼಕವರಿಮಾನ್ʼ ಕುರಿತು ಮಾತನಾಡುತ್ತಿದೆ ಎನ್ನುವುದು ತಿಳಿಯಿತು.”
“ಹಾಗಿದ್ದರೆ ತಮಿಳು ನಾಡಿಗೆ ಹೇಗೆ ಯಾಕ್ ಬಂತು? ಅದು ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ವಾಸಿಸುವ ಪ್ರಾಣಿ. ತಮಿಳು ದೇಶದ ಇನ್ನೊಂದು ತುದಿಯಲ್ಲಿ ಇರುವ ರಾಜ್ಯ. ಅದನ್ನು ಆರ್. ಬಾಲಕೃಷ್ಣನ್ ನಾಗರಿಕ ವಲಸೆಯ ಮೂಲಕ ವಿವರಿಸುತ್ತಾರೆ. ಸಿಂಧೂ ಕಣಿವೆಯ ಜನರು ತಮ್ಮ ಸ್ಥಳೀಯ ಪದಗಳು, ಜೀವನಶೈಲಿ, ಊರುಗಳ ಹೆಸರಿನ ಜೊತೆಗೆ ದಕ್ಷಿಣಕ್ಕೆ ವಲಸೆ ಹೋಗಿರಬಹುದು ಎಂದು ಅವರು ವಿವರಿಸುತ್ತಾರೆ.”


ಪೂರ್ಣವಾಗಿ ಬೆಳೆದ ಹಿಮಾಲಯನ್ ಯಾಕ್ (ಎಡ) ಮತ್ತು ಅವುಗಳ ಮಾಲೀಕರಾದ ಗ್ರಾಮೀಣ ಚಾಂಗ್ಪಾರು (ಬಲ). ಆಧುನಿಕ ತಮಿಳು ನಿಘಂಟುಗಳಲ್ಲಿ ಕಾಣದ ಯಾಕ್ ಪ್ರಾಣಿಯ ತಮಿಳು ಹೆಸರು ಕವರಿಮಾ ಸಂಗಮ್ ಕಾವ್ಯದಲ್ಲಿ ಕಂಡುಬರುತ್ತದೆ
“ಇನ್ನೊಬ್ಬ ವಿದ್ವಾಂಸ ವಾಸು ಹೆಳುವಂತೆ, ಭಾರತ ಉಪಖಂಡದ ಇತಿಹಾಸವನ್ನು ರಾಷ್ಟ್ರ-ರಾಜ್ಯ ಅಥವಾ ಇಂದಿನ ದೇಶದ ಪರಿಕಲ್ಪನೆಯಿಂದ ನೋಡಬಾರದು. ಒಂದು ಕಾಲದಲ್ಲಿ ಇಡೀ ಭಾರತ ಉಪಖಂಡ ದ್ರಾವಿಡ ಭಾಷೆಗಳನ್ನು ಮಾತನಾಡುವ ಜನರಿಂದ ತುಂಬಿತ್ತು ಎನ್ನುತ್ತಾರೆ. ತುಂಬಿತ್ತು ಎಂದು ಅವರು ಹೇಳಿದರು. ಉತ್ತರದಲ್ಲಿ ಸಿಂಧೂ ಕಣಿವೆಯಿಂದ ದಕ್ಷಿಣದ ಶ್ರೀಲಂಕಾದವರೆಗೆ ಹರಡಿಕೊಂಡಿದ್ದ ತಮಿಳಳ ಭಾಷೆಯಲ್ಲಿ ಹಿಮಾಲಯದ ಪ್ರಾಣಿಯೊಂದರ ಹೆಸರು ಇರುವುದು ತೀರಾ ಅಚ್ಚರಿ ಪಡುವಂತಹ ವಿಷಯವೇನೂ ಅಲ್ಲ ಎಂದು ಅವರು ಹೇಳುತ್ತಾರೆ” ಎನ್ನುತ್ತಾರೆ ರಾಜ.
“ಕವರಿಮಾ ಎನ್ನುವುದು ಅಚ್ಚರಿಯ ಶಬ್ದ!” ಎನ್ನುತ್ತಾರೆ ರಾಜ. ಕುತೂಹಲಕಾರಿ ಸಂಗತಿಯೆಂದರೆ, ಪ್ರಸಿದ್ಧ ತಮಿಳು ನಿಘಂಟು ಕ್ರೆಯಾದಲ್ಲಿ ಕವರಿಮಾ ಎಂಬ ಪದವಿಲ್ಲ.
*****
ನಮ್ಮಲ್ಲಿನ ಇನ್ನೂ ಅನೇಕರ ಬಳಿ ಇಂತಹ ಡಿಕ್ಷನರಿಯಲ್ಲಿ ಸಿಗದ ಪದಗಳ ಕತೆಯನ್ನು ಹೊಂದಿದ್ದರು. ಜೋ಼ಷುವಾ ಇದಕ್ಕೆ 'ಪ್ರಮಾಣೀಕರಣದ ರಾಜಕೀಯ' ಕಾರಣ ಎನ್ನುತ್ತಾರೆ.
"ಶತಮಾನಗಳಿಂದ, ಬಂಗಾಳದ ರೈತರು, ಕುಂಬಾರರು, ಗೃಹಿಣಿಯರು, ಕವಿಗಳು, ಕುಶಲಕರ್ಮಿಗಳು ತಮ್ಮದೇ ಆದ ಪ್ರಾದೇಶಿಕ ಭಾಷೆಗಳಲ್ಲಿ ಸಂವಹನ ನಡೆಸಿದ್ದರು ಮತ್ತು ಬರೆದಿದ್ದರು. ರಾರ್ಹಿ, ವರೇಂದ್ರಿ, ಮನ್ಭೂಮಿ, ರಂಗಪುರಿ ಅವುಗಳಲ್ಲಿ ಕೆಲವು. ಆದರೆ, 19ನೇ ಮತ್ತು 20ನೇ ಶತಮಾನದ ಆರಂಭದಲ್ಲಿ ಬಂಗಾಳ ಪುನರುಜ್ಜೀವನದ ಆಗಮನದೊಂದಿಗೆ, ಬಾಂಗ್ಲಾ ತನ್ನ ಪ್ರಾದೇಶಿಕ ಮತ್ತು ಅರಬೊ-ಪರ್ಷಿಯನ್ ನಿಘಂಟಿನ ಹೆಚ್ಚಿನ ಭಾಗವನ್ನು ಕಳೆದುಕೊಂಡಿತು. ಪ್ರಮಾಣೀಕರಣ ಮತ್ತು ಆಧುನೀಕರಣದ ಸತತ ಅಲೆಗಳು ಸಂಸ್ಕೃತೀಕರಣ ಮತ್ತು ಆಂಗ್ಲೋಫೋನಿಕ್, ಯುರೋಪಿಯನ್ ಪದಗಳು ಮತ್ತು ನುಡಿಗಟ್ಟುಗಳ ಒಳಹರಿವಿನೊಂದಿಗೆ ಕೈ ಜೋಡಿಸಿದವು. ಇದು ಬಾಂಗ್ಲಾ ಭಾಷೆಯ ಬಹುತ್ವದ ಸ್ವರೂಪವನ್ನು ಕಸಿದುಕೊಂಡಿತು. ಅಂದಿನಿಂದ, ಸಂತಾಲಿ, ಕುರ್ಮಾಲಿ, ರಾಜ್ಬೋಂಗ್ಶಿ, ಕುರುಖ್, ನೇಪಾಳಿ ಮುಂತಾದ ಆದಿವಾಸಿ ಭಾಷೆಗಳಲ್ಲಿ ಆಳವಾಗಿ ಬೇರೂರಿರುವ ಅಥವಾ ಎರವಲು ಪಡೆದ ಪದಗಳು ಅಳಿಸಿಹೋಗುತ್ತಿವೆ.
ಆದರೆ ಈ ಕತೆ ಬಂಗಾಳಕ್ಕಷ್ಟೇ ಸೀಮಿತವಲ್ಲ. “ಬಾರ್ ಗೌ ಈ ಬೋಲಿ ಬದಲೇಯ್” (ಪ್ರತಿ 12-15 ಕಿಲೋಮೀಟರು ದಾಟುತ್ತಿದ್ದಂತೆ ಇನ್ನೊಂದು ಭಾಷೆ ಕೇಳಿಸುತ್ತದೆ ಎನ್ನುವ ಗಾದೆಯನ್ನು ಇಡೀ ಭಾರತಕ್ಕೆ ಅನ್ವಯಿಸಬಹುದು. ವಸಾಹತುಶಾಹಿಯ ಸಮಯದಲ್ಲಿ, ಸ್ವಾತಂತ್ರ್ಯಾನಂತರ ಮತ್ತು ನಂತರ ಭಾಷಾವಾರು ರಾಜ್ಯಗಳ ವಿಭಜನೆಯ ಸಮಯದಲ್ಲಿ ಭಾರತದ ಪ್ರತಿಯೊಂದು ರಾಜ್ಯವೂ ಇದೇ ರೀತಿಯ ಭಾಷಾ ಬದಲಾವಣೆಗೆ ಸಾಕ್ಷಿಯಾಯಿತು. ಭಾರತದಲ್ಲಿ ರಾಜ್ಯ ಭಾಷೆಯ ಕಥೆ ಐತಿಹಾಸಿಕವಾಗಿ ಸಾಂಸ್ಕೃತಿಕ ಮತ್ತು ರಾಜಕೀಯ ಪರಿಣಾಮಗಳಿಂದ ತುಂಬಿಕೊಂಡಿದೆ.
ಜೋಶುವಾ ಹೇಳುತ್ತಾರೆ, "ನಾನು ಹಿಂದಿನ ಮಲ್ಲಭೂಮ್ ಸಾಮ್ರಾಜ್ಯದ ಹೃದಯಭಾಗವಾದ ಬಂಕುರಾದಿಂದ ಬಂದವನು, ಈ ಪ್ರದೇಶವು ಅನೇಕ ಜನಾಂಗೀಯ ಗುಂಪುಗಳ ನೆಲೆ. ಇದರ ಪರಿಣಾಮವಾಗಿ ಇಲ್ಲಿನ ಭಾಷೆ, ರೂಢಿಗಳು ಮತ್ತು ಹೆಚ್ಚಿನವುಗಳಲ್ಲಿ ನಿರಂತರ ವಿನಿಮಯವಾಗಿದೆ. ಈ ಪ್ರದೇಶದ ಪ್ರತಿಯೊಂದು ಭಾಷೆಯಲ್ಲೂ ಕುರ್ಮಾಲಿ, ಸಂತಾಲಿ, ಭೂಮಿಜ್ ಮತ್ತು ಬಿರ್ಹೋರಿಯಿಂದ ಅಸಂಖ್ಯಾತ ಸಾಲದ ಪದಗಳು ಬೆರೆತು ಹೋಗಿವೆ.

ಭಾರತದಲ್ಲಿ ರಾಜ್ಯ ಭಾಷೆಯ ಕಥೆ ಐತಿಹಾಸಿಕವಾಗಿ ಸಾಂಸ್ಕೃತಿಕ ಮತ್ತು ರಾಜಕೀಯ ಪರಿಣಾಮಗಳಿಂದ ತುಂಬಿದೆ
"ಆದರೆ, ಪ್ರಮಾಣೀಕರಣ ಮತ್ತು ಆಧುನೀಕರಣದ ಹೆಸರಿನಲ್ಲಿ ಅರ್ಹಾ (ಭೂಮಿ), ಜುಮ್ರಕುಚಾ (ಸುಟ್ಟ ಮರ), ಕಕ್ತಿ (ಆಮೆ), ಜೋರ್ಹ್ (ತೊರೆ), ಅಗ್ರಾ (ಟೊಳ್ಳು), ಬಿಲಾಟಿ ಬೇಗನ್ (ಟೊಮೆಟೊ) ಮತ್ತು ಇನ್ನೂ ಅನೇಕ ಪದಗಳನ್ನು ವಸಾಹತುಶಾಹಿ ಕಲ್ಕತ್ತಾದ ಮೇಲ್ವರ್ಗದ, ಮೇಲ್ಜಾತಿಯ ಬಣಕ್ಕೆ ಸೇರಿದ ಜನರು ಅಭಿವೃದ್ಧಿಪಡಿಸಿದ ಹೆಚ್ಚು ಸಂಸ್ಕೃತ ಭೂಯಿಷ್ಠ ಮತ್ತು ಯುರೋಪಿಯನ್ ಮಾದರಿಯ ನುಡಿಗಟ್ಟುಗಳಿಂದ ಸ್ಥಿರವಾಗಿ ಬದಲಾಯಿಸಲಾಗುತ್ತಿದೆ."
*****
ಆದರೆ ಪದವೊಂದು ನಿಜಕ್ಕೂ ನಷ್ಟವಾಗುವುದು ಯಾವುದು? ಮೊದಲು ಕಣ್ಮರೆಯಾಗುತ್ತದೋ ಅಥವಾ ಅದರ ಅರ್ಥವೋ? ಅಥವಾ ಅದು ಭಾಷೆಯೊಳಗೆ ಸೃಷ್ಟಿಸುವ ಶೂನ್ಯ ಸಂದರ್ಭವೋ? ಹಾಗೆಯೇ ಕಣ್ಮರೆಯಾದ ಪದದ ಜಾಗಕ್ಕೆ ಇನ್ನೊಂದು ಪದ ಬಂದು ಸೇರಿಕೊಳ್ಳುವುದಿಲ್ಲವೆ?
ಈಗ ಬೆಂಗಾಲಿ ಭಾಷೆಗೆ ʼಉರಾಲ್‌ಪೂಲ್ʼ (ಹಾರು ಸೇತುವೆ) ಎನ್ನುವ ಪದ ಸೇರಿಕೊಂಡಿದೆ. ಇದು ಈಗಿನ ಫ್ಲೈ ಓವರ್‌ಗಳಿಗೆ ಪರ್ಯಾಯವಾಗಿ ಹುಟ್ಟಿರುವ ಪದ. ಹಾಗಿದ್ದರೆ ನಾವು ಏನನ್ನೋ ಕಳೆದುಕೊಂಡೆವೋ ಅಥವಾ ಪಡೆದುಕೊಂಡೆವೋ? ಮತ್ತು ಕಳೆದು ಹೋಗಿದ್ದಕ್ಕಿಂತಲೂ ಈಗ ನಮಗೆ ದೊರೆತಿರುವುದು ಮೌಲ್ಯಯುತವಾದ್ದೇ? ಎನ್ನುವುದು ಸ್ಮಿತಾರನ್ನು ಕಾಡುತ್ತಿರುವ ವಿಷಯ.
ಅವರು ಬಂಗಳಾದ ಹಳೆಯ ಮನೆಗಳಲ್ಲಿ ಇರುತ್ತಿದ್ದ ಸಾಂಪ್ರದಾಯಿಕ ಬೆಳಕಿಂಡಿಗಳನ್ನು ನೆನಪಿಸಿಕೊಳ್ಳುತ್ತಾರೆ. ಇದರ ಮೂಲಕ ಮನೆಯೊಳಗೆ ಗಾಳಿ ಮತ್ತು ಬೆಳಕು ಹರಿಯುತ್ತಿತ್ತು. ಇದನ್ನು ಘುಲ್‌ಘುಲಿ ಎಂದು ಕರೆಯುತ್ತಿದ್ದರು. “ಅವು ಈಗ ಇಲ್ಲವೇ ಇಲ್ಲ” ಎನ್ನುತ್ತಾರೆ ಸ್ಮಿತಾ. “ಸುಮಾರು 10 ಶತಮಾನಗಳ ಹಿಂದೆ ಖಾನಾ ಎನ್ನುವ ಹೆಸರಿನ ಜ್ಞಾನಿ ಹೆಣ್ಣೊಬ್ಬಳು ಖಾನಾರ್ ಬಚಾನ್ ಎನ್ನುವ ತನ್ನ ಗಾದೆಯಂತಹ ದ್ವಿಪದಿಗಳ ಸಂಗ್ರಹದಲ್ಲಿ ಕೃಷಿ, ಆರೋಗ್ಯ ಮತ್ತು ಔಷಧ, ಹವಾಮಾನಶಾಸ್ತ್ರ, ಮನೆ ನಿರ್ಮಾಣದ ಬಗ್ಗೆ ಅಚ್ಚರಿಯೆನ್ನಿಸುವಷ್ಟು ವಾಸ್ತವಾಂಶಗಳೊಡನೆ ಬರದಿದ್ದಾರೆ.
ಗಾಳಿ ಬೆಳಕು ಇಲ್ಲದ ಕೋಣೆಯನ್ನು ಕಟ್ಟಿಸಬೇಡ
ಅಲ್ಲಿ ವಾಸಿಸಿ ಕಾಯಿಲೆ ಬಂದು ಸಾಯಬಹುದು ನೀನು.
ಮನೆಯ ನೆಲ ಹೊರಗಿನ ನೆಲಕ್ಕಿಂತಲೂ ತಗ್ಗಿದ್ದರೆ
ಕತ್ತಲು ಮತ್ತು ವಿನಾಶವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.
ನಮ್ಮ ಪೂರ್ವಜರು ಖಾನಾರ ಬುದ್ಧಿವಂತಿಕೆಯನ್ನು ನಂಬಿದ್ದರು ಮತ್ತು ನಮ್ಮ ಮನೆಗಳಲ್ಲಿ ಘುಲ್‌ಘುಲಿಗೆ ಸ್ಥಳಾವಕಾಶ ಮಾಡಿಕೊಟ್ಟರು" ಎಂದು ಸ್ಮಿತಾ ಹೇಳುತ್ತಾರೆ. "ಆದರೆ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ಪ್ರಾರಂಭಿಸಲಾದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಸಾಮಾನ್ಯ ಜನರು ಪಡೆಯುವ ಆಧುನಿಕ ಏಕರೂಪದ ವಸತಿ ಯೋಜನೆಗಳಲ್ಲಿ, ಸಾಂಪ್ರದಾಯಿಕ ಬುದ್ಧಿವಂತಿಕೆಗೆ ಸ್ಥಳವಿಲ್ಲ. ಹೊಂದಿಕೊಂಡ ಕಪಾಟುಗಳನ್ನು ಹೊಂದಿರುವ ಗೋಡೆಗಳು, ಮತ್ತು ಕುಲುಂಗಿ ಎಂದು ಕರೆಯಲ್ಪಡುವ ಕಮಾನು ಗೋಡೆಗಳು, ಚಾಟಲ್ ಎಂದು ಕರೆಯಲ್ಪಡುವ ತೆರೆದ ಸ್ಥಳಗಳು ಹಳೆಯ ಕಲ್ಪನೆಗಳಾಗಿವೆ. ಘುಲ್ಘುಲಿಗಳು ಕಣ್ಮರೆಯಾಗುವುದರ ಜೊತೆಗೆ ಜನಪ್ರಿಯ ಪರಿಭಾಷೆಯಿಂದಲೂ ಈ ಪದ ಕಣ್ಮರೆಯಾಗಿದೆ" ಎಂದು ಅವರು ಹೇಳುತ್ತಾರೆ.

ವಾಸ್ತುಶಿಲ್ಪದ ವಿನ್ಯಾಸಗಳ ಬದಲಾವಣೆಯಿಂದಾಗಿ ಬಾಂಗ್ಲಾದಲ್ಲಿನ ಪದಗಳಾದ ಗುಲ್ಘುಲಿ (ಸಾಂಪ್ರದಾಯಿಕ ಗಾಳಿಗೂಡು), ಕುಲುಂಗಿ (ಕಪಾಟುಗಳು) ಮತ್ತು ಗೋಡೆಗಳಲ್ಲಿ ಹುದುಗಿರುವ ಗೂಡುಗಳು ಮತ್ತು ಚಾಟಲ್ (ತೆರೆದ ಸ್ಥಳಗಳು) ರೀತಿಯ ಪದಗಳು ನಿಘಂಟಿನಿಂದ ಕಾಣೆಯಾಗಿವೆ
ಘುಲ್ಘುಲಿ ಎನ್ನುವ ಪದ ನಷ್ಟವಾಗಿದ್ದಕ್ಕಷ್ಟೇ ಸ್ಮಿತಾ ಮರುಗುತ್ತಿಲ್ಲ. ಇಂದು ಮನೆಗಳೇ ಗುಬ್ಬಿ ಗೂಡಿನಂತಾಗಿರುವಾಗ ಗಾಳಿ ಗೂಡು ಇಲ್ಲದಿರುವುದು ದೊಡ್ಡ ವಿಷಯವಲ್ಲ. ಆದರೆ ಒಂದು ಕಾಲದಲ್ಲಿ ನಾವು ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕುತ್ತಾ ಅದರೊಂದಿಗೆ ಒಂದು ಸಂಪರ್ಕವನ್ನು ಹೊಂದಿದ್ದೆವು. ಮನೆಯ ಗಾಳಿಗೂಡಿನಲ್ಲಿ ಗುಬ್ಬಚ್ಚಿಗಳು ಮನೆ ಕಟ್ಟಿಕೊಳ್ಳುತ್ತಿದ್ದವು. ಆದರೆ ಇಂದು ಮನುಷ್ಯನ ಪ್ರಕೃತಿಯೊಂದಿಗಿನ ಸೂಕ್ಷ್ಮ ಸಂಬಂಧ ಕಡಿದು ಹೋಗಿದೆ.
*****
“ಮೊಬೈಲ್ ಟವರುಗಳು ಸೃಷ್ಟಿಸಿದ ಅವಾಂತರಗಳ ಜೊತೆಗೆ ಹೊರಗಿನ ವಾತಾವರಣದಿಂದ ಸಂಪರ್ಕ ಕಡಿದುಕೊಂಡಿರುವ ಮನೆಗಳು ಮತ್ತು ನಮ್ಮ ಮುಚ್ಚಿದ ಅಡುಗೆ ಮನೆಗಳು ಈ ಹಕ್ಕಿಗಳೊಂದಿಗಿನ ಸಂಬಂಧ ಕಡಿದು ಹೋಗಲು ಕಾರಣವಾಗಿವೆ” ಎನ್ನುತ್ತಾರೆ ಕಮಲ್ಜಿತ್. “ಅದರೊಂದಿಗೆ ಹೊಲಗಳಲ್ಲಿ ಕಳೆನಾಶಕಗಳು ಮತ್ತು ಕೀಟನಾಶಕಗಳ ಅತಿಯಾದ ಬಳಕೆ ಇವೆಲ್ಲವೂ ನಮ್ಮ ಮನೆಗಳು, ತೋಟಗಳು ಮತ್ತು ಹಾಡುಗಳಿಂದ ಮನೆ ಗುಬ್ಬಚ್ಚಿಗಳ ಉಪಸ್ಥಿತಿ ಕಡಿಮೆಯಾಗಲು ಕಾರಣವಾಗಿದೆ" ಎನ್ನುತ್ತಾರವರು.
ಅವರ ಈ ಮಾತುಗಳಲ್ಲೇ ಭಾಷಾ ಮತ್ತು ಪರಿಸರ ವೈವಿಧ್ಯತೆಯ ನಡುವಿನ ಪ್ರಮುಖ ಸಂಬಂಧದ ಕುರಿತಾದ ವಿವರಗಳಿವೆ. ಇದರೊಂದಿಗೆ ಅವರು ಪಂಜಾಬಿ ಕವಿ ವಾರಿಶ್ ಷಾ ಅವರ ಒಂದೆರಡು ಸಾಲುಗಳನ್ನು ಉಲ್ಲೇಖಿಸಿ ಹೀಗೆನ್ನುತ್ತಾರೆ;
ಗುಬ್ಬಿಗಳು ಚಿಲಿಪಿಲಿಗುಟ್ಟುವ ಹೊತ್ತಿಗೆ ಹೊರಟು ಬಿಡುತ್ತಾರೆ
ಮುಸಾಫಿರರು,
ಅದೇ ಹೊತ್ತಿಗೆ ಎದ್ದು ಮಜ್ಜಿಗೆ ಕಡೆಯುತ್ತಾರೆ ಊರಿನ
ಮಹಿಳೆಯರು.
ಈ ಗುಬ್ಬಚ್ಚಿಗಳ ಚಿಲಿಪಿಲಿಯೊಂದಿಗೆ ರೈತರು ತಮ್ಮ ದಿನವನ್ನು ಆರಂಭಿಸುತ್ತಿದ್ದ ಕಾಲವೊಂದಿತ್ತು. ಹಾಗೆಯೇ ಪ್ರಾಯಣ ಹೊರಡುವವರು ಅವುಗಳ ಸದ್ದು ಕೇಳುತ್ತಿದ್ದಂತೆ ಎದ್ದು ಹೊರಡುತ್ತಿದ್ದರು. ಅವು ನಮ್ಮ ಪುಟ್ಟ ನೈಸರ್ಗಿಕ ಅಲಾರಂನಂತೆ ಕೆಲಸ ಮಾಡುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ನಾನು ಅವುಗಳ ದನಿಯನ್ನು ಅಲಾರಂ ಟೋನ್ ಆಗಿ ಇಟ್ಟುಕೊಂಡು ಅವುಗಳ ಸದ್ದನೊಂದಿಗೆ ಎಚ್ಚರಗೊಳ್ಳುತ್ತಿದ್ದೇನೆ. ಆಗೆಲ್ಲ ರೈತರು ಹಕ್ಕಿಗಳ ವರ್ತನೆಯನ್ನು ಕಂಡು ದಿನಮಾನವನ್ನು ಗುರುತಿಸುತ್ತಿದ್ದರು ಮತ್ತು ಅದನ್ನು ಆಧರಿಸಿ ತಮ್ಮ ಬೆಳೆ ಚಕ್ರವನ್ನು ಯೋಜಿಸುತ್ತಿದ್ದರು. ಅವು ಕೆಲವು ದಿಕ್ಕುಗಳಿಗೆ ರೆಕ್ಕೆ ಬೀಸಿದರೆ ಅದನ್ನು ಶುಭ ಶಕುನವೆಂದು ಭಾವಿಸಲಾಗುತ್ತಿತ್ತು - ಕಿಸಾನಿ ಕಾ ಶುಗುನ್.
ಗುಬ್ಬಚ್ಚಿ ತನ್ನ ರೆಕ್ಕೆ ಬಿಚ್ಚಿತೆಂದರೆ
ಇಂದು ಸ್ವರ್ಗದಿಂದ ಹನಿ ಸುರಿಯಲಿದೆಯೆಂದು ಅರ್ಥ.

ಗುಬ್ಬಚ್ಚಿಗಳು ಒಂದು ಕಾಲದಲ್ಲಿ ನಮ್ಮ ಮನೆಗಳು, ಹೊಲಗಳು ಮತ್ತು ಹಾಡುಗಳಲ್ಲಿ ವಾಡಿಕೆಯಂತೆ ಕಂಡುಬರುತ್ತಿದ್ದವು. ಅವುಗಳ ರೆಕ್ಕೆಗಳ ಚಲನೆ ಶುಭವಾಗಿತ್ತು - ಕಿಸಾನಿ ಕಾ ಶಗುನ್
ನಮ್ಮ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಗಮನಾರ್ಹ ಕುಸಿತವನ್ನು ನಾವು ಎದುರಿಸುತ್ತಿರುವ ಹೊತ್ತಿನಲ್ಲೇ, ಸಸ್ಯಗಳು, ಪ್ರಾಣಿಗಳು ಮತ್ತು ಪಕ್ಷಿಗಳು ಕಣ್ಮರೆಯಾಗುತ್ತಿರುವ ಬೃಹತ್ ಜೈವಿಕ ವಿನಾಶದ ಮಧ್ಯದಲ್ಲಿ ನಾವು ಬದುಕುತ್ತಿರುವುದು ಕೇವಲ ಕಾಕತಾಳೀಯವಲ್ಲ. 2010ರಲ್ಲಿ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾದ ನೇತ್ರತ್ವ ವಹಿಸಿದ್ದ ಡಾ. ಗಣೇಶ್ ದೇವಿಯವರು ಕಳೆದ 60 ವರ್ಷಗಳಲ್ಲಿ ಭಾರತದಲ್ಲಿ ಸುಮಾರು 250 ಭಾಷೆಗಳು ಸಾಯುತ್ತಿರುವ ಕುರಿತು ಆತಂಕ ವ್ಯಕ್ತಪಡಿಸುತ್ತಾರೆ.
ಪಂಜಾಬಿನಲ್ಲಿ ಗುಬ್ಬಚ್ಚಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಪಕ್ಷಿಶಾಸ್ತ್ರಜ್ಞರು ಧ್ವನಿ ಎತ್ತುತ್ತಿರುವ ಹೊತ್ತಿನಲ್ಲೇ ಕಮಲ್ಜಿತ್ ಮದುವೆಯ ಸಂದರ್ಭದಲ್ಲಿ ಹಾಡಲಾಗುವ ಜಾನಪದ ಗೀತೆಯೊಂದನ್ನು ನೆನಪಿಸಿಕೊಳ್ಳುತ್ತಾರೆ.
ಗುಬ್ಬಚ್ಚಿಗಳಂತೆಯೇ ನಾವು ಕೂಡಾ, ನಾವೂ ಕೂಡಾ,
ನಮ್ಮ ಗೂಡನ್ನು ತೊರೆಯಲೇಬೇಕು, ದೂರ ಹಾರಲೇಬೇಕು.
ನಮ್ಮ ಜಾನಪದ ಗೀತೆಗಳಲ್ಲಿ ಗುಬ್ಬಚ್ಚಿಗಳು ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯವಾಗಿತ್ತು. ಆದರೆ ಮುಂದೆ ಪರಿಸ್ಥಿತಿ ಹೀಗಿರುವುದಿಲ್ಲ” ಎನ್ನುತ್ತಾರವರು.
*****
ಕಣ್ಮರೆಯಾಗುತ್ತಿರುವ ಜೀವನೋಪಾಯಗಳು ಸಹ ಹವಾಮಾನ ಬಿಕ್ಕಟ್ಟು ಮತ್ತು ವಲಸೆಯಂತೆಯೇ ಭಾಷೆಯೊಂದಿಗೆ ಸಂಬಂಧ ಹೊಂದಿವೆ ಎಂದು ಪಂಕಜ್ ಹೇಳುತ್ತಾರೆ. "ಇತ್ತೀಚಿನ ದಿನಗಳಲ್ಲಿ ರಂಗಿಯಾ, ಗೋರೇಶ್ವರ್ ಮತ್ತು ಇತರ ಸ್ಥಳಗಳಲ್ಲಿನ ಮಾರುಕಟ್ಟೆಗಳು ಇತರ ರಾಜ್ಯಗಳಿಂದ ರಫ್ತಾಗುವ ಅಗ್ಗದ ಯಂತ್ರದಿಂದ ತಯಾರಿಸಿದ ಗಮೋಚಾಗಳು (ಸಾಂಪ್ರದಾಯಿಕವಾಗಿ ಟವೆಲ್, ಸ್ಕಾರ್ಫ್ ಅಥವಾ ಪೇಟವಾಗಿ ಬಳಸಲಾಗುವ ತೆಳುವಾದ, ಒರಟಾದ ಹತ್ತಿ ಬಟ್ಟೆ) ಮತ್ತು ಚಾದರ್-ಮೆಖೇಲಾ (ಮಹಿಳೆಯರ ಸಾಂಪ್ರದಾಯಿಕ ಹೊದಿಕೆ ಮತ್ತು ಸೊಂಟದ ಬಟ್ಟೆ) ಗಳಿಂದ ತುಂಬಿ ತುಳುಕುತ್ತಿವೆ. ಅಸ್ಸಾಂನಲ್ಲಿ ಸಾಂಪ್ರದಾಯಿಕ ಕೈಮಗ್ಗ ಉದ್ಯಮ ಸಾಯುತ್ತಿದೆ ಮತ್ತು ಅದರೊಂದಿಗೆ ನಮ್ಮ ಸ್ಥಳೀಯ ಉತ್ಪನ್ನಗಳು ಮತ್ತು ನೇಯ್ಗೆಗೆ ಸಂಬಂಧಿಸಿದ ಪದಗಳು ಸಹ ನಶಿಸುತ್ತಿವೆ" ಎಂದು ಅವರು ಹೇಳುತ್ತಾರೆ.
"ಅಸ್ಸಾಂನ ಭೆಹಬರಿ ಗ್ರಾಮದಲ್ಲಿ ಈಗಲೂ ಕೈಮಗ್ಗ ಬಳಸಿ ನೇಯ್ಗೆ ಕೆಲಸ ಮಾಡುತ್ತಾರೆ 72 ವರ್ಷದ ಅಕ್ಷಯ್ ದಾಸ್. ಅವರು ಹೇಳುವಂತೆ ಈ ಕೌಶಲ ಈಗ ಬಹುತೇಕ ನಶಿಸಿ ಹೋಗಿದೆ. ಯುವಕರು ಕೆಲಸಕ್ಕಾಗಿ ಹಳ್ಳಿಯಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಗುವಾಹಟಿಗೆ ವಲಸೆ ಹೋಗುತ್ತಾರೆ. ನೇಯ್ಗೆ ಸಂಪ್ರದಾಯದಿಂದ ದೂರವಿರುವ ಅವರಿಗೆ ಸೆರೆಕಿಯಂತಹ ಪದಗಳು ತಿಳಿದಿರುವುದಿಲ್ಲ." ಸೆರೆಕಿ ಎನ್ನುವುದು ಜೋಟಾರ್ ಎನ್ನುವ ನೂಲುವ ಚಕ್ರದ ಸಹಾಯದಿಂದ ಮೊಹುರಾ (ದಾರದುಂಡೆ) ನೂಲಿನ ಎಳೆ ತಯಾರಿಸುವ ಉಪಕರಣ.

ಸಾಂಪ್ರದಾಯಿಕ ನೇಯ್ಗೆ ಪದ್ಧತಿಯಿಂದ ದೂರವಿರುವ ಅಸ್ಸಾಂನ ಯುವ ಪೀಳಿಗೆಗೆ ಸೆರೆಕಿಯಂತಹ ಪದಗಳು ಅಥವಾ ನಾವು ಬಿಹು ಹಾಡನ್ನು ಹಾಡುವಾಗ 'ಸೆರೆಕಿಯಂತೆ ನೃತ್ಯ ಮಾಡುವುದು' ಎಂದರೇನು ಎಂದು ತಿಳಿದಿಲ್ಲ
ಈ ಕುರಿತಾಗಿ ಇರುವ“ಸೆರಕಿ ಘುರಡಿ ನಾಸ್ (ಸೆರಕಿಯಂತೆ ಕುಣಿ).ಎನ್ನುವ ಬಿಹು ಹಾಡೊಂದನ್ನು ಪಂಕಜ್ ನೆನಪಿಸಿಕೊಳ್ಳುತ್ತಾರೆ, ಅದನ್ನು ಬಳಸುವ ಸಂದರ್ಭವೇ ಇಲ್ಲದೆ ಹೋದರೆ ಯುವಕರು ಆ ಪದವನ್ನು ಕಲಿತು ಮಾಡುವುದೇನಿದೆ? ಎಂದು ಕೇಳುತ್ತಾರೆ ಅಕ್ಷಯ್ ದಾಸ್ ಅವರ 67 ವರ್ಷದ ಅತ್ತಿಗೆ ಬಿಲಾಟಿ ದಾಸ್ (ಅಣ್ಣ ದಿವಂಗತ ನಾರಾಯಣ್ ದಾಸ್ ಅವರ ಪತ್ನಿ). ಅವರು ಒಂದು ಹಾಡನ್ನು ಸಹ ಗುನುಗಿದರು.
ಟೆಟೆಲಿರ್ ಟೊಲೊಟೆ, ಕಪುರ್ ಬೋಯಿ ಅಸಿಲೊ, ಸೊರಾಯಿಯೇ
ಸಿಗಿಲೆ ಶೂಟಾ
ಹುಣಸೆ ಮರದಡಿ ಕುಳಿತು ಬಟ್ಟೆ ನೇಯುತ್ತಿದ್ದೆ. ಹಕ್ಕಿಗಳು
ಬಂದು ದಾರ ಹರಿದವು.
ಅವರು ವಾರ್ಪ್‌ಗಳನ್ನು ನೇಯ್ಗೆ ಮಾಡುವ ಪ್ರಕ್ರಿಯೆಯನ್ನು ನನಗೆ ವಿವರಿಸಿದರು ಮತ್ತು ಹೊಸ ಉಪಕರಣಗಳು ಮತ್ತು ಯಂತ್ರಗಳು ಮಾರುಕಟ್ಟೆಗೆ ಪ್ರವಾಹದಂತೆ ಬರುತ್ತಿವೆ. ಇದರಿಂದಾಗಿ ಅನೇಕ ಸ್ಥಳೀಯ ಉಪಕರಣಗಳು ಮತ್ತು ತಂತ್ರಗಳು ಕಳೆದುಹೋಗುತ್ತಿವೆ.
*****
“ನಾವು ಸರ್ವನಾಶದ ತಂತ್ರಜ್ಞಾನದತ್ತ ಹೆಜ್ಜೆಯಿಡುತ್ತಿದ್ದೇವೆ” ಎನ್ನುತ್ತಾ ಅನೂಹ್ಯವಾಗಿ ನಕ್ಕರು ನಿರ್ಮಲ್
"ಇತ್ತೀಚೆಗೆ, ನಾನು ಛತ್ತೀಸಗಢದ ನನ್ನ ಊರಾದ ಪತಂಡದಾರ್ ಎನ್ನುವಲ್ಲಿ ಒಂದು ರೀತಿಯ ದಂಡಯಾತ್ರೆಗೆ ಹೋಗಿದ್ದೆ" ಎಂದು ನಿರ್ಮಲ್ ತನ್ನ ಕಥೆಯನ್ನು ಹೇಳಲು ಪ್ರಾರಂಭಿಸಿದರು. "ನಮ್ಮ ಮನೆಯಲ್ಲಿ ಆಯೋಜಿಸಲಾಗಿದ್ದ ಪೂಜೆಗಾಗಿ ನಾನು ದೂಬ್ (ಗರಿಕೆ) ಹುಡುಕುತ್ತಿದ್ದೆ. ಮೊದಲು ಹಿತ್ತಲಿನಲ್ಲಿರುವ ಕೈತೋಟಕ್ಕೆ ಹೋದೆ ಆದರೆ ಅಲ್ಲಿ ಒಂದೇ ಒಂದು ತುಂಡು ದೂಬ್ ಸಿಗಲಿಲ್ಲ. ಕೊನೆಗೆ ಅದನ್ನು ಹುಡುಕಿಕೊಂಡು ಹೊಲದ ಕಡೆ ನಡೆದೆ.
"ಅದು ಕೊಯ್ಲಿಗೆ ಕೆಲವು ತಿಂಗಳುಗಳು ಬಾಕಿಯಿದ್ದ ಸಮಯ. ಎಳೆಯ ಭತ್ತದ ಸಸಿಗಳು ತೆನೆಯಲ್ಲಿ ಸಿಹಿಯಾದ ಹಾಲು ತುಂಬಿಕೊಂಡು ನಿಂತಿರುತ್ತವೆ. ಈ ಸಮಯದಲ್ಲಿ ರೈತರು ಪೂಜೆ ಸಲ್ಲಿಸಲೆಂದ ತಮ್ಮ ಹೊಲಗಳಿಗೆ ಬರುತ್ತಾರೆ. ಅವರು ಸಹ ಪೂಜೆಗೆ ಅದೇ ಪವಿತ್ರ ಹುಲ್ಲನ್ನು ಬಳಸುತ್ತಾರೆ. ನಾನು ಹೊಲಗಳ ಗುಂಟ ನಡೆದೆ, ಆದರೆ ನನ್ನ ಪಾದಗಳಿಗೆ ಮೆತ್ತನೆ ಅನುಭವ ನೀಡಬೇಕಿದ್ದ ಹುಲ್ಲಿನ ಹಾಸು ಒಣಗಿ ಕುಳಿತಿತ್ತು. ಗರಿಕೆ, ಸಾಮಾನ್ಯ ಹುಲ್ಲು, ಕಾಂಡಿ (ಹಸಿರು ಮೇವು) ಎಲ್ಲವೂ ಒಣಗಿದ್ದವು. ಅವುಗಳ ಗರಿಗಳು ಸುಟ್ಟು ಹೋದಂತಿದ್ದವು.
“ನಾನು ಗದ್ದೆಯ ಬಳಿಯಿದ್ದ ರೈತರೊಬ್ಬರ ಬಳಿ ಇದೇಕೆ ಹೀಗೆ ಎಂದು ಪ್ರಶ್ನಿಸಿದಾಗ ಅವರು “ಸರ್ವನಾಶ್ ಡಾಲಾ ಗಯಾ ಹೈಇಸ್ಲಿಯೇ [ಸರ್ವನಾಶವನ್ನು ಹಾಕಲಾಗಿದೆ ಹೀಗಾಗಿ]” ಎಂದರು. ಅವರು ಕಳೆನಾಶಕವೊಂದರ ಹೆಸರಿನ ಕುರಿತು ಹೇಳುತ್ತಿದ್ದಾರೆನ್ನುವುದು ಅರ್ಥವಾಗಲು ನನಗೆ ಬಹಳ ಹೊತ್ತು ಬೇಕಾಯಿತು. ನಾವು ಸಾಮಾನ್ಯವಾಗಿ ಕಳೆನಾಶಕಕ್ಕೆ ಛತ್ತೀಸಗಢಿ ಭಾಷೆಯಲ್ಲಿ ನಿಂದಾ ನಾಶಕ್ ಎನ್ನುತ್ತೇವೆ ಅವರು ಅದನ್ನು ಹೇಳಿರದ ಕಾರಣ ನನಗೆ ಗೊಂದಲವಾಯಿತು. ನಾವು ಕೆಲವೊಮ್ಮೆ ಮಾತನಾಡುವಾಗ ಬಳಸುವ ಭಾಷೆಯಾದ ಒಡಿಯಾದಲ್ಲಿ ಅವರು ಘಾಸ್ ಮಾರಾ ಎಂದಿದ್ದರೂ ನನಗೆ ಅರ್ಥವಾಗುತ್ತಿತ್ತು. ಹೋಗಲಿ ಅವರು ಇಲ್ಲಿನ ಕೆಲವು ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಬಳಸಲಾಗುವ ಖರ್ಪತ್ವಾರ್ ನಾಶಕ್ ಅಥವಾ ಚಾರ್‌ಮಾರ್ ಎಂದಿದ್ದರೂ ನನಗೆ ಅರ್ಥವಾಗುತ್ತಿತ್ತು. ಆದರೆ ಇದೆಲ್ಲ ಪದಗಳ ಸ್ಥಾನಕ್ಕೆ ಈ ಸರ್ವನಾಶ ಬಂದು ಕುಳಿತಿತ್ತು.


ಕೀಟನಾಶಕಗಳು, ರಾಸಾಯನಿಕ ಗೊಬ್ಬರಗಳು ಮತ್ತು ತಂತ್ರಜ್ಞಾನಗಳ ಹೆಚ್ಚುತ್ತಿರುವ ಬಳಕೆಯು ಕೃಷಿಯಲ್ಲಿ ಪ್ರಾಬಲ್ಯ ಸಾಧಿಸಿದೆ, ಕರ್ನಾಟಕದ ಕಿರುಗಾವಲುವಿನ ಸೈಯದ್ ಘನಿ ಖಾನ್ ಅವರಂತಹ ರೈತರು ಸಂರಕ್ಷಿಸಲು ಪ್ರಯತ್ನಿಸುತ್ತಿರುವ ಭಾರತದ ಶ್ರೀಮಂತ ವೈವಿಧ್ಯತೆಯನ್ನು ನಾಶಪಡಿಸುತ್ತಿದೆ. ಅವರ ಮನೆಯ ಗೋಡೆಗಳು (ಬಲ) ಭತ್ತದ ತೆನೆಗಳಿಂದ ಕೂಡಿದ್ದು, ಪ್ರತಿಯೊಂದು ಪ್ರಭೇದದ ಬಗ್ಗೆ ವಿವರಗಳನ್ನು ಹೊಂದಿವೆ. ಕೃಷಿ ವೈವಿಧ್ಯತೆಯ ನಷ್ಟವು ಭಾಷಾ ವೈವಿಧ್ಯತೆಯ ನಷ್ಟದೊಂದಿಗೆ ಸಂಬಂಧ ಹೊಂದಿದೆ ಎಂದು ನೋಡಬಹುದು
ಭೂಮಿಯ ಪ್ರತಿ ಇಂಚನ್ನು ಬಳಸಿಕೊಳ್ಳುವ ಮತ್ತು ಅದನ್ನು ನಮ್ಮ ಸ್ವಂತ ಉಳಿವಿಗಾಗಿ ಉತ್ಪಾದಕ ಕ್ಷೇತ್ರವಾಗಿ ಪರಿವರ್ತಿಸುವ ಮಾನವ ಕೇಂದ್ರಿತ ತರ್ಕವು ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮತ್ತು ತಂತ್ರಜ್ಞಾನಗಳು ಕೃಷಿಯಲ್ಲಿ ಪ್ರಾಬಲ್ಯ ಸಾಧಿಸಲು ಕಾರಣವಾಗಿದೆ. ಕೇವಲ ಒಂದು ಎಕರೆ ಭೂಮಿಯನ್ನು ಹೊಂದಿರುವ ರೈತ ಕೂಡ ಸಾಂಪ್ರದಾಯಿಕ ಉಪಕರಣಗಳನ್ನು ಬಳಸುವುದಕ್ಕಿಂತ ಟ್ರ್ಯಾಕ್ಟರ್ ಬಾಡಿಗೆಗೆ ಪಡೆಯುವ ಸಾಧ್ಯತೆಯಿದೆ ಎಂದು ನಿರ್ಮಲ್ ಹೇಳುತ್ತಾರೆ.
"ಕೊಳವೆ ಬಾವಿಗಳು ಹಗಲು ರಾತ್ರಿ ನೀರನ್ನು ಪಂಪ್ ಮಾಡುತ್ತಾ ಭೂಮಿ ತಾಯಿಯನ್ನು ಬರಡಾಗಿ ಮಾಡುತ್ತಿವೆ. ಮಾಟಿ ಮಹತಾರಿ, ಅವಳ ಗರ್ಭಕ್ಕೆ (ಮೇಲ್ಮಣ್ಣು) ಪ್ರತಿ 6 ತಿಂಗಳಿಗೊಮ್ಮೆ ಗರ್ಭಧರಿಸುವಂತೆ ಒತ್ತಾಯಿಸಲಾಗುತ್ತಿದೆ" ಎಂದು ಅವರು ದುಃಖದ ಧ್ವನಿಯಲ್ಲಿ ಹೇಳುತ್ತಾರೆ. 'ಸರ್ವನಾಶ'ದಂತಹ ವಿಷಕಾರಿ ರಾಸಾಯನಿಕಗಳನ್ನು ಅವಳು ಎಷ್ಟು ದಿನ ಸಹಿಸಬಲ್ಲಳು? ವಿಷ ತುಂಬಿದ ಬೆಳೆಗಳು ಮಾನವ ರಕ್ತಕ್ಕೆ ಸೇರುತ್ತವೆ. ನಮ್ಮದೇ ಸರ್ವನಾಶದ ದಿನಗಳು ನನ್ನ ಕಣ್ಣ ಮುಂದೆ ಬರುತ್ತಿದೆ!
"ಭಾಷೆಯ ಬಗ್ಗೆ ಹೇಳುವುದಾದರೆ, ಮಧ್ಯವಯಸ್ಕ ರೈತರೊಬ್ಬರು ಒಮ್ಮೆ ನನಗೆ ಹೇಳಿದರು, ನಾಗರ್ (ನೇಗಿಲು), ಬಖರ್ (ಕಳೆ ತೆಗೆಯುವ ಸಾಧನ), ಕೋಪರ್ (ಮಣ್ಣಿನ ಉಂಡೆಗಳನ್ನು ಒಡೆಯಲು ಬಳಸುವ ಮರದ ಕೋಲು) ಇವುಗಳ ಹೆಸರುಗಳು ಸಹ ಈಗಿನವರಿಗೆ ತಿಳಿದಿಲ್ಲ. ಮತ್ತು ದೌನ್ರಿ ಬೇಲನ್ (ರೋಣಗಲ್ಲು) ಸಂಪೂರ್ಣವಾಗಿ ಮರೆಯಾಗಿ ಹೋಗಿದೆ."
“ನಮ್ಮ ಮೇಟಿಕಂಬ ಮರೆಯಾದಂತೆ” ಎನ್ನುತ್ತಾರೆ ಶಂಕರ್.
“ನಮ್ಮ ಮನೆಯಲ್ಲಿ ಮೇಟಿಕಂಬ ಇದ್ದ ದಿನಗಳು ನನಗೆ ನೆನಪಿದೆ. ಕರ್ನಾಟಕದ ಉಡುಪಿ ಜಿಲ್ಲೆ ವಂಡ್ಸೆ ಗ್ರಾಮದ ನಮ್ಮ ಊರಿನ ಮನೆಯಲ್ಲಿ ಈ ಕಂಬವಿತ್ತು. ಅದೊಂದು ಕೃಷಿಗೆ ಸಂಬಧಿಸಿದ ಕಂಬವಾಗಿತ್ತು. ಇದಕ್ಕೆ ಹಡಿಮಂಚವೆನ್ನುವ ಮಂಚವೊಂದನ್ನು ಕಟ್ಟಿ ಅದಕ್ಕೆ ಭತ್ತದ ಹುಲ್ಲನ್ನು ಬಡಿದು ಹುಲ್ಲಿನಿಂದ ಭತ್ತವನ್ನು ಬೇರ್ಪಡಿಸಲಾಗುತ್ತಿತ್ತು. ಅದೇ ಕಂಬಕ್ಕೆ ಎತ್ತು, ದನ, ಕಡಸುಗಳನ್ನು ಕಟ್ಟಿ ಉದರು ಹುಲ್ಲನ್ನು ಅವುಗಳಿಂದ ತುಳಿಸಿ ಅದರಿಂದ ಭತ್ತವನ್ನು ಬೇರ್ಪಡಿಸಲಾಗುತ್ತಿತ್ತು. ಈಗ ಆ ಕಂಬ ಬರೀ ನೆನಪು ಮಾತ್ರ. ಈಗ ಅದರ ಜಾಗಕ್ಕೆ ಬಹಳ ಸುಲಭವಾಗಿ ಕೊಯ್ಲು ಮುಗಿಸಿ ಭತ್ತವನ್ನು ಬಿಡಿಸಿಕೊಡಬಲ್ಲ ಯಂತ್ರಗಳು ಬಂದಿವೆ” ಎನ್ನುತ್ತಾರೆ ಶಂಕರ್.
“ಆಗಿನ ಕಾಲಕ್ಕೆ ಮನೆಯ ಮುಂದೆ ಮೇಟಿಕಂಬವಿದ್ದರೆ ಅದೊಂದು ಪ್ರತಿಷ್ಟೆಯಾಗಿತ್ತು. ಅದು ಕೃಷಿಕ ಕುಟುಂಬದ ಗುರುತಾಗಿತ್ತು. ಅದಕ್ಕೆ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸಲಾಗುತ್ತಿತ್ತು. ಜೊತೆಗೆ ಅಂದು ವಿಶೇಷ ಅಡುಗೆಯೂ ಇರುತ್ತಿತ್ತು. ಈಗ ಅದು ಕೂಡಾ ಕೇವಲ ನೆನಪು.”
*****
“ಭೋಜಪುರಿ ಭಾಷೆಯಲ್ಲೊಂದು ಹಾಡಿದೆ” ಎಂದು ನೆನಪಿಸಿಕೊಂಡವರು ಸ್ವರ್ಣಕಾಂತ. “ಹರ್ದಿ ಹರ್ದಪುರ್ ಜೈಹಾ ಇ ಬಾಬಾ, ಸೋನೇ ಕೇ ಕುಡಾಲಿ ಹರ್ದಿ ಕೋರಿಹ್ ಇ ಬಾಬಾ (ಅಪ್ಪ ನನಗೆ ಹರ್ದಪುರದ ಅರಿಶಿನ ತಂದು ಕೊಡಿ, ಚಿನ್ನದ ಸನಿಕೆ ಬಳಸಿ ಅರಿಶಿನ ಅಗೆಯಿರಿ.) ಭೋಜಪುರಿ ಮಾತನಾಡುವ ಪ್ರದೇಶಗಳಲ್ಲಿನ ಮದುವೆಗಳಲ್ಲಿ ಉಬ್ತಾನ್ (ಅರಿಶಿನ ಪೇಸ್ಟ್ ಹಚ್ಚುವಿಕೆ) ಸಮಾರಂಭದಲ್ಲಿ ಇದನ್ನು ಹಾಡಲಾಗುತ್ತಿತ್ತು. ಈ ಹಿಂದೆ, ಜನರು ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ಜಂಟಾ (ಬೀಸುಕಲ್ಲು) ಬಳಸಿ ಅರಿಶಿನವನ್ನು ಪುಡಿ ಮಾಡುತ್ತಿದ್ದರು. ಈಗ ಅವರ ಮನೆಗಳಲ್ಲಿ ಬೀಸುಕಲ್ಲುಗಳಿಲ್ಲ, ಮತ್ತು ಆಚರಣೆಯೂ ನಿಂತು ಹೋಗಿದೆ.
![In Bhojpuri they sing a song during ubtan (haldi) ceremony in a wedding, 'hardi hardpur jaiha e baba, sone ke kudaali hardi korih e baba, [ father, please bring me turmeric from Hardpur, dig the turmeric up with a golden spade ]](/media/images/09-_AMI5958-PBT-Words-worlds_in_a_grain_of.max-1400x1120.jpg)
ಭೋಜ್ಪುರಿಯಲ್ಲಿ ಮದುವೆಯ ಉಬ್ತಾನ್ (ಹಲ್ದಿ) ಸಮಾರಂಭದಲ್ಲಿ ಒಂದು ಹಾಡನ್ನು ಹಾಡುತ್ತಾರೆ, 'ಹರ್ದಿ ಹರ್ದಪುರ್ ಜೈಹಾ ಇ ಬಾಬಾ, ಸೋನೇ ಕೇ ಕುಡಾಲಿ ಹರ್ದಿ ಕೋರಿಹ್ ಇ ಬಾಬಾ (ಅಪ್ಪ ನನಗೆ ಹರ್ದಪುರದ ಅರಿಶಿನ ತಂದು ಕೊಡಿ, ಚಿನ್ನದ ಸನಿಕೆ ಬಳಸಿ ಅರಿಶಿನ ಅಗೆಯಿರಿ)'


ಸಿಲಾಟ್ (ಚಪ್ಪಟೆ ರುಬ್ಬುವ ಕಲ್ಲು), ಲೋಧಾ (ಒಂದು ರೀತಿಯ ಕುಟ್ಟಾಣಿ), ಖಾಲ್-ಮೂಸಲ್ (ಒರಳು ಮತ್ತು ಕುಟ್ಟಾಣಿ) ಈಗಿನ ಆಧುನಿಕ ಅಡುಗೆಮನೆಗಳಲ್ಲಿ ಅಥವಾ ನಮ್ಮ ಹಾಡುಗಳಲ್ಲಿ ಕಂಡುಬರುವುದಿಲ್ಲ
"ಇನ್ನೊಂದು ದಿನ ನನ್ನ ದೂರದ ಸೋದರಸಂಬಂಧಿಯ ಹೆಂಡತಿ ಮತ್ತು ನಾನು ಉಬ್ತಾನ್-ಹಾಡಿಗೆ ಸಂಬಂಧಿಸಿದ ಹಲವಾರು ಭೋಜಪುರಿ ಪದಗಳನ್ನು ಗಮನಿಸುತ್ತಿದ್ದೆವು - ಕೊಡಾಲ್ (ಸನಿಕೆ), ಕೊರ್ನಾ (ಅಗೆಯುವುದು), ಉಬ್ತಾನ್ (ಅರಿಶಿನದಿಂದ ಸ್ನಾನ ಮಾಡುವುದು), ಸಿನ್ಹೋರಾ (ಕುಂಕುಮ-ಪೆಟ್ಟಿಗೆ), ದೂಬ್ (ಗರಿಕೆ ಹುಲ್ಲು) ಇವೆಲ್ಲ ಪದಗಳೂ ಜನರ ಬದುಕಿನಿಂದ ಹೊರಟು ಹೋಗಿವೆ. ಸಿಲಾಟ್ (ಚಪ್ಪಟೆ ರುಬ್ಬುವ ಕಲ್ಲು) , ಲೋಧಾ (ಒಂದು ರೀತಿಯ ಕುಟ್ಟಾಣಿ), ಖಾಲ್-ಮೂಸಲ್ (ಒರಳು ಮತ್ತು ಕುಟ್ಟಾಣಿ) ಈಗಿನ ಆಧುನಿಕ ಅಡುಗೆಮನೆಗಳಲ್ಲಿ ಅಥವಾ ನಮ್ಮ ಹಾಡುಗಳಲ್ಲಿ ಕಂಡುಬರುವುದಿಲ್ಲ. ನಗರ ಭಾರತದಲ್ಲಿನ ಸಾಂಸ್ಕೃತಿಕ ನಷ್ಟದ ಬಗ್ಗೆ ಸ್ವರ್ಣ ಕಾಂತಾ ಮಾತನಾಡುತ್ತಿದ್ದರು.
*****
ನಾವೆಲ್ಲರೂ ನಮ್ಮದೇ ಆದ ವಿಭಿನ್ನ ಮತ್ತು ವ್ಯಕ್ತಿನಿಷ್ಠ ಪ್ರಾದೇಶಿಕ, ಸಾಂಸ್ಕೃತಿಕ, ವರ್ಗ ಸ್ಥಳಗಳಿಂದ ಮಾತನಾಡುತ್ತಿದ್ದೆವು. ಆದರೂ ನಾವೆಲ್ಲರೂ ಒಂದೇ ರೀತಿಯಲ್ಲಿ ಪದಗಳ ನಷ್ಟ ಮತ್ತು ಅವುಗಳ ಕುಗ್ಗುತ್ತಿರುವ ಅರ್ಥಗಳ ಬಗ್ಗೆ ಚಿಂತಿತರಾಗಿದ್ದೆವು, ಅವು ನಮ್ಮ ಬೇರುಗಳೊಂದಿಗೆ, ಪರಿಸರದೊಂದಿಗೆ, ಪ್ರಕೃತಿಯೊಂದಿಗೆ, ನಮ್ಮ ಹಳ್ಳಿಗಳೊಂದಿಗೆ, ನಮ್ಮ ಕಾಡುಗಳೊಂದಿಗೆ ನಮ್ಮ ದುರ್ಬಲ ಸಂಬಂಧದೊಂದಿಗೆ ಬೆರೆತಿದ್ದವು. ಎಲ್ಲೋ ಒಂದು ಕಡೆ ನಾವು ಪ್ರಗತಿಯೆನ್ನುವ ವಿಭಿನ್ನ ಆಟವನ್ನು ಆಡಲು ಪ್ರಾರಂಭಿಸಿದ್ದೆವು.
ಆಟಗಳ ಬಗ್ಗೆ ಮಾತನಾಡುತ್ತಲೇ, ಅವರು ಸಹ ಸಮಯದೊಂದಿಗೆ ಕಳೆದುಹೋಗಿದ್ದರು. ಸುಧಾಮಯಿ ಮತ್ತು ದೇವೇಶ್ ನಿಖರವಾಗಿ ಅದರ ಕುರಿತಾದ ಸಂಭಾಷಣೆಯಲ್ಲಿ ಮುಳುಗಿದ್ದರು. "ಈಗಿನ ಮಕ್ಕಳಿಗೆ ಗೊತ್ತೇ ಇಲ್ಲ ಆಟಗಳ ಬಗ್ಗೆ ಕೇಳಿದರೆ ನಾನು ನಿಮಗೆ ಒಂದು ದೊಡ್ಡ ಪಟ್ಟಿಯನ್ನೇ ಕೊಡಬಲ್ಲೆ - ಗಚ್ಚಕಾಯಲು ಅಥವಾ ವಲ್ಲಂಚಿ – ಈ ಆಟದಲ್ಲಿ ಕಲ್ಲುಗಳನ್ನು ಗಾಳಿಯಲ್ಲಿ ಎಸೆದು ಅಂಗೈಯ ಹಿಂಭಾಗದಲ್ಲಿ ಹಿಡಿಯಲಾಗುತ್ತದೆ; ಓಮನಗುಂಟಾಲು, ಇದನ್ನು ಕವಡೆಗಳು ಅಥವಾ ಹುಣಸೆ ಬೀಜಗಳು ಬಳಸಿ ಹದಿನಾಲ್ಕುಗುಂಡಿಗಳ ಎರಡು ಸಾಲಿನ ಮಣೆಯಲ್ಲಿ ಆಡಲಾಗುತ್ತದೆ, ಕಲ್ಲಗಂಟಾಲು, ಕಣ್ಣಾಮುಚ್ಚಾಲೆ ಆಟ ಮತ್ತು ಇನ್ನೂ ಅನೇಕ ಆಟಗಳಿವೆ" ಎಂದು ಅವರು ಹೇಳುತ್ತಾರೆ.
"ನನ್ನ ಬಳಿ 'ಸತೀಲೋ' (ಲಗೋರಿ) ರೀತಿಯ ಆಟಗಳಿಗೆ ಸಂಬಂಧಿಸಿದ ನೆನಪುಗಳಿವೆ" ಎಂದು ದೇವೇಶ್ ಹೇಳುತ್ತಾರೆ. ಈ ಆಟದಲ್ಲಿ ಎರಡು ತಂಡಗಳಿರುತ್ತವೆ ಮತ್ತು ಏಳು ಕಲ್ಲುಗಳನ್ನು ಒಂದರ ಮೇಲೊಂದರಂತೆ ಪೇರಿಸಿಡಲಾಗುತ್ತದೆ. ಈ ಆಟದಲ್ಲಿ ಒಂದು ತಂಡವು ಕಲ್ಲಿನ ಗೋಪುರವನ್ನು ಉರುಳಿಸಲು ಗುರಿಯಿಟ್ಟು ಚೆಂಡನ್ನು ಎಸೆಯುತ್ತದೆ, ಮತ್ತು ಇನ್ನೊಂದು ತಂಡವು ಔಟ್ ಆಗದೆ ಅದನ್ನು ಪುನರ್ನಿರ್ಮಿಸಬೇಕು. ಕೆಲವೊಮ್ಮೆ ನಾವು ಹುಡುಗರು ಬೇಸರಗೊಂಡಾಗ, ನಾವು 'ಗೇನಾ ಭಡ್ಭಾಡ್' ಎಂಬ ಆಟವನ್ನು ಆಡುತ್ತಿದ್ದೆವು. ಇದರಲ್ಲಿ ಅಂತಿಮ ಗುರಿ ಇದ್ದಿರಲಿಲ್ಲ, ತಂಡಗಳು ಸಹ ಇರುತ್ತಿರಲಿಲ್ಲ. ಇದರಲ್ಲಿ ಒಬ್ಬರಿಗೊಬ್ಬರು ಗುರಿಯಿಟ್ಟು ಚೆಂಡಿನಿಂದ ಹೊಡೆದುಕೊಳ್ಳುತ್ತಿದ್ದೆವು! ಇದನ್ನು ಆಡುವುದರಿಂದ ಗಾಯಗೊಳ್ಳುವ ಸಾಧ್ಯತೆಯೂ ಇತ್ತು, ಹೀಗಾಗಿ ಇದನ್ನು ಗಂಡುಮಕ್ಕಳ ಆಟ' ಎಂದು ಕರೆಯಲಾಗುತ್ತಿತ್ತು. ಹುಡುಗಿಯರು ಗೇನಾ ಭಡ್ಭಾಡ್ ಆಡುತ್ತಿರಲಿಲ್ಲ."
“ನಾನು ಮೇಲೆ ಹೇಳಿದ ಆಟಗಳಲ್ಲಿ ಒಂದನ್ನೂ ಆಡಿಲ್ಲ” ಎನ್ನುತ್ತಾರೆ ಸುಧಾಮಯಿ. "ನನ್ನ ತಾಯಿಯ ಅಮ್ಮ ಗಜುಲವರ್ತಿ ಸತ್ಯ ವೇದಂ ಅವರಿಂದ ಅವುಗಳ ಬಗ್ಗೆ ಕೇಳಿದ್ದು ಮಾತ್ರ ನನಗೆ ನೆನಪಿದೆ. ಅವರು ಕೊಲಕಾಲೂರಿನ ನನ್ನ ಊರಿನಿಂದ ಸುಮಾರು 17 ಕಿಲೋಮೀಟರ್ ದೂರದಲ್ಲಿರುವ ಚಿನಗಡೆಲವರ್ರು ಎಂಬ ಸ್ಥಳದವರು. ಅವರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ ಆದರೆ ನನಗೆ ಟ ಮಾಡಿಸುವಾಗ ಅಥವಾ ಮಲಗಿಸುವಾಗ ಈ ಆಟಗಳ ಬಗ್ಗೆ ಅವರು ಹೇಳುತ್ತಿದ್ದ ಅವರದೇ ಬದುಕಿ ಕತೆಗಳು ನೆನಪಿವೆ. ನನಗೆ ಆಡಲು ಸಾಧ್ಯವಾಗಲಿಲ್ಲ, ಆಗ ನನಗೆ ಶಾಲೆಗೆ ಹೋಗುವುದಕ್ಕಿರುತ್ತಿತ್ತು!"
"ನಮ್ಮ ಕಡೆಯ ಹುಡುಗಿಯರು ಕಲ್ಲಿನ ಚೂರುಗಳನ್ನು ಬಳಸಿ 'ಗುಟ್ಟೆ' ಆಡುತ್ತಿದ್ದರು" ಅಥವಾ 'ಬಿಶ್-ಅಮೃತ್' (ವಿಷ-ಅಮೃತ) - ಇತರ ತಂಡವನ್ನು ಹಿಡಿಯುವುದು ಅಥವಾ ಉಳಿಸುವುದು ಇದರ ಗುರಿಯಾಗಿತ್ತು ಎಂದು ದೇವೇಶ್ ಹೇಳುತ್ತಾರೆ. 'ಲಂಗ್ಡಿ ಟಾಂಗ್' (ಕುಂಟಾಬಿಲ್ಲೆ) ಎಂಬ ಆಟವೂ ನನಗೆ ನೆನಪಿದೆ, ಇದರಲ್ಲಿ ಆಟಗಾರರು ನೆಲದ ಮೇಲೆ ಎಳೆಯಲಾದ ಒಂಬತ್ತು ಚೌಕಗಳ ಒಳಗೆ ಕುಂಟು ಕಾಲಿನಲ್ಲಿ ಆಡುತ್ತಿದ್ದರು.
“ಆಗಿನ ಮಕ್ಕಳು ಕೈಯಲ್ಲಿ ಡಿಜಿಟಲ್ ಉಪಕರಣಗಳನ್ನು ಹಿಡಿದು ಆಡುತ್ತಿರಲಿಲ್ಲ. ಈ ಉಪಕರಣಗಳು ಇಂದಿನ ಮಕ್ಕಳ ಬಾಲ್ಯ ಮತ್ತು ಭಾಷೆ ಎರಡನ್ನೂ ಕಸಿದುಕೊಂಡಿವೆ. ಇಂದು ಬಖಿರಾದಲ್ಲಿರುವ ನನ್ನ 5 ವರ್ಷದ ಸೋದರಳಿಯ ಹರ್ಷಿತ್, ಗೋರಖ್ಪುರದ ನನ್ನ ಸೋದರ ಸೊಸೆ 6 ವರ್ಷದ ಭೈರವಿಗೆ ಈ ಆಟಗಳ ಹೆಸರುಗಳು ಸಹ ತಿಳಿದಿಲ್ಲ" ಎಂದು ದೇವೇಶ್ ಹೇಳುತ್ತಾರೆ.

ದೇವೇಶ್ ಬಾಲ್ಯದಲ್ಲಿ ಸತೀಲೋ ಆಡಿದ ಸ್ಪಷ್ಟ ನೆನಪನ್ನು ಹೊಂದಿದ್ದಾರೆ, ಆದರೆ ಇಂದು ಅವರ ಸೋದರ ಸೊಸೆ ಮತ್ತು ಸೋದರಳಿಯನಿಗೆ ಆಟದ ಹೆಸರು ಸಹ ತಿಳಿದಿಲ್ಲ

ಛತ್ತೀಸ್ ಗಢದ ಕಿವೈಬಲೆಗಾ ಗ್ರಾಮದಲ್ಲಿ ಕುದುರೆ ಸವಾರಿ ಆಡುತ್ತಿರುವ ಯುವಕರು. ಈ ಆಟವನ್ನು ಹಲ್ಬಿ ಮತ್ತು ಗೊಂಡಿ ಭಾಷೆಗಳಲ್ಲಿ ಘೋಡೊಂಡಿ ಎಂದು ಕರೆಯಲಾಗುತ್ತದೆ
*****
ಆದರೆ ಸ್ವಲ್ಪ ಪ್ರಮಾಣದ ನಷ್ಟ ಅನಿವಾರ್ಯ, ಅಲ್ಲವೇ? ಪ್ರಣತಿ ತನ್ನ ಮನಸ್ಸಿನಲ್ಲಿ ಚರ್ಚಿಸುತ್ತಲೇ ಇದ್ದರು. ಕೆಲವು ಕ್ಷೇತ್ರಗಳಲ್ಲಿನ ಬದಲಾವಣೆಗಳು ಸ್ವಯಂಚಾಲಿತವಾಗಿ ನಮ್ಮ ಭಾಷೆಯನ್ನು ಬದಲಾಯಿಸುವುದಿಲ್ಲವೇ? ವೈಜ್ಞಾನಿಕ ಜ್ಞಾನದ ತ್ವರಿತ ಪ್ರಗತಿ, ಉದಾಹರಣೆಗೆ, ಹಲವಾರು ರೋಗಗಳು, ಅವುಗಳ ಕಾರಣಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ, ಜನರಲ್ಲಿ ಆ ಜಾಗೃತಿಯ ಹರಡುವಿಕೆಯು ಅವರು ಅವುಗಳನ್ನು ನೋಡುವ ವಿಧಾನವನ್ನು ಬದಲಾಯಿಸುತ್ತದೆ.
"ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ರೋಗಗಳಿಗೆ ಬೇರೆ ಬೇರೆ ಹೆಸರುಗಳಿದ್ದವು. ಸಿಡುಬು ಬಡಿ ಮಾ ಆಗಿದ್ದರೆ; ಚಿಕನ್ ಫಾಕ್ಸ್ ಚೋಟಿ ಮಾ ಆಗಿತ್ತು; ಅತಿಸಾರವು ಬಡಿ, ಹೈಜಾ ಅಥವಾ ಅಮಾಶಯ್ ಆಗಿತ್ತು; ಟೈಫಾಯಿಡ್ ಆಂತ್ರಿಕಾ ಜ್ವರ್ ಎನ್ನುವ ಹೆಸರನ್ನು ಹೊಂದಿತ್ತು. ನಮ್ಮಲ್ಲಿ ಮಧುಮೇಹಕ್ಕೆ ಬಹುಮೂತ್ರ, ಸಂಧಿವಾತಕ್ಕೆ ಗಂಥಿಬಾತ್ ಮತ್ತು ಕುಷ್ಠರೋಗಕ್ಕೆ ಬಡಾ ರೋಗಾ ಎನ್ನುವ ಪದಗಳನ್ನು ಸಹ ಹೊಂದಿದ್ದೆವು. ಆದರೆ ಇಂದು ಜನರು ನಿಧಾನವಾಗಿ ಈ ಒಡಿಯಾ ಪದಗಳನ್ನು ಪಕ್ಕಕ್ಕೆ ತಳ್ಳುತ್ತಿದ್ದಾರೆ, ತಮ್ಮ ಶಬ್ದಕೋಶದಲ್ಲಿ ಇಂಗ್ಲಿಷ್ ಪದಗಳಿಗೆ ಸ್ಥಳಾವಕಾಶ ಕಲ್ಪಿಸುತ್ತಿದ್ದಾರೆ. ಇದು ದುಃಖಕ್ಕೆ ಕಾರಣವಾಗಬೇಕೇ? ಈ ಕುರಿತು ನನಗೆ ಸ್ಪಷ್ಟತೆಯಿಲ್ಲ."
ನಾವು ಭಾಷಾ ತಜ್ಞರೋ ಅಲ್ಲವೋ, ಆದರೆ ಭಾಷೆಯೆನ್ನುವುದು ಸ್ಥಿರವಲ್ಲವೆನ್ನುವುದು ನಮಗೆ ತಿಳಿದಿದೆ. ಅದೊಂದು ನದಿಯಿದ್ದಂತೆ ಅದು ತನ್ನ ಸಾಮಾಜಿಕ ಗುಂಪಿನ ಪಾತ್ರದೊಳಗೆ ಹಿಗ್ಗುತ್ತಾ, ಕುಗ್ಗುತ್ತಾ ಹರಿಯುತ್ತಿರುತ್ತದೆ. ಅದು ಒಮ್ಮೆ ಬತ್ತಿ ಹೋದಂತೆ ಕಂಡರೆ ಇನ್ನೊಮ್ಮೆ ತುಂಬಿ ತುಳುಕುತ್ತದೆ. ಹಾಗಾದರೆ ನಷ್ಟ ಮತ್ತು ಸ್ಮರಣೆಯ ಬಗ್ಗೆ ಇಷ್ಟು ಗದ್ದಲ ಮಾಡುವುದು ಏಕೆ? ಸ್ವಲ್ಪ ಮಟ್ಟಿಗೆ ಮರೆಯುವುದು ಒಳ್ಳೆಯದಲ್ಲವೇ?
*****
"ನಮ್ಮ ಭಾಷೆಗಳ ಹಿಂದೆ ಅಡಗಿರುವ ಅನೇಕ ಸಾಮಾಜಿಕ ರಚನೆಗಳ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಮುರ್ದಾದ್ ಮಟನ್ ನಂತಹ ಪದವನ್ನು ನೋಡಿ" ಎಂದು ಮೇಧಾ ಹೇಳುತ್ತಾರೆ. "ಅನೇಕ ಹಳ್ಳಿಗಳಲ್ಲಿ ದಲಿತರು ತಿನ್ನಲು ಒತ್ತಾಯಿಸಲ್ಪಟ್ಟ ಮುರ್ದಾದ್ ಮಟನ್, ಸತ್ತ ಮಾಂಸ ಎನ್ನುವ ಅರ್ಥದ ಈ ಪದವನ್ನು ಪರಿಸ್ಥಿತಿಯಿಂದ ಪ್ರಭಾವಿತರಾಗದ 'ಹಠಮಾರಿ'ಗಳಿಗೆ ಬಳಸುತ್ತೇವೆ. ಇದೊಂದು ಜಾತಿಗ್ರಸ್ಥ ಪದ"
ರಾಜೀವ್ ಮಲಯಾಳಂ ಬಗ್ಗೆ ಯೋಚಿಸಲು ಪ್ರಾರಂಭಿಸಿದರು. "ಒಂದು ಕಾಲದಲ್ಲಿ ಕೇರಳದಲ್ಲಿ ಕೆಳಜಾತಿಯ ಜನರು ವಾಸಿಸುತ್ತಿದ್ದ ಮನೆಯನ್ನು ಚೆಟ್ಟಾ ಎಂದು ಕರೆಯಲಾಗುತ್ತಿತ್ತು. ಚೆಟ್ಟಾ ಅಂತಹ ಮನೆಗಳಲ್ಲಿ ವಾಸಿಸುವ ಕೆಳಜಾತಿಯ ಜನರನ್ನು ಉಲ್ಲೇಖಿಸುವುದರಿಂದ ಇದು ನಿಂದನೆಯ ಪದವೂ ಆಯಿತು. ಮೇಲ್ಜಾತಿಗಳ ಮನೆಗಳಿಗೆ ಮೀಸಲಾಗಿದ್ದ ಪುರ ಅಥವಾ ವೀಡು ಎನ್ನುವ ಪದಗಳನ್ನು ಕೆಳಜಾತಿಯವರ ಮನೆಗಳಿಗೆ ಇಡಲು ಅವಕಾಶವಿರಲಿಲ್ಲ. ಅವರ ನವಜಾತ ಶಿಶುಗಳು ಮೇಲ್ಜಾತಿಯ ಜನರಂತೆ ಉನ್ನಿಗಳಾಗಿರಲಿಲ್ಲ, ಅವರನ್ನು ಚೆಕ್ಕನ್ಸ್ ಎಂದರೆ ಕೆಟ್ಟವರು ಎಂದು ಕರೆಯಲಾಗುತ್ತಿತ್ತು. ಮೇಲ್ಜಾತಿಯ ಜನರ ಸಮ್ಮುಖದಲ್ಲಿ ಅವರು ತಮ್ಮನ್ನು ಆದಿಯನ್, 'ನಿಮ್ಮ ವಿಧೇಯ ಸೇವಕ' ಎಂದು ಕರೆದುಕೊಳ್ಳಬೇಕಾಗಿತ್ತು. ಈ ಪದಗಳನ್ನು ಈಗ ಬಳಸಲಾಗುತ್ತಿಲ್ಲ" ಎಂದು ಅವರು ಹೇಳುತ್ತಾರೆ.


ಅನ್ಯಾಯದ ಸಾಮಾಜಿಕ ರಚನೆಗಳು ನಮ್ಮ ಭಾಷೆಗಳಲ್ಲಿಯೂ ಹುದುಗಿವೆ. ನಮ್ಮ ಶಬ್ದಕೋಶದಿಂದ ಅನ್ಯಾಯವನ್ನು ಉಂಟುಮಾಡುವ ಪದಗಳನ್ನು ನಾವು ಪ್ರಜ್ಞಾಪೂರ್ವಕವಾಗಿ ಹೊರತೆಗೆಯಬೇಕು ಮತ್ತು ತ್ಯಜಿಸಬೇಕು
"ಕೆಲವು ಪದಗಳು ಮತ್ತು ಬಳಕೆಗಳು ಶಾಶ್ವತವಾಗಿ ಕಳೆದುಹೋಗುವುದು ಒಳ್ಳೆಯದು" ಎಂದು ಮೇಧಾ ಹೇಳುತ್ತಾರೆ. "ಮರಾಠಾವಾಡಾದ ದಲಿತ ನಾಯಕ ಅಡ್ವಕೇಟ್ ಏಕನಾಥ್ ಅವಾದ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ (ಜೆರ್ರಿ ಪಿಂಟೋ ಅನುವಾದಿಸಿದಂತೆ ಜಗತ್ತನ್ನು ಬದಲಾಯಿಸಲು ಒಂದು ಹೋರಾಟ) ಅವರು ಮತ್ತು ಅವರ ಸ್ನೇಹಿತರು ರಚಿಸಿದ ಭಾಷೆಯ ಬಗ್ಗೆ ಮಾತನಾಡುತ್ತಾರೆ. ಅವರು ಮಾತಂಗ್ ಮತ್ತು ಇತರ ದಲಿತ ಜಾತಿಗಳಿಗೆ ಸೇರಿದವರಾಗಿದ್ದರು. ಆಹಾರವನ್ನು ಕದಿಯುತ್ತಾ ಭೀಕರ ಬಡತನದಲ್ಲಿ ವಾಸಿಸುತ್ತಿದ್ದರು. ಹೀಗೆ ಕದಿಯುವಾಗ ಸಿಕ್ಕಿ ಬೀಳದಂತೆ ಅವರು ತಮ್ಮೊಳಗೆ ಒಂದು ವಿಶೇಷ ಭಾಷೆಯನ್ನು ಹೊಂದಿದ್ದರು. ಇದು ಅವರಿಗೆ ಎಚ್ಚರಿಕೆ ನೀಡಲು ಮತ್ತು ಸ್ಥಳದಿಂದ ಓಡಿ ಹೋಗಲು ಸಹಾಯ ಮಾಡುತ್ತಿತ್ತು ಎಂದು ಪ್ರೀತಿಯಿಂದ ಜೀಜಾ ಎಂದು ಕರೆಯಲ್ಪಡುತ್ತಿದ್ದ ಅವರು ಹೇಳುತ್ತಾರೆ. 'ಈ ಭಾಷೆಯನ್ನು ಮರೆಯಬೇಕು. ಯಾರೂ ಅದನ್ನು ತಿಳಿದುಕೊಳ್ಳಬಾರದು ಮತ್ತು ಅದನ್ನು ಮತ್ತೆ ಬಳಸಬೇಕಾಕದ ಪರಿಸ್ಥಿತಿ ಬರಬಾರದು.ʼ
"ಸೋಲಾಪುರ ಜಿಲ್ಲೆಯ ಸಂಗೋಲಾದ ದೀಪಾಲಿ ಭುಸ್ನಾರ್ ಮತ್ತು ಅಡ್ವಕೇಟ್ ನಿತಿನ್ ವಾಘ್ಮರೆ ಅವರು ಕಾಯ್ ಮಾಂಗ್ ಗಾರುಡ್ಯಸಾರಖಾ ರಹತುಯ್? (ಯಾಕೆ ಮಾಂಗ್ ಅಥವಾ ಗಾರುಡಿಯ ಹಾಗೆ ಆಡುತ್ತೀಯ?) ರೀತಿಯ ಅನೇಕ ಪದಗಳು ಮತ್ತು ಗಾದೆಗಳನ್ನು ಪಟ್ಟಿ ಮಾಡುತ್ತಾರೆ. ಈ ಬಳಕೆಯು ತೀವ್ರ ಬಡತನ ಮತ್ತು ಜಾತಿ ತಾರತಮ್ಯದ ನಡುವೆ ಬದುಕುವ ದಲಿತರಲ್ಲಿನ ವೈಯಕ್ತಿಕ ಕಾಳಜಿ ಮತ್ತು ಸ್ವಚ್ಛತೆಯ ಕೊರತೆಯನ್ನು ಸೂಚಿಸುತ್ತದೆ. ಆದರೆ ಜಾತಿ ಶ್ರೇಣೀಕರಣದಲ್ಲಿ ಬೇರೂರಿರುವ ಭಾಷೆಯಲ್ಲಿ ಒಬ್ಬ ವ್ಯಕ್ತಿಯನ್ನು ಪಾರ್ಧಿ, ಮಾಂಗ್ ಜಾತಿಗಳಿಗೆ ಸಮೀಕರಿಸುವುದು ಅಂತಿಮ ಅವಮಾನವಾಗಿತ್ತು. ನಾವು ಅಂತಹ ಮಾತುಗಳ ಕಳೆಯನ್ನು ಕಿತ್ತೆಸೆಯಬೇಕು."
*****
ಉಳಿಸಬೇಕಾದುದು ಸಹ ಇದೆ. ನಮ್ಮ ಭಾಷೆಗಳ ಬಿಕ್ಕಟ್ಟು ಕಾಲ್ಪನಿಕವಲ್ಲ. ಪೆಗ್ಗಿ ಮೋಹನ್ ಹೇಳುವಂತೆ ಇದು ಆಳ ತಿಳಿಯಲು ಬಾವಿಯೊಳಗೆ ಇಳಿಬಿಟ್ಟ ದೀಪದಂತೆ, ಆರುವುದು ಉಳಿಯುವುದು ಅಲ್ಲಿನ ವಾತಾವರಣವನ್ನು ಅವಲಂಬಿಸಿದೆ. ನಾವು ಜನರಾಗಿ, ಸಂಸ್ಕೃತಿಯಾಗಿ ನಮ್ಮ ವೈವಿಧ್ಯತೆಯ ಸಾಮೂಹಿಕ ಅಳಿವಿನತ್ತ ಸಾಗುತ್ತಿದ್ದೇವೆಯೇ? ಅದರ ಪ್ರಾರಂಭವನ್ನು ನಾವು ಇಲ್ಲಿ ಭಾಷೆಗಳಲ್ಲಿ ಕಾಣುತ್ತಿದ್ದೇವೆಯೇ? ಇದು ಎಲ್ಲಿ ಕೊನೆಯಾಗುತ್ತದೆ? ವಿಮೋಚನೆಯಲ್ಲಿ?
“ಅದು ನಮ್ಮ ಭಾಷೆಯಲ್ಲೇ ಕೊನೆಯಾಗುತ್ತದೆ, ಬೇರೆಲ್ಲೋ ಅಲ್ಲ ಎಂದು 69 ವರ್ಷದ ಜಯಂತ್ ಪರ್ಮಾರ್ ಹೇಳುತ್ತಾರೆ. ಅವರು ಉರ್ದುವಿನಲ್ಲಿ ಬರೆಯುವ ದಲಿತ ಗುಜರಾತಿ ಕವಿ.
"ಮಾ ತನ್ನ ಗುಜರಾತಿ ಭಾಷೆಯಲ್ಲಿ ಸಾಕಷ್ಟು ಉರ್ದು ಪದಗಳನ್ನು ಬಳಸುತ್ತಿದ್ದಳು" ಎಂದು ಅವರು ತಮ್ಮ ಮತ್ತು ತಮ್ಮ ತಾಯಿ ದಾಹಿಬೆನ್ ಅವರ ಭಾಷೆಯೊಂದಿಗಿನ ಸಂಬಂಧದ ಬಗ್ಗೆ ಹೇಳುತ್ತಾರೆ. "ಒಂದು ನಿರ್ದಿಷ್ಟ ಪಾತ್ರೆಯನ್ನು ತರಲು ಹೇಳುವಾಗ, "ಜಾ, ಕಾಡೋ ಲೈ ಆವ್ ಖಾವಾ ಕಧು. ನಾವು ಅನ್ನವನ್ನು ಕಲೆಸಿಕೊಂಡು ತಿನ್ನುತ್ತಿದ್ದ ಅಂತಹ ಪಾತ್ರಗಳು ಈಗ ಇವೆಯೋ ಇಲ್ಲವೋ ತಿಳಿಯದು. ಗಾಲಿಬನನ್ನು ಓದಿದ ನಂತರ ಆ ಪದದ ಉಚ್ಛಾರಣೆ ಕಾಡಾ ಎಂದು ನನಗೆ ಅರಿವಾಯಿತು" ಎಂದು ಅವರು ಹೇಳುತ್ತಾರೆ.

ಗೋಡೆಗಳಿಂದ ಕೂಡಿದ ನಗರಗಳಲ್ಲಿ ಎಲ್ಲಾ ಸಮುದಾಯಗಳ ಜನರು ಒಟ್ಟಿಗೆ ವಾಸಿಸುತ್ತಿದ್ದ ಸಮಯವಿತ್ತು; ಅಲ್ಲಿನ ವಾತಾವರಣವು ಕೋಮುವಾದಿಯಾಗಿರಲಿಲ್ಲ, ಮತ್ತು ಸಂಸ್ಕೃತಿಗಳು, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಭಾಷೆಯಲ್ಲಿ ಪ್ರತಿಬಿಂಬಿತವಾದ ಬಹಳಷ್ಟು ಕೊಡು-ಕೊಳ್ಳುವಿಕೆ ಇತ್ತು
“ಅಂತಹ ಹಲವು ವಾಕ್ಯಗಳಿವೆ “ತಾರಾ ದೀದಾರ್ ತೊ ಜೋ” (ನಿನ್ನ ಅಂದ ಚಂದದ ಕಡೆ ಗಮನ ಕೊಡು). “ತಾರು ಖಮೀಸ್ ಧೋವಾ ಆಪ್ (ನಿನ್ನ ಅಂಗಿಯನ್ನು ಒಗೆಯಲು ಕೊಡು), “ಮೊನ್ಹಮತಿ ಏಕ್ ಹರಾಫ್ ಕಢ್ತೋ ನಥಿ (ನಿನಗೆ ಬಾಯಿ ತೆಗೆದು ಒಂದು ಮಾತನಾಡಲು ಆಗುವುದಿಲ್ಲವೆ?” ಅಥವಾ ಮುಲ್ಲಾನೆ ತ್ಯಾಂತಿ ಗೋಶ್ ಲಾಯಿ ಆವ್ (ಮುಲ್ಲಾನ ಮನೆಗೆ ಹೋಗಿ ಸ್ವಲ್ಪ ಮಾಂಸ ತೆಗೆದುಕೊಂಡು ಬಾ) ಎನ್ನುವಂತಹ ಪದಗಳನ್ನು ಅಮ್ಮ ಬಳಸುತ್ತಿದ್ದಳು. ಉರ್ದುವಿನಲ್ಲಿ ಅದು ಗೋಷ್ತ್ ಆಗಿತ್ತು ಆದರೆ ನಾವು ಗೋಷ್ ಎನ್ನುತ್ತಿದ್ದೆವು. ಈ ಪದಗಳೆಲ್ಲವೂ ನಮ್ಮ ಬೋಲಿಯ (ಭಾಷೆ) ಭಾಗವಾಗಿದ್ದವು. ಆದರೆ ಈಗ ಅವೆಲ್ಲ ಮರೆವಿಗೆ ಸರಿದಿವೆ. ಉರ್ದು ಭಾಷೆಯಲ್ಲಿ ಈ ಪದಗಳನ್ನು ಕಂಡಾಗಲೆಲ್ಲ ನನಗೆ ಅಲ್ಲಿ ನನ್ನ ಅಮ್ಮ ಚಿತ್ರ ಕಣ್ಮುಂದೆ ಬರುತ್ತದೆ.”
ಈಗ ಪರಿಸ್ಥಿತಿ ಬದಲಾಗಿದೆ, ಹವಾಮಾನ, ನಗರದ ಭೌಗೋಳಿಕತೆ ಹೀಗೆ ಎಲ್ಲವೂ. "ಆಗ ಎಲ್ಲ ಸಮುದಾಯಗಳ ಜನರು ಅಹಮದಾಬಾದಿನ ಆವರಣದ ನಗರದೊಳಗೆ ಒಟ್ಟಿಗೆ ವಾಸಿಸುತ್ತಿದ್ದರು; ಅಲ್ಲಿನ ಸಂಸ್ಕೃತಿ ಕೋಮುವಾದವಾಗಿರಲಿಲ್ಲ. ದೀಪಾವಳಿಯ ಸಮಯದಲ್ಲಿ ನಮ್ಮ ಮುಸ್ಲಿಂ ಸ್ನೇಹಿತರಿಗೆ ನಮ್ಮ ಮನೆಯಿಂದ ಸಿಹಿತಿಂಡಿಗಳು ಮತ್ತು ಖಾರದ ತಿನಿಸುಗಳನ್ನು ನೀಡುತ್ತಿದ್ದೆವು. ನಾವು ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿದ್ದೆವು. ನಾವೆಲ್ಲರೂ ಮೊಹರಂ ಸಮಯದಲ್ಲಿ ತಾಜಿಯಾ ಮೆರವಣಿಗೆಯನ್ನು ನೋಡಲು ಹೋಗುತ್ತಿದ್ದೆವು. ಮೆರವಣಿಗೆಯಲ್ಲಿ ದೇವದೂತರಿಗೆಂದು ತಯಾರಿಸಲಾದ ಸುಂದರವಾದ, ಉತ್ತಮವಾಗಿ ಅಲಂಕರಿಸಲ್ಪಟ್ಟ ಗುಮ್ಮಟಗಳಿರುತ್ತಿದ್ದವು. ಪುಟ್ಟ ಮಕ್ಕಳು ಅವುಗಳ ಕೆಳಗೆ ಹಾದುಹೋಗುವ ಮೂಲಕ ಉತ್ತಮ ಆರೋಗ್ಯ ಮತ್ತು ಸಂತೋಷಕ್ಕಾಗಿ ಬೇಡಿಕೊಳ್ಳುತ್ತಿದ್ದರು" ಎಂದು ಅವರು ಹೇಳುತ್ತಾರೆ.
ಆಗ ಆದಾನ್- ಪ್ರಧಾನ್ ಎನ್ನುವ ನಿಜವಾದ, ಮುಕ್ತ ಕೊಡು ಕೊಳ್ಳುವಿಕೆ ಇತ್ತು. “ಈಗ ನಾವು ಅಂತಹ ವಾತಾವರಣದಲ್ಲಿ ಬದುಕುತ್ತಿಲ್ಲವೆನ್ನುವುದನ್ನು ನಮ್ಮ ಭಾಷೆಯೇ ಈಗ ತೋರಿಸುತ್ತಿದೆ. ಆದರೆ ನಾನು ಭರವಸೆ ಕಳೆದುಕೊಂಡಿಲ್ಲ. ನನಗೆ ಮರಾಠಿ, ಪಂಜಾಬಿ ಬೆಂಗಾಲಿ ಭಾಷೆಗಳು ಗೊತ್ತು. ನಾನು ಅಲ್ಲಿಂದ ಪದಗಳನ್ನು ಎರವಲು ಪಡೆದು ಅವುಗಳನ್ನು ಉರ್ದುವಿನಲ್ಲಿ ಬಳಸುತ್ತಿದ್ದೇನೆ. ಸದ್ಯಕ್ಕೆ ಈ ಪದಗಳನ್ನು ಕವಿತೆಗಳಲ್ಲಿಯಾದರೂ ಬಳಸುವ ಮೂಲಕ ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ” ಎಂದು ಅವರು ಹೇಳುತ್ತಾರೆ.
ಪದಗಳೆಂದರೆ ಬೇರೇನೂ
ಅಲ್ಲ, ಮರಳಿನ ಕಣದೊಳಗಿನ ಜಗತ್ತು.
ಹಲವು ಸ್ಥಳಗಳಲ್ಲಿನ ಪರಿಭಾಷಾ ಸದಸ್ಯರ ಕೊಡುಗೆಯಿಂದ ಈ ಲೇಖನ ಪೂರ್ಣ ರೂಪ ಪಡೆಯಲು ಸಾಧ್ಯವಾಗಿದೆ - ದೇವೇಶ್ (ಹಿಂದಿ), ಜೋಶುವಾ ಬೋಧಿನೇತ್ರ (ಬಾಂಗ್ಲಾ), ಕಮಲಜಿತ್ ಕೌರ್ (ಪಂಜಾಬಿ), ಮೇಧಾ ಕಾಳೆ (ಮರಾಠಿ), ಮೊಹಮ್ಮದ್ ಕಮರ್ ತಬ್ರೇಜ್ (ಉರ್ದು), ನಿರ್ಮಲ್ ಕುಮಾರ್ ಸಾಹು (ಛತ್ತೀಸ್‌ಗಢಿ) ಪಂಕಜ್ ದಾಸ್ (ಅಸ್ಸಾಮಿ), ಪ್ರಣತಿ ಪರಿದಾ (ಒಡಿಯಾ), ರಾಜಸಂಗೀತನ್ (ತಮಿಳು), ರಾಜೀವ ಚೇಲನಾಥ್ (ಮಲಯಾಳಂ), ಸ್ಮಿತಾ ಖತೋರ್ (ಬಾಂಗ್ಲಾ), ಸ್ವರ್ಣ್ ಕಾಂತ (ಭೋಜ್‌ಪುರಿ), ಶಂಕರ್ ಎನ್. ಕೆಂಚನೂರು (ಕನ್ನಡ), ಮತ್ತು ಸುಧಾಮಯಿ ಸತ್ತೇನಪಲ್ಲಿ (ತೆಲುಗು).
ಜಯಂತ್ ಪರ್ಮಾರ್ (ಉರ್ದುವಿನಲ್ಲಿ ಬರೆಯುವ ಗುಜರಾತಿ ದಲಿತ ಕವಿ), ಆಕಾಂಕ್ಷಾ, ಅಂತರಾ ರಾಮನ್, ಮಂಜುಳಾ ಮಾಸ್ತಿಕಟ್ಟೆ, ಪಿ.ಸಾಯಿನಾಥ್, ಪುರುಷೋತ್ತಮ ಠಾಕೂರ್, ರಿತಯಾನ್ ಮುಖರ್ಜಿ, ಮತ್ತು ಸಂಕೇತ್ ಜೈನ್ ಅವರ ಕೊಡುಗೆಗಳಿಗಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಪಿ ಸಾಯಿನಾಥ್, ಪ್ರೀತಿ ಡೇವಿಡ್, ಸ್ಮಿತಾ ಖಟೋರ್ ಮತ್ತು ಮೇಧಾ ಕಾಳೆ ಅವರ ಬೆಂಬಲದೊಂದಿಗೆ ಪ್ರತಿಷ್ಠಾ ಪಾಂಡ್ಯ ಈ ಲೇಖನವನ್ನು ಸಂಪಾದಿಸಿದ್ದಾರೆ. ಅನುವಾದ ಬೆಂಬಲ: ಜೋಶುವಾ ಬೋಧಿನೇತ್ರ. ಫೋಟೋ ಎಡಿಟಿಂಗ್ ಮತ್ತು ಲೇಔಟ್: ಬಿನೈಫರ್ ಭರೂಚಾ.
ಅನುವಾದ: ಶಂಕರ. ಎನ್. ಕೆಂಚನೂರು