ಅದು ಜನವರಿ ತಿಂಗಳ ಚಳಿಯ ದಿನಗಳು. ರಾತ್ರಿ 9 ಗಂಟೆಯನ್ನು ದಾಟಿತ್ತು. ಮತ್ತು ಸುಮಾರು 400 ಪ್ರೇಕ್ಷಕರು ಪ್ರದರ್ಶನ ಪ್ರಾರಂಭವಾಗುವುದನ್ನು ಕಾಯುತ್ತಿದ್ದರು. ಈ ಕಾರ್ಯಕ್ರಮ ಒಂದು ಗಂಟೆ ಮುಂಚಿತವಾಗಿ ಪ್ರಾರಂಭವಾಗಬೇಕಿತ್ತು.
ಇದ್ದಕ್ಕಿದ್ದಂತೆ, ಮುಂಭಾಗದಲ್ಲಿ ತಾತ್ಕಾಲಿಕ ವೇದಿಕೆಯ ಸುತ್ತಲೂ ಗದ್ದಲ ಆರಂಭವಾಯಿತು. ಬಿದಿರಿನ ಕೋಲಿಗೆ ಕಟ್ಟಿದ ಧ್ವನಿವರ್ಧಕವು ಕಂಪಿಸುತ್ತದೆ ಮತ್ತು ಒಂದು ಧ್ವನಿ ಹೊರಹೊಮ್ಮುತ್ತದೆ: "ನಾವು ಇಷ್ಟರಲ್ಲೇ ಮಾ ಬನ್‌ಬೀಬಿಗೆ ಸಮರ್ಪಿತವಾದ ಪದ್ಯ ನಾಟಕವನ್ನು ಪ್ರಾರಂಭಿಸಲಿದ್ದೇವೆ... ಅವಳು ನಮ್ಮನ್ನು ಎಲ್ಲಾ ದುಷ್ಟರಿಂದ ರಕ್ಷಿಸುವವಳು!"
ಗೋಸಾಬಾ ಬ್ಲಾಕ್‌ನ ಜೌಹರ್ ಕಾಲೋನಿ ಗ್ರಾಮದಲ್ಲಿ ತಿರುಗಾಡುತ್ತಿದ್ದವರು ಒಂದೆಡೆ ಕುಳಿತುಕೊಳ್ಳಲು ಪ್ರಾರಂಭಿಸಿದರು. ದೆವ್ವ ರಕ್ತಪಿಶಾಚಿಗಳು, ಹಾವುಗಳು, ಮೊಸಳೆಗಳು, ಹುಲಿಗಳು, ಜೇನುನೊಣಗಳು – ಈ ಅಠಾರೊ ಭಾಟಿ – ರ್ ದೇಶ್ (ಹದಿನೆಂಟು-ಭಾಟಿ ದೇಶ)ದ ಎಲ್ಲಾ ರೀತಿಯ 'ಕೆಡುಕುಗಳನ್ನು' ಹಾಗೂ ಅವರೆಲ್ಲರನ್ನೂ ಸೋಲಿಸುವ ತಾಯಿ ಬನ್‌ಬೀಬಿಯ ವಿಜಯದ ಕಥೆಯನ್ನು ಪ್ರತಿಯೊಬ್ಬರೂ ನೋಡಲು ಉತ್ಸುಕರಾಗಿದ್ದಾರೆ. ಈ ಸುಂದರ್‌ಬನ್ ಪ್ರದೇಶವು ಉಪ್ಪುನೀರು, ಪ್ರಾಣಿಗಳು, ಕಾಡುಗಳು, ಪಕ್ಷಿಗಳು, ಸರೀಸೃಪಗಳು ಮತ್ತು ಸಸ್ತನಿಗಳಿಂದ ತುಂಬಿರುವ ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯವಾಗಿದೆ. ಬಾನ್ ಬೀಬಿ ಕತೆಯು ಈ ಪ್ರದೇಶದಲ್ಲಿ ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಹರಡಿದೆ.
ಪರದೆ ಬಳಸಿ ಬೀದಿಯಿಂದ ಮರೆಮಾಡಲಾದ ಗ್ರೀನ್ ರೂಮ್ ನಟರು ಮತ್ತು ವೀಕ್ಷಕರಿಂದ ಗಿಜಿಗುಡುತ್ತಿದೆ. ಎಲ್ಲರೂ ಬನ್‌ಬೀಬಿ ಪಾಲಾ ಗಾನಕ್ಕೆ ತಯಾರಾಗುತ್ತಿದ್ದಾರೆ. ಜೇನುಗೂಡುಗಳು ಮತ್ತು ಟೆರ್ರಾಕೋಟಾ ಹುಲಿ ಮುಖವಾಡಗಳು ಹೀಗೆ ಇಂದಿನ ಪ್ರದರ್ಶನ ಸರದಿಯಲ್ಲಿರುವ ಎಲ್ಲಾ ಸಾಧನಗಳನ್ನು ಟಾರ್ಪಲಿನ್ ಗೋಡೆಗಳ ಸಾಲಾಗಿ ನೇತುಹಾಕಲಾಗಿದೆ. ನಾಟಕದ ವಿಷಯವು ಸುಂದರಬನ್ ಜನರ ನೈಜ ಜೀವನಕ್ಕೆ ಆಳವಾಗಿ ಸಂಬಂಧಿಸಿದೆ. 2020ರ ಹೊತ್ತಿಗೆ, ಈ ಅರಣ್ಯವು 96 ಹುಲಿಗಳಿಗೆ ನೆಲೆಯಾಗಿದೆ.

ಬಂಗಾಳಿ ಮಾಘ (ಜನವರಿ-ಫೆಬ್ರವರಿ) ತಿಂಗಳ ಮೊದಲ ದಿನದಂದು, ಮ್ಯಾಂಗ್ರೋವ್-ಅವಲಂಬಿತ ಸುಂದರಬನದ ಜನಗಳು ಹುಲಿಗಳು, ಜೇನುನೊಣಗಳು ಮತ್ತು ದುಷ್ಟ ಶಕುನಗಳಿಂದ ರಕ್ಷಣೆಗಾಗಿ ಮಾ ಬನ್‌ಬೀಬಿಯನ್ನು ಪೂಜಿಸುತ್ತಾರೆ

ಚಟುವಟಿಕೆಯಿಂದ ಕೂಡಿರುವ ಗ್ರೀನ್ ರೂಮ್. ಪ್ರೇಕ್ಷಕನೊಬ್ಬ ನಟನಿಗೆ ಬಟ್ಟೆ ತೊಡಲು ಸಹಾಯ ಮಾಡುತ್ತಿದ್ದಾನೆ
ಇಲ್ಲಿನ ರೈತ, ಮೀನುಗಾರ, ಮೌಲಿ ಎಲ್ಲರೂ ಈಗ ನಟರಾಗಿದ್ದಾರೆ - ಬಟ್ಟೆ ಮತ್ತು ಮುಖದ ಮೇಕಪ್‌ನ ಕೊನೆಯ ಕ್ಷಣದ ವಿವರಗಳನ್ನು ಸರಿಪಡಿಸುವಲ್ಲಿ ನಿರತರಾಗಿದ್ದಾರೆ. ಯಾರೋ ನಟರಿಗೆ ಸಂಭಾಷಣೆಯನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತಿದ್ದಾರೆ, ಇನ್ನೊಬ್ಬರು ಗ್ರೀನ್ ರೂಮ್‌ನಲ್ಲಿ ವೇಷಭೂಷಣ ಸಮಸ್ಯೆಯನ್ನು ತರಾತುರಿಯಲ್ಲಿ ನಿಭಾಯಿಸುತ್ತಿದ್ದಾರೆ. ಇದೆಲ್ಲದರಲ್ಲಿ ಸಾಮುದಾಯಿಕ ಪ್ರಜ್ಞೆ ಎದ್ದು ಕಾಣುತ್ತದೆ.
ತಂತ್ರಜ್ಞರೊಬ್ಬರು ಸ್ಪಾಟ್‌ಲೈಟುಗಳ ಮೇಲೆ ಬಣ್ಣದ ಫಿಲ್ಟರುಗಳನ್ನು ಅಳವಡಿಸುತ್ತಿದ್ದಾರೆ ಮತ್ತು ಕೆಲವೇ ನಿಮಿಷಗಳಲ್ಲಿ, ಇಂದು ಪ್ರದರ್ಶನ ನೀಡುವ ತಂಡ - ರಾಧಾ ಕೃಷ್ಣ ಗೀತಿ ನಾಟ್ಯ ಮತ್ತು ಬನ್‌ಬೀಬಿ ಜತ್ರಪಾಲ - ಪ್ರದರ್ಶನವನ್ನು ಪ್ರಾರಂಭಿಸುತ್ತದೆ. ದುಖೇ ಜಾತ್ರೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬನ್‌ಬೀಬಿ ಪಾಲಾ ಗಾನ್ ಪ್ರದರ್ಶನವನ್ನು ಬಂಗಾಳಿ ತಿಂಗಳ ಮಾಘದ ಮೊದಲ ದಿನದಂದು ನಡೆಸಲಾಗುತ್ತದೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಗೋಸಾಬಾ ಬ್ಲಾಕ್‌ನ ವಿವಿಧ ಗ್ರಾಮಗಳ ಜನರು ವರ್ಷಕ್ಕೊಮ್ಮೆ ನಡೆಯುವ ಈ ಬನ್‌ಬೀಬಿ ಪಾಲಗನ್ ಹಬ್ಬವನ್ನು ವೀಕ್ಷಿಸಲು ಸೇರುತ್ತಾರೆ.
ನಿತ್ಯಾನಂದ ಜೋತದಾರ್ ತಂಡದ ಮೇಕಪ್ ಆರ್ಟಿಸ್ಟ್. ಬಹಳ ಎಚ್ಚರಿಕೆಯಿಂದ ನಟನ ತಲೆಯ ಮೇಲೆ ವರ್ಣರಂಜಿತ ಕಿರೀಟವನ್ನು ಅಂಟಿಸಿದರು. ಅವರ ಕುಟುಂಬವು ಹಲವಾರು ತಲೆಮಾರುಗಳಿಂದ ಪಾಲಗನ್‌ನೊಂದಿಗೆ ಸಂಬಂಧ ಹೊಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಆದಾಯದಿಂದ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗುತ್ತಿದೆ. “ಪಾಲಗಾನ್ ಆದಾಯದಿಂದ ಯಾರೂ ಕುಟುಂಬವನ್ನು ಪೋಷಿಸಲು ಸಾಧ್ಯವಿಲ್ಲ. ನಾನು ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಅಡುಗೆ ವ್ಯವಹಾರದಲ್ಲಿ ವಿವಿಧ ಕೆಲಸಗಳನ್ನು ಮಾಡಿದ್ದೇನೆ, ”ಎಂದು ಅವರು ಹೇಳಿದರು. ಆದರೆ ಕೋವಿಡ್ -19 ಲಾಕ್‌ಡೌನ್ ನಂತರ, ಆ ದಾರಿಯೂ ಮುಚ್ಚಿಹೋಗಿದೆ.

ʼಜನರನ್ನು ವಿಭಿನ್ನ ಪಾತ್ರಗಳನ್ನಾಗಿ ಪರಿವರ್ತಿಸುವುದೆಂದರೆ ನನಗೆ ಇಷ್ಟʼ ಎಂದು ಮೇಕಪ್ ಕಲಾವಿದ ನಿತ್ಯಾನಂದ ಜೋತ್ದಾರ್ ಹೇಳುತ್ತಾರೆ

ದಖಿನ್ ರೈ ಪಾತ್ರವನ್ನು ನಿರ್ವಹಿಸುತ್ತಿರುವ ದಿಲೀಪ್ ಮಂಡಲ್ ಅವರಿಗೆ ಮುಕುಟ ತೊಡಿಸುತ್ತಿರುವ ನಿತ್ಯಾನಂದ
ಪಾಲ ಗಾನ ಪ್ರದರ್ಶನದಿಂದ ಬರುವ ಆದಾಯದಿಂದ ಮನೆ ನಿರ್ವಹಣೆಗೆ ಆಗುತ್ತಿರುವ ಕಷ್ಟಗಳ ಬಗ್ಗೆ ತಂಡದ ಹಲವು ಸದಸ್ಯರು ಪರಿಗೆ ತಿಳಿಸಿದರು. ನಟ ಅರುಣ್ ಮಂಡಲ್, "ಸುಂದರಬನದಲ್ಲಿ ಪಾಲಾ ಗಾನ್ ಬುಕಿಂಗ್‌ಗಳು ಇತ್ತೀಚಿನ ವರ್ಷಗಳಲ್ಲಿ ತೀವ್ರವಾಗಿ ಕಡಿಮೆಯಾಗಿದೆ" ಎಂದು ಹೇಳುತ್ತಾರೆ.
ಹವಾಮಾನ ವೈಪರೀತ್ಯಗಳು, ಕ್ಷೀಣಿಸುತ್ತಿರುವ ಮ್ಯಾಂಗ್ರೋವ್ಗಳು ಮತ್ತು ಜಾನಪದ ನಾಟಕಗಳ ಜನಪ್ರಿಯತೆಯಲ್ಲಿನ ಕುಸಿತದ ಕಾರಣ ಅನೇಕ ಪಾಲಾ ಗಾನ್ ಪ್ರದರ್ಶಕರು ಕೆಲಸವನ್ನು ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಈಗ ತನ್ನ 30ರ ದಶಕದ ಆರಂಭದಲ್ಲಿರುವ ನಿತ್ಯಾನಂದ, ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. "ಪಾಲಾ ಗಾನ್ ಇಲ್ಲದೆ ನಾನು ಬದುಕಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ. "ಅದೇ ಕಾರಣಕ್ಕೆ, ನಾನು ಇಂದು ರಾತ್ರಿ ಇಲ್ಲಿದ್ದೇನೆ, ಕಲಾವಿದರಿಗೆ ಮೇಕಪ್ ಮಾಡುತ್ತಿದ್ದೇನೆ."
ಒಂದು ಪಾಲಾ ಗಾನ್ ಪ್ರದರ್ಶನ ನೀಡಿದರೆ 7,000 ರೂ.ಗಳಿಂದ 15,000 ರೂ.ಗಳವರೆಗಿನ ಸಂಭಾವನೆ ದೊರೆಯುತ್ತದೆ. ಇದರಿಂದ ಒಬ್ಬೊಬ್ಬ ಕಲಾವಿದರಿಗೆ ಸಿಗುವ ಮೊತ್ತ ತೀರಾ ಕನಿಷ್ಠ. “ಈ ಬಾನ್ ಬೀಬಿ ಪಾಲಾ ಗಾನ್ ಕಾರ್ಯಕ್ರಮಕ್ಕೆ 12,000 ರೂಪಾಯಿಗಳನ್ನು ಮಾತನಾಡಲಾಗಿದೆ. ಇದನ್ನು 20ಕ್ಕೂ ಹೆಚ್ಚು ಕಲಾವಿದರಿಗೆ ಹಂಚಬೇಕು” ಎಂದು ಅರುಣ್ ಹೇಳುತ್ತಾರೆ.
ವೇದಿಕೆಯ ಹಿಂದೆ ಉಷಾರಾಣಿ ಘರಾನಿ ಸಹ ನಟನೊಬ್ಬನ ಕಣ್ಣುಗಳಿಗೆ ಕಾಡಿಗೆ ಬಳಿಯುತ್ತಿದ್ದಾರೆ. “ನಾವು ನಗರದ ನಟರಂತಲ್ಲ. ನಾವು ಎಲ್ಲಾ ಮೇಕಪ್ ಸಾಮಾಗ್ರಿಗಳನ್ನು ತರುತ್ತೇವೆ.” ಎಂದು ನಗುತ್ತಾ ಹೇಳುತ್ತಾರೆ. ಜವಾಹರ್ ಕಾಲೋನಿ ಗ್ರಾಮದ ನಿವಾಸಿಯಾಗಿರುವ ಉಷಾರಾಣಿ ಸುಮಾರು ಒಂದು ದಶಕದಿಂದ ಪಾಲಾ ಗಾನಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಇಂದು ರಾತ್ರಿ, ಅವರು ಮಾ ಬನ್‌ಬೀಬಿಯ ಪ್ರಮುಖ ಪಾತ್ರ ಸೇರಿದಂತೆ ಮೂರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಲು ಸಜ್ಜಾಗಿದ್ದಾರೆ.

ಉಷಾರಾಣಿ ಘರಾನಿ ಉದಯ್ ಮಂಡಲ್ ಅವರ ಕಣ್ಣುಗಳಿಗೆ ಕಾಡಿಗೆ ಹಚ್ಚುತ್ತಿದ್ದಾರೆ; ಈ ನಟ ಮಾ ಬನ್‌ಬೀಬಿಯ ಸಹೋದರ ಷಾ ಜಂಗಲಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ

ಸುಂದರಬನದ ಜನಪ್ರಿಯ ಪಾಲಾ ಗಾನ ಕಲಾವಿದೆ ಬನಮಾಲಿ ಬ್ಯಾಪಾರಿ ಇಂದಿನ ರಾತ್ರಿಯ ಪ್ರದರ್ಶನಕ್ಕೆ ಆಧಾರವಾಗಿರುವ ಜೇನುಗೂಡಿನ ಪಕ್ಕದಲ್ಲಿ ನಿಂತಿದ್ದಾರೆ
ಅಲಂಕಾರ ಕೊಠಡಿಯ ಇನ್ನೊಂದು ತುದಿಯಲ್ಲಿ ಬನಮಾಲಿ ಬ್ಯಾಪಾರಿ ಇದ್ದಾರೆ. ಅವರೊಬ್ಬ ಅನುಭವಿ ನಟ. ಕಳೆದ ವರ್ಷ ರಜತ್ ಜುಬಿಲಿ ಗ್ರಾಮದಲ್ಲಿ ಅವರು ಮಾ ಮಾನಸ ಪಾಲ ಗಾನವನ್ನು ಪ್ರದರ್ಶಿಸುವುದನ್ನು ನಾನು ನೋಡಿದ್ದೆ. ಅವರು ನನ್ನನ್ನು ಗುರುತಿಸಿದರು ಮತ್ತು ಸಂಭಾಷಣೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಅವರು ಹೇಳಿದರು, “ನೀವು ಫೋಟೋ ತೆಗೆದ ನನ್ನ ಸಹ-ನಟರ ನೆನಪಿದೆಯೇ? ಈಗ ಅವರೆಲ್ಲರೂ ಆಂಧ್ರಪ್ರದೇಶದ ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ."
2021ರ ಯಾಸ್ ಮತ್ತು 2020ರ ಅಂಫಾನ್ ಸೇರಿದಂತೆ ಇಲ್ಲಿ ಚಂಡಮಾರುತಗಳು ಸುಂದರಬನ್ ಪ್ರದೇಶದ ಕಲಾವಿದರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಇದು ಈ ಪ್ರದೇಶದಲ್ಲಿ ಋತು ಅವಲಂಬಿತ ವಲಸೆಗೂ ಕಾರಣವಾಗಿದೆ. ನಿಗದಿತ ಆದಾಯವಿಲ್ಲದ ಕಾರಣ ಪಾಲ ಗಾನ್ ಕಾರ್ಯಕ್ರಮಗಳಿಗೆ ಮರಳುವುದು ಕಲಾವಿದರ ಪಾಲಿಗೆ ಕಠಿಣ ಆಯ್ಕೆಯಾಗಿ ಪರಿಣಮಿಸಿದೆ.
“ನನ್ನ ಸಹ-ಕಲಾವಿದರು ಮುಂದಿನ ಮೂರು ತಿಂಗಳು ಆಂಧ್ರಪ್ರದೇಶದಲ್ಲಿರಲಿದ್ದಾರೆ. ಅವರು ಫೆಬ್ರವರಿ ಕಳೆದ ನಂತರ ಬರುತ್ತಾರೆ,” ಎನ್ನುತ್ತಾರೆ ಬನಮಾಲಿ. “ಒಬ್ಬ ವ್ಯಕ್ತಿ ಭತ್ತದ ಗದ್ದೆಗಳಲ್ಲಿ ದುಡಿಯುವ ಮೂಲಕ ಸುಮಾರು 70,000-80,000 ರೂ.ಗಳನ್ನು ಉಳಿಸುತ್ತಾರೆ. ಇದು ದೊಡ್ಡ ಮೊತ್ತದಂತೆ ಕಾಣುತ್ತದೆ. ಆದರೆ ಇದು ಬೆನ್ನು ಮುರಿಯುವಷ್ಟು ಶ್ರಮ ಬೇಡುವ ಕೆಲಸವಾಗಿದೆ” ಎಂದು ಅವರು ಒತ್ತಿ ಹೇಳುತ್ತಾರೆ.
ಇದೇ ಕಾರಣಕ್ಕಾಗಿ ಬನಮಾಲಿ ಈ ಬಾರಿ ಆಂಧ್ರಕ್ಕೆ ವಲಸೆ ಹೋಗಿಲ್ಲ. “ಪಾಲ ಗಾನದಿಂದ ಸಿಗುವ ಸಣ್ಣ ಸಂಪಾದನೆಯಿಂದಲೇ ನಾನು ಖುಷಿಯಾಗಿದ್ದೇನೆ” ಎನ್ನುತ್ತಾರವರು.


ಎಡ: ಗ್ರೀನ್ ರೂಮಿನಲ್ಲಿ ಕಲಾವಿದರು ಮೇಕಪ್ ಮಾಡಿಕೊಳ್ಳುವುದನ್ನು ಕುತೂಹಲದಿಂದ ನೋಡುತ್ತಿರುವ ಪ್ರೇಕ್ಷಕರು. ಬಲ: ಪ್ರಾಣಿಗಳ ರೂಪವನ್ನು ಮಾದರಿಯಾಗಿಟ್ಟುಕೊಂಡು ತಯಾರಿಸಲಾದ ಈ ಮುಖವಾಡಗಳನ್ನು ಕಲಾವಿದರು ಪಾತ್ರಗಳನ್ನು ನಿರ್ವಹಿಸುವಾಗ ಬಳಸುತ್ತಾರೆ

ದಕ್ಷಿಣ ರೈ ಪಾತ್ರದಲ್ಲಿ ದಿಲೀಪ್ ಮಂಡಲ್
ಬನ್‌ಬೀಬಿ ಪ್ರದರ್ಶನದ ಸಂದರ್ಭದಲ್ಲಿ ಸಂಯೋಜಕರು ಸುಮಾರು 20,000 ರೂಪಾಯಿಗಳನ್ನು ಖರ್ಚು ಮಾಡುತ್ತಾರೆ, ಅದರಲ್ಲಿ 12,000 ತಂಡಕ್ಕೆ ನೀಡಲಾಗುತ್ತದೆ ಮತ್ತು ಉಳಿದ ಹಣವನ್ನು ಧ್ವನಿವರ್ಧಕಗಳಿಗೆ ಮತ್ತು ವೇದಿಕೆಯನ್ನು ಸಿದ್ಧಪಡಿಸಲು ಖರ್ಚು ಮಾಡುತ್ತಾರೆ. ಆದಾಯದಲ್ಲಿ ಕುಸಿತದ ಹೊರತಾಗಿಯೂ, ಸ್ಥಳೀಯ ಜನರ ಸಕ್ರಿಯ ಪ್ರೋತ್ಸಾಹ, ಭಾಗವಹಿಸುವಿಕೆ ಮತ್ತು ಆರ್ಥಿಕ ಕೊಡುಗೆಯೊಂದಿಗೆ ಬನ್‌ಬೀಬಿ ಪಾಲ ಗಾನ್ ಉಳಿದುಕೊಂಡಿದೆ.
ಈ ನಡುವೆ, ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ, ಪ್ರೇಕ್ಷಕರ ಗ್ಯಾಲರಿ ತುಂಬಿ ತುಳುಕುತ್ತಿದೆ. ಸಂಗೀತ ವೇಗವನ್ನು ಪಡೆದುಕೊಳ್ಳುವುದರೊಂದಿಗೆ ಇನ್ನೇನು ಪ್ರದರ್ಶನ ಆರಂಭಗೊಳ್ಳಲಿದೆ!
ಉಷಾರಾಣಿ, “ಮಾ ಬನ್‌ಬೀಬಿಯ ಆಶೀರ್ವಾದದೊಂದಿಗೆ, ಕವಿ ಜಾಸಿಮುದ್ದೀನ್ ಅವರ ಚಿತ್ರಕಥೆಯನ್ನು ಆಧರಿಸಿ ನಾವು ಪ್ರದರ್ಶನವನ್ನು ಪ್ರಾರಂಭಿಸಲಿದ್ದೇವೆ” ಎಂದು ಘೋಷಿಸಿದರು. ಹಲವಾರು ಗಂಟೆಗಳ ಕಾಲ ಪ್ರದರ್ಶನ ಆರಂಭವಾಗುತ್ತದೆ ಎಂದು ತಾಳ್ಮೆಯಿಂದ ಕಾಯುತ್ತಿದ್ದ ಪ್ರೇಕ್ಷಕರು, ಅಲರ್ಟ್ ಆಗುತ್ತಾರೆ ಮತ್ತು ಮುಂದಿನ 5 ಗಂಟೆಗಳ ಕಾಲ ನಡೆಯಲಿರುವ ಪ್ರದರ್ಶನಕ್ಕೆ ಅಣಿಯಾಗಿದ್ದಾರೆ.
ಮಾ ಬನ್‌ಬೀಬಿ, ಮಾ ಮಾನಸ ಮತ್ತು ಶಿಬ್ ಠಾಕೂರ್ ದೇವತೆಗಳಿಗೆ ಇನ್ನು ಉಳಿದ ಸಮಯವನ್ನು ಮೀಸಲಿಡಲಾಗುತ್ತದೆ. ದಿಲೀಪ್ ಮಂಡಲ್ ಅವರು ಸುಂದರಬನದ ಪ್ರಮುಖ ಪಾಲ ಗಾನ್ ಕಲಾವಿದರಾಗಿದ್ದು ಅವರು ಇಂದು ದಖಿನ್ ರೈ ಪಾತ್ರವನ್ನು ನಿರ್ವಹಿಸಲಿದ್ದರು.
ದಖಿನ್ ರೈಯ ಹಿಡಿತದಿಂದ ದುಖೇ ಎನ್ನುವ ಸಣ್ಣ ಹುಡುಗನನ್ನು ಬನ್‌ಬೀಬಿ ರಕ್ಷಿಸುವ ಭಾಗವು ಪ್ರೇಕ್ಷಕರಲ್ಲಿ ಕಣ್ಣೀರು ತರಿಸುತ್ತದೆ. 1999-2014ರ ನಡುವೆ ಸುಂದರಬನದ ಕಾಡಿನೊಳಗೆ ಪ್ರವೇಶಿಸಿದ ಅಥವಾ ಅಲ್ಲಿಂದ ಹಾದುಹೋದ 437 ಜನರು ಹುಲಿಗಳಿಂದ ಗಾಯಕ್ಕೊಳಗಾಗಿದ್ದಾರೆ. ಕಾಡಿನೊಳಗೆ ಹೋಗುವಾಗಲೆಲ್ಲ ಹುಲಿ ದಾಳಿಯ ಭಯದಿಂದ ನಡುಗುವ ಜನರಿಗೆ ಮಾ ಬನ್‌ಬೀಬಿಯ ಆಶೀರ್ವಾದಕ್ಕಾಗಿ ಕಾತರನಾಗಿರುವ ದುಖೇಯ ಭಯ ತಮ್ಮದೂ ಹೌದೆನ್ನಿಸಿ ಈ ಪ್ರದರ್ಶನ ಇನಷ್ಟು ಆಪ್ತವಾಗುತ್ತದೆ.


ಎಡ: ತಂತ್ರಜ್ಞರೊಬ್ಬರು ವೇದಿಕೆಯ ಮೇಲಿನ ಮೈಕ್ ಸರಿಪಡಿಸುತ್ತಿರುವುದು. ಬಲ: ಪ್ರದರ್ಶನ ಪ್ರಾರಂಭವಾಗುವುದನ್ನು ಕಾಯುತ್ತಿರುವ ಸುಮಾರು 400 ಜನರ ಕಿಕ್ಕಿರಿದ ಜನಸಮೂಹ


ಎಡ: ಟ್ರೂಪ್ ಮ್ಯಾನೇಜರ್ ಜೋಗಿಂದರ್ ಮಂಡಲ್ ಕಲಾವಿದರಿಗೆ ಅಗತ್ಯವಿದ್ದಾಗ ಪ್ರದರ್ಶನದ ಸಮಯದಲ್ಲಿ ಸಾಲುಗಳನ್ನು ನೆನಪಿಸುತ್ತಾರೆ. ಬಲ: ಪಾಲಾ ಗಾನ್ ಪ್ರದರ್ಶನಕ್ಕೆ ತಾಂತ್ರಿಕ ದೋಷಗಳಿಂದಾಗಿ ಹಲವಾರು ಬಾರಿ ಅಡಚಣೆಯಾಗುತ್ತದೆ, ಹೀಗಾಗಿ ತಂತ್ರಜ್ಞರೊಬ್ಬರು ಅಲರ್ಟ್ ಆಗಿ ಕುಳಿತಿದ್ದಾರೆ
ಇದ್ದಕ್ಕಿದ್ದಂತೆ ಜನರ ನಡುವಿನಿಂದ ದನಿಯೊಂದು ಕೇಳಿ ಬರುತ್ತದೆ, “ಈ ಮೈಕಿನವನು ಏನು ಮಾಡುತ್ತಿದ್ದಾನೆ? ಆಗಿನಿಂದ ನಮಗೆ ಏನೂ ಕೇಳುತ್ತಿಲ್ಲ.” ಪ್ರದರ್ಶನ ಹತ್ತು ನಿಮಿಷಗಳ ಕಾಲ ನಿಲ್ಲುತ್ತದೆ. ತಂತ್ರಜ್ಞರು ಸಮಸ್ಯೆ ಸರಿಪಡಿಸುವವರೆಗೆ ಕಲಾವಿದರಿಗೆ ವಿರಾಮ ಸಿಗುತ್ತದೆ.
ಜಾತ್ರಪಾಲ ತಂಡದ ವ್ಯವಸ್ಥಾಪಕರಾದ ಜೋಗಿಂದ್ರ ಮಂಡಲ್ ಅವರು ವೇದಿಕೆಯ ಮುಂದೆ ಕುಳಿತಿದ್ದಾರೆ. ಅವರು ತಮ್ಮ ಸಾಲುಗಳನ್ನು ಮರೆಯುವ ಕಲಾವಿದರಿಗೆ ಅದನ್ನು ನೆನಪಿಸಿಕೊಡುತ್ತಾರೆ. ಪಾಲಾಗಾನ್ ಪ್ರದರ್ಶನಕ್ಕೆ ಬೇಡಿಕೆ ಕುಸಿಯುತ್ತಿರುವ ಬಗ್ಗೆ ಅವರೂ ಅಸಮಾಧಾನ ಹೊಂದಿದ್ದಾರೆ: "ಬುಕಿಂಗ್ ಎಲ್ಲಿದೆ? ಈ ಮೊದಲು, ಒಂದರ ನಂತರ ಒಂದರಂತೆ ಪ್ರದರ್ಶನಳಿರುತ್ತಿದ್ದವು. ನಮಗೆ ಸಮಯವೇ ಇರುತ್ತಿರಲಿಲ್ಲ. ಈಗ ಅದೆಲ್ಲ ಮುಗಿದು ಹೋದ ಕಾಲ."
ಈ ಕಲೆಯಿಂದ ಬರುವ ಆದಾಯದ ಮೇಲೆ ಅವಲಂಬಿತರಾಗಲು ಸಾಧ್ಯವಾಗದೆ ಸಾಕಷ್ಟು ಕಲಾವಿದರು ಬೇರೆಡೆ ಹೋಗಿರುವುದರಿಂದಾಗಿ ಜೋಗೆಂದ್ರ ಅವರಿಗೆ ಕಲಾವಿದರನ್ನು ಹೊಂದಿಸುವುದು ಕಷ್ಟವಾಗುತ್ತಿದೆ. ಅವರು ದೂರದ ಸ್ಥಳಗಳಿಂದ ಕಲಾವಿದರನ್ನು ಕರೆಸಬೇಕಾಯಿತು. “ಈಗ ಕಲಾವಿದರನ್ನು ಎಲ್ಲಿ ಹುಡುಕುವುದು? ಎಲ್ಲಾ ಕಲಾವಿದರು ಕಾರ್ಮಿಕರಾಗಿ ಮಾರ್ಪಟ್ಟಿದ್ದಾರೆ.”
ಈ ನಡುವೆ ಪ್ರದರ್ಶನ ಮುಗಿಯುತ್ತಾ ಬಂದಿತ್ತು. ಬನ್‌ಬೀಬಿ ಪಾಲ ಗಾನ್ ಕೊನೆಯ ಹಂತಕ್ಕೆ ತಲುಪಿತ್ತು. ನಾನು ಹೇಗೋ ಇನ್ನೊಮ್ಮೆ ಉಷಾರಾಣಿಯವರನ್ನು ಮಾತನಾಡಿಸುವಲ್ಲಿ ಯಶಸ್ವಿಯಾದೆ. ಪಾಲ ಗಾನ್ ಜೊತೆಗೆ ಅವರು ಗೋಸಭಾ ಬ್ಲಾಕಿನ ವಿವಿಧೆಡೆ ರಾಮಾಯಣ ಆಧರಿಸಿದ ಕತೆಗಳನ್ನೂ ಪ್ರದರ್ಶಿಸುತ್ತಾರೆ. ಆದರೆ ಅವರಿಗೆ ಇದರಿಂದ ಸ್ಥಿರವಾದ ಆದಾಯ ಸಿಗುತ್ತಿಲ್ಲ. “ಕೆಲವು ತಿಂಗಳುಗಳಲ್ಲಿ 5,000 ರೂ. ಸಂಪಾದಿಸುತ್ತೇನೆ. ಕೆಲವು ತಿಂಗಳು ಏನೂ ಸಂಪಾದನೆ ಇರುವುದಿಲ್ಲ.”
"ಕಳೆದ ಮೂರು ವರ್ಷಗಳಲ್ಲಿ, ನಾವು ಚಂಡಮಾರುತಗಳು, ಕೋವಿಡ್ -19 ಸಾಂಕ್ರಾಮಿಕ ರೋಗ ಮತ್ತು ಲಾಕ್‌ಡೌನ್‌ಗಳನ್ನು ಎದುರಿಸಿದ್ದೇವೆ" ಎಂದು ಉಷಾರಾಣಿ ಹೇಳುತ್ತಾರೆ. ಈ ಅಡೆತಡೆಗಳ ಹೊರತಾಗಿಯೂ, "ನಾವು ಪಾಲಾ ಗಾನಗಳನ್ನು ಸಾಯಲು ಬಿಡಲಿಲ್ಲ" ಎಂದು ಹೇಳುತ್ತಾ ಈ ವರ್ಷದ ಪ್ರದರ್ಶನ ಮುಗಿಸಿ ತಮ್ಮ ವಸ್ತುಗಳನ್ನು ಪ್ಯಾಕ್ ಮಾಡತೊಡಗಿದರು.

ಉಷಾರಾಣಿ ಗ್ರೀನ್ ರೂಮಿನಲ್ಲಿ ತಾಲೀಮು ನಡೆಸುತ್ತಿರುವುದು

ನಟ ಬಾಪನ್ ಮಂಡಲ್ ಪ್ಲಾಸ್ಟಿಕ್ ಹುಟ್ಟು ಹಿಡಿದು ಕೆಮರಾ ಎದುರು ನಗುತ್ತಿರುವುದು

ಯುವ ಬನ್‌ಬೀಬಿ ಮತ್ತು ದುಖೆ ಪಾತ್ರವನ್ನು ನಿರ್ವಹಿಸುವ ರಾಖಿ ಮಂಡಲ್ ತನ್ನ ಕಲಾವಿದರೊಡನೆ ಮಾತುಕತೆಯಲ್ಲಿ ತೊಡಗಿರುವುದು

ನಟರು ಗ್ರೀನ್ ರೂಮಿನಲ್ಲಿ ತಮ್ಮ ಸಾಲುಗಳನ್ನು ಪೂರ್ವಾಭ್ಯಾಸ ಮಾಡು ತ್ತಿರುವುದು . ದಿಲೀಪ್ ಮಂಡಲ್ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಕುರ್ಚಿಯಲ್ಲಿ ಕುಳಿತು ವೇದಿಕೆಗೆ ಪ್ರವೇಶಿಸಲು ಸೂಚನೆಗಾಗಿ ಕಾಯುತ್ತಿದ್ದಾ ರೆ

ಉಷಾರಾಣಿ ಘರಾನಿ ಪಾಲಾ ಗಾನ್ ಪ್ರಾರಂಭವನ್ನು ಘೋಷಿ ಸುತ್ತಿರುವುದು

ಕಲಾವಿದರು ಮಾ ಬಾನ್‌ಬೀ ಬಿ, ಮಾ ಮಾನಸ ಮತ್ತು ಶಿಬ್ ಠಾಕೂರ್ ದೇ ವರಿಗೆ ಅರ್ಪಿತವಾದ ಪ್ರಾರ್ಥನೆಗಳೊಂದಿಗೆ ಪಾಲಾ ಗಾನ್ ಪ್ರಾರಂಭಿಸುತ್ತಾರೆ

ನಟ ಅರುಣ್ ಮಂಡಲ್ ಮೆಕ್ಕಾದ ಫಕೀರ ಇಬ್ರಾಹಿಂ ಪಾತ್ರವನ್ನು ನಿರ್ವಹಿ ಸುತ್ತಾರೆ

ನಟರು ಬಾನ್‌ಬೀ ಬಿ ಪಾಲಾ ಗಾನ ದ ಒಂದು ದೃಶ್ಯವನ್ನು ಪ್ರದರ್ಶಿಸು ತ್ತಿದ್ದಾರೆ . ಗೊಲಾ ಬೀ ಬಿ ಗೆ (ಹಸಿರು ಬಣ್ಣದಲ್ಲಿ) ತನ್ನ ಇಬ್ಬರು ಮಕ್ಕಳಾದ ಬನ್‌ಬೀ ಬಿ ಮತ್ತು ಷಾ ಜಂಗಲಿ ನಡುವೆ ಆಯ್ಕೆ ಮಾ ಡುವಂತೆ ಒತ್ತಾಯಿಸಲಾಗುತ್ತದೆ. ಅವಳು ಬನ್‌ಬೀ ಬಿಯನ್ನು ತ್ಯಜಿಸಲು ನಿರ್ಧರಿಸುತ್ತಾಳೆ

ರಾಖಿ ಮಂಡಲ್ ಮತ್ತು ಅಂಜಲಿ ಮಂಡಲ್ ಚಿಕ್ಕ ಬನ್‌ಬೀ ಬಿ ಮತ್ತು ಷಾ ಜಂಗಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ

ಬಾಪನ್ ಮಂಡಲ್ ಪ್ರದರ್ಶನದಿಂದ ಪ್ರಭಾವಿತರಾದ ಗ್ರಾಮದ ವೃದ್ಧೆಯೊಬ್ಬರು ಬಹುಮಾನವಾಗಿ ಅವ ನ ಅಂಗಿಗೆ 10 ರೂ.ಗಳ ನೋಟನ್ನು ಪಿನ್ ಮಾಡುತ್ತಾರೆ

ದಖಿನ್ ರೈಯ ತಾಯಿ ನಾರಾಯಣಿಯಾಗಿ ಉಷಾರಾಣಿ ತನ್ನ ಸಾಲುಗಳನ್ನು ಪ್ರಸ್ತುತಪಡಿಸು ತ್ತಿದ್ದಾರೆ . ಪಾಲಾ ಗಾನ ದ ಲ್ಲಿ, ಅವರು ಬನ್‌ಬೀ ಬಿ ಮತ್ತು ಫುಲ್‌ಬೀ ಬಿ ಪಾತ್ರಗಳನ್ನು ಸಹ ನಿರ್ವಹಿಸುತ್ತಾರೆ

ನಟರು ಯುವ ಬನ್‌ಬೀಬಿ ಮತ್ತು ನಾರಾಯಣಿ ನಡುವಿನ ಹೋರಾಟದ ದೃಶ್ಯವನ್ನು ನಟಿಸುತ್ತಿದ್ದಾರೆ

ಜವಾಹರ್ ಕಾಲೋನಿ ಗ್ರಾಮದ ಮಗು ವೊಂದು ಪ್ರದರ್ಶನದಲ್ಲಿ ಸಂಪೂರ್ಣವಾಗಿ ಮಗ್ನವಾಗಿ ರುವುದು

ಬೀಬಿಜಾನ್ ತನ್ನ ಮಗ ದು ಖೆ ಗೆ ವಿದಾಯ ಹೇಳುತ್ತಾಳೆ, ಏಕೆಂದರೆ ಅವನು ಉದ್ಯಮಿ ಧನನೊಂದಿಗೆ ಜೇನುತುಪ್ಪ ಸಂಗ್ರಹಿಸುವ ಕೆಲಸ ವನ್ನು ಕಲಿಯಲು ಕಾಡಿಗೆ ಹೋಗುತ್ತಾನೆ. ಪ್ರೇಕ್ಷಕರಲ್ಲಿ ಅನೇಕರು ಈ ದೃಶ್ಯವನ್ನು ನೋಡಿ ಕಣ್ಣೀರು ಹಾಕುತ್ತಾರೆ

ದೋಣಿ ಯವನು ದುಖೇಯನ್ನು ಅಪಾಯಗಳಿಂದ ತುಂಬಿದ ಕಾಡಿಗೆ ಕರೆದೊಯ್ಯು ತ್ತಿರುವುದು

ದೋಣಿಯವರು ಮತ್ತು ಧನ ಕಾಡಿನಿಂದ ಜೇನುತುಪ್ಪವನ್ನು ಹೇಗೆ ತರು ವುದು ಎಂಬುದರ ಬಗ್ಗೆ ಕಾರ್ಯತಂತ್ರ ರೂಪಿ ಸುತ್ತಿರುವುದು

ಪಾಲಾ ಗಾನ ದ ಒಂದು ದೃಶ್ಯದಲ್ಲಿ ದಖಿನ್ ರೈ ಧನನ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ, ದುಖೇಯನ್ನು ತನ್ನ ತೆರಿಗೆಯಾಗಿ ತ್ಯಾಗ ಮಾಡುವಂತೆ ಕೇಳುತ್ತಾನೆ. ಆಗ ಮಾತ್ರ ವೇ ಅವನು ಕಾಡಿನಲ್ಲಿ ಜೇನುತುಪ್ಪವನ್ನು ಕಾಣಲು ಸಾಧ್ಯವೆನ್ನುತ್ತಾನೆ

ಉಷಾರಾಣಿ ಘರಾನಿ, ಅಲೌಕಿಕ ರೂಪದ ಮಾ ಬನ್‌ಬೀಬಿ ವೇಷ ಧರಿಸಿ ವೇದಿಕೆಯನ್ನು ಪ್ರವೇಶಿಸುತ್ತಾ ರೆ

ಕಾಡಿನಲ್ಲಿ, ದಾರಿ ಕಳೆದುಕೊಂಡ ದುಖೇ ಮಾ ಬನ್‌ಬೀ ಬಿಯ ಬಳಿ ದಖಿನ್ ರೈಯಿಂದ ರಕ್ಷಿಸಲು ಪ್ರಾರ್ಥಿಸುತ್ತಾನೆ. ಮಾ ಬನ್‌ಬೀ ಬಿ ಅವನ ಆಸೆಯನ್ನು ಪೂರೈಸಿ, ದಖಿನ್ ರೈಯ ನ್ನು ಸೋಲಿಸಿ ಅವನನ್ನು ಸುರಕ್ಷಿತವಾಗಿ ಅವನ ತಾಯಿ ಬೀಬಿಜಾನ್ ಬಳಿ ಹಿಂದಿರುಗಿಸುತ್ತಾಳೆ. ದುಖೇ ಗೆ ದೊಡ್ಡ ಪ್ರಮಾಣದ ಜೇನುತುಪ್ಪ ವರವಾಗಿ ದೊರೆಯುತ್ತದೆ , ಅದು ಅವನನ್ನು ಶ್ರೀಮಂತನನ್ನಾಗಿ ಮಾಡುತ್ತದೆ

ಚಿಟ್ಟೆಯ ಚಿತ್ರ , ಮತ್ತು 'ಸಮಪ್ತಾ' (' ಮುಗಿಯಿತು ') ಎಂಬ ಪದವು ಸ್ಕ್ರಿಪ್ಟ್ ನ ಮುಕ್ತಾಯವನ್ನು ಸೂಚಿಸುತ್ತದೆ
ಅನುವಾದ : ಶಂಕರ . ಎನ್ . ಕೆಂಚನೂರು