ತುಳಸಿಯವರನ್ನು ಒಂಬತ್ತು ವರ್ಷದ ಪುಟ್ಟ ಅಂಜಲಿಯ ಅಮ್ಮ ಎಂದೇ ಗುರುತಿಸಲಾಗುತ್ತದೆ. ತನ್ನ ಮಗಳ ಬಗ್ಗೆ ಹೇಳುತ್ತಾ ಈ ಸಂತೃಪ್ತ ತಾಯಿ ತನ್ನ ತುರುಬನ್ನು ಕಟ್ಟಿಕೊಂಡರು. ಗುಲಾಬಿ ಬಣ್ಣದ ಸೀರೆಯನ್ನು ಅಚ್ಚುಕಟ್ಟಾಗಿ ಉಟ್ಟುಕೊಂಡಿದ್ದ ತುಳಸಿ ಓರ್ವ ಟ್ರಾನ್ಸ್ ಮಹಿಳೆ ಮತ್ತು ಒಬ್ಬ ಮಗಳ ಹೆಮ್ಮೆಯ ತಾಯಿ.
ತುಳಸಿ ತನ್ನ ಹರೆಯದ ದಿನಗಳಲ್ಲಿ ತನ್ನನ್ನು ತಾನು ʼಕಾರ್ತಿಕ(ಗ)ʼ ಎಂದು ಗುರುತಿಸಿಕೊಳ್ಳುತ್ತಿದ್ದರು. ಆದರೆ ಅಧಿಕಾರಿಯೊಬ್ಬರು ಪಡಿತರ ಚೀಟಿಯಲ್ಲಿ ಅವರ ಹೆಸರನ್ನು ಬರೆಯುವ ಸಂದರ್ಭದಲ್ಲಿ ಮಾಡಿದ ತಪ್ಪಿನಿಂದಾಗಿ ಅವರಿಗೆ ʼತುಳಸಿʼ ಎನ್ನುವ ಲಿಂಗ ನಿರ್ದಿಷ್ಟವಾದ ಹೆಸರು ಬಂತು. ಅವರು ಎರಡೂ ಹೆಸರನ್ನು ಒಪ್ಪಿಕೊಂಡಿದ್ದು ಎರಡರಲ್ಲಿ ಯಾವ ಹೆಸರಿನಿಂದ ಕರೆದರೂ ಓಗೊಡುತ್ತಾರೆ.
ಅವರು ತಮ್ಮ ಮಗಳು ಅಂಜಲಿಯೊಂದಿಗೆ ತಮಿಳುನಾಡಿನ ತಿರುಪೊರೂರ್ ತಾಲ್ಲೂಕಿನ ಇರುಳ ಕುಗ್ರಾಮವಾದ ದರ್ಗಾಸ್ ಎನ್ನುವಲ್ಲಿ ಸಣ್ಣ ಗುಡಿಸಲೊಂದರಲ್ಲಿ ಬದುಕುತ್ತಿದ್ದಾರೆ. ಅಂಜಲಿ ಮಗುವಾಗಿರುವಾಗಲೇ ತುಳಸಿಯ ಹೆಂಡತಿ ಬಿಟ್ಟು ಹೋಗಿದ್ದರು. ಹೀಗಾಗಿ ತುಳಸಲಿ ಮಗುವನ್ನು ಒಬ್ಬರೇ ಪಾಲನೆ ಮಾಡಿದರು. ದಂಪತಿಗಳಿಗೆ ಮೊದಲು ಹುಟ್ಟಿದ ಮಗನೂ ಇದ್ದ. ಆದರೆ ಅವನು 2016ರಲ್ಲಿ ಬೀಸಿದ ಚಂಡಮಾರುತಕ್ಕೆ ಬಲಿಯಾದ. ಆಗ ಅವನಿಗೆ ಒಂಬತ್ತು ವರ್ಷ.
ಈಗ ನಲವತ್ತರ ಆಸುಪಾಸಿನಲ್ಲಿರುವ ತುಳಸಿ ಹಲವಾರು ವರ್ಷಗಳಿಂದ ತಿರುನಂಗೈ (ಟ್ರಾನ್ಸ್ ಮಹಿಳೆ ಪದದ ತಮಿಳು ರೂಪ) ಗುಂಪಿನ ಭಾಗವಾಗಿದ್ದಾರೆ. ತನ್ನ ತೊಡೆಯ ಮೇಲೆ ಕುಳಿತಿರುವ ಅಂಜಲಿಯನ್ನು ಪ್ರೀತಿಯಿಂದ ನೋಡುತ್ತಾ ಅವರು ಮುಂದುವರಿಸುತ್ತಾರೆ, "ಆಗೆಲ್ಲ ನಾನು ಅವಳನ್ನು ಕೈಯಲ್ಲಿ ಹಾಲಿನ ಬಾಟಲಿ ಹಿಡಿದು ನಮ್ಮ [ತಿರುನಂಗೈ] ಸಭೆಗಳಿಗೆ ಕರೆದೊಯ್ಯುತ್ತಿದ್ದೆ."


ಎಡ: ತುಳಸಿ ತನ್ನ ಮಗಳು ಅಂಜಲಿಯೊಂದಿಗೆ ತಮಿಳುನಾಡಿನ ತಿರುಪೊರೂರ್ ತಾಲ್ಲೂಕಿನ ಇರುಳರ್ ಕುಗ್ರಾಮವಾದ ದರ್ಗಾ ಎನ್ನುವಲ್ಲಿರುವ ತಮ್ಮ ಮನೆಯಲ್ಲಿ. ಬಲ: ಅಂಜಲಿ ಮಗುವಾಗಿದ್ದ ಸಂದರ್ಭದಲ್ಲಿ ಅವಳನ್ನು ತುಳಸಿಯವರು ಎತ್ತಿಕೊಂಡಿರುವ ಫೋಟೊ


ಎಡ: ಕೊವಿಡ್ ಸೋಂಕಿಗೆ ಬಲಿಯಾದ ತೇನ್‌ಮೊಳಿಯವರೊಂದಿಗೆ (ನೀಲಿ ಸೀರೆಯಲ್ಲಿರುವವರು) ಹಾಡುತ್ತಿರುವುದು
ಅಂಜಲಿಗೆ ಸುಮಾರು ವರ್ಷ ಪ್ರಾಯವಿರುವಾಗ ತುಳಸಿಯವರಿಗೆ ತಾನು ಅವಳ ತಾಯಿಯಾಗಿ ಗುರುತಿಸಿಕೊಳ್ಳುವ ಹಂಬಲವಾಯಿತು. ಅಂದಿನಿಂದ ಅವರು ವೇಸ್ಟಿ ಉಡುವ ಬದಲು ಸೀರೆಯನ್ನು ಮಾತ್ರ ಉಡತೊಡಗಿದರು. ತನ್ನ ಈ ನಿರ್ಧಾರದ ಹಿಂದೆ ತುಳಸಿ ತಾನು ಆಯಾ (ಅಜ್ಜಿ) ಎಂದು ಪರಿಗಣಿಸುವ ಪರಿಗಣಿಸುವ 50 ವರ್ಷದ ತಿರುನಂಗೈ ಕುಮುಧಿಯವರ ಸಲಹೆಯ ಪಾತ್ರವೂ ಇದೆ ಎನ್ನುತ್ತಾರೆ.
ತನ್ನ ಲಿಂಗ ಗುರುತನ್ನು ಪ್ರಾರಂಭಿಸಿದ ಈ ಕ್ಷಣವನ್ನು ಉಲ್ಲೇಖಿಸಿ ಅವರು ಹೇಳುತ್ತಾರೆ, “ವಿಳಂಬರಮಾವೇ ವಂದಿಟ್ಟೇನೆ [ನಾನು ಸಾರ್ವಜನಿಕವಾಗಿಯೇ ಗುರುತಿಸಿಕೊಂಡೆ].”
ಈ ಪರಿವರ್ತನೆಯ ಗುರುತಾಗಿ ಅಂದು ತುಳಸಿ ತಿರುವಳ್ಳೂರು ಜಿಲ್ಲೆಯ ವೇಡೈಯೂರ್ನ 40 ವರ್ಷದ ಸಂಬಂಧಿ ರವಿಯೊಂದಿಗೆ ಧಾರ್ಮಿಕವಾಗಿ ವಿವಾಹವಾದರು. ತಮಿಳುನಾಡಿನ ಟ್ರಾನ್ಸ್ ಮಹಿಳೆಯರಲ್ಲಿ ಸಾಮಾನ್ಯವಾಗಿರುವ ಈ ಪದ್ಧತಿಯಲ್ಲಿ, ಮದುವೆ ಕೇವಲ ಸಾಂಕೇತಿಕವಾಗಿರುತ್ತದೆ. ರವಿಯ ಕುಟುಂಬ - ಅವರ ಪತ್ನಿ ಗೀತಾ ಮತ್ತು ಇಬ್ಬರು ಹದಿಹರೆಯದ ಹೆಣ್ಣುಮಕ್ಕಳು, ತುಳಸಿಯನ್ನು ತಮ್ಮ ಕುಟುಂಬಕ್ಕೆ ಕೃಪೆಯನ್ನಾಗಿ ಪಡೆದರು. "ನನ್ನ ಪತಿ ಸೇರಿದಂತೆ ನಾವೆಲ್ಲರೂ ಅವಳನ್ನು 'ಅಮ್ಮ' ಎಂದು ಕರೆಯುತ್ತೇವೆ. ಅವರು ನಮಗೆ ದೇವರಿದ್ದಂತೆ" ಎಂದು ಗೀತಾ ಹೇಳುತ್ತಾರೆ.
ದರ್ಗಾಸ್ ಎನ್ನುವ ಊರಿನಲ್ಲೇ ಉಳಿದುಕೊಂಡಿರುವ ತುಳಸಿ ವಿಶೇಷ ಸಂದರ್ಭಗಳಲ್ಲಿ ತನ್ನ ಕುಟುಂಬವನ್ನು ಬೇಟಿಯಾಗುತ್ತಾರೆ.
ಬಹುತೇಕ ಇದೇ ಸಮಯದಲ್ಲಿ ಅವರ ಏಳು ಜನ ಒಡಹುಟ್ಟಿದವರು ಸಹ ಅವರನ್ನು ಅಮ್ಮ' ಅಥವಾ 'ಶಕ್ತಿ' (ದೇವತೆ) ಎಂದು ಕರೆಯಲು ಪ್ರಾರಂಭಿಸಿದರು. ತುಳಸಿಯವರ ಈ ಪರಿವರ್ತನೆ ದೇವಿಯ ಕೃಪೆ (ಅಮ್ಮನ್ ಅರುಳ್) ಎನ್ನುವುದು ಅವರ ನಂಬಿಕೆ.


ಎಡ: ತುಳಸಿ ಮಹಿಳೆಯಾಗಿ ಗುರುತಿಸಿಕೊಳ್ಳಲು ಆರಂಭಿಸಿದ ದಿನದ ಗುರುತಿಗಾಗಿ ಅವರು ರವಿಯವರೊಂದಿಗೆ ಮದುವೆಯಾದರು. ಬಲ: ರವಿಯವರ ಪತ್ನಿ ಗೀತಾ ತುಳಸಿಯವರಿಗೆ ಹೂವು ಮುಡಿಸುತ್ತಿದ್ದರೆ ಅಂಜಲಿ, ರವಿ ಮತ್ತು ಅವರ ಮಗಳು ಅದನ್ನು ನೋಡುತ್ತಿದ್ದಾರೆ


ತುಳಸಿ ಮತ್ತು ರವಿ ಅಂಜಲಿ (ಎಡ). ತುಳಸಿಯ ಕುಟುಂಬವು ಅವರನ್ನು ದೇವರ ಆಶೀರ್ವಾದವೆಂದು ಪರಿಗಣಿಸುತ್ತದೆ. 'ಅಮ್ಮನ್ [ದೇವತೆ] ಮನೆಗೆ ಬಂದಂತೆ ಭಾಸವಾಗುತ್ತಿದೆ' ಎಂದು ಅವರ ದಿವಂಗತ ತಾಯಿ ಸೆಂತಾಮರೈ ಹೇಳಿದ್ದರು
ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಇರುಳ ಸಮುದಾಯಕ್ಕೆ ಅವರ ಲಿಂಗದ ಕುರಿತು ತಿಳಿದಿದ್ದ ಕಾರಣ ಮುಚ್ಚುಮರೆ ಮಾಡುವ ಅವಶ್ಯಕತೆ ಇದ್ದಿರಲಿಲ್ಲ ಎಂದು ತುಳುಸಿ ಹೇಳುತ್ತಾರೆ. "ನಾವು ಮದುವೆಯಾಗುವ ಮೊದಲು ನನ್ನ ಹೆಂಡತಿಗೂ ನನ್ನ ಬಗ್ಗೆ ಚೆನ್ನಾಗಿ ತಿಳಿದಿತ್ತು" ಎಂದು ತುಳಸಿ ಹೇಳುತ್ತಾರೆ. "ನಾನು ಕುಡುಮಿ (ಕೂದಲಿನ ಸಣ್ಣ ಗಂಟು) ಧರಿಸಿದಾಗ ಅಥವಾ ಸೀರೆ ಧರಿಸಲು ಪ್ರಾರಂಭಿಸಿದಾಗ ನನಗೆ ಯಾರೂ ವರ್ತನೆ ಬದಲಿಸಿಕೊಳ್ಳುವಂತೆಯಾಗಲಿ ಅಥವಾ ಇಂತಹ ಉಡುಪು ತೊಡಬಾರದೆಂದಾಗಲಿ ಯಾರೂ ಆಕ್ಷೇಪಿಸಿರಲಿಲ್ಲ” ಎಂದು ಅವರು ಹೇಳುತ್ತಾರೆ.
ತುಳಸಿಯವರ ಗೆಳತಿ ಪೂಂಗಾವನಮ್ ತನ್ನ ಗೆಳೆಯರು ತುಳಸಿ ಯಾಕೆ ʼಹುಡುಗಿಯ ಹಾಗೆʼ ಆಡುತ್ತಾಳೆ ಎಂದು ಕೇಳುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ತುಳಸಿಯನ್ನಾಗಲಿ ಅಥವಾ ಅಂಜಲಿಯನ್ನಾಗಲಿ ಯಾರೂ ಗೇಲಿ ಮಾಡುವುದಿಲ್ಲ ಎನ್ನುತ್ತಾ, “ನಮ್ಮ ಹಳ್ಳಿಯೇ ನಮ್ಮ ಜಗತ್ತಾಗಿತ್ತು. ನಾವು ಇಂತಹವರನ್ನು [ತುಳಸಿ] ಕಂಡಿರಲಿಲ್ಲ. ನಂತರ ಜನರು ಹೀಗೂ ಇರುತ್ತಾರೆ ಎಂದುಕೊಂಡು ಅದನ್ನು ಸ್ವೀಕರಿಸಿದೆವು” ಎಂದು ಹೇಳಿದರು.
ತುಳಸಿಯವರ ಪೋಷಕರಾದ ಸೆಂತಾಮರೈ ಮತ್ತು ಎಂಬತ್ತು ವರ್ಷಕ್ಕೆ ಹತ್ತಿರದಲ್ಲಿರುವ ಗೋಪಾಲ್ ಕೂಡಾ ತಮ್ಮ ಮಗಳನ್ನು ಅವಳು ಇರುವಂತೆಯೇ ಒಪ್ಪಿಕೊಂಡಿದ್ದಾರೆ. ತುಳಸಿ ಚಿಕ್ಕವಳಾಗಿದ್ದಾಗ ಬಹಳ ಸೂಕ್ಷ್ಮ ಸ್ವಭಾವವನ್ನು ಕಂಡ ಅವರು “ಅವನ ಮನಸ್ಸ ಪುಣ್‌ಪಡುತ ಕೂಡಾದು [ನಾವು ಅವನ ಭಾವನೆಗಳನ್ನು ನೋಯಿಸಬಾರದು]” ಎನ್ನುವ ತೀರ್ಮಾನಕ್ಕೆ ಬಂದಿದ್ದರು.
“ತುಳಸಿ ಹೀಗಿರುವುದು [ಸೀರೆ ಉಡುವುದು] ಒಳ್ಳೆಯ ವಿಷಯ. ಅವಳು ಮನೆಗೆ ಬಂದರೆ ಅಮ್ಮನ್ ಮನೆಗೆ ಬಂದಂತೆನ್ನಿಸುತ್ತದೆ” ಎಂದು ಸೆಂತಾಮರೈ ಹೇಳುತ್ತಾರೆ. ಇದನ್ನು ಹೇಳುವಾಗ ಅವರು ಕೈಮುಗಿದ ಭಂಗಿಯಲ್ಲಿ ಕಣ್ಣು ಮುಚ್ಚಿ ನಮಸ್ಕರಿಸಿ ತುಳಸಿ ತಮ್ಮ ಮನೆ ದೇವರು ಎನ್ನುವ ಭಾವನೆಯನ್ನು ವ್ಯಕ್ತಪಡಿಸಿದ್ದರು. ಸೆಂತಾಮರೈ 2023ರ ಕೊನೆಯಲ್ಲಿ ನಿಧನರಾದರು.
ಪ್ರತಿ ತಿಂಗಳು, ತುಳಸಿ ತನ್ನ ತಿರುನಂಗೈ ಸಮುದಾಯದೊಂದಿಗೆ 125 ಕಿಲೋಮೀಟರ್ ಪ್ರಯಾಣಿಸಿ ವಿಲ್ಲುಪುರಂ ಜಿಲ್ಲೆಯ ದೇವಾಲಯ ಪಟ್ಟಣವಾದ ಮೇಲ್ಮಲಯನೂರಿಗೆ ಭೇಟಿ ನೀಡಿ ಭಕ್ತರನ್ನು ಆಶೀರ್ವದಿಸುತ್ತಾರೆ. "ತಿರುನಂಗೈಯ ಮಾತು ನಿಜವಾಗುತ್ತದೆ ಎಂದು ಜನರು ನಂಬುತ್ತಾರೆ. ನಾನು ಯಾವುದೇ ಕಾರಣಕ್ಕೂ ಜನರನ್ನು ಶಪಿಸುವುದಿಲ್ಲ, ಅವರನ್ನು ಆಶೀರ್ವದಿಸುತ್ತೇನೆ ಮತ್ತು ಅವರು ಕೊಟ್ಟಿದ್ದನ್ನು ಸ್ವೀಕರಿಸುತ್ತೇನೆ" ಎಂದು ಅವರು ಹೇಳುತ್ತಾರೆ. ಪ್ರತಿದಿನ ಸೀರೆ ಉಡುವ ನಿರ್ಧಾರವು ತನ್ನ ಆಶೀರ್ವಾದವನ್ನು ಹೆಚ್ಚು ಪರಿಣಾಮಕಾರಿಯಾಗಿಸಿದೆ ಮತ್ತು ಇದರಿಂದಾಗಿಯೇ ಕುಟುಂಬವೊಂದನ್ನು ಆಶೀರ್ವದಿಸಲು ಕೇರಳಕ್ಕೆ ಪ್ರಯಾಣಿಸಿದ್ದೇನೆ ಎಂದು ಅವರು ನಂಬುತ್ತಾರೆ.


ಎಡ: ತುಳಸಿ ಮೇಲ್ಮಲಯನೂರು ದೇವಾಲಯದ ಉತ್ಸವಕ್ಕೆ ಸಿದ್ಧವಾಗುತ್ತಿದ್ದಾರೆ. ಬಲ: ತುಳಸಿಯ ತಿರುನಂಗೈ ಕುಟುಂಬಕ್ಕೆ ಸೇರಿದ ಆಚರಣೆಯಯ ಬುಟ್ಟಿಗಳು. ಜನರನ್ನು ಆಶೀರ್ವದಿಸಲು ಟ್ರಾನ್ಸ್ ಮಹಿಳೆಯರು ದೇವಾಲಯದ ಮುಂದೆ ಒಟ್ಟುಗೂಡುತ್ತಾರೆ


ಎಡ: ತುಳಸಿ ತನ್ನ ತಿರುನಂಗೈ ಕುಟುಂಬ ಮತ್ತು ರವಿ ಸೇರಿದಂತೆ ತನ್ನ ವಿಸ್ತೃತ ಕುಟುಂಬದ ಸದಸ್ಯರೊಂದಿಗೆ ಫೆಬ್ರವರಿ 2023ರಲ್ಲಿ ಮೇಲ್ಮಲಯನೂರು ದೇವಾಲಯದ ಉತ್ಸವದಲ್ಲಿ ಭಾಗವಹಿಸಿದ್ದರು. ಬಲ: ತುಳಸಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಮತ್ತು ಭಕ್ತರನ್ನು ಆಶೀರ್ವದಿಸುತ್ತಿರುವುದು. 'ನಾನು ಯಾವುದೇ ಕಾರಣಕ್ಕೂ ಜನರನ್ನು ಶಪಿಸುವುದಿಲ್ಲ, ಅವರನ್ನು ಆಶೀರ್ವದಿಸುತ್ತೇನೆ ಮತ್ತು ಅವರು ಕೊಟ್ಟಿದ್ದನ್ನು ಸ್ವೀಕರಿಸುತ್ತೇನೆ' ಎಂದು ಅವರು ಹೇಳುತ್ತಾರೆ
ಮೊದಲು ಅವರು ಸಾಮಾನ್ಯ ಕಾಯಿಲೆಗಳಿಗೆ ಗಿಡಮೂಲಿಕೆ ಔಷಧಿಗಳನ್ನು ನೀಡುತ್ತಿದ್ದರು. ಅದರಿಂದ ಸಣ್ಣ ಮಟ್ಟದ ಆದಾಯವೂ ಬರುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಅದು ಕಡಿಮೆಯಾಗುತ್ತಿದೆ. "ನಾನು ಬಹಳಷ್ಟು ಜನರನ್ನು ಗುಣಪಡಿಸಿದ್ದೇನೆ. ಆದರೆ ಈಗ, ಅವರೆಲ್ಲರೂ ತಮ್ಮ ಮೊಬೈಲ್ ನೋಡಿಕೊಂಡು ಸ್ವಯಂ ವೈದ್ಯರಾಗಿದ್ದಾರೆ! ಒಂದು ಕಾಲದಲ್ಲಿ ನಾನು 50,000 ರೂಪಾಯಿಗಳವರೆಗೂ ಸಂಪಾದಿಸುತ್ತಿದ್ದೆ. ಅದು ನಂತರ 40,000 ನಂತರ 30,000 ಆಯಿತು, ಈಗ ವರ್ಷಕ್ಕೆ 20,000 ಕೂಡಾ ಗಳಿಸುವುದಿಲ್ಲ" ಎಂದು ಅವರು ನಿಟ್ಟುಸಿರು ಬಿಡುತ್ತಾರೆ. ಕೋವಿಡ್ ವರ್ಷಗಳು ಅವರ ಪಾಲಿಗೆ ಅತ್ಯಂತ ಕಠಿಣವಾಗಿದ್ದವು.
ಇರುಳರ ದೇವರಾದ ಕನ್ನಿಯಮ್ಮನ್ ದೇವಾಲಯವನ್ನು ನೋಡಿಕೊಳ್ಳುವುದರ ಜೊತೆಗೆ, ತುಳಸಿ ತುಳಸಿ ಐದು ವರ್ಷಗಳ ಹಿಂದೆ ನೂರ್ ನಾಲ್ ವೇಲೈ (ಮನರೇಗಾ) ಕೆಲಸಕ್ಕೂ ಹೋಗತೊಡಗಿದರು. ಅವರು ದರ್ಗಾಸ್ ಊರಿನ ಇತರ ಮಹಿಳೆಯರೊಂದಿಗೆ ಸೇರಿ ಹೊಲಗಳಲ್ಲಿ ಕೆಲಸ ಮಾಡುತ್ತಾರೆ. ಈ ಮೂಲಕ ದಿನಕ್ಕೆ 240 ರೂಪಾಯಿಗಳನ್ನು ಸಂಪಾದಿಸುತ್ತಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು ಗ್ರಾಮೀಣ ಕುಟುಂಬಗಳಿಗೆ ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ಖಾತರಿಪಡಿಸುತ್ತದೆ.
ಅಂಜಲಿಯನ್ನು ಕಾಂಚೀಪುರಂ ಜಿಲ್ಲೆಯ ಬಳಿಯ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ದಾಖಲಿಸಲಾಗಿದೆ. ತುಳಸಿ ಶಿಕ್ಷಣ ನನ್ನ ಆದ್ಯತೆ ಎಂದು ಹೇಳುತ್ತಾರೆ. "ನಾನು ಅವಳಿಗೆ ಶಿಕ್ಷಣ ನೀಡಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ. ಕೋವಿಡ್ ಸಮಯದಲ್ಲಿ, ದೂರದ ಹಾಸ್ಟೆಲ್ಲಿನಲ್ಲಿರುವುದು ಅವಳಿಗೆ ಇಷ್ಟವಿರಲಿಲ್ಲ. ಆದ್ದರಿಂದ ನಾನು ಅವಳನ್ನು ನನ್ನ ಹತ್ತಿರ ಇಟ್ಟುಕೊಂಡೆ. ಆದರೆ ಇಲ್ಲಿ [ಅವಳಿಗೆ] ಕಲಿಸಲು ಯಾರೂ ಇರಲಿಲ್ಲ" ಎಂದು ಅವರು ಹೇಳುತ್ತಾರೆ. 2023ರ ಆರಂಭದಲ್ಲಿ ಎರಡನೇ ತರಗತಿಯವರೆಗೆ ಓದಿದ್ದ ತುಳಸಿ, ಅಂಜಲಿಯನ್ನು ಶಾಲೆಗೆ ಸೇರಿಸಲು ಹೋದಾಗ, ಅವರನ್ನು ಮೊದಲ ತೃತೀಯ ಲಿಂಗಿ ಪೋಷಕರಾಗಿ ಗೌರವಿಸಲಾಯಿತು.
ತುಳಸಿಯವರ ಕೆಲವು ತಿರುನಂಗೈ ಸ್ನೇಹಿತರು ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರೂ, "ಎಲ್ಲರೂ ನನ್ನನ್ನು ನಾನು ಇರುವಂತೆಯೇ ಸ್ವೀಕರಿಸುತ್ತಾರೆ, ಈ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಗತ್ಯವೇನಿದೆ?" ಎಂದು ಅವರು ಹೇಳುತ್ತಾರೆ.
ಆದರೆ ಅವರ ಗುಂಪಿನಲ್ಲಿ ಈ ಬಗ್ಗೆ ಪದೇ ಪದೇ ನಡೆಯುವ ಚರ್ಚೆಯು, ಈ ಚಿಕಿತ್ಸೆಯಲ್ಲಿ ಅಡ್ಡ ಪರಿಣಾಮಗಳ ಹೊರತಾಗಿಯೂ ಅದನ್ನು ಪರಿಶೀಲಿಸುವಂತೆ ಮಾಡುತ್ತಿದೆ: “ಈ ಆಪರೇಷನ್ ಮಾಡಿಸಿಕೊಳ್ಳಲು ಬೇಸಿಗೆ ಅತ್ಯಂತ ಉತ್ತಮ ಸಮಯ ಆಗ ಬೇಗ ಗುಣವಾಗುತ್ತದೆ.”


ತುಳಸಿ ಗಿಡಮೂಲಿಗೆ ಔಷಧಿಗಳನ್ನು ಸಹ ನೀಡುತ್ತಾರೆ. ಅವರು ದರ್ಗಾಸ್ಸಿನಲ್ಲಿರುವ ತಮ್ಮ ಮನೆಯ ಸುತ್ತ ಔಷಧೀಯ ಗಿಡಗಳ ಹುಡುಕಾಟದಲ್ಲಿದ್ದಾರೆ. ಬಲ: ಮೇಲ್ಮಲಯನೂರು ದೇವಸ್ಥಾನದಲ್ಲಿ ತುಳಸಿ ಮತ್ತು ಅಂಜಲಿ


'ನಾನು ಈಗ ಹೆಚ್ಚು ಸಂತೋಷವಾಗಿದ್ದೇನೆ!' ಎಂದು ಅವರು ನಗುತ್ತಾ ಹೇಳುತ್ತಾರೆ ಮತ್ತು ದೇವಾಲಯದ ಉತ್ಸವದ ಸಮಯದಲ್ಲಿ ಸಾಂದರ್ಭಿಕ ನೃತ್ಯ ಮಾಡುತ್ತಾರೆ
ಇದಕ್ಕೆ ಖರ್ಚಾಗುವ ಮೊತ್ತ ಸಣ್ಣದಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸರ್ಜರಿ ಮತ್ತು ಆಸ್ಪತ್ರೆ ವೆಚ್ಚ 50,000 ರೂ. ಬೇಕಾಗುತ್ತದೆ. ಅವರು ಟ್ರಾನ್ಸ್ ವ್ಯಕ್ತಿಗಳಿಗೆ ತಮಿಳುನಾಡು ಸರ್ಕಾರ ರೂಪಿಸಿರುವ ನೀತಿಯಡಿ ದೊರಕುವ ಸಹಾಯವನ್ನು ಪಡೆಯುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ. ಈ ನೀತಿಯಡಿ ಟ್ರಾನ್ಸ್ ವ್ಯಕ್ತಿಗಳಿಗೆ ಲಿಂಗ ಬದಲಾವಣೆಗೆ ಸಹಾಯ ದೊರೆಯುತ್ತದೆ.
ಫೆಬ್ರವರಿ 2023ರಲ್ಲಿ, ತುಳಸಿ ಸೆಂತಾಮರೈ ಮತ್ತು ಅಂಜಲಿ ಜೊತೆ ಮಸಾಣ ಕೊಳ್ಳೈ (ಮಾಯಾನಾ ಕೊಳ್ಳೈ ಎಂದೂ ಕರೆಯುತ್ತಾರೆ) ಎಂಬ ಜನಪ್ರಿಯ ಹಬ್ಬವನ್ನು ಆಚರಿಸಲು ಮೇಲ್ಮಲಯನೂರ್ ದೇವಸ್ಥಾನಕ್ಕೆ ಭೇಟಿ ನೀಡಿದರು.
ಅಂಜಲಿ ತನ್ನ ತಾಯಿಯ ಕೈ ಹಿಡಿದು ಜನದಟ್ಟಣೆಯ ದೇವಾಲಯದ ಬೀದಿಗಳಲ್ಲಿ ಹಳೆಯ ಸ್ನೇಹಿತರನ್ನು ಭೇಟಿಯಾದರು. ರವಿ ಮತ್ತು ಗೀತಾ ತಮ್ಮ ವಿಸ್ತೃತ ಕುಟುಂಬಗಳೊಂದಿಗೆ ಬಂದಿದ್ದರು. ತುಳಸಿಯವರ ತಿರುನಂಗೈ ಕುಟುಂಬ - ಅವರ ಗುರು, ಸಹೋದರಿಯರು ಮತ್ತು ಇನ್ನೂ ಅನೇಕರು ಅವರೊಂದಿಗೆ ಸೇರಿಕೊಂಡರು.
ಹಣೆಯ ಮೇಲೆ ದೊಡ್ಡ ಕೆಂಪು ಕುಂಕುಮವಿರಿಸಿಕೊಂಡು ಉದ್ದನೆ ಚೌಲಿಯ ಜಡೆ ಹಾಕಿಕೊಂಡಿದ್ದ ತುಳಸಿ ಎಲ್ಲರೊಂದಿಗೆ ಹರಟೆ ಹೊಡೆಯುತ್ತಿದ್ದ ತುಳಸಿ “ನಾನೀಗ ಬಹಳ ಖುಷಿಯಾಗಿದ್ದೇನೆ” ಎಂದರು. ಅವರು ಅಂದು ಸಂಭ್ರಮದಿಂದ ನಲಿಯುತ್ತಾ ಆಗಾಗ ಕುಣಿಯುತ್ತಾ ಸಂಭ್ರಮಿಸುತ್ತಿದ್ದರು.
“ಅಂಜಲಿಯ ಬಳಿ ನಿನಗೆ ಎಷ್ಟು ಅಮ್ಮ ಎಂದು ಕೇಳಿ” ಎಂದು ತುಳಸಿ ಹಬ್ಬದಲ್ಲಿ ನನ್ನೊಂದಿಗೆ ಹೇಳಿದರು.
ನಾನು ಅಂಜಲಿ ಬಳಿ ಕೇಳಿದೆ. ಅವಳು ತಕ್ಷಣ “ಇಬ್ಬರು” ಎಂದು ತುಳಸಿ ಮತ್ತು ಗೀತಾರ ಕಡೆ ಕೈ ತೋರಿಸಿದಳು.
ಅನುವಾದ: ಶಂಕರ. ಎನ್. ಕೆಂಚನೂರು