“ನೀರು ಏರಿದಂತೆ ನಮ್ಮ ಎದೆಯಲ್ಲಿ ಭತ್ತ ಕುಟ್ಟಿದ ಅನುಭವವಾಗುತ್ತದೆ” ಎನ್ನುತ್ತಾರೆ ಹರೇಶ್ವರ ದಾಸ್. ಮಳೆಗಾಲ ಬಂತೆಂದರೆ ಊರು ಯಾವ ಕ್ಷಣದಲ್ಲದಾರೂ ಬರಬಹುದಾದದ ನೆರೆಗೆ ಸಿದ್ಧವಾಗಿರಬೇಕಾಗುತ್ತದೆ ಬಗರೀಬಾರಿ ನಿವಾಸಿಯಾದ ಅವರು. ಈ ಊರಿನಲ್ಲಿ ಹರಿಯುವ ಪುಠಿಮಾರಿ ನದಿ ಮಳೆಗಾಲದಲ್ಲಿ ಊರಿನ ಜನರನ್ನು ದುಃಸ್ವಪ್ನವಾಗಿ ಕಾಡುತ್ತದೆ.
“ಮಳೆ ಹನಿಯಲು ಶುರುವಾದ ಕೂಡಲೇ ನಾವು ನಮ್ಮ ಬಟ್ಟೆಬರೆಗಳನ್ನು ಕಟ್ಟಿಕೊಂಡು ಹೊರಡಲು ತಯಾರಿರಬೇಕು. ಕಳೆದ ಸಲದ ನೆರೆ ಎರಡೂ ಕಚ್ಚಾ ಮನೆಗಳನ್ನು ನೆಲಸಮಗೊಳಿಸಿತು. ಮತ್ತೆ ಬಿದಿರು ಮಣ್ಣು ಒಟ್ಟುಗೂಡಿಸಿ ಹೊಸ ಗೋಡೆ ಕಟ್ಟಬೇಕಾಯಿತು” ಎನ್ನುತ್ತಾರೆ ಅವರ ಪತ್ನಿ ಸಾಬಿತ್ರಿ ದಾಸ್.
“ನಾನು [ಈಗ ಹಾಳಾಗಿರುವ] ಟಿವಿಯನ್ನು ಚೀಲದಲ್ಲಿ ತುಂಬಿ ಮನೆಯ ಮಾಡಿನ ಮೇಲಿಟ್ಟಿದ್ದೆ” ಎನ್ನುತ್ತಾರೆ ನೀರದಾ ದಾಸ್. ಕಳೆದ ವರ್ಷದ ನೆರೆಯಲ್ಲೂ ಅವರು ಒಂದು ಟಿವಿ ಕಳೆದುಕೊಂಡಿದ್ದರು.
ಅದು ಜೂನ್ 16, 2023 ರ ರಾತ್ರಿ, ಅಂದು ಮಳೆ ಎಡೆಬಿಡದೆ ಸುರಿಯಿತು. ಕಳೆದ ವರ್ಷ ಕುಸಿದ ಅಣೆಕಟ್ಟಿನ ಒಂದು ಭಾಗವನ್ನು ದುರಸ್ತಿ ಮಾಡಲು ನಿವಾಸಿಗಳು ಮರಳು ಚೀಲಗಳನ್ನು ಬಳಸಿದರು. ಎರಡು ದಿನಗಳು ಕಳೆದರೂ ಮಳೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣಲಿಲ್ಲ. ಬಗರೀಬಾರಿ ಮತ್ತು ಅದರ ನೆರೆಯ ಗ್ರಾಮಗಳಾದ ಧೇಪರ್ಗಾಂವ್, ಮಡೋಯಿಕಟಾ, ನಿಜ್ ಕೌರ್ಬಹಾ, ಖಾಂಡಿಕರ್, ಬಿಹಾಪಾರಾ ಮತ್ತು ಲಹಾಪಾರಾದ ಜನರು ಯಾವ ಕ್ಷಣದಲ್ಲಾದರೂ ಬಿರುಕು ಬಿಡಬಹುದಾದ ಕಟ್ಟೆಯ ಕಡೆ ಭಯದಿಂದ ಕಣ್ಣಾಗಿ ಕುಳಿತಿದ್ದರು.
ಅದೃಷ್ಟವೆಂಬಂತೆ ನಾಲ್ಕು ದಿನಗಳ ನಂತರ ಮಳೆ ಕಡಿಮೆಯಾಯಿತು, ಜೊತೆಗೆ ನೀರಿನ ಮಟ್ಟವೂ ಇಳಿಯಿತು.
"ಒಡ್ಡು ಕುಸಿದಾಗ ನೀರಿನ ಬಾಂಬ್ ಸಿಡಿದಂತೆ ಕಾಣುತ್ತದೆ" ಎಂದು ಸ್ಥಳೀಯ ಶಿಕ್ಷಕ ಹರೇಶ್ವರ ದಾಸ್ ಹೇಳುತ್ತಾರೆ. 85 ವರ್ಷ ಪ್ರಾಯದ ಅವರು ಕೆ.ಬಿ. ದೆಲ್ಕುಚಿ ಹೈಸ್ಕೂಲಿನ ನಿವೃತ್ತ ಶಿಕ್ಷಕ.
1965ರಲ್ಲಿ ನಿರ್ಮಿಸಲಾದ ಒಡ್ಡು ಊರಿಗೆ ಒಳಿತು ಮಾಡುವುದಕ್ಕಿಂತಲೂ ಹೆಚ್ಚು ಹಾನಿಯನ್ನೇ ಮಾಡಿದೆ ಎನ್ನುವುದು ಅವರ ಅಭಿಪ್ರಾಯ. “ಮೊದಲು ಗದ್ದೆಗೆ ಮೆಕ್ಕಲು ಮಣ್ಣು ಹರಿದು ಬರುತ್ತಿತ್ತು, ಆದರೆ ಒಡ್ಡು ಕಟ್ಟಿದ ಮೇಲೆ ಗದ್ದೆಗಳು ಕೇವಲ ನೀರಿನಲ್ಲಿ ಮುಳುಗಿರುತ್ತವೆ” ಎನ್ನುತ್ತಾರವರು.

![His wife Sabitri (right) adds, 'The previous flood [2022] took away the two kutchha houses of ours. You see these clay walls, they are newly built; this month’s [June] incessant rain has damaged the chilly plants, spiny gourds and all other plants from our kitchen garden'](/media/images/02b-RUB09045-WR_and_PD-In_Bagribari-the_ri.max-1400x1120.jpg)
85 ವರ್ಷದ ನಿವೃತ್ತ ಶಾಲಾ ಶಿಕ್ಷಕ ಹರೇಶ್ವರ್ ದಾಸ್ 12 ಪ್ರವಾಹಗಳಿಗೆ ಸಾಕ್ಷಿಯಾಗಿದ್ದಾರೆ. 'ಅಣೆಕಟ್ಟು ಒಡೆದಾಗ ಅದು ನೀರಿನ ಬಾಂಬ್ ಸಿಡಿದಂತೆ ಕಾಣುತ್ತದೆ. ಇದು ಬೆಳೆ ಭೂಮಿಯನ್ನು ಫಲವತ್ತಾಗಿಸುವ ಬದಲು ಎಲ್ಲವನ್ನೂ ನಾಶಪಡಿಸುತ್ತದೆ' ಎಂದು ಅವರು ಹೇಳುತ್ತಾರೆ. ಅವರ ಪತ್ನಿ ಸಾಬಿತ್ರಿ (ಬಲ) ಹೇಳುತ್ತಾರೆ, "ಹಿಂದಿನ ಪ್ರವಾಹ [2022] ನಮ್ಮ ಎರಡು ಕಚ್ಚಾ ಮನೆಗಳನ್ನು ಕಸಿದುಕೊಂಡಿತು. ಈ ಮಣ್ಣಿನ ಗೋಡೆಗಳನ್ನು ಹೊಸದಾಗಿ ಕಟ್ಟಿದ್ದು ಈ ವರ್ಷ; ಈ ತಿಂಗಳ [ಜೂನ್] ನಿರಂತರ ಮಳೆಯಿಂದಾಗಿ ನಮ್ಮ ಹಿತ್ತಲಿನಲ್ಲಿದ್ದ ಮೆಣಸಿನ ಸಸಿಗಳು, ಸೋರೆ ಬಳ್ಳಿ ಮತ್ತು ಇತರ ತರಕಾರಿ ಗಿಡಗಳಿಗೆ ಹಾನಿಯಾಗಿದೆ.


ಎಡ: ಸಾಬಿತ್ರಿ ಮತ್ತು ಕುಟುಂಬವು ಹಾನಿಯನ್ನು ತಪ್ಪಿಸಲು ವಸ್ತುಗಳನ್ನು ಎತ್ತರದ ಸ್ಥಳಗಳಲ್ಲಿ ಸಂಗ್ರಹಿಸುತ್ತಾರೆ. ಮಳೆ ಬಂದ ತಕ್ಷಣ ಅವರು ಎಲ್ಲವನ್ನು ಕಟ್ಟಿಟ್ಟು ಸಿದ್ಧವಾಗಿರಬೇಕಾಗುತ್ತದೆ. ಬಲ: ಬೀಜಗಳನ್ನು ಬಿತ್ತುವ ಸಮಯವಾಗಿದ್ದರೂ, ಬಗರೀಬಾರಿಯಲ್ಲಿ ಒಬ್ಬನೇ ಒಬ್ಬ ರೈತನಿಗೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ, ಏಕೆಂದರೆ ಮರಳಿನಿಂದ ಆವೃತವಾದ ಭೂಮಿಯನ್ನು ಕೃಷಿ ಮಾಡುವುದು ಅಸಾಧ್ಯ
ಬಗರೀಬಾರಿ ಗ್ರಾಮವು ಪುಠಿಮಾರಿ ನದಿಯ ದಡದಲ್ಲಿದ್ದು, ಪ್ರತಿವರ್ಷವೂ ಪ್ರವಾಹದಿಂದ ಉಕ್ಕಿ ಹರಿಯುವ ಬ್ರಹ್ಮಪುತ್ರ ನದಿಯಿಂದ 50 ಕಿ.ಮೀ. ದೂರದಲ್ಲಿದೆ, ಮಾನ್ಸೂನ್ ತಿಂಗಳುಗಳಲ್ಲಿ ಊರಿ ಜನರು ನೆರೆಯ ಭಯದಿಂಧ ರಾತ್ರಿಯಿಡೀ ಎದ್ದಿರುತ್ತಾರೆ. ಇಲ್ಲಿನ ಯುವಕರು ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ನದಿಯ ಒಡ್ಡುಗಳನ್ನು ಕಾಯುತ್ತಾ ರಾತ್ರಿಯಿಡಿ ಎದ್ದಿರುತ್ತಾರೆ. ಬಾಕ್ಸಾ ಜಿಲ್ಲೆಯ ಈ ಊರಿನ ಜನರು “ವರ್ಷದ ಐದು ತಿಂಗಳುಗಳನ್ನು ನೆರೆಯೊಡನೆ ಹೋರಾಡುತ್ತಾ, ಅಥವಾ ನೆರೆಯ ಭಯದಲ್ಲಿ ಕಳೆಯುತ್ತಾರೆ” ಎನ್ನುತ್ತಾರೆ ಹರೇಶ್ವರ್.
"ಕಳೆದ ಹಲವಾರು ದಶಕಗಳಿಂದ ಪ್ರತಿ ಮಳೆಗಾಲದಲ್ಲಿ ಇದೇ ಸ್ಥಳದಲ್ಲಿ ಒಡ್ಡು ಕುಸಿಯುತ್ತಿದೆ" ಎಂದು ಗ್ರಾಮದ ನಿವಾಸಿ ಜೋಗಮಯ ದಾಸ್ ಹೇಳುತ್ತಾರೆ.
ಬಹುಶಃ ಅದಕ್ಕಾಗಿಯೇ ಅತುಲ್ ದಾಸ್ ಅವರ ಮಗ ಹಿರಾಕ್‌ಜ್ಯೋತಿ ಇತ್ತೀಚೆಗೆ ಅಸ್ಸಾಂ ಪೊಲೀಸರ ನಿರಾಯುಧ ಶಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ಸೇರಿಕೊಂಡಿದ್ದಾರೆ. ಒಡ್ಡಿನ ನಿರ್ಮಾಣ ಮತ್ತು ದುರಸ್ತಿಯಲ್ಲಿ ಅವರು ವಿಶ್ವಾಸ ಕಳೆದುಕೊಂಡಿದ್ದಾರೆ.
"ಈ ಅಣೆಕಟ್ಟು ಕ್ಸುನೋರ್ ಕೊನಿ ಪೋರಾ ಹಾಹ್ [ಚಿನ್ನದ ಮೊಟ್ಟೆಗಳನ್ನು ಇಡುವ ಬಾತುಕೋಳಿ] ಯಂತಿದೆ" ಎಂದು ಅವರು ಹೇಳುತ್ತಾರೆ. "ಪ್ರತಿ ಬಾರಿ ಅದು ಕುಸಿದಾಗ, ಪಕ್ಷಗಳು ಮತ್ತು ಸಂಸ್ಥೆಗಳು ಬರುತ್ತವೆ. ಗುತ್ತಿಗೆದಾರನು ಒಡ್ಡನ್ನು ನಿರ್ಮಿಸುತ್ತಾನೆ. ಅದು ಮತ್ತೆ ಪ್ರವಾಹದಲ್ಲಿ ಕುಸಿಯುತ್ತದೆ." ಈ ಪ್ರದೇಶದ ಯುವಕರು ಉತ್ತಮ ದುರಸ್ತಿಗೆ ಒತ್ತಾಯಿಸಿದಾಗ, "ಪೊಲೀಸರು ಅವರನ್ನು ಬೆದರಿಸಿ ಸುಮ್ಮನಾಗಿಸುತ್ತಾರೆ" ಎಂದು 53 ವರ್ಷದ ಅವರು ಹೇಳುತ್ತಾರೆ.
ಬಗರೀಬಾರಿಯ ಹೊಲಗಳು, ರಸ್ತೆಗಳು ಮತ್ತು ಮನೆಗಳೇ ಇಲ್ಲಿನ ಜನರ ಕಷ್ಟಗಳನ್ನು ಹೇಳುತ್ತವೆ. ಮತ್ತು ಈ ಕಷ್ಟಗಳು ಸದ್ಯಕ್ಕೆ ಕೊನೆಗೊಳ್ಳುವ ಸಾಧ್ಯತೆಗಳೂ ಕಾಣುತ್ತಿಲ್ಲ. ಪುಠೀಮರಿ ನದಿಯ ಹೈಡ್ರೋಗ್ರಾಫಿಕ್ ಸಮೀಕ್ಷೆಯ ಬಗ್ಗೆ ಭಾರತದ ಒಳನಾಡು ಜಲಮಾರ್ಗ ಪ್ರಾಧಿಕಾರದ 2015ರ ವರದಿಯು "ಇಲ್ಲಿ ಒಡ್ಡು ನಿರ್ಮಾಣ ಮತ್ತು ದುರಸ್ತಿ ಶಾಶ್ವತ ವ್ಯವಹಾರವಾಗುವಂತೆ ತೋರುತ್ತದೆ” ಎಂದಿದೆ.


ಎಡ: ಬಗರೀಬಾರಿಯ ಕಾರ್ಮಿಕರು ಪುಠಿಮಾರಿ ನದಿಯ ದಂಡೆಯಡಿ ಮರಳು ಚೀಲಗಳನ್ನು ಇರಿಸುತ್ತಿರುವುದು. ಬಲ: ಸವಕಳಿ ತಡೆಗಟ್ಟಲು ರಾಜ್ಯ ಜಲಸಂಪನ್ಮೂಲ ಇಲಾಖೆ ಜಿಯೋಬ್ಯಾಗುಗಳನ್ನು ಬಳಸುತ್ತದೆ


ಎಡಕ್ಕೆ: 'ಈ ಒಡ್ಡು ಚಿನ್ನದ ಬಾತುಕೋಳಿಯಂತೆ ಕಾಣುತ್ತದೆ' ಎಂದು ಅತುಲ್ ದಾಸ್ ಹಣ ಮತ್ತು ಸಂಪನ್ಮೂಲಗಳ ವ್ಯರ್ಥವನ್ನು ತೋರಿಸುತ್ತಾ ಹೇಳುತ್ತಾರೆ. ಬಲ: 2021ರಲ್ಲಿ ಪ್ರವಾಹಕ್ಕೆ ಒಳಗಾದ ಗ್ರಾಮಗಳ ಒಡ್ಡಿನ ದುರ್ಬಲ ಭಾಗಗಳನ್ನು ಎತ್ತಿಹಿಡಿಯಲು ಮರಳು ಚೀಲಗಳನ್ನು ಬಳಸಲಾಗುತ್ತಿತ್ತು
*****
2022ರಲ್ಲಿ, ಜೋಗಮಯ ದಾಸ್ ಮತ್ತು ಅವರ ಪತಿ ಶಂಭುರಾಮ್ ಅವರ ಮನೆ ಪ್ರವಾಹಕ್ಕೆ ಸಿಲುಕಿದಾಗ ಎಂಟು ಗಂಟೆಗಳ ಕಾಲ ಅವರು ತಮ್ಮ ಮನೆಯ ಕಿಟಕಿಗಳಿಗೆ ಅಂಟಿಕೊಂಡಿದ್ದರು. ಆ ರಾತ್ರಿ, ನೀರು ಅವರ ಕುತ್ತಿಗೆ ಮಟ್ಟಕ್ಕೆ ತಲುಪಿದಾಗ, ದಂಪತಿಗಳು ತಮ್ಮ ಕಚ್ಚಾ ಮನೆಯನ್ನು ತೊರೆದು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಅವರು ನಿರ್ಮಿಸುತ್ತಿದ್ದ ಹೊಸ ಮನೆಗೆ ತೆರಳಿದರು. ಈ ಪಕ್ಕಾ ಮನೆಗೂ ನೀರು ನುಗ್ಗಿತ್ತು. ಕೊನೆಗೆ ಅವರು ಕಿಟಕಿಗಳನ್ನು ಹಿಡಿದುಕೊಂಡು ಜೀವ ಉಳಿಸಿಕೊಂಡರು.
"ಅದೊಂದು ದುಃಸ್ವಪ್ನವಾಗಿತ್ತು" ಎಂದು ಜೋಗಮಯ ಹೇಳುತ್ತಾರೆ, ಆ ಕರಾಳ ರಾತ್ರಿಯ ನೆರಳುಗಳು ಆಕೆಯ ಮುಖದ ಮೇಲೆ ಈಗಲೂ ಗೋಚರಿಸುತ್ತವೆ.
ಈಗ ಪ್ರವಾಹದಿಂದ ಹಾನಿಗೊಳಗಾದ ತಮ್ಮ ಮನೆಯ ಬಾಗಿಲ ಬಳಿ ನಿಂತಿರುವ ಸುಮಾರು 40 ವರ್ಷದ ಜೋಗಮಯ, ಜೂನ್ 16, 2022ರ ರಾತ್ರಿಯ ತನ್ನ ಅನುಭವಗಳನ್ನು ನೆನಪಿಸಿಕೊಳ್ಳುತ್ತಾರೆ. "ನೀರು ಕಡಿಮೆಯಾಗುತ್ತದೆ, ಒಡ್ಡು ಒಡೆಯುವುದಿಲ್ಲ ಎಂದು ನನ್ನ ಪತಿ ಪದೇ ಪದೇ ನನಗೆ ಭರವಸೆ ನೀಡಿದರು. ನಾನು ಭಯಭೀತಳಾಗಿದ್ದೆ, ಆದರೆ ನಿದ್ರೆಗೆ ಜಾರಿದೆ. ಇದ್ದಕ್ಕಿದ್ದಂತೆ, ಕೀಟ ಕಡಿತದಿಂದ ಎಚ್ಚರಗೊಂಡು ನೋಡಿದರೆ ಹಾಸಿಗೆ ಬಹುತೇಕ ತೇಲುತ್ತಿತ್ತು" ಎಂದು ಅವರು ಹೇಳುತ್ತಾರೆ.
ಗ್ರಾಮದ ಇತರ ನಿವಾಸಿಗಳಂತೆ ಕೋಚ್-ರಾಜವಂಶಿ ಸಮುದಾಯಕ್ಕೆ ಸೇರಿದ ಈ ದಂಪತಿಗಳು ಬ್ರಹ್ಮಪುತ್ರಾ ನದಿಯ ಉಪನದಿಯಾದ ಪುಠಿಮರಿಯ ಮುಖ್ಯ ಉತ್ತರ ದಂಡೆಯಿಂದ ಸುಮಾರು 200 ಮೀಟರ್ ದೂರದಲ್ಲಿ ವಾಸಿಸುತ್ತಿದ್ದಾರೆ.
"ಕತ್ತಲೆಯಲ್ಲಿ ನನಗೆ ಎನೂ ಕಾಣಿಸಲಿಲ್ಲ" ಎಂದು ಜೋಗಮಯ ತಮ್ಮ ಅಗ್ನಿಪರೀಕ್ಷೆಯನ್ನು ವಿವರಿಸುತ್ತಾರೆ. "ಕೊನೆಗೆ ನಾವು ಕಿಟಕಿ ಬಳಿ ತಲುಪುವಲ್ಲಿ ಯಶಸ್ವಿಯಾದೆವು. ಈ ಹಿಂದೆ ಪ್ರವಾಹಗಳು ಸಂಭವಿಸಿವೆ, ಆದರೆ ನನ್ನ ಜೀವನದಲ್ಲಿ ಇಷ್ಟು ನೀರನ್ನು ನಾನು ನೋಡಿರಲಿಲ್ಲ. ಕೀಟಗಳು ಮತ್ತು ಹಾವುಗಳು ಕಾಲಿನ ಸುತ್ತಲೇ ಇರುವುದು ಅನುಭವಕ್ಕೆ ಬರುತ್ತಿತ್ತು. ನಾನು ನನ್ನ ಗಂಡನನ್ನು ನೋಡುತ್ತಿತ್ತಾ ಕಿಟಕಿಯ ಚೌಕಟ್ಟನ್ನು ಸಾಧ್ಯವಾದಷ್ಟು ಬಿಗಿಯಾಗಿ ಹಿಡಿದಿದ್ದೆ" ಎಂದು ಅವರು ಹೇಳುತ್ತಾರೆ. ರಕ್ಷಣಾ ತಂಡದ ಆಗಮನದೊಂದಿಗೆ, ಮುಂಜಾನೆ 2:45ಕ್ಕೆ ಪ್ರಾರಂಭವಾದ ದುಃಸ್ವಪ್ನದಿಂದ ಅವರನ್ನು ಬೆಳಗ್ಗೆ 11:00ಕ್ಕೆ ಪಾರುಮಾಡಲಾಯಿತು.
'[ಪುಠಿಮಾರಿ ನದಿಯ] ಒಡ್ಡು ಕಳೆದ ಹಲವಾರು ದಶಕಗಳಿಂದ ಪ್ರತಿ ಮಳೆಗಾಲದಲ್ಲಿ ಇದೇ ಸ್ಥಳದಲ್ಲಿ ಕುಸಿಯುತ್ತಿದೆ'
ಮನೆಗಳನ್ನು ಪುನರ್ನಿರ್ಮಿಸುವ ವಾರ್ಷಿಕ ವೆಚ್ಚಗಳಿಂದ ದಣಿದಿರುವ ಗ್ರಾಮಸ್ಥರು ಪ್ರವಾಹ ಮತ್ತು ಈ ವರ್ಷದ ನಿರಂತರ ಮಳೆಯಿಂದಾಗಿ ಹಾನಿಗೊಳಗಾದ ತಮ್ಮ ಮನೆಗಳನ್ನು ದುರಸ್ತಿ ಮಾಡಲು ಸಿದ್ಧರಿಲ್ಲ. ಹಲವಾರು ಕುಟುಂಬಗಳು ಈಗ ತಾತ್ಕಾಲಿಕ ಡೇರೆಗಳಲ್ಲಿ ಒಡ್ಡಿನ ಮೇಲೆ ವಾಸಿಸುತ್ತಿವೆ, ಕುಟಂಬಗಳೆಲ್ಲವೂ ಪ್ರವಾಹದಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡಿವೆ ಅಥವಾ ತಮ್ಮ ಮನೆಗೆ ಹಿಂತಿರುಗಲು ಹೆದರುತ್ತಿವೆ.
ಮಾಧವಿ ದಾಸ್ (42) ಮತ್ತು ಅವರ ಗಂಡ ದಂಡೇಶ್ವರ ದಾಸ್ ದಂಡೇಶ್ವರ್ ದಾಸ್ (53) ಕಳೆದ ಪ್ರವಾಹದಲ್ಲಿ ಹಾನಿಗೊಳಗಾದ ತಮ್ಮ ಮನೆಯನ್ನು ದುರಸ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರು ಅಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. “ನೀರು ಏರುತ್ತಿದ್ದಂತೆ ನಾವು ಒಡ್ಡಿನ ಬಳಿ ಬಂದೆವು. ಮತ್ತೆ ಈ ಬಾರಿಯೂ ಅಪಾಯವನ್ನು ಎದುರುಗೊಳ್ಳುವುದು ನನಗೆ ಇಷ್ಟವಿರಲಿಲ್ಲ” ಎಂದು ಮಾಧವಿ ಹೇಳುತ್ತಾರೆ.
ಒಡ್ಡಿನ ಬಳಿ ವಾಸಿಸುತ್ತಿರುವವರ ಪಾಲಿಗೆ ಕುಡಿಯುವ ನೀರನ್ನು ಹುಡುಕುವುದೇ ದೊಡ್ಡ ಸಾಹಸವಾಗಿದೆ. ಪ್ರವಾಹದ ನಂತರ ಕೊಳವೆ ಬಾವಿಗಳು ಮರಳಿನಡಿ ಹೂತುಹೋದವು ಎಂದು ಮಾಧವಿ ಹೇಳುತ್ತಾರೆ. ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಂದ ತುಂಬಿದ ಬಕೆಟ್ ಕಡೆ ತೋರಿಸುತ್ತಾ, “ನೀರಿನಲ್ಲಿ ಸಾಕಷ್ಟು ಕಬ್ಬಿಣಾಂಶವಿದೆ. ನಾವು ಕೊಳವೆ ಬಾವಿಗಳ ಬಳಿ ನೀರನ್ನು ಫಿಲ್ಟರ್ ಮಾಡಿ ಬಕೆಟುಗಳು ಮತ್ತು ಬಾಟಲಿಗಳಲ್ಲಿ ಒಡ್ಡಿನ ಬಳಿ ಸಾಗಿಸುತ್ತೇವೆ."
"ಇಲ್ಲಿ ಕೃಷಿ ಮಾಡುವುದು ಅಥವಾ ಮನೆಗಳನ್ನು ನಿರ್ಮಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಪ್ರವಾಹವು ಎಲ್ಲವನ್ನೂ ಮತ್ತೆ ಮತ್ತೆ ತೆಗೆದುಕೊಂಡು ಹೋಗುತ್ತದೆ" ಎಂದು ಅತುಲ್ ಅವರ ಪತ್ನಿ ನೀರದಾ ದಾಸ್ ಹೇಳುತ್ತಾರೆ. "ನಾವು ಎರಡು ಬಾರಿ ಟಿವಿ ಖರೀದಿಸಿದೆವು. ಎರಡೂ ನೆರೆಯಿಂದ ಹಾನಿಗೊಳಗಾದವು" ಎಂದು ಅವರು ತಮ್ಮ ವರಂಡಾದಲ್ಲಿನ ಬಿದಿರಿನ ಕಂಬಕ್ಕೆ ಒರಗಿ ಹೇಳುತ್ತಾರೆ.
739 ಜನಸಂಖ್ಯೆಯನ್ನು ಹೊಂದಿರುವ (2011ರ ಜನಗಣತಿ) ಬಗರೀಬಾರಿ ನಿವಾಸಿಗಳ ಮುಖ್ಯ ಉದ್ಯೋಗವೆಂದರೆ ಕೃಷಿ. ಆದರೆ ಪ್ರವಾಹ ಮತ್ತು ನೀರು ಬಿಟ್ಟುಹೋದ ಮರಳಿನಿಂದಾಗಿ ಅದು ಬದಲಾಗಿದೆ, ಇದರಿಂದಾಗಿ ಭೂಮಿಯನ್ನು ಕೃಷಿ ಮಾಡಲು ಅಸಾಧ್ಯವಾಗಿದೆ.


ಎಡ: ಮಾಧವಿ ದಾಸ್ ತನ್ನ ಮನೆಯಲ್ಲಿನ ಮರಳಿನ ಫಿಲ್ಟರ್‌ನಿಂದ ನೀರು ತರಲು ಒಡ್ಡಿನ ಕೆಳಗಿಳಿದಿದ್ದಾರೆ. ಜೂನ್ 2023ರಿಂದ, ಅವರು ಕುಡಿಯುವ ನೀರಿಗಾಗಿ ಹೀಗೆ ಪ್ರಯಾಣಿಸುತ್ತಿದ್ದಾರೆ. ಬಲ: 'ನೀರು ಏರತೊಡಗಿದಂತೆ ನಾವು ಒಡ್ಡಿನ ಮೇಲ್ಭಾಗಕ್ಕೆ ಬಂದೆವುʼ ಎಂದು ಹೇಳುತ್ತಾರೆ ದಂಡೇಶ್ವರ್ (ನೇರಳೆ ಟೀ ಶರ್ಟ್), ರೈತನಾಗಿರುವ ಅವರು ಬಿಡುವಿನಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಾರೆ. ಅವರ ಹಿಂದೆ ನಿಂತವರು ದ್ವಿಜೆನ್ ದಾಸ್
![Left: 'We bought a TV twice. Both were damaged by the floods. I have put the [second damaged] TV in a sack and put it on the roof,' says Nirada.](/media/images/07a-RUB09152_copy-WR_and_PD-In_Bagribari-t.max-1400x1120.jpg)

ಎಡ: 'ನಾವು ಎರಡು ಬಾರಿ ಟಿವಿ ಖರೀದಿಸಿದ್ದೇವೆ. ಎರಡೂ ಪ್ರವಾಹದಿಂದ ಹಾನಿಗೊಳಗಾದವು. ನಾನು [ಹಾನಿಗೊಳಗಾದ ಎರಡನೇ] ಟಿವಿಯನ್ನು ಚೀಲದಲ್ಲಿ ಹಾಕಿ ಛಾವಣಿಯ ಮೇಲೆ ಇಟ್ಟಿದ್ದೆ' ಎಂದು ನಿರದಾ ಹೇಳುತ್ತಾರೆ. ಬಲ: ಭೂಮಿ ಮರಳಿನಿಂದ ಆವೃತವಾಗಿರುವುದರಿಂದ ಬಿತ್ತನೆ ಋತು ಇನ್ನೂ ಪ್ರಾರಂಭವಾಗಿಲ್ಲ
*****
"ನಮ್ಮ ತಂದೆ ಹೆಚ್ಚಿನ ಕೃಷಿಭೂಮಿ ಸಿಗುವ ಭರವಸೆಯಿಂದ ಇಲ್ಲಿಗೆ ಬಂದರು" ಎಂದು ಕಾಮರೂಪ್ ಜಿಲ್ಲೆಯ ಗುಯಾ ಹಳ್ಳಿಯಿಂದ ಬಾಲ್ಯದಲ್ಲಿ ತನ್ನ ಹೆತ್ತವರೊಂದಿಗೆ ಇಲ್ಲಿಗೆ ಬಂದ ಹರೇಶ್ವರ್ ಹೇಳಿದರು. ಕುಟುಂಬವು ಬಗರೀಬಾರಿಯಲ್ಲಿ ನೆಲೆಸಿತು. “ಈ ಹಸಿರು ಪ್ರದೇಶವು ವಿರಳವಾದ ಜನಸಂಖ್ಯೆಯನ್ನು ಹೊಂದಿತ್ತು. ನಮ್ಮ ತಂದೆಯವರು ತಮ್ಮ ಕೈಲಾದಷ್ಟು ಭೂಮಿಯನ್ನು ಕಾಡು ಕಡಿದು ಸಾಗುವಳಿ ಮಾಡಿದರು. ಆದರೆ ಈಗ ಜಮೀನು ಇದ್ದರೂ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಕಳೆದ ವರ್ಷ (2022) ಹರೇಶ್ವರ್ ಈಗಾಗಲೇ ಭತ್ತದ ಬೀಜಗಳನ್ನು ಬಿತ್ತಿದ್ದರು ಮತ್ತು ಪ್ರವಾಹ ಬಂದಾಗ ಅವುಗಳನ್ನು ಹೊಲದಲ್ಲಿ ನಾಟಿ ಮಾಡಲು ಹೊರಟಿದ್ದರು. ಅವರ ಎಂಟು ಬಿಘಾ (ಸುಮಾರು 2.6 ಎಕರೆ) ಕೃಷಿಭೂಮಿ ನೀರಿನಲ್ಲಿ ಮುಳುಗಿತು ಮತ್ತು ಸಸಿಗಳು ನಾಟಿ ಮಾಡುವ ಮೊದಲೇ ಹೊಲದಲ್ಲಿ ಕೊಳೆದವು.
"ಈ ಬಾರಿಯೂ, ನಾನು ಒಂದಷ್ಟು ಬೀಜ ಬಿತ್ತಿದ್ದೆ, ಆದರೆ ಏರುತ್ತಿರುವ ನೀರು ಎಲ್ಲವನ್ನೂ ನಾಶಪಡಿಸಿತು. ನಾನು ಇನ್ನು ಮುಂದೆ ಕೃಷಿ ಮಾಡುವುದಿಲ್ಲ" ಎಂದು ಹರೇಶ್ವರ್ ನಿಟ್ಟುಸಿರು ಬಿಡುತ್ತಾ ಹೇಳುತ್ತಾರೆ. ಈ ವರ್ಷದ ಜೂನ್ ತಿಂಗಳಿನಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಅವರ ಹಿತ್ತಲಿನ ತೋಟಕ್ಕೆ ಹಾನಿಯಾಗಿದೆ, ಮೆಣಸಿನ ಗಿಡ, ಸೋರೆ ಮತ್ತು ಇತರ ಸಸ್ಯಗಳು ನಾಶವಾಗಿವೆ.
ಸಮೀಂದ್ರ ದಾಸ್ ಅವರ ಕುಟುಂಬವೂ ಕೃಷಿಯನ್ನು ಕೈಬಿಟ್ಟಿದೆ. "ನಮಗೆ 10 ಬಿಘಾ [3.3 ಎಕರೆ] ಕೃಷಿಭೂಮಿ ಇತ್ತು. ಇಂದು, ಇಂದು ಆ ಗದ್ದೆಗಳ ಗುರುತೂ ಇಲ್ಲ. ಎಲ್ಲವೂ ಮರಳಿನಿಂದ ಮುಚ್ಚಿ ಹೋಗಿವೆ" ಎಂದು ಸಮೀಂದ್ರ ಹೇಳುತ್ತಾರೆ. 53 ವರ್ಷದ ಅವರು ಹೇಳುತ್ತಾರೆ, "ಈ ಬಾರಿ, ನಮ್ಮ ಮನೆಯ ಹಿಂದಿನ ಒಡ್ಡು ಒಡೆದುಹೋಗಿದೆ. ನದಿಯ ನೀರು ಏರುತ್ತಿದ್ದಂತೆ, ನಾನು ಮತ್ತೆ ಟೆಂಟಿಗೆ ಹೋದೆ [ಬಿದಿರು ಮತ್ತು ಟಾರ್ಪಲಿನ್ ಬಳಸಿ ಕಟ್ಟಿದ ಗುಡಿಸಲು]."


ಎಡಕ್ಕೆ: 'ನಮಗೆ 10 ಬಿಘಾ ಭೂಮಿ ಇತ್ತು, ಈಗ ಅದರ ಕುರುಹು ಸಹ ಇಲ್ಲ; ಮರಳಿನ ಗುಡ್ಡವಾಗಿ ಮಾರ್ಪಟ್ಟಿದೆ' ಎಂದು ಸಮಿಂದರ್ ನಾಥ್ ದಾಸ್ ಹೇಳುತ್ತಾರೆ. ಬಲ: ಪ್ರವಾಹದಿಂದ ಹಾನಿಗೊಳಗಾದ ಅವರ ಮನೆಯ ಮುಂದಿನ ಸಾಂಪ್ರದಾಯಿಕ ಮರಳು-ಇದ್ದಿಲು ಫಿಲ್ಟರ್. ಹೆಚ್ಚಿನ ಕಬ್ಬಿಣಾಂಶದ ಮಟ್ಟದಿಂದಾಗಿ, ನೀವು ಇಲ್ಲಿ ಫಿಲ್ಟರ್ ಮಾಡದ ನೀರನ್ನು ಕುಡಿಯಲು ಸಾಧ್ಯವಿಲ್ಲ


ಎಡ: '2001ರಲ್ಲಿ ಶಂಭುರಾಮ ಅವರನ್ನು ಮದುವೆಯಾಗಿ ಬಂದಾಗಿನಿಂದಲೂ ಪ್ರವಾಹದ ಅಬ್ಬರವನ್ನು ನೋಡುತ್ತಿದ್ದೇನೆ' ಎಂದು ಜೋಗಮಯ ಹೇಳುತ್ತಾರೆ. ಬಲ: 2022ರ ಪ್ರವಾಹವು ತಮ್ಮ ಭತ್ತದ ಗದ್ದೆಗಳನ್ನು ಮರಳಿನಲ್ಲಿ ಮುಚ್ಚಿದ ಕಾರಣ, ಜೋಗಮಯ ಮತ್ತು ಅವರ ಪತಿ ಶಂಭುರಾಮ್ ದಾಸ್ ದಿನಗೂಲಿ ಕೆಲಸಕ್ಕೆ ಹೋಗಬೇಕಾಯಿತು
ಜೋಗಮಯ ಮತ್ತು ಶಂಭುರಾಮ್ ಅವರ ಕುಟುಂಬವು ಮೂರು ಬಿಘಾ (ಸರಿಸುಮಾರು ಒಂದು ಎಕರೆ) ಕೃಷಿಭೂಮಿಯನ್ನು ಹೊಂದಿತ್ತು, ಅಲ್ಲಿ ಅವರು ಮುಖ್ಯವಾಗಿ ಭತ್ತ ಮತ್ತು ಸಾಂದರ್ಭಿಕವಾಗಿ ಸಾಸಿವೆಯನ್ನು ಬೆಳೆಯುತ್ತಿದ್ದರು. 22 ವರ್ಷಗಳ ಹಿಂದೆ ತನ್ನ ಮದುವೆಯ ಸಮಯದಲ್ಲಿ, ಗುವಾಹಟಿಯಿಂದ 50 ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮವು ಸೊಂಪಾದ ಬೆಳೆ ಭೂಮಿಯಾಗಿತ್ತು ಎಂದು ಜೋಗಮಯ ನೆನಪಿಸಿಕೊಳ್ಳುತ್ತಾರೆ. ಈಗ, ಅಲ್ಲಿ ಮರಳಿನ ದಿಬ್ಬಗಳು ಮಾತ್ರ ಉಳಿದಿವೆ.
ಕೃಷಿಭೂಮಿ ಮರುಭೂಮಿಯಾದಾಗ, ಶಂಭುರಾಮ್ ಕೃಷಿಯನ್ನು ತೊರೆದು ಬೇರೆ ಕೆಲಸವನ್ನು ಹುಡುಕಬೇಕಾಯಿತು. ಬಾಗರೀಬಾರಿಯ ಇತರ ಅನೇಕರಂತೆ, ಅವರು ದಿನಗೂಲಿ ಕಾರ್ಮಿಕರಾದರು. ಈಗ ಅವರು ನೆರೆಹೊರೆಯ ಹಳ್ಳಿಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ದಿನಕ್ಕೆ ಸುಮಾರು 350 ರೂ.ಗಳನ್ನು ಸಂಪಾದಿಸುತ್ತಾರೆ. "ಅವರು ಕೃಷಿಯನ್ನು ಪ್ರೀತಿಸುತ್ತಿದ್ದರು" ಎಂದು ಜೋಗಮಯ ಹೇಳುತ್ತಾರೆ.
ಆದರೆ ಕೆಲಸ ಯಾವಾಗಲೂ ಲಭ್ಯವಿರುವುದಿಲ್ಲ. ಜೋಗಮಯ ಮನೆಕೆಲಸಗಾರರಾಗಿದ್ದು, ದಿನಕ್ಕೆ ಸುಮಾರು 100-150 ರೂ.ಗಳನ್ನು ಸಂಪಾದಿಸುತ್ತಾರೆ. ಒಂದು ಕಾಲದಲ್ಲಿ, ಅವರು ಭತ್ತದ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ, ಒಂದಷ್ಟು ಹೆಚ್ಚುವರಿ ಸಂಪಾದನೆಗಾಗಿ ಬೇರೊಬ್ಬರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಕೃಷಿಯ ಜೊತೆಗೆ, ಜೋಗಮಯ ನೇಯ್ಗೆಯಲ್ಲೂ ಪ್ರವೀಣರಾಗಿದ್ದಾರೆ. ಅವರು ತಮ್ಮದೇ ಆದ ಮಗ್ಗವನ್ನು ಹೊಂದಿದ್ದಾರೆ, ಗಮುಸಾ (ಕೈಯಿಂದ ನೇಯ್ದ ಟವೆಲ್) ಮತ್ತು ಚಾದರ್ (ಅಸ್ಸಾಮಿ ಮಹಿಳೆಯರು ಸುತ್ತಿಕೊಳ್ಳುವ ಬಟ್ಟೆ) ಅನ್ನು ನೇಯುತ್ತಾರೆ, ಇದು ಅವರ ಆದಾಯದ ಮೂಲವಾಗಿತ್ತು.
ಕೃಷಿ ಕಾರ್ಯ ಇನ್ನು ಮುಂದೆ ಕಾರ್ಯಸಾಧ್ಯವಲ್ಲ ಎನ್ನಿಸಿದ ಕಾರಣ, ಅವರು ಮಗ್ಗದ ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ಆದರೆ ನದಿಯು ಮತ್ತೆ ಅವರ ಬದುಕಿನಲ್ಲಿ ಕೆಟ್ಟ ಆಟವನ್ನು ಆಡಿದೆ. "ಕಳೆದ ವರ್ಷದವರೆಗೂ ನಾನು ಅಧಿಯಾ (ಮಾಲೀಕರಿಗೆ ಒಟ್ಟು ಉತ್ಪಾದನೆಯ ಅರ್ಧದಷ್ಟು ನೀಡುವ ಒಪ್ಪಂದದ ಮೇಲೆ) ನೇಯ್ಗೆ ಮಾಡುತ್ತಿದ್ದೆ" ಎಂದು ಜೋಗಮಯ ಹೇಳುತ್ತಾರೆ, "ಆದರೆ ಈಗ ಆ ಕೈಮಗ್ಗದ ಚೌಕಟ್ಟು ಮಾತ್ರ ಉಳಿದಿದೆ. ಪ್ರವಾಹವು ಸ್ಪೂಲ್‌ಗಳು, ಬಾಬಿನ್‌ಗಳು, ಎಲ್ಲವನ್ನೂ ನುಂಗಿ ನೀರು ಕುಡಿದಿದೆ."
ಕೆಲಸದ ಕೊರತೆ ಮತ್ತು ಆದಾಯದ ಅನಿಶ್ಚಿತತೆಯೊಂದಿಗೆ, ತಮ್ಮ ಮಗನ ಓದಿಸುವುದು ಕಷ್ಟವಾಗುತ್ತಿದೆ ಎಂದು ಜೋಗಮಯ ಹೇಳುತ್ತಾರೆ - 15 ವರ್ಷದ ರಜೀಬ್, ಕೌರ್ ಬಹಾ ನವಮಿಲನ್ ಪ್ರೌಢಶಾಲೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿ. ಕಳೆದ ವರ್ಷ, ಈ ಘಟನೆಗೆ ಸ್ವಲ್ಪ ಮೊದಲು, ಅವನ ಪೋಷಕರು ಅವನನ್ನು ಒಡ್ಡಿನ ಬಳಿಯ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಈ ದಂಪತಿಗೆ ಧೃತಿಮಣಿ ಮತ್ತು ನೀತುಮಣಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರೂ ಮದುವೆಯಾಗಿ ಕ್ರಮವಾಗಿ ಕಟಾನಿಪಾರಾ ಮತ್ತು ಕೆಂಡುಕೋನದಲ್ಲಿ ವಾಸಿಸುತ್ತಿದ್ದಾರೆ.
*****


ಎಡ: ಅತುಲ್ ದಾಸ್ ಮತ್ತು ಅವರ ಪತ್ನಿ ನೀರದಾ ತಮ್ಮ ಜೀವನದುದ್ದಕ್ಕೂ ಪ್ರವಾಹದ ವಿರುದ್ಧ ಹೋರಾಡುತ್ತಿದ್ದಾರೆ. ಬಲ: 2023ರ ಜೂನ್ ಮೂರನೇ ವಾರದಲ್ಲಿ ಉಕ್ಕಿ ಹರಿಯುವ ನದಿಯಿಂದ ನಾಶವಾದ ತನ್ನ ಬಾಳೆ ತೋಪನ್ನು ಅತುಲ್ ನಮಗೆ ತೋರಿಸಿದರು. ಪ್ರವಾಹದಿಂದ ಹಾನಿಗೊಳಗಾದ ಇತರ ತರಕಾರಿ ಬೆಳೆಗಳೊಂದಿಗೆ ಅವರು ನಿಂಬೆಯನ್ನು ಸಹ ಬೆಳೆದಿದ್ದರು
ಆಗಾಗ್ಗೆ ಎದುರಾಗುವ ಪ್ರವಾಹ ಮತ್ತು ಪುಠಿಮಾರಿ ನದಿಯ ನೀರು ನುಗ್ಗುವಿಕೆಯು ಅತುಲ್ ದಾಸ್ ಅವರ ಕುಟುಂಬವನ್ನು ದಿಗ್ಭ್ರಮೆಗೊಳಿಸಿದೆ. "ನಾನು 3.5 ಬಿಘಾ [1.1 ಎಕರೆ] ಭೂಮಿಯಲ್ಲಿ ಬಾಳೆ ಮತ್ತು ಒಂದು ಬಿಘಾ [0.33 ಎಕರೆ] ಭೂಮಿಯಲ್ಲಿ ನಿಂಬೆ ನೆಟ್ಟಿದ್ದೆ. ಒಂದು ಬಿಘಾದಲ್ಲಿ, ಕುಂಬಳಕಾಯಿ ಮತ್ತು ಬಿಳಿ ಸೋರೆ ನೆಟ್ಟಿದ್ದೆ. ಈ ಬಾರಿ ನದಿಯ ನೀರು ಏರಿ ಎಲ್ಲಾ ಬೆಳೆಗಳು ನಾಶವಾದವು" ಎಂದು ಅತುಲ್ ಹೇಳುತ್ತಾರೆ. ಕೆಲವು ವಾರಗಳ ನಂತರ, ಮೂರನೇ ಎರಡರಷ್ಟು ಬೆಳೆಯನ್ನು ಮತ್ತೆ ಊರ್ಜಿತಗೊಳಿಸಲಾಯಿತು.
ಅತುಲ್ ಅವರ ಪ್ರಕಾರ, ಕಳಪೆ ರಸ್ತೆ ಸಂಪರ್ಕದ ಪರಿಣಾಮವಾಗಿ ಅನೇಕ ಗ್ರಾಮಸ್ಥರು ಕೃಷಿಯನ್ನು ತ್ಯಜಿಸಬೇಕಾಯಿತು. ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬಯಸುವವರಿಗೆ, ಒಡ್ಡು ಕುಸಿದು ರಸ್ತೆ ಹಾಳಾದ ಕಾರಣ ಮಾರುಕಟ್ಟೆಗಳಿಗೆ ಪ್ರಯಾಣಿಸುವುದು ಅಸಾಧ್ಯವಾಗಿದೆ.
"ನಾನು ನಮ್ಮ ಫಸಲುಗಳನ್ನು ರಂಗಿಯಾ ಮತ್ತು ಗುವಾಹಟಿಗೆ ಕೊಂಡೊಯ್ಯುತ್ತಿದ್ದೆ" ಎಂದು ಅತುಲ್ ಹೇಳುತ್ತಾರೆ. "ಒಂದು ಕಾಲದಲ್ಲಿ ರಾತ್ರಿಯಲ್ಲಿ ಬಾಳೆಹಣ್ಣು ಮತ್ತು ನಿಂಬೆಯಂತಹ ಕೃಷಿ ಉತ್ಪನ್ನಗಳನ್ನು ವ್ಯಾನಿಗೆ ಲೋಡ್ ಮಾಡುತ್ತಿದ್ದೆ. ಮರುದಿನ ಮುಂಜಾನೆ, ಸುಮಾರು 5:00 ಗಂಟೆಗೆ, ಗುವಾಹಟಿಯ ಫ್ಯಾನ್ಸಿ ಬಜಾರಿನಲ್ಲಿ ಮಾರಾಟ ಮಾಡಿ, ಅದೇ ದಿನ ಬೆಳಿಗ್ಗೆ ಎಂಟು ಗಂಟೆಗೆ ಮನೆಗೆ ತಲುಪುತ್ತಿದ್ದೆ. ಆದರೆ ಕಳೆದ ಪ್ರವಾಹದ ನಂತರ ಇದು ಅಸಾಧ್ಯವಾಗಿದೆ.
"ಉತ್ಪನ್ನಗಳನ್ನು ನಾನು ದೋಣಿಯ ಮೂಲಕ ಧುಲಾಬರಿಗೆ ಸಾಗಿಸುತ್ತಿದ್ದೆ. ಆದರೆ ನಾನು ಏನು ಹೇಳಲಿ! 2001ರಿಂದ ಒಡ್ಡು ಹಲವಾರು ಬಾರಿ ಕುಸಿದಿದೆ. 2022ರ ಪ್ರವಾಹದ ನಂತರ, ಅದನ್ನು ಸರಿಪಡಿಸಲು ಐದು ತಿಂಗಳು ಬೇಕಾಯಿತು" ಎಂದು ಅತುಲ್ ಹೇಳುತ್ತಾರೆ.
"ಪ್ರವಾಹವು ನಮ್ಮೆಲ್ಲರನ್ನೂ ನಾಶಗೊಳಿಸಿದೆ" ಎಂದು ಒಡ್ಡು ಕುಸಿದಿದ್ದರಿಂದ ಉಂಟಾದ ಅವ್ಯವಸ್ಥೆಯನ್ನು ಅತುಲ್ ಅವರ ತಾಯಿ ಪ್ರಭಾಬಾಲಾ ದಾಸ್ ನೆನಪಿಸಿಕೊಳ್ಳುತ್ತಾರೆ.
ನಾವು ಮಾತುಕತೆ ಮುಗಿಸಿ ಒಡ್ಡನ್ನು ಹತ್ತಿ ಹೊರಡುತ್ತಿದ್ದಂತೆ, ಅವರ ಮಗ ನಮ್ಮ ಕಡೆ ನೋಡಿ ಮುಗುಳ್ನಕ್ಕರು. “ಕಳೆದ ಸಲವೂ ನೆರೆ ಬಂದ ಸಮಯದಲ್ಲಿ ಬಂದಿದ್ರಿ. ಒಮ್ಮೆ ಎಲ್ಲಾ ಸರಿಯಿರುವ ಸಮಯದಲ್ಲಿ ಬನ್ನಿ.” ಎಂದ ಅವರು ಮುಂದುವರೆದು, “ನಾನು ನಿಮಗೆ ನಮ್ಮ ಹೊಲದ ತರಕಾರಿಗಳನ್ನು ಕಳುಹಿಸುತ್ತೇನೆ” ಎಂದರು.
ಅನುವಾದ: ಶಂಕರ. ಎನ್. ಕೆಂಚನೂರು