ಕೆಕುವೆ-ಉ ಸಣ್ಣ ಹುಡುಗಿಯಾಗಿದ್ದ ಕಾಲದಲ್ಲಿ ತನ್ನ ತಾಯಿ ಮತ್ತು ಅಜ್ಜಿ ತುರುಚೆ ಗಿಡ ಅಥವಾ ಥೆವೊ ಗಿಡದ ಕಾಂಡವನ್ನು ಬಳಸಿ ನೇಯ್ಗೆ ಮಾಡುವುದನ್ನು ನೋಡುತ್ತಿದ್ದರು. ಆ ವೇಳೆ ಅವರು ತಮ್ಮ ತಾಯಿ ಅರ್ಧ ಮುಗಿಸಿ ಇಟ್ಟ ತುಣುಕೊಂದನ್ನು ಕೈಗೆತ್ತಿಕೊಂಡು ಕೆಲಸ ಕಲಿಯುತ್ತಿದ್ದರು. ಆದರೆ ಇದನ್ನು ಅವರು ಯಾರಿಗೂ ಕಾಣದಂತೆ ಮಾಡಬೇಕಿತ್ತು. ಯಾಕೆಂದರೆ ಅವರ ಅಮ್ಮ ಅವರಿಗೆ ಅದನ್ನು ಮುಟ್ಟಬಾರದು ಎಂದು ಕಟ್ಟುನಿಟ್ಟಾಗಿ ಆದೇಶ ಮಾಡಿರುತ್ತಿದ್ದರು. ಹೀಗೆ ಕೆಕುವೆ -ಉ ನಾಗಾ ಸಮುದಾಯ ಬಳಸುವ ಸಾಂಪ್ರದಾಯಿಕ ಶಾಲಿನ ನೇಯ್ಗೆಯ ಕೌಶಲವನ್ನು ಗುಟ್ಟಾಗಿ ಕಲಿತರು.
ಇಂದು ಅವರೋರ್ವ ನಿಪುಣ ನೇಕಾರ ಮಹಿಳೆಯಾಗಿದ್ದು, ತಮ್ಮ ಬೇಸಾಯದ ಕೆಲಸ ಹಾಗೂ ಮನೆಗೆಲಸಗಳ ನಡುವೆ ಬಿಡುವು ಮಾಡಿಕೊಂಡು ಈ ನೇಯ್ಗೆಯ ಕೆಲಸವನ್ನು ಮಾಡುತ್ತಾರೆ. “ಅನ್ನಕ್ಕೆ ನೀರಿಟ್ಟು ಅದು ಬಿಸಿಯಾಗುವ ತನಕ, ಅಥವಾ ಮಕ್ಕಳನ್ನು ಯಾರಾದರೂ ಹೊರಗೆ ಕರೆದುಕೊಂಡು ಹೋದಾಗ ನಾವು ಒಂದಷ್ಟು ನೇಯ್ಗೆಯ ಕೆಲಸ ಮಾಡಲು ಪ್ರಯತ್ನಿಸುತ್ತೇವೆ” ನೇಯ್ಗೆಯ ಉದ್ದವನ್ನು ಬೆರಳಿನಲ್ಲಿ ತೋರಿಸುತ್ತಾ ಅವರು ಹೇಳುತ್ತಾರೆ.
ಕೆಕುವೆ-ಉ ತನ್ನ ನೆರೆಯವರಾದ ವೆಹುಸೆಲೆ ಮತ್ತು ಎಜಿಹಿಲು ಚೋಟ್ಸೊ ಅವರೊಂದಿಗೆ ರುಕಿಜೋ ಕಾಲೋನಿಯಲ್ಲಿರುವ ತನ್ನ ತಗಡಿನ ಛಾವಣಿಯ ಮನೆಯಲ್ಲಿ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು. ಕೆಕುವೆ-ಉ ಅವರ ಅಂದಾಜಿನ ಪ್ರಕಾರ, ನಾಗಾಲ್ಯಾಂಡ್ ರಾಜ್ಯದ ಫೆಕ್ ಜಿಲ್ಲೆಯ ಫುಟ್ಸೆರೊ ಗ್ರಾಮದ 266 ಕುಟುಂಬಗಳಲ್ಲಿ ಸರಿಸುಮಾರು 11 ಪ್ರತಿಶತದಷ್ಟು ಜನರು ನೇಯ್ಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಹೆಚ್ಚಾಗಿ ಚಖೆಸಾಂಗ್ ಸಮುದಾಯದ (ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ) ಕುಝಾಮಿ ಉಪ-ಗುಂಪಿನ ಮಹಿಳೆಯರು ಅಭ್ಯಾಸ ಮಾಡುತ್ತಾರೆ. “ನಮ್ಮ ಗಂಡಂದಿರು ನಮಗೆ ಸಹಾಯ ಮಾಡುತ್ತಾರೆ. ಅವರು ಅಡುಗೆಯನ್ನೂ ಮಾಡಬಲ್ಲರು, ಆದರೆ ಅವರು ನಮ್ಮಂತೆ ಅಡುಗೆಯಲ್ಲಿ “ತಜ್ಞರಲ್ಲ. ನಾವು ಅಡುಗೆ, ಕೃಷಿ ಎಲ್ಲವನ್ನೂ ಮಾಡಿಕೊಂಡು ನಡುವೆ ಈ ನೇಯ್ಗೆ ಮತ್ತು ಇತರ ಕೆಲಸಗಳನ್ನು ಮಾಡಬೇಕು.”


ಎಡ: ಕೆಕುವೆ-ಉ ತಾನು ತಯಾರಿಸಿದ ವಲ್ಲಿಯನ್ನು ತೋರಿಸುತ್ತಿದ್ದಾರೆ. ಬಲ: ರುಕಿಜು ಕಾಲೋನಿಯಲ್ಲಿನ ನೇಕಾರರು. (ಎಡದಿಂದ ಬಲಕ್ಕೆ)ಸ ವೆಹುಸುಲು, ನಿಖು ಥುಲುವೊ, ಅವರ ನೆರೆಯವರಾದ (ಕೆಂಪು ಶಾಲು ಧರಿಸಿರುವವರು), ಕೆಕುವೆ-ಉ ಮತ್ತು ಎಝಿಹಿಲು ಚೋಟ್ಸೊ ) ಕೆಕುವೆ-ಉ ಅವರ ಮನೆಯಲ್ಲಿ


ಎಡ: ಕೆಕುವೆ-ಉ ಅವರ ಅಡುಗೆಮನೆಯಲ್ಲಿ ತುರುಚೆ ಗಿಡದ (ಉರ್ಟಿಕಾ) ತೊಗಟೆಯಿಂದ ತಯಾರಿಸಿದ ನೂಲು. ಕೆಲವು ನಾಗಾ ಬುಡಕಟ್ಟು ಜನಾಂಗದವರು ಈ ನೂಲನ್ನು ನೇಯ್ಗೆಗೆ ಬಳಸುತ್ತಾರೆ. ಚಖೆಸಾಂಗ್ ಬುಡಕಟ್ಟು ಜನಾಂಗದವರು ಇಂತಹ ನೂಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಸಾಜ್ನ್, ಥೆಬ್ವೊರಾ ಅಥವಾ ಲುಸಾ ಎಂದು ಕರೆಯುತ್ತಾರೆ. ಬಲ: ಕೆಕುವೆ-ಉ ತನ್ನ ಅಡುಗೆಮನೆಯಲ್ಲಿ ಶಾಲು ನೇಯುತ್ತಿದ್ದಾರೆ, ಅವರು ಸಾಮಾನ್ಯವಾಗಿ ತನ್ನ ಹೆಚ್ಚಿನ ನೇಯ್ಗೆಯ ಕೆಲಸವನ್ನು ಇಲ್ಲಿಯೇ ಮಾಡುತ್ತಾರೆ
ಕೆಕುವೆ-ಉ, ವೆಹುಸೆಲೆ ಮತ್ತು ಎಝಿಹಿಲು ಚೋಟ್ಸೊ ಕೂಡ ಚಿಕ್ಕ ವಯಸ್ಸಿನಲ್ಲಿಯೇ ನೇಯ್ಗೆಯ ಕಲಿಕೆಯನ್ನು ಪ್ರಾರಂಭಿಸಿದರು. ಕಲಿಕೆಯ ಪ್ರಕ್ರಿಯೆಯು ನೂಲನ್ನು ಸ್ಪೂಲಿಂಗ್, ವೈಂಡಿಂಗ್ ಅಥವಾ ವೆಫ್ಟಿಂಗ್ ರೀತಿಯ ಆರಂಭಿಕ ಪ್ರಕ್ರಿಯೆಗಳನ್ನು ಪೂರೈಸುವ ಮೂಲಕ ಪ್ರಾರಂಭವಾಗುತ್ತದೆ.
ಪ್ರಸ್ತುತ 35 ವರ್ಷ ಪ್ರಾಯದ ಎಝಿಹಿಲು ಚೋಟ್ಸೊ ಅವರು ಸುಮಾರು 20 ವರ್ಷದವರಿದ್ದಾಗ ನೇಯ್ಗೆಯನ್ನು ಪ್ರಾರಂಭಿಸಿದರು. "ನಾನು ವಿವಿಧ ರೀತಿಯ ಬಟ್ಟೆಗಳನ್ನು ನೇಯುತ್ತೇನೆ - ಶಾಲು ಮತ್ತು ಸುತ್ತಿಕೊಳ್ಳುವ ಬಟ್ಟೆ. ಮೊದಲಿಗೆ ದಿನಕ್ಕೆ ಸುಮಾರು 30 ತುಂಡುಗಳನ್ನು ನೇಯುತ್ತಿದ್ದೆ ಆದರೆ ಈಗ ಮಕ್ಕಳನ್ನು ನೋಡಿಕೊಳ್ಳಬೇಕಿರುವುದರಿಂದಾಗಿ ವಾರಕ್ಕೊಂದು ಅಥವಾ ಕೆಲವೊಮ್ಮೆ ಎರಡು ವಾರಕ್ಕೊಂದು ಶಾಲು ನೇಯಲು ಸಾಧ್ಯವಾದರೆ ಅದೇ ಹೆಚ್ಚು" ಎಂದು ಅವರು ಹೇಳುತ್ತಾರೆ.
"ಬೆಳಿಗ್ಗೆ ಮತ್ತು ಸಂಜೆ, ನನ್ನ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಮತ್ತು ಹಗಲಿನಲ್ಲಿ ನೇಯ್ಗೆ ಮಾಡುತ್ತೇನೆ" ಎಂದು ಅವರು ಹೇಳುತ್ತಾರೆ, ಆದರೆ ಅವರೀಗ ನಾಲ್ಕನೇ ಮಗುವಿನ ಗರ್ಭಿಣಿಯಾಗಿರುವುದರಿಂದ ಕೆಲಸ ಮಾಡುವುದನ್ನು ನಿಲ್ಲಿಸಿದ್ದಾರೆ.
ಈ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆಯಾದ ಮೇಖಲಾ (ಸಾಂಪ್ರದಾಯಿಕ ನಾಗಾ ಸರೋಂಗ್) ಮತ್ತು ಶಾಲುಗಳನ್ನು ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ನೇಯುತ್ತಾರೆ. ಕುಟುಂಬದ ನಾಲ್ಕನೇ ತಲೆಮಾರಿನ ನೇಕಾರರಾದ ವೆಹುಸೆಲೆ ಕೂಡ ಅಂಗಾಮಿ ಬುಡಕಟ್ಟು ಜನಾಂಗಕ್ಕಾಗಿ ಬಟ್ಟೆಗಳನ್ನು ನೇಯುತ್ತಾರೆ. "ವಿಶೇಷವಾಗಿ ವಾರ್ಷಿಕ ಹಾರ್ನ್ ಬಿಲ್ ಉತ್ಸವದ ಸಮಯದಲ್ಲಿ ಬೇಡಿಕೆ ಹೆಚ್ಚಿರುತ್ತದೆಯಾದ್ದರಿಂದ ನಾನು ಆ ಸಮಯದಲ್ಲಿ ಹೆಚ್ಚು ನೇಯ್ಗೆ ಮಾಡುತ್ತೇನೆ" ಎಂದು ಅವರು ಹೇಳುತ್ತಾರೆ.
ನಾಗಾಲ್ಯಾಂಡ್ ರಾಜ್ಯ ಸರ್ಕಾರ ಆಯೋಜಿಸುವ ಹಾರ್ನ್ ಬಿಲ್ ಉತ್ಸವವು ಡಿಸೆಂಬರ್ 1ರಿಂದ ಪ್ರಾರಂಭವಾಗಿ 10 ದಿನಗಳ ಕಾಲ ನಡೆಯುತ್ತದೆ. ಈ ಉತ್ಸವವು ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಬದುಕುಗಳನ್ನು ಪ್ರದರ್ಶಿಸುತ್ತದೆ. ಈ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಭಾರತ ಮತ್ತು ಇತರ ದೇಶಗಳಿಂದ ಆಗಮಿಸುತ್ತಾರೆ.


ನಿಖು ಥುಲುವೊ (ಎಡ) ಮತ್ತು ವೆಹುಸೆಲೆ (ಬಲ) ತಮ್ಮ ಮನೆಯಲ್ಲಿ ನೇಯ್ಗೆ ಮಾಡುತ್ತಿರುವುದು
*****
ಪ್ರತಿ ನಾಗಾ ಬುಡಕಟ್ಟು ತನ್ನದೇ ಆದ ವಿಶಿಷ್ಟ ಶಾಲನ್ನು ಹೊಂದಿದೆ, ಇದು ಸಮುದಾಯದ ಗುರುತು ಮತ್ತು ಚಖೆಸಾಂಗ್ ಶಾಲುಗಳು 2017ರಲ್ಲಿ ಜಿಯೋಗ್ರಾಫಿಕಲ್ ಐಡೆಂಟಿಫಿಕೇಷನ್ (ಜಿಐ) ಟ್ಯಾಗ್ ಪಡೆದಿವೆ.
"ಈ ಶಾಲುಗಳು ಗುರುತು, ಸ್ಥಾನಮಾನ ಮತ್ತು ಲಿಂಗವನ್ನು ಸಂಕೇತಿಸುತ್ತವೆ" ಎಂದು ಫೆಕ್ ಸರ್ಕಾರಿ ಕಾಲೇಜಿನಲ್ಲಿ ಇತಿಹಾಸವನ್ನು ಕಲಿಸುವ ಡಾ. ಝೊಕುಶಾಯಿ ಹೇಳುತ್ತಾರೆ. "ಶಾಲುಗಳಿಲ್ಲದೆ ಯಾವುದೇ ಸಮಾರಂಭ ಅಥವಾ ಉತ್ಸವ ಅಪೂರ್ಣ."
"ಸಾಂಪ್ರದಾಯಿಕ ಶಾಲುಗಳು ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಸೂಚಿಸುತ್ತವೆ" ಎಂದು ನಾಗಾಲ್ಯಾಂಡಿನ ವಿಶಿಷ್ಟ ಜವಳಿಯನ್ನು ಉತ್ತೇಜನ ಮತ್ತು ಸಂರಕ್ಷಣೆಗೆ ಮೀಸಲಾಗಿರುವ ಜೀವನೋಪಾಯ ಕಾರ್ಯಕ್ರಮವಾದ ಚಿಜಾಮಿ ನೇಯ್ಗೆ ಸಂಸ್ಥೆಯ ಯೋಜನಾ ಸಂಯೋಜಕ ನೀಟ್ಶೋಪೆ (ಅಟ್ಶೋಲ್) ಥೋಪಿ ವಿವರಿಸುತ್ತಾರೆ.
"ಪ್ರತಿಯೊಂದು ಶಾಲು ಅಥವಾ ಮೇಖೇಲಾ ತನ್ನದೇ ಆದ ವರ್ಗದಡಿ ಬರುತ್ತದೆ. ಉದಾಹರಣೆಗೆ, ಅವಿವಾಹಿತ ವ್ಯಕ್ತಿಗಳು, ವಿವಾಹಿತ ದಂಪತಿಗಳು, ಕಿರಿಯ ಮಹಿಳೆಯರು ಅಥವಾ ಪುರುಷರಿಗೆ ನಿರ್ದಿಷ್ಟವಾದ ಶಾಲುಗಳಿವೆ ಮತ್ತು ಕೆಲವು ಅಂತ್ಯಕ್ರಿಯೆ ಸಮಯದ ಸೇವೆಗಳಿಗೆ ಮೀಸಲಾಗಿವೆ" ಎಂದು ಅವರು ವಿವರಿಸುತ್ತಾರೆ. ಅಟ್ಶೋಲ್ ಪ್ರಕಾರ, ಈಟಿ, ಗುರಾಣಿ, ಮಿಥುನ್, ಆನೆ, ಚಂದ್ರ, ಸೂರ್ಯ, ಹೂವುಗಳು ಮತ್ತು ಚಿಟ್ಟೆಗಳು ಚಖೆಸಾಂಗ್ ಶಾಲುಗಳಲ್ಲಿ ಕಂಡುಬರುವ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.


ಎಡ: ಇತ್ತೀಚಿನ ವರ್ಷಗಳಲ್ಲಿ, ರಿರಾ ಮತ್ತು ರುರಾ ಅವರೊಂದಿಗೆ ತುಪಿಖು / ತ್ಸುಕೆಟ್ಸುರಾ / ಹಪಿಡಾಸಾ ಶಾಲು ಚಖೆಸಾಂಗ್ ಬುಡಕಟ್ಟು ಜನಾಂಗದಲ್ಲಿ ಹೆಚ್ಚು ಕಾಣಸಿಗುವ ಶಾಲು. ಸಾಂಪ್ರದಾಯಿಕವಾಗಿ, ಈ ಶಾಲುಗಳನ್ನು ಎಲ್ಲಾ ಗೊತ್ತುಪಡಿಸಿದ 'ಅರ್ಹತಾ ಹಬ್ಬಗಳನ್ನು' ನಿರ್ವಹಿಸಿದ ದಂಪತಿಗಳಿಗೆ ನೀಡಲಾಗುತ್ತದೆ. ಹಪಿಡಾಸ ಶಾಲು ಅತ್ಯುನ್ನತ ಗೌರವವನ್ನು ಹೊಂದಿದೆ ಮತ್ತು ಇದು ಸಮೃದ್ಧಿ ಮತ್ತು ಔದಾರ್ಯವನ್ನು ಸಂಕೇತಿಸುತ್ತದೆ. ಬಲ: 'ರೂರಾ' ಶಾಲು ರಿರಾ ಶಾಲಿನ ಸ್ತ್ರೀ ಪ್ರತಿರೂಪ. ಇದು ಸಾಮಾನ್ಯವಾಗಿ ಎರು ವಿನ್ಯಾಸ ಹೊಂದಿದ್ದು ಬಿಳಿ ಬಣ್ಣದಲ್ಲಿರುತ್ತದೆ. ಇದರಲ್ಲಿ ಹೆಚ್ಚುವರಿ ದೊಡ್ಡ ಬಿಳಿ ಪಟ್ಟೆ ಬೆಳಕು, ಸಂತೋಷ ಮತ್ತು ಮನಸ್ಸಿನ ಶಾಂತಿಯನ್ನು ಪ್ರತಿನಿಧಿಸುತ್ತದೆ ಮತ್ತು ಎರು ವಿನ್ಯಾಸವು ಸಂಪತ್ತು ಮತ್ತು ಪ್ರತಿಫಲವನ್ನು ಸಂಕೇತಿಸುತ್ತದೆ


ಎಡ: ಸಾಂಪ್ರದಾಯಿಕ ಚಖೆಸಾಂಗ್ ಶಾಲು. ಬಲ: ಪುರುಷರ 'ರಿರಾ' ಶಾಲು ಈಟಿ, ಗುರಾಣಿ, ಪ್ರಾಣಿಗಳ ಮೂಳೆ ಮತ್ತು ಮಚ್ಚಿನ ಹಿಡಿಯಂತಹ ಲಕ್ಷಣಗಳನ್ನು ಹೊಂದಿರುತ್ತದೆ
ಆದರೆ ಪರಿಯೊಂದಿಗೆ ಮಾತನಾಡಿದ ಮಹಿಳೆಯರಿಗೆ ಈ ವರ್ಗಗಳು ಮತ್ತು ಅವರು ನೇಯ್ಗೆಗೆ ಬಳಸುವ ಮೂಲವಸ್ತುಗಳ ಪ್ರಾಮುಖ್ಯತೆಯ ಬಗ್ಗೆ ಹೆಚ್ಚಾಗಿ ತಿಳಿದಿರಲಿಲ್ಲ, ಇದು ಈ ಕರಕುಶಲತೆ ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ವರ್ಗಾವಣೆಯಾಗಿ ಬಂದಿದ್ದರೂ, ಅವರಿಗೆ ಅವುಗಳ ಹಿಂದಿನ ಕಥೆಗಳು ತಿಳಿದಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಚಖೆಸಾಂಗ್ ಶಾಲುಗಳು ಜಿಐ ಟ್ಯಾಗ್ ಪಡೆದಿವೆಯೆನ್ನುವುದು ಸಹ ಕೆಕುವೆ- ಮತ್ತು ಅವರ ನೆರೆಹೊರೆಯವರಿಗೆ ತಿಳಿದಿಲ್ಲ, ಆದರೆ ಆರ್ಥಿಕ ತುರ್ತು ಪರಿಸ್ಥಿತಿಗಳಲ್ಲಿ ನೇಯ್ಗೆಯಿಂದ ಸಾಕಷ್ಟು ಸಹಾಯವಾಗಿದೆ ಎಂದು ಅವರು ಹೇಳುತ್ತಾರೆ. ವಾರ್ಪ್ ಗೆ ದಾರವನ್ನು ಸುತ್ತುವ ಮತ್ತು ಮರದ ಬೀಟರ್ ಬಳಸಿ ಬಿಗಿಗೊಳಿಸುವ ಕೆಲಸ ಮಾಡುತ್ತಿದ್ದ ವೆಹುಸೆಲೆ, "ಬೆಳೆ ಕೊಯ್ಲು ಮಾಡುವವರೆಗೆ ನಮಗೆ ಕೃಷಿಯಿಂದ ಏನೂ ಸಿಗುವುದಿಲ್ಲ, ಆದರೆ ನೇಯ್ಗೆಯಲ್ಲಿ ನಮಗೆ ಹಣದ ಅಗತ್ಯವಿದ್ದಾಗ ಬಟ್ಟೆಗಳನ್ನು ಮಾರಿ ಹಣ ಪಡೆಯಲು ಸಾಧ್ಯವಾಗುತ್ತದೆ" ಎಂದು ಪರಿಗೆ ತಿಳಿಸಿದರು.
*****
ನೇಕಾರರು ಸಾಮಾನ್ಯವಾಗಿ ಫೆಕ್ ಜಿಲ್ಲೆಯ ಉಪ-ವಿಭಾಗವಾದ ಫುಟ್ಸೆರೊದಲ್ಲಿನ ಮಾರುಕಟ್ಟೆಯಿಂದ ಕಚ್ಚಾ ವಸ್ತುಗಳನ್ನು ಖರೀದಿಸುತ್ತಾರೆ. ನೇಯ್ಗೆಯಲ್ಲಿ ಎರಡು ರೀತಿಯ ನೂಲುಗಳನ್ನು ಬಳಸಲಾಗುತ್ತದೆ - ಹತ್ತಿ ಮತ್ತು ಉಣ್ಣೆ ಈಗ ಹೆಚ್ಚು ಸಾಮಾನ್ಯ ಮತ್ತು ಸಾಮೂಹಿಕವಾಗಿ ಉತ್ಪಾದಿಸುವ ನೂಲಿನ ಸುಲಭ ಲಭ್ಯತೆಯಿಂದಾಗಿ ಸಸ್ಯಗಳಿಂದ ಸಿಗುವ ಸಾಂಪ್ರದಾಯಿಕ ನೈಸರ್ಗಿಕ ನಾರನ್ನು ಬಳಸುವ ಅಭ್ಯಾಸ ನಿಧಾನವಾಗಿ ಕಣ್ಮರೆಯಾಗುತ್ತಿದೆ.
“ಬೇಡಿಕೆ ಹೆಚ್ಚಿರುವ ಸಮಯದಲ್ಲಿ (ನವೆಂಬರ್-ಡಿಸೆಂಬರ್) ನಾವು ಸಾಮಾನ್ಯವಾಗಿ ನೂಲನ್ನು ಗೊತ್ತುಪಡಿಸಿದ ಅಂಗಡಿಯಿಂದ ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತೇವೆ. ಅವರು ಹೆಚ್ಚಾಗಿ ನಾವು ಸಿದ್ಧಪಡಿಸಿದ ಉತ್ಪನ್ನಗಳನ್ನು ಮಾರಾಟಕ್ಕೆ ಇಡುತ್ತಾರೆ ಅಥವಾ ಬೇಡಿಕೆಗಳ ವ್ಯವಸ್ಥೆಯನ್ನು ಮಾಡುತ್ತಾರೆ” ಎಂದು ವೆಹುಸೆಲೆ ಹೇಳುತ್ತಾರೆ. ಸ್ಥಳೀಯ ಉಣ್ಣೆ ಮತ್ತು ಎರಡು ಪ್ಲೈ ನೂಲಿನ ಬೆಲೆ ಕೆ.ಜಿ.ಗೆ 550 ರೂಪಾಯಿ ಇದ್ದರೆ, ಥೈಲ್ಯಾಂಡ್ ನೂಲಿನ ಬೆಲೆ ಕೆ.ಜಿ.ಗೆ 640 ರೂಪಾಯಿಗಳಷ್ಟಿದೆ.
ನೇಕಾರರು ಬಿದಿರು ಮತ್ತು ಮರದಿಂದ ಮಾಡಿದ ಸಾಂಪ್ರದಾಯಿಕ ನಾಗಾ (ಟೊಂಕದ) ಮಗ್ಗವನ್ನು ಬಳಸಿ ನೇಯುತ್ತಾರೆ.
ಕೆಕುವೆ-ಉ ಚೆಝೆರ್ಹೋ ಅಥವಾ ಹಿಂಬದಿ ಪಟ್ಟಿ (ಬ್ಯಾಕ್ ಸ್ಟ್ರ್ಯಾಪ್) ಮತ್ತು ರಾಡ್ಝು ಅಥವಾ ಮರದ ಸುತ್ತುವ ಯಂತ್ರದ ಕುರಿತು ಹೇಳುತ್ತಾರೆ. ಹಿಂಬದಿ ಪಟ್ಟಿಯನ್ನು ಕೆಪ್ (ಮರದ ಬಾರ್ ಅಥವಾ ರಾಡ್) ಗೆ ಸಂಪರ್ಕಿಸಲಾಗಿದೆ ಎಂದು ಅವರು ವಿವರಿಸುತ್ತಾರೆ. ಇದು ನೇಯ್ದ ತುದಿಯನ್ನು ಸುತ್ತುತ್ತದೆ. ಆದರೆ, 'ರಾಡ್ಜು' ಇಲ್ಲದೆಯೂ, 'ರಾಡ್ಜು ಕುಲೋ' ಎಂದು ಕರೆಯಲ್ಪಡುವ ಸುತ್ತವ ಕಂಬವನ್ನು ಗೋಡೆಗೆ ಅಥವಾ ಯಾವುದೇ ಬೆಂಬಲಿತ ರಚನೆಗೆ ಅಡ್ಡವಾಗಿ ಜೋಡಿಸಿ ಘರ್ಷಣೆಯನ್ನು ಸೃಷ್ಟಿಸಬಹುದು.


ಎಡ: ನೇಯ್ಗೆಗೆ ಅನೇಕ ಹಲವು ಉಪಕರಣಗಳು ಬೇಕಾಗುತ್ತವೆ. ಬಲ: ಕೆಕುವೆ-ಉ ಅವರ ಅಡುಗೆಮನೆಯ ಗೋಡೆಗೆ ಸಮತಲವಾಗಿ ಜೋಡಿಸಲ್ಪಟ್ಟಿರುವ 'ರಾಡ್ಝು ಕುಲೋ' ಎಂಬ ಸುತ್ತುವ ಬೀಮ್ ಮೇಲೆ ನೇಯ್ಗೆ ಮಾಡುತ್ತಿದ್ದಾರೆ


ಎಡ: ಅಂಗಾಮಿ ಬುಡಕಟ್ಟು ಜನಾಂಗದವರು ಧರಿಸುವ ಶಾಲಿನ ಮೇಲೆ ವೆಹುಸೆಲೆ ಒಂದು ಮಾದರಿಯನ್ನು ನೇಯುತ್ತಿದ್ದಾರೆ. ಬಲ: ನಿಖು ಥುಲುವೊ ಕೆಲಸದಲ್ಲಿ ನಿರತರಾಗಿದ್ದಾರೆ
ನೇಕಾರರು ನೇಯ್ಗೆ ಪ್ರಕ್ರಿಯೆಗೆ ಅಗತ್ಯವಾದ ಐದರಿಂದ ಎಂಟು ಉಪಕರಣಗಳನ್ನು ಬಳಸುತ್ತಾರೆ: ಶಾಲಿನ ಗುಣಮಟ್ಟ, ನುಣುಪು ಮತ್ತು ದೃಢತೆಯನ್ನು ನಿರ್ಧರಿಸುವಲ್ಲಿ ಲೋಜಿ ಅಥವಾ ಮರದ ಬೀಟರ್ ನಿರ್ಣಾಯಕ ಪಾತ್ರ ವಹಿಸುತ್ತದೆ; ಮೆಫೆಟ್ಶುಕಾ ಎಂದು ಕರೆಯಲ್ಪಡುವ ನೇಯ್ಗೆ ನೂಲುಗಳನ್ನು ಹೊಂದಿರುವ ಸರಳ ರಾಟೆ ಕೋಲು. ಸಂಕೀರ್ಣ ಮಾದರಿಗಳನ್ನು ವಿನ್ಯಾಸಗೊಳಿಸಲು, ನೇಕಾರರು ತೆಳುವಾದ ಬಿದಿರಿನ ಕಡ್ಡಿಗಳನ್ನು ಬಳಸುತ್ತಾರೆ - ಲೋನೆ ತ್ಸುಕಾ - ನೂಲಿನ ಉಂಡೆಗಳು. ನೇಯ್ಗೆಯ ಸಮಯದಲ್ಲಿ ವಾರ್ಪ್ ಗಳನ್ನು ಮೇಲಿನ ಮತ್ತು ಕೆಳಗಿನ ಗುಂಪುಗಳಾಗಿ ಬೇರ್ಪಡಿಸಲು ಲೋಪೆ ಅಥವಾ ಬಿದಿರಿನ ಕೋಲನ್ನು ಬಳಸಲಾಗುತ್ತದೆ. ಕೆಜೆ ತ್ಸುಕಾ ಮತ್ತು ನಾಚೆ ತ್ಸುಕಾ ಎಂದು ಕರೆಯಲ್ಪಡುವ ತೆಳುವಾದ ಬಿದಿರಿನ ಕೋಲುಗಳು ವಾರ್ಪ್ ನೂಲುಗಳನ್ನು ಪ್ರತ್ಯೇಕಿಸಲು ಮತ್ತು ಕ್ರಮಬದ್ಧವಾಗಿಡುವ ಕೆಲಸವನ್ನು ಮಾಡುತ್ತವೆ.
*****
ಇಲ್ಲಿನ ಮುಖ್ಯ ಬೆಳೆ ಮೇ-ಜೂನ್ ನಲ್ಲಿ ಬೆಳೆದ ಭತ್ತವಾಗಿದ್ದು, ಇದನ್ನು ಸ್ವಯಂ ಬಳಕೆಗೆ ಬಳಸಲಾಗುತ್ತದೆ. ತಮ್ಮ ಸಣ್ಣ ಭೂಮಿಯಲ್ಲಿ, ವೆಹುಸೆಲೆ ಖುವಿ (ಆಲಿಯಂ ಚೈನೀಸ್) ಸಹ ಬೆಳೆಯುತ್ತಾರೆ - ಸಲಾಡ್ ಮತ್ತು ಇತರ ತಿನಿಸುಗಳಲ್ಲಿ ಬಳಸುವ ಒಂದು ರೀತಿಯ ಸುವಾಸನೆಯುಳ್ಳ ಈ ಗಿಡಮೂಲಿಕೆಯನ್ನು ವೆಹುಸೆಲೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
"ಬಿತ್ತನೆ ಮತ್ತು ಕೊಯ್ಲಿನ ನಡುವಿನ ಅವಧಿಯಲ್ಲಿ, ಕಳೆ ತೆಗೆಯುವುದು, ಪೋಷಿಸುವುದು ಮತ್ತು ವನ್ಯಜೀವಿಗಳಿಂದ ಬೆಳೆಗಳನ್ನು ರಕ್ಷಿಸುವುದು ಮುಂತಾದ ಆವರ್ತನೆ ಮಾದರಿಯ ಕೆಲಸವಿರುತ್ತದೆ" ಎಂದು ಅವರು ಹೇಳುತ್ತಾರೆ. ಇದರಿಂದಾಗಿ ಅವರಿಗೆ ನೇಯ್ಗೆಗೆ ಸೀಮಿತ ಸಮಯವಷ್ಟೇ ಸಿಗುತ್ತದೆ.
ಕೃಷಿಯಲ್ಲಿ ಸಾಕಷ್ಟು ತೊಡಗಿಸಿಕೊಳ್ಳದೆ ನೇಯ್ಗೆಯಲ್ಲಿ ಹೆಚ್ಚು ಸಮಯವನ್ನು ಕಳೆದಿದ್ದಕ್ಕಾಗಿ ತನ್ನ ಕುಟುಂಬದಿಂದ ದೂಷಿಸಲ್ಪಡುತ್ತಿದ್ದ ದಿನಗಳನ್ನು ಕೆಕುವೆ-ಉ ನೆನಪಿಸಿಕೊಳ್ಳುತ್ತಾರೆ. ಆದರೆ ಅವರು ತನ್ನ ಮನಸ್ಸನ್ನು ಬದಲಾಯಿಸಲಿಲ್ಲ. "ನಾನು ಅಷ್ಟಾಗಿ ಹೊಲಕ್ಕೆ ಹೋಗದಿದ್ದರೂ, ನೇಯ್ಗೆ ನಮಗೆ ಪ್ರಮುಖ ಜೀವನೋಪಾಯದ ಮೂಲವಾಗಿ ಒದಗಿತು. ನನ್ನ ಮದುವೆಗೆ ಮೊದಲು, ನನ್ನ ಸಹೋದರನ ಮಕ್ಕಳ ಬೋಧನಾ ಶುಲ್ಕವನ್ನು ಪಾವತಿಸಲು ನಾನು ಕುಟುಂಬಕ್ಕೆ ಸಹಾಯ ಮಾಡುತ್ತಿದ್ದೆ ಮತ್ತು ಹಬ್ಬಗಳ ಸಮಯದಲ್ಲಿ ನನಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದೆ" ಎಂದು ಅವರು ಹೇಳುತ್ತಾರೆ. ಕೃಷಿ ಇಲ್ಲದ ಸಮಯದಲ್ಲಿ ನೇಯ್ಗೆಯಿಂದ ಗಳಿಸಿದ ಹಣವು ಕುಟುಂಬದ ಪಡಿತರ ತರಲು ಸಹಾಯ ಮಾಡುತ್ತದೆ ಎಂದು ಕೆಕುವೆ-ಉ ಹೇಳುತ್ತಾರೆ.


ಎಡ ಮತ್ತು ಬಲ: ಕೆಕುವೆ-ಉ ತನ್ನ ಮಗಳೊಂದಿಗೆ. ಕೆಕುವೆ-ಉ ತನ್ನ ಕೃಷಿ ಮತ್ತು ಮನೆಕೆಲಸಗಳ ನಡುವೆ ನೇಯ್ಗೆಗೆ ಸಮಯವನ್ನು ಕಂಡುಕೊಳ್ಳಬೇಕು


ಎಡ: ಕೆಕುವೆ-ಉ ಅವರ ನಿವಾಸದ ನೋಟ. ಬಲ: ಕೆಕುವೆ-ಉ ಮತ್ತು ವೆಹುಸಲೆ ಮೂರು ಭಾಗಗಳ ಅಂಗಾಮಿ ನಾಗಾ ಬುಡಕಟ್ಟು ಶಾಲಿನ ಪೂರ್ಣಗೊಂಡ ಭಾಗವನ್ನು ಎತ್ತಿ ಹಿಡಿದಿದ್ದಾರೆ
ಈ ಕೆಲಸದಲ್ಲಿನ ಸಂಪಾದನೆ ಸಾಕಾಗುವುದಿಲ್ಲ ಎಂದು ಈ ಮಹಿಳೆಯರು ಹೇಳುತ್ತಾರೆ.
"ದಿನಗೂಲಿಗೆ ಹೋದರೆ ಸುಮಾರು 500ರಿಂದ 600 ರೂಪಾಯಿಗಳನ್ನು ಗಳಿಸಬಹುದು ಮತ್ತು ನಾವು ನೇಯ್ಗೆಯಿಂದ ವಾರಕ್ಕೆ ಸುಮಾರು 1,000 ರಿಂದ 1,500 ರೂಪಾಯಿಗಳನ್ನು ಗಳಿಸುತ್ತೇವೆ" ಎಂದು ವೆಹುಸೆಲೆ ಹೇಳುತ್ತಾರೆ. "ದಿನಗೂಲಿಯಿಂದ ಗಂಡಸರಿಗೆ ದಿನಕ್ಕೆ ಸುಮಾರು 600ರಿಂದ 1,000 ರೂಪಾಯಿಗಳ ಗಳಿಕೆ ಸಿಗುತ್ತದೆ, ಆದರೆ ಮಹಿಳೆಯರಿಗೆ ಕೇವಲ 100ರಿಂದ 150 ಸಿಗುತ್ತದೆ" ಎಂದು ಕೆಕುವೆ-ಉ ಹೇಳುತ್ತಾರೆ.
"ಪೊಯಿಸಾ ಪೈಲಿ ಹೋಯಿಶೆ [ನನಗೆ ಸಂಪಾದನೆ ಸಿಗುವವರೆಗೂ ಇದು ಪರವಾಗಿಲ್ಲ]" ಎಂದು ಎಝಿಹಿಲು ಚೋಟ್ಸೊ ಹಗುರವಾದ ದನಿಯಲ್ಲಿ ಉಸುರುತ್ತಾರೆ ಮತ್ತು ನಂತರ ಗಂಭೀರ ಕಳವಳವೊಂದನ್ನು ವ್ಯಕ್ತಪಡಿಸುತ್ತಾರೆ, "ಇಲ್ಲಿ ಸರ್ಕಾರದಿಂದ ಯಾವುದೇ ಸಹಾಯ ಸಿಗುವುದಿಲ್ಲ."
ಜೊತೆಗೆ ಆರೋಗ್ಯ ಸಮಸ್ಯೆಗಳೂ ಇವೆ. ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದು ಅಥವಾ ಬಾಗುವುದು ಹುಮೊರ್‌ಬಿಖಾ (ಬೆನ್ನುನೋವು) ಕ್ಕೆ ಕಾರಣವಾಗುತ್ತದೆ ಎಂದು ಇದು ವೆಹುಸೆಲೆ ತಕ್ಷಣವೇ ಹೇಳುತ್ತಾರೆ. ಇದು ಅವರ ಕೆಲಸದಲ್ಲಿರುವ ಅತಿದೊಡ್ಡ ಸವಾಲುಗಳಲ್ಲಿ ಒಂದಾಗಿದೆ.
ಮಾರುಕಟ್ಟೆಯಲ್ಲಿ ಯಂತ್ರ ನಿರ್ಮಿತ ಉತ್ಪನ್ನಗಳ ಸ್ಪರ್ಧೆಯೂ ಇದೆ. "ಈ ಬಟ್ಟೆಗಳಿಗೆ ಜನರು ಯಾವುದೇ ದೂರುಗಳಿಲ್ಲದೆ ಕೇಳಿದಷ್ಟು ಹಣ ಪಾವತಿಸಿ ಕೊಳ್ಳುತ್ತಾರೆ” ಕೆಕುವೆ-ಉ ಹೇಳುತ್ತಾರೆ. "ಆದರೆ ಸ್ಥಳೀಯ ನೇಕಾರರು ತಯಾರಿಸಿದ ವಸ್ತುಗಳ ವಿಷಯಕ್ಕೆ ಬಂದಾಗ, ಅದರಲ್ಲಿ ಒಂದೇ ಸಡಿಲವಾದ ದಾರವಿದ್ದರೂ ಸಹ, ಜನರು ರಿಯಾಯಿತಿ ಕೇಳುತ್ತಾರೆ."
ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಬೆಂಬಲ ದೊರಕಿದೆ.
ಅನುವಾದಕರು: ಶಂಕರ ಎನ್ ಕೆಂಚನೂರು