“ನನ್ನನ್ನು ಅನೇಕ ಬಾರಿ ಆನೆಗೆಳು ಅಟ್ಟಿಸಿಕೊಂಡು ಬಂದಿವೆ. ಆದರೆ ಇದುವರೆಗೆ ಅವುಗಳಿಂದಾಗಿ ನನಗೆ ಯಾವುದೇ ಹಾನಿ ಆಗಿಲ್ಲ” ಎಂದು ರವಿಕುಮಾರ್ ನೇತಮ್ ಮುಗುಳ್ನಗೆಯೊಂದಿಗೆ ಹೇಳುತ್ತಾರೆ.
25 ವರ್ಷದ ಈ ಗೊಂಡ ಆದಿವಾಸಿ ಅರ್ಸಿಕನ್ಹಾರ್ ಅರಣ್ಯದ ದಾರಿಯಲ್ಲಿ ನಡೆಯುತ್ತ ನಮ್ಮೊಂದಿಗೆ ಮಾತನಾಡುತ್ತಿದ್ದರು. ಉದಂತಿ ಸೀತಾನದಿ ಟೈಗರ್ ರಿಸರ್ವ್ ಪ್ರದೇಶದಲ್ಲಿ ಎಲಿಫಂಟ್ ಟ್ರ್ಯಾಕರ್ ಆಗಿ ಕೆಲಸ ಮಾಡುವ ಅವರು, ಲದ್ದಿ ಮತ್ತು ಹೆಜ್ಜೆ ಗುರುತಿನ ಮೂಲಕ ಆನೆಗಳ ಜಾಡನ್ನು ಪತ್ತೆ ಮಾಡಬಲ್ಲರು.
“ನಾನು ಕಾಡಿನ ನಡುವೆಯೇ ಹುಟ್ಟಿ ಬೆಳೆದವನು. ನನಗೆ ಇದನ್ನೆಲ್ಲ ಕಲಿಯಲು ಶಾಲೆಗೆ ಹೋಗಬೇಕಾದ ಅವಶ್ಯಕತೆಯಿಲ್ಲ” ಎಂದು ಧಮ್ತಾರಿ ಜಿಲ್ಲೆಯ ತೆನಾಹಿ ಗ್ರಾಮದ ರವಿ ಹೇಳುತ್ತಾರೆ. 12ನೇ ತರಗತಿಯವರೆಗೆ ಓದಿದ ಅವರು, ಸುಮಾರು ನಾಲ್ಕು ವರ್ಷಗಳ ಕೆಳಗೆ ಅರಣ್ಯ ಇಲಾಖೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಕಾಡಿನ ಒಳಗೆ ಅವರೊಂದಿಗೆ ನಡೆಯುತ್ತಿದ್ದರೆ, ಕೀಟಗಳ ಸದ್ದು ಕಾಡಿನ ಮೌನವನ್ನು ಆಗಾಗ ಕಲಕುತ್ತಿತ್ತು. ಸಾಲ್ (ಶೋರಿಯಾ ರೊಬಸ್ಟಾ) ಮತ್ತು ತೇಗ (ಟೆಕ್ಟೋನಾ ಗ್ರಾಂಡಿಸ್) ಮರಗಳ ನಡುವೆ ತೂರುವ ಗಾಳಿ ಸದ್ದು ಸಂಗೀತದಂತೆ ಕೇಳುತ್ತಿತ್ತು. ಮತ್ತೆ ಕೆಲವೊಮ್ಮೆ ಹಕ್ಕಿಗಳ ಸದ್ದು ಮತ್ತು ಕೊಂಬೆಗಳು ಮುರಿದು ಬೀಳುವ ಸದ್ದೂ ಕಿವಿಗೆ ಬೀಳುತ್ತಿದ್ದವು. ಎಲಿಫಂಟ್ ಟ್ರ್ಯಾಕಿಂಗ್ ಕೆಲಸ ಮಾಡುವವರು ಕಾಡಿದ ಸದ್ದು ಮತ್ತು ಕಾಣಬಹುದಾದ ಸುಳಿವುಗಳತ್ತ ಸದಾ ಗಮನಹರಿಸುತ್ತಿರಬೇಕು.


ಎಡ: 'ನಾನು ಕಾಡಿನ ನಡುವೆಯೇ ಹುಟ್ಟಿ ಬೆಳೆದವನು. ನನಗೆ ಇದನ್ನೆಲ್ಲ ಕಲಿಯಲು ಶಾಲೆಗೆ ಹೋಗಬೇಕಾದ ಅವಶ್ಯಕತೆಯಿಲ್ಲ' ಎಂದು ಧಮ್ತಾರಿ ಜಿಲ್ಲೆಯ ತೆನಾಹಿ ಗ್ರಾಮದ ರವಿ ಹೇಳುತ್ತಾರೆ. ಬಲ: ಅರಸಿಕನ್ಹಾರ್ ಅರಣ್ಯ ವಲಯದಲ್ಲಿ ಎಲಿಫಂಟ್ ಟ್ರ್ಯಾಕಿಂಗ್ ಕೆಲಸ ಮಾಡುವವರ ಶಿಬಿರ. ಆನೆಗಳು ಸುಮಾರು 300 ಮೀಟರ್ ದೂರದಲ್ಲಿವೆ
ಆನೆಗಳು ಇತ್ತೀಚೆಗಷ್ಟೇ ಈ ಕಾಡಿಗೆ ಬರಲಾರಂಭಿಸಿವೆ. ಅವರು ಮೂರು ವರ್ಷಗಳಿಂದೀಚೆಗೆ ಇಲ್ಲಿಗೆ ಬರಲಾರಂಭಿಸಿದವು. ಇವುಗಳನ್ನು ಸಿಕಾಸರ್ ಆನೆ ಗುಂಪು ಎಂದು ಅರಣ್ಯಾಧಿಕಾರಿಗಳು ಗುರುತಿಸುತ್ತಾರೆ. ಅವು ಈಗ 20 ಆನೆಗಳ ಎರಡು ಗುಂಪಿನಲ್ಲಿ ಸಂಚರಿಸುತ್ತವೆ. ಒಂದು ಗುಂಪು ಗರಿಯಾಬಂದ್ ಕಡೆ ಹೋಗಿದೆ. ಇನ್ನೊಂದು ಗುಂಪನ್ನು ಇಲ್ಲಿನ ಸ್ಥಳೀಯರು ಪತ್ತೆಹಚ್ಚುತ್ತಿದ್ದಾರೆ ಎಂದು ದೇವದತ್ ತರಮ್ ಹೇಳುತ್ತಾರೆ. ಅರಣ್ಯ ಸೇವೆಗೆ ಗಾರ್ಡ್ ಆಗಿ ಸೇರಿಕೊಂಡ 55 ವರ್ಷದ ದೇವದತ್ ಪ್ರಸ್ತುತ ಫಾರೆಸ್ಟ್ ರೇಂಜರ್ ಆಗಿ ಕೆಲಸ ಮಾಡುತ್ತಿದ್ದಾರೆ. 35 ವರ್ಷಗಳ ಅನುಭವ ಹೊಂದಿರುವ ಅವರಿಗೆ ಕಾಡು ತಮ್ಮ ಅಂಗೈಯಷ್ಟೇ ಪರಿಚಿತ.
“ಈ ಪ್ರದೇಶದಲ್ಲಿ ಸಾಕಷ್ಟು ನೀರು ಲಭ್ಯವಿದೆ. ಕೊಳಗಳು ಹಾಗೂ ಕೆಲವು ಅಣೆಕಟ್ಟುಗಳೂ ಇವೆ” ಇದೇ ಕಾರಣಕ್ಕಾಗಿ ಪ್ರಾಣಿಗಳು ಈ ಸ್ಥಳವನ್ನು ಪ್ರೀತಿಸುತ್ತವೆ ಎಂದು ದೇವೋದತ್ ವಿವರಿಸುತ್ತಾರೆ. ಜೊತೆಗೆ ಈ ಕಾಡು ಆನೆಗಳಿಗೆ ಇಷ್ಟವಾದ ಮಹುವಾ ಹಣ್ಣಿನ ಮರಗಳನ್ನೂ ಹೊಂದಿದೆ. ಅಲ್ಲದೆ ಇಲ್ಲಿ ಮನುಷ್ಯರ ಹಸ್ತಕ್ಷೇಪವೂ ಕಡಿಮೆ. “ಕಾಡಿನ ಸಾಂದ್ರತೆ ಮತ್ತು ಗಣಿಗಾರಿಕೆ ಇಲ್ಲದಿರುವುದು ಈ ಸ್ಥಳವನ್ನು ಇನ್ನಷ್ಟು ಆನೆ ಸ್ನೇಹಿಯಾಗಿ ಮಾಡಿದೆ” ಎಂದು ದೇವೋದತ್ ಹೇಳುತ್ತಾರೆ.
ಎಲಿಫಂಟ್ ಟ್ರ್ಯಾಕಿಂಗ್ ಕೆಲಸಗಾರರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಎಲ್ಲಾ ಕಾಲಮಾನದಲ್ಲೂ ಕೆಲಸ ಮಾಡುವ ಇವರು ಕಾಡಿನ ಜೊತೆಗೆ ಹತ್ತಿರ ಊರುಗಳಲ್ಲೂ ಆನೆಗಳ ಚಲನವಲನವನ್ನು ಪರಿಶೀಲಿಸುತ್ತಾರೆ. ಅವರು ತಮ್ಮ ಕೆಲಸದ ಫಲಿತಾಂಶವನ್ನು ಆಗಾಗ ಎಲಿಫಂಟ್ ಟ್ರ್ಯಾಕರ್ ಅಪ್ಲಿಕೇಷನ್ನಿನಲ್ಲಿ ವರದಿ ಮಾಡುತ್ತಿರುತ್ತಾರೆ.


ಎಡ: ಆನೆಗಳನ್ನು ಅವುಗಳ ಹೆಜ್ಜೆಗುರುತುಗಳ ಮೂಲಕ ಹೇಗೆ ಪತ್ತೆಹಚ್ಚಲಾಗುತ್ತದೆ ಎಂಬುದನ್ನು ಫಾರೆಸ್ಟ್ ರೇಂಜರ್ ದೇವದತ್ ತಾರಾಮ್ ವಿವರಿಸುತ್ತಿದ್ದಾರೆ. ಬಲ: ನಾಥೂರಾಮ್ ನೇತಮ್ ಆನೆ ಲದ್ದಿಯನ್ನು ಪರಿಶೀಲಿಸುತ್ತಿದ್ದಾರೆ


ಎಡ: ಗಸ್ತು ತಿರುಗುತ್ತಿರುವ ಎಲಿಫಂಟ್ ಟ್ರ್ಯಾಕರ್ ಗಳು. ಬಲ: ಟ್ರ್ಯಾಕಿಂಗ್ ಕೆಲಸಗಾರರು ಅಪ್ಲಿಕೇಶನ್ನಿನಲ್ಲಿ ವಿವರಗಳನ್ನು ಅಪ್ಲೋಡ್ ಮಾಡಬೇಕು ಮತ್ತು ಜನರನ್ನು ಎಚ್ಚರಿಸಬೇಕು ಮತ್ತು ವಾಟ್ಸಾಪ್‌ನಲ್ಲೂ ವರದಿಗಳನ್ನು ಕಳುಹಿಸಬೇಕು
ಎಫ್ಎಂಐಎಸ್ (ಅರಣ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ) ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವನ್ಯಜೀವಿ ವಿಭಾಗ ಜಂಟಿಯಾಗಿ ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. “ಆನೆಗಳು ಇರುವ ಸ್ಥಳದ 10 ಕಿ.ಮೀ ವ್ಯಾಪ್ತಿಯಲ್ಲಿನ ನಿವಾಸಿಗಳನ್ನು ಎಚ್ಚರಿಸಲು ಈ ಮಾಹಿತಿಯನ್ನು ಬಳಸಲಾಗುತ್ತದೆ" ಎಂದು ಉದಂತಿ ಸೀತಾನದಿ ಹುಲಿ ಮೀಸಲು ಪ್ರದೇಶದ ಉಪ ನಿರ್ದೇಶಕ ವರುಣ್ ಕುಮಾರ್ ಜೈನ್ ಹೇಳುತ್ತಾರೆ.
ಆನೆ ಪತ್ತೆ ತಂಡಕ್ಕೆ ನಿಗದಿತ ಕೆಲಸದ ಸಮಯ ಇಲ್ಲ ಮತ್ತು ಯಾವುದೇ ವೈದ್ಯಕೀಯ ವಿಮೆಯ ಸೌಲಭ್ಯವೂ ಸಿಗುವುದಿಲ್ಲ. ಗುತ್ತಿಗೆ ಆಧಾರದಲ್ಲಿ ದುಡಿಯುವ ಇವರಿಗೆ ತಿಂಗಳಿಗೆ 1500 ರೂಪಾಯಿಗಳ ಸಂಬಳ ನೀಡಲಾಗುತ್ತದೆ. “ನಾನು ಈ ಪ್ರದೇಶದ ಕಾವಲುಗಾರ. ಒಂದು ವೇಳೆ ರಾತ್ರಿ ಈ ಪ್ರದೇಶದಲ್ಲಿ ಆನೆ ಬಂದರೆ ನಾಊ ರಾತ್ರಿ ಬರಬೇಕಾಗುತ್ತದೆ. ಅದು ನನ್ನ ಜವಾಬ್ದಾರಿ” ಎಂದು ಗೊಂಡ್ ಬುಡಕಟ್ಟು ಸಮುದಾಯಕ್ಕೆ ಸೇರಿದ 40 ವರ್ಷದ ಅರಣ್ಯ ರಕ್ಷಕ ನಾರಾಯಣ್ ಸಿಂಗ್ ಧ್ರುವ್ ಹೇಳುತ್ತಾರೆ.
“ಆನೆಗಳು ಮಧ್ಯಾಹ್ನ 12ರಿಂದ 3ಗಂಟೆಯ ತನಕ ಮಲಗುತ್ತವೆ. ನಂತರ ಗುಂಪಿನ ಮುಖ್ಯ ಆನೆ ಘೀಳಿಡುತ್ತದೆ ಅದನ್ನು ಕೇಳಿದ ಉಳಿದ ಆನೆಗಳು ಮತ್ತೆ ನಡೆಯಲು ಆರಂಭಿಸುತ್ತವೆ. ಆನೆಗಳು ಮನುಷ್ಯರು ಕಂಡರೆ ಘೀಳಿಟ್ಟು ಉಳಿದ ಆನೆಗಳನ್ನು ಎಚ್ಚರಿಸುತ್ತವೆ.” ಇದು ಆನೆ ಪತ್ತೆದಾರರಿಗೆ ಆನೆ ಇರುವುದನ್ನು ಗುರುತಿಸಲು ಸಹಾಯ ಮಾಡುತ್ತದೆ. “ನಾನು ಆನೆಗಳ ಕುರಿತು ಏನನ್ನೂ ಕಲಿತವನಲ್ಲ. ನಾನು ಇದನ್ನೆಲ್ಲ ಕಲಿತಿದ್ದು ಈ ಎಲಿಫೆಂಟ್ ಟ್ರ್ಯಾಕರ್ ಕೆಲಸಕ್ಕೆ ಸೇರಿದ ನಂತರವೇ. ಅನುಭವವೇ ನನ್ನ ಪಾಠ ಶಾಲೆ” ಎನ್ನುತ್ತಾರೆ ಧ್ರುವ.
“ಆನೆಯೊಂದು ದಿನಕ್ಕೆ 25-30 ನಡೆದರೆ ಅದು ಶಿಕ್ಷೆಯಿದ್ದಂತೆ” ಎನ್ನುತ್ತಾರೆ ನಾಥೂರಾಮ್. ಮೂರು ಮಕ್ಕಳ ತಂದೆಯಾದ ಅವರು ಕಾಡಿನ ಕುಗ್ರಾಮದಲ್ಲಿರುವ ಎರಡು ಕೋಣೆಗಳ ಕಚ್ಚಾ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮೊದಲಿಗೆ ಅವರು ಅರಣ್ಯ ಇಲಾಖೆಯಲ್ಲಿ ಫೈರ್ ವಾಚರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಎರಡು ವರ್ಷಗಳ ಕೆಳಗೆ ಎಲಿಫಂಟ್ ಟ್ರ್ಯಾಕರ್ ಆಗಿ ಕೆಲಸ ಮಾಡಲು ಆರಂಭಿಸಿದರು.


ಎಡಕ್ಕೆ: ಅರಣ್ಯ ರಕ್ಷಕ ಮತ್ತು ಎಲಿಫಂಟ್ ಟ್ರ್ಯಾಕರ್ ನಾರಾಯಣ್ ಸಿಂಗ್ ಧ್ರುವ್ ಹೇಳುತ್ತಾರೆ, 'ರಾತ್ರಿಯಲ್ಲಿ ಆನೆಗಳು ಬಂದರೆ, ನಾವೂ ಬರಬೇಕು.' ಬಲ: ಪಂಚಾಯತ್ ಕಚೇರಿ ಬಳಿ ಕಾವಲು ಕಾಯುತ್ತಿರುವ ತೆನಾಹಿ ಗ್ರಾಮದ ನಿವಾಸಿಗಳು. ಅವರ ಬೆಳೆಗಳು ಆನೆಗಳಿಂದ ಹಾನಿಗೊಳಗಾಗಿವೆ
*****
ಆನೆ ಪತ್ತೆದಾರಿಗಳು ರಾತ್ರಿ ಆನೆ ಬಂದರೆ ಊರನ್ನು ಎಚ್ಚರಿಸುತ್ತಾರೆ. ಊರಿನವರು ಹೊಲದಲ್ಲಿ ಮೇಯುತ್ತಿರುವ ಆನೆಗಳನ್ನು ನೋಡಲು ಎದ್ದು ಬರುತ್ತಾರೆ. ಯುವಕರು ಮತ್ತು ಮಕ್ಕಳು ಒಂದು ಸುರಕ್ಷಿತ ದೂರದಲ್ಲಿ ನಿಂತು ತಮ್ಮ ಬಳಿಯಿರು ಟಾರ್ಚ್ ಲೈಟುಗಳನ್ನು ಬಳಸಿ ಆನೆಗಳನ್ನು ನೋಡುತ್ತಾರೆ.
ಆಹಾರ ಹುಡುಕಿಕೊಂಡು ಬರುವ ಆನೆಗಳನ್ನು ತಮ್ಮ ಹೊಲಗಳಿಂದ ದೂರವಿಡುವ ಸಲುವಾಗಿ ಊರಿನ ಜನರು ರಾತ್ರಿಯಿಡೀ ಬೆಂಕಿ ಹಚ್ಚಿಡುತ್ತಾರೆ. ಊರಿನ ಒಂದಷ್ಟು ಜನರು ಬೆಂಕಿ ಹಚ್ಚಿಕೊಂಡು ರಾತ್ರಿಯಿಡೀ ಅಲ್ಲೇ ಉಳಿದುಕೊಳ್ಳುತ್ತಾರೆ. ಆದರೂ ಅವರಿಗೆ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
“ಮೊದಲಿಗೆ ಇಲ್ಲಿಗೆ ಆನೆ ಬಂದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಹಳ ಸಂಭ್ರಮಿಸಿದ್ದರು. ಬಾಳೆಹಣ್ಣು ಮತ್ತು ಹೂಕೋಸಿನಂತಹ ತರಕಾರಿ ಮತ್ತು ಹಣ್ಣುಗಳನ್ನು ಅವುಗಳಿಗೆ ಕೊಟ್ಟು ಸತ್ಕರಿಸಿದ್ದರು” ಎಂದು ತೆನಾಹಿ ನಿವಾಸಿ ನೋಹರ್ ಲಾಲ್ ನಾಗ್ ಹೇಳುತ್ತಾರೆ. ಆದರೆ ಈ ಆನೆಗಳ ಆಗಮನ ನೋಹರ್ ಅವರಂತಹ ರೈತರ ಪಾಲಿಗೆ ಸಂತಸ ತಂದಿಲ್ಲ. ಅವರಿಗೆ ಈಗ ತಮ್ಮ ಬೆಳೆಯನ್ನು ಹೇಗೆ ಕಾಪಾಡಿಕೊಳ್ಳುವುದು ಎನ್ನುವ ಚಿಂತೆ ಕಾಡುತ್ತಿದೆ.


ಎಡ ಮತ್ತು ಬಲ: ತೆನಾಹಿಯಲ್ಲಿ ಆನೆಗಳಿಂದ ಉಂಟಾದ ಹಾನಿ
ಮರುದಿನ ಬೆಳಿಗ್ಗೆ ಪರಿ ಥೆನಾಹಿ ಗ್ರಾಮಕ್ಕೆ ಭೇಟಿ ನೀಡಿದಾಗ, ಆನೆಗಳು ಬಿಟ್ಟುಹೋದ ಗುರುತುಗಳು ಮತ್ತು ಹಾನಿಯನ್ನು ನಾವೂ ನೋಡಿದೆವು. ಆನೆಗಳ ಹಿಂಡು ಹೊಸದಾಗಿ ಬಿತ್ತನೆ ಮಾಡಿದ ಬೆಳೆಗಳನ್ನು ನಾಶಪಡಿಸಿತ್ತು. ಮರಗಳಿಗೆ ಅವು ಬೆನ್ನು ಉಜ್ಜಿ ತುರಿಸಿಕೊಂಡಿದ್ದಕ್ಕೆ ಗುರುತಾಗಿ ಅವುಗಳ ಕಾಂಡದ ಮೇಲೆ ಮಣ್ಣಿನ ಗುರುತಿತ್ತು.
ಬೆಳೆ ನಾಶಕ್ಕೆ ಅರಣ್ಯ ಇಲಾಖೆಯು ಪ್ರತಿ ಎಕರೆ ಭೂಮಿಗೆ 22,249 ರೂ.ಗಳ ಪರಿಹಾರವನ್ನು ಕಡ್ಡಾಯಗೊಳಿಸಿದೆ ಎಂದು ಉದಂತಿ ಸೀತಾನದಿ ಹುಲಿ ಮೀಸಲು ಪ್ರದೇಶದ ಉಪ ನಿರ್ದೇಶಕ ವರುಣ್ ಕುಮಾರ್ ಜೈನ್ ತಿಳಿಸಿದ್ದಾರೆ. ಆದರೆ ಅಧಿಕಾರಶಾಹಿ ʼಪ್ರಕ್ರಿಯೆʼ ತಮಗೆ ಪರಿಹಾರದ ಹಣ ಸಿಗದಂತೆ ಮಾಡಿದೆ ಎಂದು ಇಲ್ಲಿನ ಜನರು ಅಭಿಪ್ರಾಯಪಡುತ್ತಾರೆ. "ಈಗ ನಾವು ಏನು ಮಾಡಬಹುದು?" ಎಂದು ಅವರು ಕೇಳುತ್ತಾರೆ, "ಏನು ಮಾಡಬೇಕೋ ಅದನ್ನು ಅರಣ್ಯ ಅಧಿಕಾರಿಗಳು ಮಾಡಬೇಕು, ನಮಗೆ ತಿಳಿದಿರುವುದು ಇಷ್ಟೇ, ನಮಗೆ ಇಲ್ಲಿ ಆನೆಗಳು ಬೇಡ."
ಅನುವಾದ: ಶಂಕರ. ಎನ್. ಕೆಂಚನೂರು