"ದೇವರು ಈ ರೀತಿ ಇಷ್ಟಿಷ್ಟೇ ಕೊಲ್ಲುವ ಬದಲು ನಮ್ಮನ್ನು ಒಂದೇ ಸಲ ಕೊಂದುಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಅಜರ್ ಖಾನ್ ಹೇಳುತ್ತಾರೆ. ಮೇ 26ರಂದು ನೆರೆಯ ನೀರು ಮೌಸುನಿ ದ್ವೀಪವನ್ನು ಆವರಿಸಿಕೊಂಡು ಅವರೆಲ್ಲರ ಮನೆಗಳನ್ನು ಕಿತ್ತುಕೊಂಡಿದೆ.
ಅಂದು ಮಧ್ಯಾಹ್ನ, ಬಂಗಾಳಕೊಲ್ಲಿಯಲ್ಲಿ ಎದ್ದ ಚಂಡಮಾರುತವು ಮುರಿಗಂಗಾ ನದಿಯಲ್ಲಿ 1-2 ಮೀಟರ್ ಎತ್ತರದವರೆಗಿನ ಅಲೆಗಳ ಸೃಷ್ಟಿಗೆ ಕಾರಣವಾಯಿತು. ಒಡ್ಡುಗಳು ಒಡೆದು ನೀರು ತಗ್ಗು ಪ್ರದೇಶದ ದ್ವೀಪಗಳಿಗೆ ನುಗ್ಗಿದ್ದರಿಂದ ಪ್ರವಾಹ ಉಂಟಾಗಿ ಮನೆಗಳು ಮತ್ತು ಹೊಲಗಳಿಗೆ ತೀವ್ರ ಹಾನಿಯಾಗಿದೆ.
26ನೇ ತಾರೀಖು ಮಧ್ಯಾಹ್ನ ಮುಂಗಾರು ನೈರುತ್ಯ ದಿಕ್ಕಿನಲ್ಲಿ ಸುಮಾರು 65 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಒಡಿಶಾದ ಬಾಲಸೋರ್‌ಗೆ ಅಪ್ಪಳಿಸಿದಾಗ ಚಂಡಮಾರುತವು ರೂಪುಗೊಂಡಿತು. ಇದು ಅತ್ಯಂತ ಬಲವಾದ ಚಂಡಮಾರುತವಾಗಿತ್ತು ಮತ್ತು ಗಾಳಿಯ ವೇಗ 130-140 ಕಿ.ಮೀ.ನಷ್ಟಿತ್ತು
"ಚಂಡಮಾರುತ ಬರಲಿರುವುದು ನಮಗೆ ತಿಳಿದಿತ್ತು. ನಾವು ನಮ್ಮ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಷ್ಟು ಸಮಯವಿದೆಯೆಂದೇ ಭಾವಿಸಿದ್ದೆವು. ಆದರೆ ನೀರು ಹಳ್ಳಿಯೊಳಗೆ ನುಗ್ಗಿಬಿಟ್ಟಿತ್ತು. ಎಂದು ಬಾಗ್ದಂಗಾ ಮೌಜಾ (ಗ್ರಾಮ)ದ ಮಜುರಾ ಬೀಬಿ ಹೇಳುತ್ತಾರೆ. ಅವರು ಮೌಸೂನಿಯ ಪಶ್ಚಿಮದಲ್ಲಿರುವ ಮುರಿಗಂಗಾದ ಒಡ್ಡಿನ ಬಳಿ ವಾಸಿಸುತ್ತಾರೆ. "ನಾವು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಓಡಿದೆವು. ಆದರೆ ನಮ್ಮ ವಸ್ತುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಮ್ಮಲ್ಲಿ ಅನೇಕರು ನಮ್ಮ ಜೀವ ಉಳಿಸಿಕೊಳ್ಳಲು ಮರಗಳ ಮೇಲೆ ಹತ್ತಿ ಕುಳಿತಿದ್ದೆವು."
ದ್ವೀಪದ ನಾಲ್ಕು ಹಳ್ಳಿಗಳಾದ ಬಾಗ್ದಂಗ, ಬಲಿಯಾರಾ, ಕುಸುಮ್ತಲಾ ಮತ್ತು ಮೌಸುನಿಗಳಿಗೆ ಹೋಗುವ ದೋಣಿಗಳು ಮತ್ತು ಲಾಂಚ್‌ಗಳು ಮೂರು ದಿನಗಳ ಕಾಲ ನಿರಂತರ ಮಳೆಯಿಂದಾಗಿ ನಿಲ್ಲಿಸಲ್ಪಟ್ಟವು. ಮೇ 29ರ ಬೆಳಿಗ್ಗೆ ನಾನು ಮೌಸಾನಿಯನ್ನು ತಲುಪಿದಾಗ, ಅದರಲ್ಲಿ ಹೆಚ್ಚಿನವು ನೀರಿನಲ್ಲಿ ಮುಳುಗಿದ್ದವು.
ಬಾಗ್ದಂಗ ಅಭಯಾರಣ್ಯದಲ್ಲಿ ಭೇಟಿಯಾದ ಅಭಿಲಾಶ್ ಸರ್ದಾರ್, "ನನ್ನ ಭೂಮಿ ಉಪ್ಪುನೀರಿನಲ್ಲಿ ಮುಳುಗಿದೆ" ಎಂದು ಹೇಳಿದರು. "ನಾವು ರೈತರು ನಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದೇವೆ" ಎಂದು ಅವರು ಹೇಳಿದರು. "ಮುಂದಿನ ಮೂರು ವರ್ಷಗಳವರೆಗೆ ನನ್ನ ಭೂಮಿಯನ್ನು ಕೃಷಿ ಮಾಡಲು ಸಾಧ್ಯವಾಗುವುದಿಲ್ಲ. ಅದರಲ್ಲಿ ಮತ್ತೆ ಬೆಳೆ ಬರಲು ಏಳು ವರ್ಷಗಳ ತನಕ ತೆಗೆದುಕೊಳ್ಳಬಹುದು."

ಚಂಡಮಾರುತಕ್ಕೆ ಬಾಗ್ದಾಂಗ್‌ನಲ್ಲಿರುವ ಗೇನ್ ಕುಟುಂಬದ ಮನೆ ಸಂಪೂರ್ಣ ನೆಲಕಚ್ಚಿದೆ. "ನಮ್ಮ ಮನೆ ಬಿದ್ದು ಹೋಗಿದೆ, ನಿಮ್ಮ ಕಣ್ಣೆದುರೇ ನೋಡುತ್ತಿದ್ದೀರಿ. ಈ ಅವಶೇಷಗಳಿಂದ ಏನನ್ನೂ ಎತ್ತಿಕೊಳ್ಳಲು ಸಾಧ್ಯವಿಲ್ಲ ."
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ನಮ್ಖಾನಾ ಬ್ಲಾಕ್‌ನಲ್ಲಿ, ನದಿಗಳು ಮತ್ತು ಸಮುದ್ರದಿಂದ ಆವೃತವಾದ ದ್ವೀಪವಾಗಿರುವ, ಮೌಸೂನಿಯಲ್ಲಿ ಯಸ್‌ನಿಂದ ಉಂಟಾದ ದುರಂತವು ಇದು ಎದುರಿಸಿರುವ ವಿಪತ್ತುಗಳ ಸರಣಿಯಲ್ಲಿ ಇತ್ತೀಚಿನದು.
ಒಂದು ವರ್ಷದ ಹಿಂದೆ - ಮೇ 20, 2020ರಂದು - ಆಂಫಾನ್ ಚಂಡಮಾರುತವು ಸುಂದರಬನ್ಸ್ ಪ್ರದೇಶವನ್ನು ಧ್ವಂಸಮಾಡಿತು . ಈ ಮೊದಲು, ಬುಲ್ಬುಲ್ (2019) ಮತ್ತು ಐಲಾ (2009) ಚಂಡಮಾರುತಗಳು ದ್ವೀಪಗಳಲ್ಲಿ ಸಾಕಷ್ಟು ಹಾನಿಗೆ ಕಾರಣವಾಗಿದ್ದವು. ಐಲಾ ಮೌಸೂನಿಯಲ್ಲಿನ 30-35 ಶೇಕಡಾ ಭೂಮಿಯನ್ನು ಹಾಳುಮಾಡಿದೆ, ಮಣ್ಣಿನಲ್ಲಿ ಲವಣಾಂಶದ ಹೆಚ್ಚಳದಿಂದಾಗಿ ಅದರ ದಕ್ಷಿಣ ಕರಾವಳಿಯ ಬಹುಪಾಲು ಭೂಮಿ ಕೃಷಿಗೆ ಅನರ್ಹವಾಗಿದೆ.
ಇದು ಸಮುದ್ರದ ಮೇಲ್ಮೈಯಲ್ಲಿನ ಉಷ್ಣತೆಯು ಹೆಚ್ಚುತ್ತಿರುವುದರ ಸೂಚನೆ ಮಾತ್ರವಲ್ಲ ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವುದರ ಸೂಚನೆಯೂ ಹೌದು ಎಂದು ತಜ್ಞರು ಹೇಳುತ್ತಾರೆ . ಆದರೆ ಅದೇ ಸಮಯದಲ್ಲಿ, ಕರಾವಳಿ ಪ್ರದೇಶಗಳಲ್ಲಿನ ತಾಪಮಾನವೂ ಹೆಚ್ಚುತ್ತಿದೆ. ಮತ್ತು ಇದರ ಪರಿಣಾಮವಾಗಿ, ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ತೀವ್ರಗೊಳ್ಳುತ್ತಿವೆ. ಭಾರತೀಯ ಹವಾಮಾನ ವೀಕ್ಷಣಾಲಯದ 2006ರ ಅಧ್ಯಯನದ ಪ್ರಕಾರ, ಮೇ, ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಇದರ ತೀವ್ರತೆಯ ಪ್ರಮಾಣ ಹೆಚ್ಚಾಗಿದೆ.
ಯಸ್‌ಗೆ ಮೊದಲು, ದ್ವೀಪದ ಶೇಕಡಾ 70ರಷ್ಟು ಅಥವಾ 6,000 ಎಕರೆಗಳಿಗಿಂತ ಹೆಚ್ಚು ಭೂಮಿ ಸಂಪೂರ್ಣವಾಗಿ ಕೃಷಿಯೋಗ್ಯವಾಗಿತ್ತು ಎಂದು ಬಾಗ್ದಂಗದಲ್ಲಿ 5 ಎಕರೆ ಭೂಮಿ ಹೊಂದಿರುವ ಸರಲ್ ದಾಸ್ ಹೇಳುತ್ತಾರೆ. "ಈಗ ಕೇವಲ 70-80 ಎಕರೆ ಭೂಮಿ ಮಾತ್ರ ಒಣಗಿದೆ."
ದ್ವೀಪಗಳಲ್ಲಿನ 22,000 ಜನರಲ್ಲಿ (ಜನಗಣತಿ, 2011), ಬಹುತೇಕ ಎಲ್ಲರೂ ಚಂಡಮಾರುತದ ಪ್ರಭಾವಕ್ಕೆ ಒಳಗಾಗಿದೆ ಎಂದು ದಾಸ್ ಹೇಳುತ್ತಾರೆ. ಅವರು ಬಾಗ್ದಂಗಾ ಸಹಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. "ದ್ವೀಪದಲ್ಲಿ 400 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಮತ್ತು 2,000 ಮನೆಗಳು ಕುಸಿದಿವೆ." ಹೆಚ್ಚಿನ ಜಾನುವಾರು ಮತ್ತು ಕೋಳಿ ಮತ್ತು ಮೀನುಗಳು ನಾಶವಾದವು ಎಂದು ಅವರು ಹೇಳುತ್ತಾರೆ.

ಬಾಗ್ದಂಗಾ ನಿವಾಸಿಯೊಬ್ಬರು ಪ್ರವಾಹಕ್ಕೆ ಸಿಲುಕಿದ ಭತ್ತದ ಗದ್ದೆಗಳ ಮೂಲಕ ಕುಡಿಯುವ ನೀರಿನ ಡ್ರಮ್ ಅನ್ನು ಎಳೆಯುತ್ತಿರುವುದು
ಚಂಡಮಾರುತದ ನಂತರ, ಕುಡಿಯುವ ನೀರಿನ ಮುಖ್ಯ ಮೂಲವಾದ ಕೊಳವೆ ಬಾವಿಗಳನ್ನು ತಲುಪುವುದು ಕಷ್ಟವಾಗಿದೆ. "ಅನೇಕ ಕೊಳವೆ ಬಾವಿಗಳು ನೀರಿನ ಅಡಿಯಲ್ಲಿವೆ. ಹತ್ತಿರದ ಕೊಳವೆ ಬಾವಿ ತಲುಪಲು ನಾವು ಐದು ಕಿಲೋಮೀಟರ್ ಆಳದ ಸೊಂಟದವರೆಗಿನ ಮಣ್ಣಿನಲ್ಲಿ ನಡೆಯುತ್ತಿದ್ದೇವೆ" ಎಂದು ಜಯನಾಲ್ ಸರ್ದಾರ್ ಹೇಳುತ್ತಾರೆ.
ಇಂತಹ ಅನಾಹುತಗಳು ಈಗ ಮೌಸುನಿ ಜನರ ಜೀವನದ ಒಂದು ಭಾಗವಾಗಿದೆ ಮತ್ತು ಅವರು ಅದರೊಂದಿಗೆ ಬದುಕಬೇಕಾಗುತ್ತದೆ ಎಂದು ಸುಂದರ್‌ಬನ್ಸ್ ಮತ್ತು ಅಲ್ಲಿನ ಜನರ ಕುರಿತ ತ್ರೈಮಾಸಿಕ ನಿಯತಕಾಲಿಕ ಸುಧು ಸುಂದರಬನ್ ಚರ್ಚಾದ ಸಂಪಾದಕ ಮತ್ತು ಪರಿಸರ ಸಂರಕ್ಷಣಾ ಕಾರ್ಯಕರ್ತರು ಜ್ಯೋತಿರಿಂದ್ರನಾರಾಯಣ ಲಾಹಿರಿ ಹೇಳುತ್ತಾರೆ. "ಬದುಕುಳಿಯಲು, ಅವರು ಪ್ರವಾಹ ನಿರೋಧಕ ಮನೆಗಳನ್ನು ನಿರ್ಮಿಸುವುದು ಸೇರಿದಂತೆ ಹೊಸ ವಿಧಾನಗಳಿಗೆ ಹೊಂದಿಕೊಳ್ಳಬೇಕಿದೆ."
ಮೌಸೂನಿಯಂತಹ ವಿಪತ್ತು ಪೀಡಿತ ಪ್ರದೇಶಗಳಲ್ಲಿನ ಜನರು ಸರ್ಕಾರದ ಪರಿಹಾರವನ್ನು ಅವಲಂಬಿಸಿಲ್ಲ ಎಂದು ಲಾಹಿರಿ ಹೇಳುತ್ತಾರೆ. "ಅವರು ಎಲ್ಲದಕ್ಕೂ ಸಿದ್ಧರಾಗಿರುವ ಮೂಲಕ ಬದುಕುಳಿಯುತ್ತಾರೆ."
ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದಾದ್ಯಂತ ಕನಿಷ್ಠ 96,650 ಹೆಕ್ಟೇರ್ (238,830 ಎಕರೆ) ಬೆಳೆದು ನಿಂತ ಕೃಷಿ ಪ್ರವಾಹಕ್ಕೆ ಬಲಿಯಾಗಿದೆಯೆಂದು ಅಂದಾಜಿಸಿದೆ . ಕೃಷಿಯು ಜೀವನೋಪಾಯದ ಮುಖ್ಯ ಮೂಲವಾಗಿರುವ ಮೌಸುನಿಯಲ್ಲಿ, ಅದರ ಹೆಚ್ಚಿನ ಫಲವತ್ತಾದ ಭೂಮಿಯು ಉಪ್ಪುನೀರಿನ ಅಡಿಯಲ್ಲಿರುವುದರಿಂದ ಈಗ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ.
ಯಾಸ್ ಚಂಡಮಾರುತದಿಂದ ಉಂಟಾದ ವಿನಾಶದಿಂದ ದ್ವೀಪವಾಸಿಗಳು ಈಗಿನ್ನೂ ಸುಧಾರಿಸಿಕೊಳ್ಳುತ್ತಿದ್ದರೆ, ಅತ್ತ ಐಎಂಡಿ ಜೂನ್ 11ರಂದು ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಮುನ್ಸೂಚನೆ ನೀಡಿದೆ, ಅದರಿಂದ ಸುಂದರ್‌ಬನ್ ಪ್ರದೇಶದಲ್ಲಿ ಭಾರಿ ಮಳೆಯಾಗಬಹುದು.
ಬಾಗ್ದಂಗದಲ್ಲಿ, ಬೀಬಿಜಾನ್ ಬೀಬಿಯವರಿಗೆ ಮತ್ತೊಂದು ಚಿಂತೆಯ ವಿಷಯವಿದೆ. “ನೀರು ಕಡಿಮೆಯಾದಾಗ, ಗೋಖರಾ (ನಾಗರಹಾವು) ಮನೆಯೊಳಗೆ ಬರಲು ಪ್ರಾರಂಭಿಸುತ್ತವೆ. ಅದರ ಕುರಿತಾಗಿಯೇ ನಾವು ಹೆದರುತ್ತಿದ್ದೇವೆ. "

ನಿರಂಜನ್ ಮಂಡಲ್ ಕೊಳವೆ ಬಾವಿಯಿಂದ ತನ್ನ ಕುಟುಂಬಕ್ಕೆ ಕುಡಿಯುವ ನೀರನ್ನು ಹೊತ್ತುಕೊಂಡು ಮಣ್ಣಿನ ದಾರಿಯ ಮೂಲಕ ನಡೆಯುತ್ತಿರುವುದುಆ಼

“ನನ್ನ ಮಗಳು ಮೌಸುನಿ ಯಲ್ಲಿ ವಾಸಿಸುತ್ತಾಳೆ. ಕಳೆದ ಎರಡು ದಿನಗಳಿಂದ ನಾನು ಅವಳನ್ನು ಫೋನ್‌ನಲ್ಲಿ ಸಂಪರ್ಕಿಸಲು ಸಾಧ್ಯವಾಗಿಲ್ಲ” ಎಂದು ನಮ್ಖಾನಾ ಮೂಲದ ಪ್ರತಿಮಾ ಮಂಡಲ್ ಹೇಳುತ್ತಾರೆ. ಅವರಿಗೆ ಮಗಳ ಮನೆ ಮುಳುಗಿರುವ ಕುರಿತು ಖಚಿತವಿದೆ. "ನಾನು ಅಲ್ಲಿಯ ಪರಿಸ್ಥಿತಿ ನೋಡಲು ಹೋಗುತ್ತಿದ್ದೇನೆ ."

ಮೌಸುನಿ ದ್ವೀಪವನ್ನು ತಲುಪಲು ದೋಣಿ ಮತ್ತು ಫೆರಿಗಳ ಮೂಲಕವೇ ಹೋಗಬೇಕು. ಚಂಡಮಾರುತ ಅಪ್ಪಳಿಸುವ ಮೊದಲು ನಾಮ್ಖಾನಾದಿಂದ ಈ ಸೇವೆಗಳನ್ನು ಮುಚ್ಚಲಾಯಿತು. ದೋಣಿಗಳು ಮೇ 29ರಂದು ಪ್ರಾರಂಭವಾಗುವುದರೊಂದಿಗೆ ದ್ವೀಪದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು

ಮೌಸುನಿಯ ಪ್ರವಾಹ ಪೀಡಿತ ಕುಟುಂಬವು ತಮ್ಮ ದನಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿರುವುದು

ಮೌಸೂನಿಯ ತಗ್ಗು ಪ್ರದೇಶದ ಅನೇಕ ಕುಟುಂಬಗಳು ತಮ್ಮ ವಸ್ತುಗಳೊಡನೆ ಮನೆಗಳನ್ನು ಖಾಲಿ ಮಾಡಬೇಕಾಯಿತು .

ತನ್ನ ಮನೆಗೆ ನೀರು ನುಗ್ಗಿತು ಎಂದು ಬಾಗ್ದಂಗದ ನಿವಾಸಿಯಾದ ಈ ಮಹಿಳೆ ಹೇಳುತ್ತಾರೆ. ಅವರ ಪಾಲಿನ ಯಾವ ವಸ್ತುಗಳನ್ನೂ ಪ್ರವಾಹದಿಂದ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ

"ಅವಳನ್ನು ಉಳಿಸಲು ಸಾಧ್ಯವಾಗಿದ್ದು ನನಗೆ ಖುಷಿ ನೀಡಿದೆ" ಎಂದು ಪುಟ್ಟ ಹುಡುಗಿ ತನ್ನ ಹಕ್ಕಿಯ ಬಗ್ಗೆ ಹೇಳುತ್ತಾಳೆ. "ಅವಳು ನನ್ನ ಅತ್ಯುತ್ತಮ ಸ್ನೇಹಿತೆ "

ಬಾಗ್ದಂಗಾದ ಶಿಬಿರದಲ್ಲಿ ದ್ವೀಪದ ಕೆಲವು ಮಹಿಳೆಯರು, ಪ್ರವಾಹದ ನೀರು ಕಡಿಮೆಯಾಗಲೆಂದು ಕಾಯುತ್ತಿರುವುದು

ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಕೋವಿಡ್ ಆರೈಕೆ ಕೇಂದ್ರವೂ ಪ್ರವಾಹಕ್ಕೆ ಸಿಲುಕಿತು

ಮಸೂದ್ ಅಲಿಯವರ ಇಡೀ ವರ್ಷದ ಉಳಿತಾಯವು ಪ್ರವಾಹದಲ್ಲಿ ಮುಳುಗಿ ನಾಶವಾಯಿತು. "ಪೂರ್ಣ 1,200 ಕೆಜಿ ಅಕ್ಕಿ, ನೀರಿನಲ್ಲಿ ಮುಳುಗಿ ವ್ಯರ್ಥವಾಯಿತು" ಎಂದು ಅವರು ಹೇಳುತ್ತಾರೆ. ಉಪ್ಪು ನೀರಲ್ಲಿ ಮುಳುಗಿದ ಅಕ್ಕಿಯನ್ನು ತಿನ್ನಲು ಸಾಧ್ಯವಿಲ್ಲ. ಈಗ ಎಲ್ಲ 40 ಚೀಲ ಅಕ್ಕಿಗಳನ್ನೂ ಎಸೆಯಬೇಕಾಗಿದೆ "

ಇಮ್ರಾನ್ ಹಾನಿಗೊಳಗಾದ ಇಟ್ಟಿಗೆಗಳ ಬ್ಲಾಕ್ ಅನ್ನು ಎತ್ತರಕ್ಕೆ ತಳ್ಳಲು ಪ್ರಯತ್ನಿಸುತ್ತಿರುವುದು. ಪ್ರವಾಹದ ಅಲೆಗಳು ಮುರಿಗಂಗಾ ನದಿಯ ನೀರು ಪಾತ್ರವನ್ನು ಮೀರಿ ಒಳನಾಡಿನ ಒಳಗೆ ನುಗ್ಗಿತು

ಒಡ್ಡಿನ ಬಳಿಯಿರುವ ಮಜುರಾ ಬೀಬಿಯವರ ಮನೆ ಅಲೆಗಳಿಂದ ಸಂಪೂರ್ಣವಾಗಿ ನಾಶವಾಯಿತು. "ನೀರು ನುಗ್ಗಿದಾಗ ನಾವು ಓಡಿದೆವು. ನಮ್ಮೊಂದಿಗೆ ಒಂದು ಪೈಸೆ ಅಥವಾ ದಾಖಲೆಗಳನ್ನು ಸಹ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ." ಅವರು ಈಗ ಟೆಂಟ್‌ನಲ್ಲಿ ವಾಸಿಸುತ್ತಿದ್ದಾರೆ .

ತಡೆಗೋಡೆಯ ಬಳಿ ವಾಸಿಸುವ ರುಕ್ಸಾನಾರ ಪುಸ್ತಕ ಮತ್ತು ದಾಖಲೆಗಳೆಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ

ಈ ಮಗು ಪ್ರವಾಹದ ನೀರಿಲ್ಲಿ ಬಹುತೇಕ ಕೊಚ್ಚಿ ಹೋಗಿತ್ತು. "ನನ್ನ ಅಳಿಯ ಮಗು ಎತ್ತಿಕೊಂಡು ಮರವನ್ನು ಹತ್ತಿ ಕುಳಿತು ಮಗುವನ್ನು ಉಳಿಸಿದ" ಎಂದು ಮಗುವಿನ ಅಜ್ಜಿ ಪ್ರಮಿತಾ ಹೇಳುತ್ತಾರೆ. "ಅದರ ವಯಸ್ಸು ಕೇವಲ ಎಂಟು ತಿಂಗಳು, ಆದರೆ ಅವನ ಬಟ್ಟೆಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಅವನಿಗೆ ಧರಿಸಲು ಒಂದೂ ಬಟ್ಟೆಯಿಲ್ಲದಂತಾಗಿದೆ "

ಪ್ರವಾಹದಲ್ಲಿಅಳಿದುಳಿದಿರುವ ದಾಖಲೆಗಳು, ಪುಸ್ತಕಗಳು ಮತ್ತು ಫೋಟೋಗಳನ್ನು ಬಿಸಿಲಿನಲ್ಲಿ ಒಣಗಲು ಹಾಕಿರುವುದು

ಎಂಟನೇ ತರಗತಿಯ ವಿದ್ಯಾರ್ಥಿ ಜಹನಾರಾಳ ಎಲ್ಲಾ ಪುಸ್ತಕಗಳು ಮತ್ತು ದಾಖಲೆಗಳು ಮೇ 26ರ ಪ್ರವಾಹದಲ್ಲಿ ನಾಶಗೊಂಡಿತು

ಗಂಗಾ ನದಿಯ ಉಪನದಿಯಾದ ಮುರಿಗಂಗದ ಬಿರುಕು ಬಿಟ್ಟಿರುವ ಒಡ್ಡು. ಮಾನ್ಸೂನ್‌ನ ದಕ್ಷಿಣ ತುದಿಯಲ್ಲಿರುವ ಈ ನದಿ ಬಂಗಾಳಕೊಲ್ಲಿಗೆ ಹರಿಯುತ್ತದೆ .
ಅನುವಾದ: ಶಂಕರ ಎನ್. ಕೆಂಚನೂರು