ಕಣಿಸಾಮಿ ಎನ್ನುವ ಈ ದೇವರು ಉತ್ತರ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕರಾವಳಿಯ ಹಳ್ಳಿಗಳ ಗಡಿಗಳನ್ನು ಕಾವಲು ಕಾಯುತ್ತಾನೆ. ಮೀನುಗಾರರ ಪಾಲಿಗೆ ದೇವರಾಗಿರುವ ಈ ಕಣಿಸಾಮಿ ನೋಡಲು ಅವರ ಸಮುದಾಯದಲ್ಲಿನ ಒಬ್ಬ ವ್ಯಕ್ತಿಯಂತೆಯೇ ಕಾಣುತ್ತಾನೆ; ಅವನು ಇಲ್ಲಿನ ಜನರಂತೆಯೇ ಎದ್ದು ಕಾಣುವ ಬಣ್ಣದ ಅಂಗಿಗಳನ್ನು ತೊಡುತ್ತಾನೆ, ವೇಟಿಯೊಂದನ್ನು ತನ್ನ ತಲೆಗೆ ರುಮಾಲಿನಂತೆ ಸುತ್ತಿಕೊಂಡಿರುತ್ತಾನೆ. ಸಾಮಾನ್ಯವಾಗಿ ಮೀನುಗಾರರು ಕಡಲಿಗಿಳಿಯುವ ಮೊದಲು ತಮ್ಮ ದೋಣಿಯನ್ನು ಸುರಕ್ಷಿತವಾಗಿ ದಡ ತಲುಪಿಸುವಂತೆ ಬೇಡಿಕೊಂಡು ಇವನನ್ನು ಪೂಜಿಸುತ್ತಾರೆ.
ಕಣಿ ಸಾಮಿಯನ್ನು ಈ ಕುಟುಂಬಗಳು ಹಲವು ಅವತಾರಗಳಲ್ಲಿ ಕಲ್ಪಿಸಿಕೊಂಡು ಪೂಜಿಸುತ್ತವೆ. ಮತ್ತು ಇಲ್ಲಿರುವುದು ಚೆನ್ನೈಯಿಂದ ಪಳವೆರ್‌ಕಾಡು ಎನ್ನುವ ಪ್ರದೇಶದವರೆಗಿನ ಜನಪ್ರಿಯ ಆಚರಣೆಯ ವಿವರವಾಗಿದೆ.
ಎಣ್ಣೂರ್ ಕುಪ್ಪಂ ಪ್ರದೇಶದ ಮೀನುಗಾರರು ಕಣಿಸಾಮಿ ವಿಗ್ರಹವನ್ನು ತರಲು ಅಲ್ಲಿಂದ ಏಳು ಕೀಲೋಮೀಟರ್ ದೂರದಲ್ಲಿದ್ದ ಅತ್ತಿಪಟ್ಟು ಎನ್ನುವ ಊರಿಗೆ ಹೊರಟಿದ್ದರು. ಇದು ವಾರ್ಷಿಕ ಜಾತ್ರೆಯಾಗಿದ್ದು ಪ್ರತಿವರ್ಷದ ಜೂನ್ ತಿಂಗಳಿನಲ್ಲಿ ನಡೆಯುತ್ತದೆ. ಒಂದು ವಾರದ ಕಾಲದ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. 2019ರಲ್ಲಿ ನಾನು ವಿಗ್ರಹ ತರಲು ಹೊರಟಿದ್ದ ಈ ಮೀನುಗಾರರೊಡನೆ ನಾನೂ ಹೊರಟಿದ್ದೆ. ಅಂದು ನಾವು ಮೊದಲು ಉತ್ತರ ಚೆನ್ನೈನ ಉಷ್ಣ ವಿದ್ಯುತ್ ಸ್ಥಾವರದ ಬಳಿ ಕೊಸಸ್ತಲೈಯರ್ ನದಿಯ ದಡದಲ್ಲಿ ಜೊತೆಯಾದೆವು, ನಂತರ ಅತ್ತಿಪಟ್ಟು ಗ್ರಾಮದ ಕಡೆಗೆ ನಡೆದೆವು.
ಅಲ್ಲಿಂದ ಹೊರಟ ನಾವು ಬಂದು ನಿಂತಿದ್ದು ಒಂದು ಎರಡು ಮಾಳಿಗೆಯ ಮನೆಯ ಮುಂದೆ. ಅಲ್ಲಿ ಹಲವಾರು ಕಣಿಸಾಮಿಯ ವಿಗ್ರಹಗಳನ್ನು ಸಾಲಾಗಿ ಜೋಡಿಸಿಡಲಾಗಿತ್ತು. ಅಲ್ಲಿದ್ದ ವಿಗ್ರಹಗಳೆಲ್ಲವನ್ನೂ ಬಿಳಿ ಬಟ್ಟೆಯಲ್ಲಿ ಸುತ್ತಿಡಲಾಗಿತ್ತು. ಬಿಳಿ ಪಟ್ಟಿಯ ಅಂಗಿ ಮತ್ತು ವೇಟಿ ತೊಟ್ಟು, ಹಣೆಯಲ್ಲಿ ತಿರುನೀರ್ (ವಿಭೂತಿ) ತೊಟ್ಟಿದ್ದ ಸುಮಾರು 40 ವರ್ಷದ ವ್ಯಕ್ತಿಯೊಬ್ಬರು, ವಿಗ್ರಹದ ಎದುರು ನಿಂತು ಕ್ರಪೂರ ಹಚ್ಚಿದರು. ಮೀನುಗಾರರ ಹೆಗಲಿನ ಮೇಲೆ ವಿಗ್ರಹವನ್ನು ಇಡುವ ಮೊದಲು ಅವರು ಅದಕ್ಕೆ ಹೀಗೆ ಪೂಜೆ ಸಲ್ಲಿಸುವುದು ವಾಡಿಕೆ.

ಉತ್ತರ ತಮಿಳುನಾಡಿನ ಕರಾವಳಿಯಲ್ಲಿ ಮೀನುಗಾರ ಸಮುದಾಯಗಳು ಪೂಜಿಸುವ ಕಣಿಸಾಮಿ ದೇವರ ವಿಗ್ರಹಗಳು ದಿಲ್ಲಿ ಅಣ್ಣನ ಕೈಚಳಕದಲ್ಲಿ ಜೀವ ತಳೆಯುತ್ತವೆ
ಅಂದಿನ ಮೊದಲ ಭೇಟಿಯಲ್ಲಿ ನಾವೆಲ್ಲ ಗಡಿಬಿಡಿಯಲ್ಲಿದ್ದ ಕಾರಣ ದಿಲ್ಲಿ ಅಣ್ಣನೊಡನೆ ಹೆಚ್ಚು ಮಾತನಾಡುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ಆ ದಿನ ವಿಗ್ರಹಗಳನ್ನು ಹೆಗಲ ಮೇಲಿರಿಸಿಕೊಂಡು ಹೊರಟ ಮೀನುಗಾರರೊಡನೆ ನಾನೂ ಹೊರಟೆ. ಅಲ್ಲಿಂದ ಕೊಸಸ್ತಲೈಯರ್ ನದಿಗೆ ನಾಲ್ಕು ಕಿಲೋಮೀಟರ್ ನಡಿಗೆಯ ಪ್ರಯಾಣವಾದರೆ, ನಂತರ ಅಲ್ಲಿಂದ ಎಣ್ಣೂರ್ ಕುಪ್ಪಂ ತಲುಪಲು ಮತ್ತು ಮೂರು ಕಿಲೋಮೀಟರ್ ದೂರದ ದೋಣಿ ಪ್ರಯಾಣ ಮಾಡಬೇಕಿತ್ತು.
ಹಳ್ಳಿಯನ್ನು ತಲುಪಿದ ಮೀನುಗಾರರು ತಾವು ತಂದ ವಿಗ್ರಹಗಳನ್ನು ಸಾಲಾಗಿ ದೇವಸ್ಥಾನದ ಬಳಿ ಸಾಲಾಗಿ ನಿಲ್ಲಿಸುತ್ತಾರೆ. ಅಂದಿನ ಆಚರಣೆ ಮತ್ತು ಪೂಜೆ ಬೇಕಾಗುವ ಎಲ್ಲ ವಸ್ತುಗಳನ್ನು ತಂದು ಆ ವಿಗ್ರಹಗಳ ಮುಂದೆ ಇಡಲಾಗುತ್ತದೆ. ಊರಿಗೆ ಕತ್ತಲು ಕಾಲಿಡುತ್ತಿದ್ದಂತೆ ದಿಲ್ಲಿಯಣ್ಣ ಬಂದು ಕುಪ್ಪಂನ ಜನರನ್ನು ಸೇರಿಕೊಳ್ಳುತ್ತಾರೆ. ಅವರ ಆಗಮನದೊಡನೆ ಊರಿನ ಜನರು ವಿಗ್ರಹಗಳ ಸುತ್ತ ಒಟ್ಟುಗೂಡುತ್ತಾರೆ. ವಿಗ್ರಹದ ಮೇಲಿನ ಬಟ್ಟೆಯನ್ನು ತೆಗೆಯುವ ದಿಲ್ಲಿಯಣ್ಣ ನಂತರ ಅದರ ಕಣ್ಣಿಗೆ ಮೈ (ಕಾಡಿಗೆ) ಹಚ್ಚುತ್ತಾರೆ. ಇದು ದೇವರು ಕಣ್ಣು ತೆರೆಯುವುದನ್ನು ಸಂಕೇತಿಸುತ್ತದೆ, ನಂತರ ಅವರು ದುಷ್ಟ ಶಕ್ತಿಗಳನ್ನು ಓಡಿಸುವುದರ ಸಂಕೇತವಾಗಿ ಹುಂಜವೊಂದರ ಕತ್ತನ್ನು ಕಚ್ಚುತ್ತಾರೆ.
ಇದಾದ ನಂತರ ಕಣಿಸಾಮಿ ವಿಗ್ರಹಗಳನ್ನು ಊರಿನ ಗಡಿಗೆ ಕೊಂಡೊಯ್ಯಲಾಗುತ್ತದೆ.
ಎಣ್ಣೋರ್ ಪ್ರದೇಶದ ಕರಾವಳಿ ಮತ್ತು ಕಾಂಡ್ಲ ಕಾಡುಗಳು ಸುತ್ತ ನನಗೆ ಹಲವು ಜನರ ಪರಿಚಯವಾಗಿದೆ. ಮತ್ತು ಹಾಗೆ ಪರಿಚಯವಾದವರಲ್ಲಿ ದಿಲ್ಲಿಯಣ್ಣ ಬಹಳ ಮುಖ್ಯ. ಅವರು ತಮ್ಮ ಇಡೀ ಬದುಕನ್ನು ಕಣಿಸಾಮಿ ವಿಗ್ರಹ ತಯಾರಿಕೆಗಾಗಿ ಮುಡಿಪಿಟ್ಟಿದ್ದಾರೆ. ನಾನು ಅವರನ್ನು 2023ರ ಮೇ ತಿಂಗಳಿನಲ್ಲಿ ಮತ್ತೆ ಭೇಟಿಯಾಗಲೆಂದು ಅವರ ಮನೆಗೆ ಹೋಗಿದ್ದೆ. ಆಗ ಅವರ ಮನೆಯ ಶೋಕೇಸಿನಲ್ಲಿ ಯಾವುದೇ ಮನೆಬಳಕೆಯ ವಸ್ತುಗಳಾಗಲೀ, ಅಥವಾ ಅಲಂಕಾರಿಕ ವಸ್ತುಗಳಾಗಲಿ ಕಂಡಿರಲಿಲ್ಲ. ಅವರ ಮನೆಯ ತುಂಬಾ ಇದ್ದಿದ್ದು ಜೇಡಿಮಣ್ಣು, ಹೊಟ್ಟು ಮತ್ತು ವಿಗ್ರಹಗಳು ಮಾತ್ರ. ಜೇಡಿ ಮಣ್ಣಿನ ಪರಿಮಳವೆನ್ನುವುದು ಅವರ ಇಡೀ ಮನೆಯ ತುಂಬಾ ಪಸರಿಸಿತ್ತು.
ಕಣಿಸಾಮಿ ವಿಗ್ರಹವನ್ನು ತಯಾರಿಸುವ ಮೊದಲು ಊರಿನ ಗಡಿಯಿಂದ ತಂದ ಒಂದು ಮುಷ್ಟಿ ಮಣ್ಣನ್ನು ಜೇಡಿಮಣ್ಣಿನೊಂದಿಗೆ ಸೇರಿಸಬೇಕು. “ಹಾಗೆ ಮಾಡಿದರೆ ದೇವರ ಶಕ್ತಿಯು ಆ ಹಳ್ಳಿಗೆ ಹೋಗುತ್ತದೆ ಎನ್ನುವ ನಂಬಿಕೆಯಿದೆ” ಎನ್ನುತ್ತಾರೆ 44 ವರ್ಷದ ದಿಲ್ಲಿಯಣ್ಣ. “ಹಲವು ತಲೆಮಾರುಗಳಿಂದ ನನ್ನ ಕುಟುಂಬ ಈ ಈ ಕಣಿಸಾಮಿ ವಿಗ್ರಹಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. ನನ್ನ ತಂದೆ ಬದುಕಿದ್ದ ಸಮಯದಲ್ಲಿ ನಾನು ಇದರ ಕುರಿತು ಆಸಕ್ತಿಯನ್ನೇ ತೋರಿಸಿರಲಿಲ್ಲ. 2011ರಲ್ಲಿ ತಂದೆ ನಿಧನರಾದಾಗ ಉರಿನ ಜನರೆಲ್ಲರೂ ಈ ಕೆಲಸವನ್ನು ನಾನು ಮುಂದುವರೆಸಬೇಕೆಂದು ಆಗ್ರಹಿಸಿದರು… ಹೀಗಾಗಿ ನಾನು ಈ ಕೆಲಸದಲ್ಲಿ ತೊಡಗಿಕೊಂಡೆ. ಇಲ್ಲಿ ಈ ಕೆಲಸ ಮಾಡಬಲ್ಲವರು ಯಾರೂ ಇಲ್ಲ.”

ವಿಗ್ರಹಗಳನ್ನು ತಯಾರಿಸಲು ಬಳಸುವ ಕಚ್ಚಾ ವಸ್ತುವಾದ ಜೇಡಿಮಣ್ಣಿನ ಸುಗಂಧವು ತಿರುವಳ್ಳೂರು ಜಿಲ್ಲೆಯ ಅತ್ತಿಪಟ್ಟು ಗ್ರಾಮದಲ್ಲಿರುವ ದಿಲ್ಲಿಯಣ್ಣನ ಮನೆಯ ತುಂಬಾ ಹರಡಿತ್ತು


ಕಣಿಸಾಮಿ ವಿಗ್ರಹಗಳನ್ನು ತಯಾರಿಸಲು ದಿಲ್ಲಿಯಣ್ಣ ಜೇಡಿಮಣ್ಣು (ಎಡ) ಮತ್ತು ಹೊಟ್ಟನ್ನು (ಬಲ) ಬಳಸುತ್ತಾರೆ. ಎರಡೂ ಕಚ್ಚಾವಸ್ತುಗಳು ಸ್ಥಳೀಯವಾಗಿಯೇ ಸಿಗುತ್ತವೆಯಾದರೂ ಊರಿನ ಸುತ್ತಮುತ್ತಲಿನ ಬದಲಾವಣೆಗಳಿಂದಾಗಿ ಅವುಗಳನ್ನು ಸಂಗ್ರಹಿಸುವುದು ಕಷ್ಟವಾಗುತ್ತಿದೆ
ದಿಲ್ಲಿಯಣ್ಣ ದಿನವೊಂದಕ್ಕೆ ಎಂಟು ಗಂಟೆಗಳ ಕಾಲ ದುಡಿಯುವ ಮೂಲಕ, 10 ದಿನಗಳಲ್ಲಿ, 10 ವಿಗ್ರಹಗಳನ್ನು ತಯಾರಿಸುತ್ತಾರೆ. “ಒಂದು ವಿಗ್ರಹ ತಯಾರಿಸಲು ನನಗೆ ಹತ್ತು ದಿನ ಬೇಕಾಗುತ್ತದೆ. ಮೊದಲು ಜೇಡಿಮಣ್ಣನ್ನು ಒಡೆದು ಪುಡಿ ಮಾಡಬೇಕು. ನಂತರ ಅದರಲ್ಲಿರುವ ಕಲ್ಲುಗಳನ್ನು ಹೆಕ್ಕಿ ತೆಗೆಯಬೇಕು. ಇದಾದ ಮೇಲೆ ಮರಳು ಮತ್ತು ಹೊಟ್ಟನ್ನು ಜೇಡಿಮಣ್ಣಿನೊಂದಿಗೆ ಬೆರೆಸಬೇಕು.” ಎನ್ನುವ ದಿಲ್ಲಿಯಣ್ಣ ವರ್ಷಕ್ಕೆ 90 ವಿಗ್ರಹಗಳನ್ನು ತಯಾರಿಸುತ್ತಾರೆ. ಹೊಟ್ಟನ್ನು ರಚನೆಗೆ ಬಲ ನೀಢುವ ಸಲುವಾಗಿ ಬಳಸಲಾಗುತ್ತದೆ. ಅದನ್ನು ಬಳಸಿ ವಿಗ್ರಹದ ಪದರವನ್ನು ರೂಪಿಸಲಾಗುತ್ತದೆ.
“ಈ ವಿಗ್ರಹ ತಯಾರಿಕೆಯ ಮೊದಲಿನಿಂದ ಕೊನೆಯ ತನಕ ನಾನೊಬ್ಬನೇ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಬೇಕು. ಕೆಲಸದವರನ್ನು ಇಟ್ಟುಕೊಂಡು ಅವರಿಗೆ ಸಂಬಳ ಕೊಡುವಷ್ಟು ಹಣ ನನ್ನ ಬಳಿಯಿಲ್ಲ. ವಿಗ್ರಹ ತಯಾರಿಕೆ ಪೂರ್ತಿಪ್ರಕ್ರಿಯೆಯನ್ನು ನೆರಳಿನಲ್ಲೇ ನಡೆಸಬೇಕು. ಬಿಸಿಲಿನಲ್ಲಿ ಜೇಡಿಮಣ್ಣು ಅಂಟುವುದಿಲ್ಲ. ಅದು ಒಡೆದು ಹೋಗುವ ಸಾಧ್ಯತೆಯಿರುತ್ತದೆ. ಒಮ್ಮೆ ಮೂರ್ತಿ ಸಿದ್ಧವಾದ ನಂತರ ಅದನ್ನು ಬೆಂಕಿಯಲ್ಲಿ ಸುಡಬೇಕು. ಈ ಇಡೀ ಪ್ರಕ್ರಿಯೆಗೆ ಒಟ್ಟು ಹದಿನೆಂಟು ದಿನ ಹಿಡಿಯುತ್ತದೆ.” ಎನ್ನುತ್ತಾರವರು.
ದಿಲ್ಲಿಯಣ್ಣ ಅತ್ತಿಪಟ್ಟುವಿನ ಸುತ್ತಮುತ್ತಲಿನ ಊರುಗಳಿಗೆ ವಿಗ್ರಹಗಳನ್ನು ತಲುಪಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಎಣ್ಣೂರ್ ಕುಪ್ಪಂ, ಮುಗದಿವರಕುಪ್ಪಂ, ತಳಂಕುಪ್ಪಮ್, ಕಟ್ಟುಕುಪ್ಪಂ, ಮೆಟ್ಟುಕುಪ್ಪಂ, ಪಾಲ್ತೊಟ್ಟಿಕುಪ್ಪಂ, ಚಿನ್ನಕುಪ್ಪಂ ಮತ್ತು ಪರಿಯಕುಲಂ ಎನ್ನುವ ಊರುಗಳಿಗೆ.
ಹಬ್ಬದ ಸಮಯದಲ್ಲಿ ಈ ಹಳ್ಳಿಗಳ ಜನರು ಊರ ಗಡಿಯಲ್ಲಿ ಈ ವಿಗ್ರಹಗಳನ್ನು ಹರಕೆಯ ರೂಪದಲ್ಲಿ ತಂದಿರಿಸುತ್ತಾರೆ. ಕೆಲವರು ಕಣಿಸಾಮಿಯ ಗಂಡು ರೂಪವನ್ನು ಬಯಸಿದರೆ, ಉಳಿದವರು ಹಲವು ಹೆಸರುಗಳಿಂದ ಗುರುತಿಸಲ್ಪಡುವ ಹೆಣ್ಣು ದೇವತೆಗಳ ವಿಗ್ರಹಗಳಿಗೆ ಬೇಡಿಕೆ ಸಲ್ಲಿಸುತ್ತಾರೆ. ಪಾಪತಿ ಅಮ್ಮನ್, ಬೊಮ್ಮಾತಿ ಅಮ್ಮನ್, ಪಿಚ್ಚೈ ಅಮ್ಮನ್ ಅಂತಹ ಕೆಲವು ಹೆಸರುಗಳು. ಅವರು ತಮ್ಮ ಊರಿನ ದೇವರು ಆನೆ ಅಥವಾ ಕುದುರೆಯ ಮೇಲೆ ಕುಳಿತಿರುವಂತೆ ಕಾಣಬಯಸುತ್ತಾರೆ. ಜೊತೆಗೆ ಪಕ್ಕದಲ್ಲಿ ಒಂದು ನಾಯಿಯೂ ಇರುತ್ತದೆ. ದೇವರು ಆ ರಾತ್ರಿ ಬಂದು ಕುಣಿಯುತ್ತಾನೆ, ಇದರ ಕುರುಹಾಗಿ ಬೆಳಗಿಗೆ ವಿಗ್ರಹದ ಕಾಲಿನಲ್ಲಿ ಬಿರುಕು ಕಾಣುತ್ತದೆ ಎನ್ನುವುದು ಸ್ಥಳೀಯ ನಂಬಿಕೆ.
“ಕೆಲವೆಡೆ, ಅವರು [ಮೀನುಗಾರರು] ಪ್ರತಿ ವರ್ಷ ಹೊಸ ಕಣಿಸಾಮಿ ವಿಗ್ರಹ ಇಡುತ್ತಾರೆ. ಇನ್ನೂ ಕೆಲವೆಡೆ ಅವರು [ಮೀನುಗಾರರು] ಎರಡು ವರ್ಷಕ್ಕೊಮ್ಮೆ, ನಾಲ್ಕು ವರ್ಷಗಳಿಗೊಮ್ಮೆ ಬದಲಾಯಿಸುತ್ತಾರೆ” ಎನ್ನುತ್ತಾರೆ ದಿಲ್ಲಿಯಣ್ಣ.

ಮೂರ್ತಿ ತಯಾರಿಕೆಗಾಗಿ ಜೇಡಿಮಣ್ಣನ್ನು ಸಿದ್ಧಪಡಿಸುತ್ತಿರುವ ದಿಲ್ಲಿಯಣ್ಣ. ʼಹಲವು ತಲೆಮಾರುಗಳಿಂದ ನಮ್ಮ ಕುಟುಂಬ ಕಣಿಸಾಮಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದೆʼ


ವಿಗ್ರಹದ ಕಾಲುಗಳನ್ನು ಕುಟ್ಟಣಿ (ಎಡ) ಬಳಸಿ ಆಕಾರಕ್ಕೆ ತರಲಾಗುತ್ತದೆ. ಈ ಕುಟ್ಟಣಿಯು ಹಲವು ತಲೆಮಾರುಗಳಿಂದ ಕುಟುಂಬದೊಡನೆ ಇದೆ. ಸಿದ್ಧಗೊಂಡ ಕಾಲುಗಳನ್ನು ನೆರಳಿನಲ್ಲಿ ಒಣಗಿಸಲಾಗುತ್ತದೆ (ಬಲ)
ಮೀನುಗಾರರಿಂದ ವಿಗ್ರಹಕ್ಕೆ ಬೇಡಿಕೆ ನಿಲ್ಲುವುದಾಗಲಿ, ಕಡಿಮೆಯಾಗುವುದಾಗಲಿ ಆಗಿಲ್ಲವಾದರೂ ಕಳೆದ ಮೂರು ದಶಕಗಳಿಂದ ಅವರು ಮಾಡುತ್ತಿರುವ ಈ ಪರಂಪರಾತ್ಮಕ ಉದ್ಯೋಗವನ್ನು ಮುನ್ನಡೆಸುವುದು ಯಾರು ಎನ್ನುವ ಪ್ರಶ್ನೆ ದಿಲ್ಲಿಯಣ್ಣನ್ನು ಕಾಡುತ್ತಿದೆ. ಇದು ಅವರಿಗೆ ಈಗ ದುಬಾರಿ ವೃತ್ತಿಯಾಗಿ ಪರಿಣಮಿಸಿದೆ. “ಈ ದಿನಗಳಲ್ಲಿ ಎಲ್ಲದಕ್ಕೂ ಬೆಲೆ ಹೆಚ್ಚು… ಅದನ್ನು ಅನುಸರಿಸಿ ನಾನೇನಾದರೂ [ವಿಗ್ರಹಗಳಿಗೆ] ಬೆಲೆ ಹೇಳಿದರೆ, ಅವರು ನಾನು ಇಷ್ಟೊಂದು ಬೆಲೆ ಏಕೆ ಹೇಳುತ್ತಿದ್ದೇನೆಂದು ಅವರು [ಗ್ರಾಹಕರು] ಕೇಳುತ್ತಾರೆ. ಆದರೆ ಇದರಲ್ಲಿ ಇರುವ ಕಷ್ಟ ನನಗೆ ಮಾತ್ರ ಗೊತ್ತು.”
ಉತ್ತರ ಚೆನ್ನೈ ಕರಾವಳಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ಹೆಚ್ಚಳದೊಂದಿಗೆ, ಇಲ್ಲಿನ ಅಂತರ್ಜಲವು ಲವಣಯುಕ್ತವಾಗುತ್ತಿದೆ. ಇದು ಇಲ್ಲಿ ಕೃಷಿ ಚಟುವಟಿಕೆಗಳ ಕುಸಿತಕ್ಕೆ ಕಾರಣವಾಗಿದೆ, ಮಣ್ಣಿನ ಸ್ವಭಾವದ ಮೇಲೂ ಪರಿಣಾಮ ಬೀರಿದೆ. "ಈ ದಿನಗಳಲ್ಲಿ, ನನಗೆ ಎಲ್ಲಿಯೂ ಜೇಡಿಮಣ್ಣು ಸಿಗುವುದಿಲ್ಲ" ಎಂದು ಕಚ್ಚಾ ವಸ್ತುವಿನ ಹುಡುಕಾಟಕ್ಕೆ ಹೋಗುವ ದಿಲ್ಲಿಯಣ್ಣ ಹೇಳುತ್ತಾರೆ.
ಜೇಡಿ ಮಣ್ಣಿನ ಬೆಲೆ ಈಗ ಬಹಳ ಹೆಚ್ಚಾಗಿದೆ. “ನಾನು ಜೇಡಿ ಮಣ್ಣಿನ ಸಲುವಾಗಿ ಮನೆಯ ಬಳಿ [ನೆಲವನ್ನು] ಅಗೆದು ನಂತರ ಗುಂಡಿ ಮುಚ್ಚಲು ಮರಳನ್ನು ಬಳಸುತ್ತೇನೆ” ಎಂದು ಅವರು ಹೇಳುತ್ತಾರೆ, ಏಕೆಂದರೆ ಮರಳಿಗೆ ಜೇಡಿಮಣ್ಣಿಗಿಂತ ಕಡಿಮೆ ಬೆಲೆ.
ಅತ್ತಿಪಟ್ಟು ಗ್ರಾಮದಲ್ಲಿ ಅವರೊಬ್ಬರೇ ವಿಗ್ರಹ ತಯಾರಕರಾಗಿರುವುದರಿಂದಾಗಿ ಅವರಿಗೆ ಸಾರ್ವಜನಿಕ ಸ್ಥಳದಲ್ಲಿ ಮಣ್ಣು ಅಗೆಯಲು ಪಂಚಾಯತ್ ಅನುಮತಿ ಪಡೆಯುವುದಕ್ಕೆ ಕಷ್ಟವಾಗುತ್ತಿದೆ. “ಊರಿನಲ್ಲಿ 10 ಅಥವಾ 20 ಮಂದಿ ವಿಗ್ರಹ ತಯಾರಕರಿದ್ದಿದ್ದರೆ, ಎಲ್ಲರೂ ಒಟ್ಟು ಸೇರಿ ಕೆರೆ ಅಥವಾ ಕೊಳಗಳ ಬಳಿ ಮಣ್ಣು ತೆಗೆಯಲು ಅನುಮತಿ ಪಡೆಯಬಹುದಿತ್ತು. ಒಬ್ಬನೇ ಹೋಗಿ ಅನುಮತಿ ಕೇಳಲು ನನಗೆ ಕಷ್ಟವಾಗುತ್ತಿದೆ. ಹೀಗಾಗಿ ನಾನು ನನ್ನ ಮನೆಯ ಸುತ್ತಲಿನ ಜೇಡಿಮಣ್ಣನ್ನೇ ತೆಗೆದು ಬಳಸುತ್ತಿದ್ದೇನೆ.”
ಈಗ ಕೈಯಿಂದ ಭತ್ತದ ಕೊಯ್ಲು ಮಾಡುವುದು ಕಡಿಮೆಯಾಗಿರುವುದರಿಂದಾಗಿ ಹುಲ್ಲಿನ ಕೊರತೆಯೂ ಕಾಡುತ್ತಿದೆ. “ಯಾಂತ್ರಿಕ ಕೊಯ್ಲಿನಲ್ಲಿ ನಮಗೆ ಹೊಟ್ಟು ಸಿಗುವುದಿಲ್ಲ. ಹೊಟ್ಟು ಸಿಕ್ಕರೆ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ಇಲ್ಲ.” ಎಂದು ಅವರು ಹೇಳುತ್ತಾರೆ. “ನಾನು ಕೈ ಕೊಯ್ಲು ಮಾಡಿದವರಿಗಾಗಿ ಹುಡುಕಿ ಅವರಿಂದ ಹೊಟ್ಟನ್ನು ಕೊಳ್ಳುತ್ತೇನೆ. ಈಗೀಗ ನಾನು ಒಲೆ ಮತ್ತು ಹೂವಿನ ಕುಂಡಗಳನ್ನು ತಯಾರಿಸುವುದನ್ನು ಕೂಡಾ ನಿಲ್ಲಿಸಿದ್ದೇನೆ… ಇದಕ್ಕೆ ಬಹಳಷ್ಟು ಬೇಡಿಕಯಿದೆ, ಆದರೆ ನನಗೆ ತಯಾರಿಸಲು ಆಗುತ್ತಿಲ್ಲ.”

ವಿಗ್ರಹದ ತಳಪಾಯ ಯಾವಾಗಲು ಬಲವಾಗಿರಬೇಕು ಹಾಗೂ ದೃಢವಾಗಿರಬೇಕು. ಇದನ್ನು ಸಾಧಿಸಲು ದಿಲ್ಲಿಯಣ್ಣ ಹುಲ್ಲು, ಮರಳು ಹಾಗೂ ಜೇಡಿಮಣ್ಣಿನ ಮಿಶ್ರಣವನ್ನು ಬಳಸುತ್ತಾರೆ. ಅವರು ಮನೆಯ ಸುತ್ತಮುತ್ತಲಿನಿಂದಲೇ ಮಣ್ಣನ್ನು ಹೊಂದಿಸುತ್ತಾರೆ. ʼಮೊದಲು ಮಣ್ಣನ್ನು ಪುಡಿ ಮಾಡಬೇಕು, ನಂತರ ಅದರಲ್ಲಿನ ಕಲ್ಲುಗಳನ್ನು ಹೆಕ್ಕಿ ಸ್ವಚ್ಛಗೊಳಿಸಬೇಕು. ಇದಾದ ಮೇಲೆ ಮಣ್ಣಿನೊಂದಿಗೆ ಹೊಟ್ಟು ಮತ್ತು ಮರಳನ್ನು ಬೆರೆಸುತ್ತೇನೆʼ


ವಿಗ್ರಹ ತಯಾರಕರು ಜೇಡಿಮಣ್ಣು, ಹುಲ್ಲು ಮತ್ತು ಹೊಟ್ಟು ಮಿಶ್ರಣದ ಮತ್ತೊಂದು ಪದರವನ್ನು ವಿಗ್ರಹಗಳ ಬುಡಕ್ಕೆ ಹಚ್ಚುತ್ತಾರೆ. ʼಈ ಇಡೀ ಕೆಲಸವನ್ನು ನೆರಳಿನಲ್ಲಿ ಮಾಡಬೇಕು, ನೇರ ಸೂರ್ಯನ ಬೆಳಕಿನಲ್ಲಿ, ಜೇಡಿಮಣ್ಣು ಅಂಟಿಕೊಳ್ಳುವುದಿಲ್ಲ ಮತ್ತು ಒಡೆಯುತ್ತದೆ. ವಿಗ್ರಹಗಳು ಸಿದ್ಧವಾದ ನಂತರ ಅದನ್ನು ಸಿದ್ಧಪಡಿಸಲು ಬೆಂಕಿಯಲ್ಲಿ ಸುಡುತ್ತೇನೆʼ
ಅವರು ತಮ್ಮ ಸಂಪಾದನೆಯನ್ನು ವಿವರಿಸುತ್ತಾರೆ: "ನಾನು ಒಂದು ಹಳ್ಳಿಯಿಂದ ವಿಗ್ರಹಕ್ಕೆ 20,000 ರೂಪಾಯಿಗಳನ್ನು ಪಡೆಯುತ್ತೇನೆ, ಆದರೆ ಖರ್ಚುಗಳ ನಂತರ, 4,000 ರೂಪಾಯಿಗಳಷ್ಟು ಉಳಿಯುತ್ತದೆ. ನಾಲ್ಕು ಹಳ್ಳಿಗಳಿಗೆ ವಿಗ್ರಹಗಳನ್ನು ತಯಾರಿಸಿದರೆ, 16,000 ರೂಪಾಯಿಗಳನ್ನು ಗಳಿಸಬಹುದು."
ಬೇಸಗೆ ತಿಂಗಳುಗಳಾದ ಫೆಬ್ರವರಿಯಿಂದ ಜುಲೈ ತಿಂಗಳ ತನಕವಷ್ಟೇ ಅಣ್ಣ ಮೂರ್ತಿಗಳನ್ನು ತಯಾರಿಸಲು ಸಾಧ್ಯ. ಆಡಿ (ಜುಲೈ) ತಿಂಗಳಿನಲ್ಲಿ ಹಬ್ಬಗಳು ಆರಂಭಗೊಳ್ಳುತ್ತವೆ. ಆಗ ಜನರು ಅವರ ಬಳಿ ವಿಗ್ರಹ ಖರೀದಿಸಲು ಬರುತ್ತಾರೆ. “ನಾನು ಆರೇಳು ತಿಂಗಳು ಕೆಲಸ ಮಾಡಿದ ವಿಗ್ರಹಗಳು ಕೇವಲ ಒಂದು ತಿಂಗಳಿನಲ್ಲಿ ಮಾರಾಟಗೊಳ್ಳುತ್ತವೆ. ಮುಂದಿನ ಐದು ತಿಂಗಳು ನನಗೆ ಯಾವುದೇ ಆದಾಯವಿರುವುದಿಲ್ಲ. ಈ ಮೂರ್ತಿಗಳನ್ನು ಮಾರಿದಾಗಲಷ್ಟೇ ನನಗೆ ಹಣ ಸಿಗುವುದು” ಎನ್ನುವ ದಿಲ್ಲಿಯಣ್ಣ ಬೇರೆ ಕೆಲಸಗಳನ್ನು ಮಾಡುವುದಿಲ್ಲ.
ಅವರು ಪ್ರತಿದಿನ ಏಳು ಗಂಟೆಗೆ ತಮ್ಮ ಕೆಲಸವನ್ನು ಆರಂಭಿಸುತ್ತಾರೆ. ಅವರು ದಿನವಿಡೀ ಒಣಗಲು ಇಟ್ಟಿರುವ ವಿಗ್ರಹಗಳ ಮೇಲೆ ನಿರಂತರ ಕಣ್ಣಿಟ್ಟಿರಬೇಕು. ಇಲ್ಲವಾದರೆ ಅವು ಒಡೆಯುವ ಸಾಧ್ಯತೆಯಿರುತ್ತದೆ. ಅವರು ತಮ್ಮ ಕಲೆಗೆ ತಮ್ಮನ್ನು ಹೇಗೆ ಅರ್ಪಿಸಿಕೊಂಡಿದ್ದೇನೆ ಎನ್ನುವುದರ ಕುರಿತು ಒಂದು ಸಣ್ಣ ಕತೆ ಹೇಳಿದರು: “ಒಂದು ರಾತ್ರಿ ನನಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ನಿದ್ರೆ ಮಾಡುವುದು ಸಾಧ್ಯವಾಗಿರಲಿಲ್ಲ. ನಾನು ಬೆಳಗೆದ್ದು ಸೈಕಲ್ಲಿನಲ್ಲಿ ಆಸ್ಪತ್ರೆಗೆ ಹೋಗಿದ್ದೆ. ಡಾಕ್ಟರ್ ಅಂದು ಗ್ಲೂಕೋಸ್ ಹಾಕಿದ್ದರು. ನನ್ನ ಸಹೋದರ ಅಲ್ಲಿಂದ ಸ್ಕ್ಯಾನಿಂಗಿಗೆಂದು ಇನ್ನೊಂದು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿನ ಸಿಬ್ಬಂದಿ ರಾತ್ರಿ 11 ಗಂಟೆಯಾಗುತ್ತದೆ ಎಂದರು. ಗಿಲ್ಲಿಯಣ್ಣ ಅಂದು ಸ್ಕ್ಯಾನಿಂಗ್ ಮಾಡಿಸದಿರಲು ತೀರ್ಮಾನಿಸಿದರು. ಯಾಕೆಂದರೆ “ನನಗೆ ಮೂರ್ತಿಗಳನ್ನು ಕಾಯಬೇಕಿತ್ತು.”
ದಿಲ್ಲಿಯಣ್ಣನ ಕುಟುಂಬವು 30 ವರ್ಷಗಳ ಕೆಳಗೆ ಕಟ್ಟುಪಲ್ಲಿ ಗ್ರಾಮದ ಚೆಪಕ್ಕಂ ಕುಗ್ರಾಮದಲ್ಲಿ ನಾಲ್ಕು ಎಕರೆ ಭೂಮಿಯನ್ನು ಹೊಂದಿತ್ತು. “ಆಗ ನಮ್ಮ ಮನೆ ಗಣೇಶ ದೇವಾಲಯದ ಬಳಿಯ ಚೆಪಕ್ಕಂ ಸಿಮೆಂಟ್ ಕಾರ್ಖಾನೆಯ ಬಳಿ ಇತ್ತು. ನಾವು ಕೃಷಿ ಮಾಡಲು ಹೊಲಕ್ಕೆ ಹತ್ತಿರದಲ್ಲಿ ಮನೆಯನ್ನು ನಿರ್ಮಿಸಿದ್ದೆವು" ಎಂದು ಅವರು ಹೇಳುತ್ತಾರೆ. ಅಂತರ್ಜಲವು ಲವಣಯುಕ್ತವಾದಾಗ, ಅವರು ಕೃಷಿಯನ್ನು ನಿಲ್ಲಿಸಬೇಕಾಯಿತು. ಅದರ ನಂತರ ಅವರು ಮನೆಯನ್ನು ಮಾರಿ ಅತ್ತಿಪಟ್ಟುವಿಗೆ ಬಂದರು.

ಜೇಡಿಮಣ್ಣು, ಮರಳು ಮತ್ತು ಹೊಟ್ಟಿನ ಮಿಶ್ರಣ. ಉತ್ತರ ಚೆನ್ನೈ ಕರಾವಳಿಯ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಒಳಹರಿವು ಅಂತರ್ಜಲವನ್ನು ಲವಣಯುಕ್ತವಾಗಿ ಪರಿವರ್ತಿಸಿದ್ದರಿಂದ ಜೇಡಿಮಣ್ಣು ಮತ್ತು ಹೊಟ್ಟು ಹುಡುಕುವುದು ಕಷ್ಟಕರವಾಗಿದೆ. ಇದು ಇಲ್ಲಿನ ಕೃಷಿ ಚಟುವಟಿಕೆಗಳನ್ನು ಕಡಿಮೆ ಮಾಡಿದ್ದು ಪರಿಣಾಮವಾಗಿ ಸಾಕಷ್ಟು ಹೊಟ್ಟು ದೊರಕುತ್ತಿಲ್ಲ

ವಿಗ್ರಹದ ಕಾಲುಗಳನ್ನು ಸೇರಿಸಲು ದಿಲ್ಲಿಯಣ್ಣ ಮಿಶ್ರಣದ ಹೆಚ್ಚುವರಿ ಪದರವನ್ನು ಅಂಟಿಸುತ್ತಾರೆ. ಅವರ ವಿಗ್ರಹಗಳು ಎಣ್ಣೂರು ಕುಪ್ಪಂ, ಮುಗದಿವರ ಕುಪ್ಪಂ, ತಳಂಕುಪ್ಪಂ, ಕಟ್ಟುಕುಪ್ಪಂ, ಮೆಟ್ಟುಕುಪ್ಪಂ, ಪಾಲ್ತೊಟ್ಟಿಕುಪ್ಪಂ, ಚಿನ್ನಕುಪ್ಪಂ, ಪೆರಿಯಾಕುಲಂ ಗ್ರಾಮಗಳಿಗೆ ಪ್ರಯಾಣಿಸುತ್ತವೆ
"ನಾವು ಒಟ್ಟು ನಾಲ್ವರು [ಒಡಹುಟ್ಟಿದವರು] ಆದರೆ ನಮ್ಮಲ್ಲಿ ಈ ಸಾಂಪ್ರದಾಯಿ ಕೆಲಸವನ್ನು ಮುಂದುವರೆಸಿದ್ದು ನಾನು ಮಾತ್ರ. ನನಗೆ ಮದುವೆಯಾಗಿಲ್ಲ. ಈ ಸಂಪಾದನೆಯಲ್ಲಿ ಕುಟುಂಬ ಅಥವಾ ಮಗುವನ್ನು ಹೇಗೆ ನೋಡಿಕೊಳ್ಳಲಿ?" ಎಂದು ಅವರು ಕೇಳುತ್ತಾರೆ. ತಾನು ಬೇರೆ ಕೆಲಸ ಹುಡುಕಿಕೊಂಡರೆ ಮೀನುಗಾರರಿಗೆ ಈ ವಿಗ್ರಹ ತಯಾರಿಸಿ ಕೊಡುವವರು ಯಾರೂ ಇರುವುದಿಲ್ಲವೆನ್ನುವುದು ದಿಲ್ಲಿಯಣ್ಣನ ಕಾಳಜಿ. "ಇದು ನನ್ನ ಪೂರ್ವಜರ ಮೂಲಕ ನನಗೆ ಬಂದಿದೆ, ನಾನು ಅದನ್ನು ಬಿಡಲು ಸಾಧ್ಯವಿಲ್ಲ. ಅವರಿಗೆ [ಮೀನುಗಾರರು] ಈ ವಿಗ್ರಹಗಳು ಸಿಗದಿದ್ದರೆ ಕಷ್ಟವಾಗುತ್ತದೆ."
ದಿಲ್ಲಿಯಣ್ಣನ ಪಾಲಿಗೆ ವಿಗ್ರಹ ತಯಾರಿಕೆ ಎನ್ನುವುದು ಕೇವಲ ಒಂದು ವೃತ್ತಿಯಲ್ಲ, ಅದೊಂದು ಆಚರಣೆ. ತನ್ನ ತಂದೆಯ ಕಾಲದಲ್ಲಿ ವಿಗ್ರಹವನ್ನು 800 ಅಥವಾ 900 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ವಿಗ್ರಹವನ್ನು ಖರೀದಿಸಲು ಬರುವ ಪ್ರತಿಯೊಬ್ಬರಿಗೂ ಊಟ ಹಾಕಲಾಗುತ್ತಿತ್ತು. "ಇದು ಮದುವೆ ಮನೆಯಂತಿರುತ್ತಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ವಿಗ್ರಹಗಳು ಬಿರುಕು ಬಿಡದೆ ಒಣಗಿದಾಗ ದಿಲ್ಲಿಯಣ್ಣನಿಗೆ ಖುಷಿಯಾಗುತ್ತದೆ. ಜೇಡಿ ಮಣ್ಣಿನ ವಸ್ತುಗಳು ಅವರ ಪಾಲಿಗೆ ಒಡನಾಡಿಯಿದ್ದಂತೆ. “ಈ ವಿಗ್ರಹಗಳನ್ನು ತಯಾರಿಸುವಾಗ ನನ್ನೊಂದಿಗೆ ಯಾರೀ ಇರುವಂತೆ ಭಾಸವಾಗುತ್ತದೆ. ಈ ಮೂರ್ತಿಗಳು ನನ್ನೊಡನೆ ಮಾತನಾಡುತ್ತಿರುಂವತೆ ನನಗೆ ಅನ್ನಿಸುತ್ತದೆ. ಈ ವಿಗ್ರಹಗಳು ನನ್ನ ಬದುಕಿನ ಅತ್ಯಂತ ಕಷ್ಟದ ಕ್ಷಣಗಳಲ್ಲೂ ನನ್ನೊಂದಿಗೆ ಇದ್ದವು. [ಆದರೆ] ನನ್ನ ನಂತರ ಇವುಗಳನ್ನು ಯಾರು ತಯಾರಿಸುತ್ತಾರೆ?” ಎಂದು ಅವರು ಕೇಳುತ್ತಾರೆ.

"ಈ ಇಡೀ ತಯಾರಿಕೆ ಪ್ರಕ್ರಿಯೆಯನ್ನು ನೆರಳಿನಲ್ಲಿ ಮಾಡಬೇಕು , ಏಕೆಂದರೆ ನೇರ ಸೂರ್ಯನ ಬೆಳಕಿನಲ್ಲಿ , ಜೇಡಿಮಣ್ಣು ಅಂಟಿಕೊಳ್ಳುವುದಿಲ್ಲ ಮತ್ತು ಒಡೆಯುತ್ತದೆ" ಎನ್ನುತ್ತಾರೆ ದಿಲ್ಲಿಯಣ್ಣ


ಎಡ: ವಿಗ್ರಹಗಳ ಅಂಚುಗಳನ್ನು ನಯಗೊಳಿಸಲು ಬಳಸಲಾಗುವ ನೀರನ್ನು ಸಾಗಿಸು ತ್ತಿರು ವ ಅತ್ತಿ ಪಟ್ಟು ವಿಗ್ರಹ ತಯಾರಕ ; ಅವ ರ ಬೆಕ್ಕು (ಬಲ)

ಆನೆ ಮತ್ತು ಕುದುರೆಗಳು ವಿಗ್ರಹಗಳಿಗೆ ಆಧಾರವಾಗಿ ರುತ್ತ ವೆ ; ಸೂರ್ಯನ ಗಾಢ ಬೆಳಕಿನಿಂದ ರಕ್ಷಿಸಲು ಅವುಗಳನ್ನು ಮು ಚ್ಚಿಡ ಲಾಗುತ್ತದೆ


ದಿಲ್ಲಿಯಣ್ಣ ಕಣಿಸಾಮಿ ವಿಗ್ರಹದ ಮುಖಕ್ಕೆ ಆಕಾರವನ್ನು ನೀಡುತ್ತಿರುವುದು, ʼ ವಿಗ್ರಹ ತಯಾರಿಕೆಯ ಆರಂಭದಿಂದ ಅಂತ್ಯದವರೆಗೆ ಎಲ್ಲಾ ಕೆಲಸಗಳನ್ನೂ ನಾನೊಬ್ಬನೇ ಮಾಡಬೇಕು. ಸಹಾಯಕರನ್ನು ಇರಿಸಿಕೊಳ್ಳುವಷ್ಟು ಸಂಪಾದನೆ ಈ ಕೆಲಸದಲ್ಲಿಲ್ಲ ʼ

ವಿಗ್ರಹಗಳು ಒಣಗಿವ , ಬಣ್ಣ ಹ ಚ್ಚಿಸಿಕೊಳ್ಳ ಲು ಸಿದ್ಧವಾಗಿವೆ


ಎಡಕ್ಕೆ: ಕ ಣಿ ಸಾಮಿ ವಿಗ್ರಹಗ ಗಳಿಗೆ ಬಿಳಿ ಬಣ್ಣ ವನ್ನು ಬಳಿಯಲಾ ಗಿದೆ. ಬಲ: ದಿಲ್ಲಿಯ ಣ್ಣ ತನ್ನ ಕಠಿಣ ಪರಿಶ್ರಮವನ್ನು ಪ್ರದರ್ಶಿಸು ತ್ತಿರುವುದು . ಅ ತ್ತಿ ಪಟ್ಟು ಸುತ್ತಮುತ್ತಲಿನ ಮೀನುಗಾರ ಸಮುದಾಯಕ್ಕಾಗಿ ಈ ವಿಗ್ರಹಗಳನ್ನು ತಯಾರಿಸುತ್ತಿರುವ ಏಕೈಕ ಕುಶಲಕರ್ಮಿ ಅವರು

ದಿಲ್ಲಿಯಣ್ಣ ಐದು ಬಗೆಯ ಕಣಿಸಾಮಿ ವಿಗ್ರಹಗಳನ್ನು ತಯಾರಿಸುತ್ತಾರೆ


ಪೂರ್ಣಗೊಂಡ ವಿಗ್ರಹಗಳು ಅವುಗಳ ತಯಾರಕರೊಂದಿಗೆ (ಬಲಕ್ಕೆ)

ಮಾರಾಟ
ಕ್ಕೂ
ಮೊದಲು ವಿಗ್ರಹಗ
ಗಳಿಗೆ
ಬಿಳಿ ಬಟ್ಟೆಯನ್ನು
ಸುತ್ತು
ತ್ತಿರು
ವ
ದಿಲ್ಲಿಯ
ಣ್ಣ

ಅತ್ತಿಪಟ್ಟುವಿನ ಮನೆಯಲ್ಲಿ ಬಟ್ಟೆ ಸುತ್ತಿದ ವಿಗ್ರಹಗಳನ್ನು ದಿಲ್ಲಿಯಣ್ಣನಿಂದ ಪಡೆಯುತ್ತಿರುವ ಮೀನುಗಾರರು

ಹೆಗಲ ಮೇಲೆ ವಿಗ್ರಹಗಳನ್ನು ಹೊತ್ತ ಮೀನುಗಾರರು. ಇಲ್ಲಿಂದ ಅವರು ದೋಣಿಯ ಮೂಲಕ ತಮ್ಮ ಹಳ್ಳಿಗಳಿಗೆ ಹೋಗುತ್ತಾರೆ. ಹಿನ್ನೆಲೆಯಲ್ಲಿ ಉತ್ತರ ಚೆನ್ನೈ ಯ ಉಷ್ಣ ವಿದ್ಯುತ್ ಸ್ಥಾವರದ ಬಳಿ ಕೊಸಸ್ತಲೈಯರ್ ನದಿ

ಕ ಣಿ ಸಾಮಿ ವಿಗ್ರಹಗಳೊಂದಿಗೆ ತಮ್ಮ ಹಳ್ಳಿಗಳಿಗೆ ಮರಳು ವಾಗ ಆಚರಣೆಯ ಭಾಗವಾಗಿ ಪಟಾಕಿಗಳನ್ನು ಸಿಡಿಸಲಾಗುತ್ತದೆ

ಕಣಿಸಾಮಿ ವಿಗ್ರಹಗಳನ್ನು ದೋಣಿಗೆ ಸಾಗಿಸುತ್ತಿರುವ ಮೀನುಗಾರರು

ದೋಣಿಯಲ್ಲಿ ಹಳ್ಳಿಗೆ ಹಿಂದಿರುಗುತ್ತಿರುವ ಕ ಣಿ ಸಾಮಿ ವಿಗ್ರಹಗಳು

ದೋಣಿಗಳಿಂದ ವಿಗ್ರಹಗಳನ್ನು ತಮ್ಮ ಮನೆಗಳಿಗೆ ಕೊಂಡೊಯ್ಯುವಾಗ ಮೀನುಗಾರರು ಘೋಷಣೆಗಳನ್ನು ಕೂಗುತ್ತಿದ್ದಾರೆ

ಎ ಣ್ಣೋರ್ ಕುಪ್ಪಂ ಜಾತ್ರೆಯ ಲ್ಲಿ ಆಚರಣೆಯ ಭಾಗವಾಗಿ ದಿಲ್ಲಿಯ ಣ್ಣ ಕೋಳಿಯನ್ನು ಬಲಿ ನೀಡುತ್ತಾರೆ

ಈಗ ವಿಗ್ರಹಗ ಳು ಗ್ರಾಮದ ಗಡಿಯಲ್ಲಿ ಇರಿಸಲು ಸಿದ್ಧವಾಗಿ ವೆ
ಅನುವಾದ: ಶಂಕರ. ಎನ್. ಕೆಂಚನೂರು