“ಕುಮಾರ್ ನಾನು ಈ ಮೀನಿನ ಬುಟ್ಟಿ ಎತ್ತಿಕೊಳ್ಳದೆ ಹೋಗಿದ್ದರೆ, ನಾವು ಇಷ್ಟು ದೂರ ಬರುವುದು ಸಾಧ್ಯವೇ ಇದ್ದಿರಲಿಲ್ಲ.” ಇದು ನನ್ನಮ್ಮ ಆಗಾಗ ಹೇಳುವ ಮಾತು. ನಾನು ಹುಟ್ಟಿದ ಒಂದು ವರ್ಷದ ನಂತರ ಅಮ್ಮ ಮೀನು ಮಾರಲು ಪ್ರಾರಂಭಿಸಿದರು. ಅಂದಿನಿಂದ ಮೀನು ನನ್ನ ಬದುಕಿನ ಭಾಗವಾಗಿ ಹೋಗಿದೆ.
ಮೀನಿನ ವಾಸನೆಯೆನ್ನುವುದು ನಮ್ಮ ಮನೆಯ ಒಂದು ಭಾಗವಾಗಿಯೇ ಇತ್ತು. ಆ ದಿನಗಳಲ್ಲಿ ಮನೆಯ ಮೂಲೆಯಲ್ಲಿ ಒಣ ಮೀನಿನ ಚೀಲ ನೇತಾಡುತ್ತಿರುತ್ತಿತ್ತು. ಮೊದಲ ಮಳೆ ಹೊತ್ತು ತರುವ ಕಾಟ್ಲಾ ಮೀನನ್ನು ಅಮ್ಮ ಸಾರು ಮಾಡುತ್ತಿದ್ದರು. ಈ ಮೀನಿನ ಸಾರು ಬಹಳ ರುಚಿಕರ ಮತ್ತು ಆ ದಿನಗಳಲ್ಲಿ ಕಾಡುವ ನೆಗಡಿ ಮತ್ತು ಶೀತಕ್ಕೆ ಔಷಧಿಯಂತೆ ಕೆಲಸ ಮಾಡುತ್ತಿತ್ತು. ಅಮ್ಮ ಕ್ಯಾಟ್ ಫಿಶ್, ಕೊರವ ಮೀನುಗಳ ಸಾರು ಮಾಡಿದಾಗ ಅದರ ಸಾರಿನ ಪರಿಮಳ ಮನೆ ತುಂಬಾ ಹರಡಿಕೊಳ್ಳುತ್ತಿತ್ತು.
ನಾನು ಸಣ್ಣವನಿದ್ದಾಗ ಮೀನು ಹಿಡಿಯುವ ಸಲುವಾಗಿ ಆಗಾಗ ಶಾಲೆಗೆ ಚಕ್ಕರ್ ಹಾಕುತ್ತಿದ್ದೆ. ಆಗ ಮಧುರೈಯ ಜವಹರಲಾಲ್ ಪುರಂನ ಎಲ್ಲೆಡೆ ನೀರು ತುಂಬಿರುತ್ತಿತ್ತು. ಜಿಲ್ಲೆಯ ತುಂಬಾ ಆಗ ಕೆರೆ, ಕೊಳ, ಬಾವಿ ನದಿಗಳಿದ್ದವು. ನಾನು ನಮ್ಮ ಅಜ್ಜನೊಡನೆ ಮೀನು ಹಿಡಿಯುವ ಬುಟ್ಟಿಯೊಡನೆ (ಗೂಳಿ) ಕೆರೆಗಳಿಗೆ ಹೋಗುತ್ತಿದ್ದೆ. ಹೊಳೆಗೆ ಮೀನು ಹಿಡಿಯಲು ಹೋಗುವಾಗ ಗಾಳ ತೆಗೆದುಕೊಂಡು ಹೋಗುತ್ತಿದ್ದೆವು.
ಅಮ್ಮ ನಾವು ಹೊಳೆಗೆ ಹೋಗದ ಹಾಗೆ ಸದಾ ದೆವ್ವದ ಕತೆಗಳನ್ನು ಹೇಳಿ ಹೆದಿರಿಸಿಟ್ಟಿದ್ದರು. ಹೀಗಾಗಿ ನಾವು ಹೆಚ್ಚಾಗಿ ಕೆರೆ, ಕೊಳಗಳಿಗೆ ಹೋಗುತ್ತಿದ್ದೆವು. ಆಗ ಕೆರೆಗಳಲ್ಲಿ ನೀರು ತುಂಬಿರುತ್ತಿತ್ತು. ನಮ್ಮ ಬಾಲ್ಯದಲ್ಲಿ ನಮ್ಮ ಸುತ್ತಲೂ ನೀರೇ ತುಂಬಿತ್ತು. ನಾನು 10ನೇ ತರಗತಿ ಪಾಸ್ ಆದ ವರ್ಷ ಊರಿನಲ್ಲಿ ನೀರಿನ ಕೊರತೆಯುಂಟಾಗಿ ಕೆರಗಳ ನೀರಿನ ಮಟ್ಟ ಕಡಿಮೆಯಾಯಿತು. ಇದು ಕೃಷಿಯ ಮೇಲೂ ಪರಿಣಾಮ ಬೀರಿತು.
ನಮ್ಮ ಹಳ್ಳಿ ಜವಾಹರಲಾಲ್ ಪುರಂನಲ್ಲಿ ಮೂರು ಕೆರೆಗಳಿದ್ದವು - ದೊಡ್ಡ ಕೆರೆ, ಸಣ್ಣ ಕೆರೆ ಮತ್ತು ಮಾರುತಂಕುಳಂ ಕೆರೆ. ನನ್ನ ಮನೆಯ ಸಮೀಪದ ದೊಡ್ಡ ಕೆರೆ ಹಾಗೂ ಚಿಕ್ಕ ಕೆರೆಯನ್ನು ಹರಾಜಿನಡಿ ಗ್ರಾಮದ ಜನರಿಗೆ ಗುತ್ತಿಗೆ ನೀಡಲಾಗಿತ್ತು. ಆ ಜನರು ಅದರಲ್ಲಿ ಮೀನು ಸಾಕುತ್ತಿದ್ದರು ಮತ್ತು ಅವರ ಮನೆ ಇದರಿಂದ ನಡೆಯುತ್ತಿತ್ತು. ಎರಡೂ ಕೆರೆಗಳು ಥಾಯ್ ತಿಂಗಳಿನಲ್ಲಿ (ಜನವರಿ ಮಧ್ಯದಿಂದ ಫೆಬ್ರವರಿ ಮಧ್ಯದವರೆಗೆ) ಮೀನುಗಳನ್ನು ನೀಡುತ್ತವೆ. ಇದನ್ನು ಮೀನುಗಾರಿಕೆ ಕಾಲವೆಂದು ಪರಿಗಣಿಸಲಾಗುತ್ತದೆ.
ಅಪ್ಪ ಕೆರೆಗೆ ಮೀನು ಕೊಳ್ಳಲು ಹೋಗುವಾಗ ನಾನೂ ಅವರ ಜೊತೆ ಹೋಗುತ್ತಿದ್ದೆ. ಅವರ ಸೈಕಲ್ಲಿನ ಹಿಂಬದಿಯಲ್ಲಿ ಒಂದು ಪೆಟ್ಟಿಗೆಯನ್ನು ಕಟ್ಟಲಾಗಿತ್ತು ಮತ್ತು ನಾವು ಮೀನು ಖರೀದಿಸಲು ಹಲವಾರು ಹಳ್ಳಿಗಳಿಗೆ, ಕೆಲವೊಮ್ಮೆ 20 ರಿಂದ 30 ಕಿ.ಮೀ. ದೂರದವರೆಗೂ ಪ್ರಯಾಣಿಸುತ್ತಿದ್ದೆವು.

ಮಾರ್ಚ್‌ನಲ್ಲಿ ನಡೆಯುವ ಮೀನು ಸುಗ್ಗಿ ಹಬ್ಬದ ಆಚರಣೆಯ ಅಂಗವಾಗಿ ಮಧುರೈ ಜಿಲ್ಲೆಯ ಕಲ್ಲಂಧಿರಿ ಗ್ರಾಮದ ಕೆರೆಯಲ್ಲಿ ಗ್ರಾಮಸ್ಥರು ಮೀನು ಹಿಡಿಯುತ್ತಾರೆ
ಮಧುರೈ ಜಿಲ್ಲೆಯ ಅನೇಕ ಸರೋವರಗಳಲ್ಲಿ ಮೀನು ಸುಗ್ಗಿಯ ಹಬ್ಬಗಳನ್ನು ಆಚರಿಸಲಾಗುತ್ತದೆ. ಆ ಸಮಯದಲ್ಲಿ ಹತ್ತಿರದ ಹಳ್ಳಿಗಳ ಜನರು ಮೀನುಗಾರಿಕೆಗಾಗಿ ಕೆರೆಯನ್ನು ತಲುಪುತ್ತಾರೆ. ಉತ್ತಮ ಮಳೆ, ಉತ್ತಮ ಫಸಲು ಮತ್ತು ಎಲ್ಲಾ ಜನರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಾರೆ. ಮೀನುಗಾರಿಕೆಯಿಂದ ಉತ್ತಮ ಮಳೆಯಾಗುತ್ತದೆ ಮತ್ತು ಮೀನು ಕೊಯ್ಲು ಹಬ್ಬವನ್ನು ಆಚರಿಸದಿದ್ದರೆ ಬರಗಾಲ ಎದುರಾಗುತ್ತದೆ ಎಂಬುದು ಜನರ ನಂಬಿಕೆ.
ಸುಗ್ಗಿಯ ಸಮಯದಲ್ಲಿ ಮೀನು ಹೆಚ್ಚು ತೂಕವನ್ನು ಹೊಂದಿರುತ್ತದೆ ಮತ್ತು ಉತ್ತಮ ಲಾಭವನ್ನು ನೀಡುತ್ತದೆ ಎಂದು ಅಮ್ಮ ಯಾವಾಗಲೂ ಹೇಳುತ್ತಿದ್ದರು. ಜನರು ಹೆಚ್ಚಾಗಿ ಜೀವವಿರುವ ಮೀನುಗಳನ್ನು ಕೊಳ್ಳಲು ಬಯಸುತ್ತಾರೆ. ಹಂಗಾಮು ಇಲ್ಲದ ಸಮಯದಲ್ಲಿ, ಮೀನಿನ ತೂಕವು ಕಡಿಮೆಯಾಗುತ್ತದೆ ಮತ್ತು ಆಗ ಸಾಕಷ್ಟು ಪ್ರಮಾಣದಲ್ಲಿ ಮೀನು ಸಿಗುವುದಿಲ್ಲ.
ಮೀನು ಮಾರಾಟ ನಮ್ಮ ಊರಿನ ಹಲವು ಮಹಿಳೆಯರಿಗೆ ಬದುಕು ನೀಡಿದೆ. ಗಂಡಂದಿರನ್ನು ಕಳೆದುಕೊಂಡ ಮಹಿಳೆಯರಿಗೆ ಇದು ಜೀವನೋಪಾಯದ ದಾರಿ ತೋರಿಸಿದೆ.
ಈ ಮೀನುಗಳೇ ನನ್ನನ್ನು ಒಬ್ಬ ಫೋಟೊಗ್ರಾಫರ್ ಆಗಿ ನಿರೂಪಿಸಿದವು. 2013ರಲ್ಲಿ ನಾನು ಕೆಮೆರಾ ಕೊಂಡಿದ್ದೆ. ಆಗ ಮೀನು ಖರೀದಿಗೆಂದು ಹೋಗುವಾಗ ಜೊತೆಗೆ ಕೆಮೆರಾ ಕೂಡಾ ಒಯ್ಯುತ್ತಿದ್ದೆ. ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಮೀನು ಖರೀದಿ ಬಿಟ್ಟು ಫೋಟೊ ತೆಗೆಯುವುದರಲ್ಲಿ ಮುಳುಗಿ ಹೋಗಿರುತ್ತಿದ್ದೆ. ಅಮ್ಮನ ಫೋನ್ ಬರುವ ತನಕ ನನಗೆ ಈ ಜಗದ ಪರಿವೆಯೇ ಇರುತ್ತಿರಲಿಲ್ಲ. ಅಮ್ಮ ನನಗೆ ವ್ಯಾಪಾರಕ್ಕೆ ಹೋಗಲು ತಡವಾಗುತ್ತಿದೆ ಎಂದ ಮೇಲೆ ಗಡಿಬಿಡಿಯಲ್ಲಿ ಮೀನು ಖರೀದಿ ಮಾಡಿ ಹೊರಡುತ್ತಿದ್ದೆ.
ಕೆರೆಯ ಬಳಿ ಕೇವಲ ಮನುಷ್ಯರಷ್ಟೇ ಇರುತ್ತಿರಲಿಲ್ಲ. ಅಲ್ಲಿ ಹಕ್ಕಿಗಳು ಮತ್ತು ದನಗಳೂ ಇರುತ್ತಿದ್ದವು. ನಂತರ ಟೆಲಿ ಲೆನ್ಸ್ ಖರೀದಿಸಿದ ನಾನು ಜಲಚರಗಳ ಚಿತ್ರ ತೆಗೆಯಲು ಆರಂಭಿಸಿದೆ. ಕೊಕ್ಕರೆ, ಬಾತುಕೋಳಿಯಂತಹ ಹಕ್ಕಿಗಳನ್ನು ನೋಡುವುದು ಮತ್ತು ಅವುಗಳ ಫೋಟೊ ತೆಗೆಯುವುದು ನನಗೆ ಖುಷಿ ಕೊಡುತ್ತಿತ್ತು.
ಈಗ ಆ ಕೆರೆಗಳಲ್ಲಿ ನೀರು ಬತ್ತಿ ಹೋಗಿ ಮೀನುಗಳೇ ಇಲ್ಲವಾಗಿವೆ.
*****

ಸೆಂದಿಲ್ ಕಲೈ ಅವರು ತಾನು ಹಿಡಿದು ಕಮ್ಮ ಪಾರೈ ಮೀನನ್ನು ತೋರಿಸುತ್ತಿರುವುದು. ಅವರಿಗೆ ಫೋಟೊಗೆ ಪೋಸ್ ಕೊಡುವುದೆಂದರೆ ಇಷ್ಟ
ಕೆಮೆರಾ ಕೊಂಡ ದಿನಗಳಲ್ಲಿ ಮೀನುಗಾರರಾದ ಪಿಚ್ಚೈ ಅಣ್ಣ, ಮೊಕ್ಕಣ್ಣ, ಮರುಧು, ಸೆಂದಿಲ್ ಕಲೈ, ಅವರ ಫೋಟೊಗಳನ್ನು ಸಹ ತೆಗೆಯಲು ಆರಂಭಿಸಿದೆ. ಅವರೊಂದಿಗೆ ಬಲೆ ಬೀಸಿ ಮೀನು ಹಿಡಿಯುವ ಸಮಯದಲ್ಲಿ ಅವರಿಂದ ಸಾಕಷ್ಟು ಕಲಿತಿದ್ದೇನೆ ನಾನು. ಇವರೆಲ್ಲರೂ ಮಧುರೈ ಈಸ್ಟ್ ಬ್ಲಾಕ್ ಪುದುಪಟ್ಟಿ ಬಳಿಯ ಸಣ್ಣ ಊರಿನವರು. ಈ ಊರಿನ ಸರಿಸುಮಾರು 500 ಜನರು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಇದು ಅವರ ಪ್ರಾಥಮಿಕ ಜೀವನೋಪಾಯ.
ತಿರುನೆಲ್ವೇಲಿ, ರಾಜಪಾಳ್ಯಂ, ತೆಂಕಶಿ, ಕಾರೈಕುಡಿ, ದೇವಕೋಟ್ಟೈ ಮತ್ತಿತರ ಕೆರೆಗಳಲ್ಲಿ ಮೀನು ಹಿಡಿಯಲು ದೂರದೂರುಗಳಿಗೆ ತೆರಳುವ ಸಿ.ಪಿಚೈ (60್ ಅಣ್ಣ ವರ್ಷದ ಮೀನುಗಾರ. ಹತ್ತನೇ ವಯಸ್ಸಿನಲ್ಲಿ ತಂದೆಯಿಂದ ಮೀನುಗಾರಿಕೆ ಕಲಿತು ಅವರ ಜೊತೆ ಮೀನು ಹಿಡಿಯಲು ಹೋಗುತ್ತಿದ್ದರು. ಕೆಲವೊಮ್ಮೆ ಬೆಳೆಸುವ ಸಲುವಾಗಿ ಕೆಲವು ದಿನ ಅಲ್ಲಿಯೇ ಇರುತ್ತಿದ್ದರು.
ಪಿಚೈ ವಿವರಿಸುತ್ತಾರೆ, “ನಾವು ವರ್ಷದಲ್ಲಿ ಆರು ತಿಂಗಳು ಮೀನು ಹಿಡಿಯುತ್ತೇವೆ. ಉಳಿದ ಆರು ತಿಂಗಳಲ್ಲಿ ಹಿಡಿದ ಮೀನುಗಳನ್ನು ಮಾರಾಟ ಮಾಡಿ ಉಳಿದ ಮೀನುಗಳನ್ನು ಒಣಗಿಸಿ ವರ್ಷವಿಡೀ ಆದಾಯ ಬರುವಂತೆ ಮಾಡಿಕೊಳ್ಳುತ್ತೇವೆ."
ಇಲ್ಲಿ ಮಣ್ಣಿನಲ್ಲಿ ಹುದುಗಿರುವ ಆ ಮೊಟ್ಟೆಗಳಿಂದ ಮೀನುಗಳು ಹುಟ್ಟುತ್ತವೆ ಮತ್ತು ಮಳೆಯು ಅವರಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ. “ಕೆಳುದಿ, ಕೊರವ, ವರಾ, ಪಂಪುಪಿಡಿ ಕೆಂದಪುಡಿ, ವೆಳಿಚಿ ಮುಂತಾದ ಸ್ಥಳೀಯ ಮೀನುಗಳು ಮೊದಲಿನಂತೆ ಸಿಗುತ್ತಿಲ್ಲ. ಹೊಲಗಳಲ್ಲಿ ಬಳಸುವ ಕೀಟನಾಶಕಗಳಿಂದ ಕಲುಷಿತ ನೀರು ಕೆರೆಗಳಿಗೆ ಸೇರುತ್ತದೆ. ಈಗ ಎಲ್ಲಾ ಮೀನುಗಳನ್ನು ಕೃತಕವಾಗಿ ಬೆಳೆಸಲಾಗುತ್ತದೆ ಮತ್ತು ಆಹಾರಕ್ಕಾಗಿ ಮಾರಲಾಗುತ್ತದೆ, ಇದು ಸರೋವರಗಳ ಫಲವತ್ತತೆಯನ್ನು ಮತ್ತಷ್ಟು ನಾಶಪಡಿಸುತ್ತದೆ.”
ಮೀನುಗಾರಿಕೆ ಲಭ್ಯವಿಲ್ಲದಿದ್ದಾಗ, ಪಚೈಯಣ್ಣ ಮನರೇಗಾ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ) ಅಡಿಯಲ್ಲಿ ದೈನಂದಿನ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ, ಉದಾಹರಣೆಗೆ ಕಾಲುವೆಗಳನ್ನು ನಿರ್ಮಿಸುವುದು, ಸ್ಥಳೀಯವಾಗಿ ಇದನ್ನು ನೂರ್ ನಾಳ್ ಪನಿ ಎಂದು ಕರೆಯುತ್ತಾರೆ. ಈ ಕೆಲಸ ಇಲ್ಲದಿರುವ ಸಮಯದಲ್ಲಿ ಸಿಕ್ಕ ಕೆಲಸಗಳನ್ನು ಮಾಡುತ್ತಾರೆ.


(ಎಡ) ಸಿ. ಪಿಚೈ ತನ್ನ ಕೈಯಲ್ಲಿ ವೆರಾಳ್ ಮೀನನ್ನು ಹಿಡಿದಿದ್ದಾರೆ (ಬಲ) ವೈ. ಪುದುಪಟ್ಟಿ ಪ್ರದೇಶದ ಗ್ರಾಮಸ್ಥರ ನಡುವೆ ಅತ್ಯಂತ ಗೌರವಾನ್ವಿತ ಮೀನುಗಾರರಲ್ಲಿ ಮೊಕ್ಕ ಒಬ್ಬರು. ಅರ, ಕೆಂಡೈ, ಒತೈ ಕೆಂಡೈ, ಥಾರ್ ಕೆಂಡೈ, ಕಲ್ಪಸಿ ಮುಂತಾದ ದೇಶೀಯ ಮೀನುಗಳು ಈಗ ಸಿಗುತ್ತಿಲ್ಲ ಎನ್ನುತ್ತಾರೆ ಅವರು
ಮತ್ತೋಋವ ಮೀನುಗಾರರಾದ 30 ವರ್ಷದ ಮೊಕ್ಕ ಅವರ ಪ್ರಕಾರ, ಮೀನುಗಾರಿಕೆ ಅವಧಿ ಮುಗಿದ ನಂತರ ಅವರೂ ದಿನಗೂಲಿ ಕೆಲಸ ಮಾಡಬೇಕಾಗುತ್ತದೆ. ಅವರ ಪತ್ನಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಇಬ್ಬರು ಮಕ್ಕಳು 3 ಮತ್ತು 2ನೇ ತರಗತಿಗಳಲ್ಲಿ ಓದುತ್ತಿದ್ದಾರೆ.
ಅವರು ಸಣ್ಣ ಪ್ರಾಯದಲ್ಲೇ ಅಮ್ಮನನ್ನು ಕಳೆದುಕೊಂಡ ಕಾರಣ ಅವರು ತನ್ನ ಅಜ್ಜಿಯ ಆಶ್ರಯದಲ್ಲಿ ಬೆಳೆದರು. ಅವರು ಹೇಳುತ್ತಾರೆ, “ನನಗೆ ಓದಿನಲ್ಲಿ ಆಸಕ್ತಿಯಿರಲಿಲ್ಲ ಹೀಗಾಗಿ ಹೊಲಗಳಲ್ಲಿ ಮತ್ತು ಇತರ ಸಣ್ಣ ಕೆಲಸಗಳನ್ನು ಮಾಡಲು ಪ್ರಾರಂಭಿಸಿದೆ. ಆದರೆ ನನ್ನ ಮಕ್ಕಳಿಗೆ ಒಳ್ಳೆಯ ಕೆಲಸ ಸಿಗುವಂತಹ ಶಿಕ್ಷಣ ಕೊಡಿಸಲು ನಾನು ದುಡಿಯುತ್ತಿದ್ದೇನೆ.
*****
ಮಲ್ಕಳೈ ಕೈಗಳಿಂದಲೇ ಬಲೆ ತಯಾರಿಸುತ್ತಾರೆ. ಅವರು ಈ ಕೌಶಲವನ್ನು ತಮ್ಮ ಹಿರಿಯರಿಂದ ಕಲಿತರು. “ನಮ್ಮ ಊರಾದ ಒತೈಕಡೆಯಲ್ಲಿ ಈಗಲೂ ಇದೇ ಕೈಯಿಂದ ತಯಾರಿಸಲಾದ ಬಲೆಯನ್ನು ಮೀನುಗಾರಿಕೆಗೆ ಬಳಸುತ್ತೇವೆ. ಇಂದಿನ ಬಲೆಗಳು ನನ್ನಜ್ಜ ಬಳಸುತ್ತಿದ್ದ ಬಲೆಗಳಂತವಲ್ಲ. ಅವರು ತೆಂಗಿನ ನಾರು ಬಳಸಿ ಬಲೆ ತಯಾರಿಸುತ್ತಿದ್ದರು.” ಎಂದು 32 ವರ್ಷದ ಅವರು ಹೇಳುತ್ತಾರೆ. “ನಮ್ಮ ಊರಿನಲ್ಲಿ ನುರಿತ ಬಲೆ ಕೆಲಸಗಾರ ಎನ್ನಿಸಿಕೊಂಡಿದ್ದ ಅವರು ತೆಂಗಿನ ನಾರು ಹುಡುಕಿಕೊಂಡು ಊರುಗಳಿಗೆ ಹೋಗುತ್ತಿದ್ದರು. ಬೇರೆ ಊರುಗಳಿಗೆ ಜನರು ಮೀನು ಹಿಡಿಯಲು ಹೋಗುವಾಗಲೂ ಅದನ್ನು ಕೊಂಡು ಹೋಗುತ್ತಿದ್ದರು.
“ಮೀನು ಮತ್ತು ಮೀನುಗಾರಿಕೆ ನಮ್ಮ ಬದುಕಿನ ಪ್ರಮುಖ ಭಾಗವಾಗಿದೆ ಮತ್ತು ನಮ್ಮ ಊರಿನಲ್ಲಿ ಅನೇಕ ಮೀನುಗಾರರಿದ್ದಾರೆ. ನುರಿತ ಮೀನುಗಾರ ಸತ್ತಾಗ, ಗ್ರಾಮಸ್ಥರು ಅವರ ಅಂತ್ಯಕ್ರಿಯೆಯ ಚಿತಾಭಸ್ಮದಿಂದ ಬಿದಿರಿನ ಕೋಲನ್ನು ಹೊರತೆಗೆದು ಹೊಸ ಬಲೆಯ ಆಧಾರವನ್ನು ಮಾಡಲು ಬಳಸುತ್ತಾರೆ. ಈ ಮೂಲಕ ಅವರ ಪರಂಪರೆಯನ್ನು ಗೌರವಿಸಲಾಗುತ್ತದೆ. ನಮ್ಮ ಹಳ್ಳಿಯಲ್ಲಿ ಈ ಪದ್ಧತಿ ಮುಂದುವರಿದಿದೆ.


ಎಡ: ಮಲ್ಕಳೈ (ಮುಂಭಾಗ) ಮತ್ತು ಸಿಂಗಮ್ ನೀರಿನಿಂದ ಬಲೆಗಳನ್ನು ಎಳೆಯುತ್ತಿದ್ದಾರೆ. ಬಲ : ಮೀನುಗಾರರು ತಮ್ಮ ಮೀನುಗಾರಿಕಾ ಬಲೆಗಳನ್ನು ಹೊರಗೆ ಎಳೆಯಲು ಕೆರೆಗೆ ಧುಮುಕಬೇಕು
“ನಮ್ಮ ಜನರು ಕೆರೆಯ ನೀರನ್ನು ನೋಡಿ ಅದರಲ್ಲಿನ ಮೀನು ಎಷ್ಟು ದೊಡ್ಡದಾಗಿರುತ್ತದೆ ಎಂದು ಹೇಳಬಲ್ಲರು. ಕೈಗೆ ನೀರು ತೆಗೆದುಕೊಂಡು ಅದು ಕಳಕಾಗಿದ್ದರೆ ಮೀನು ದೊಡ್ಡದಾಗುತ್ತದೆ ಎನ್ನುತ್ತಾರೆ. ನೀರು ಸ್ಪಷ್ಟವಾಗಿದ್ದರೆ ಮೀನುಗಳ ಸಂಖ್ಯೆ ಕಡಿಮೆ ಇರುತ್ತದೆ.
"ನಾವು ಮೀನುಗಾರಿಕೆಗಾಗಿ ಮಧುರೈ ಜಿಲ್ಲೆಯಾದ್ಯಂತ - ತೊಂಡಿ, ಕಾರೈಕುಡಿ, ಕನ್ಯಾಕುಮಾರಿ ಸಮುದ್ರದವರೆಗೆ (ಹಿಂದೂ ಮಹಾಸಾಗರ) ಹೋಗುತ್ತಿದ್ದೆವು. ತೆಂಕಾಶಿಯ ಎಲ್ಲ ಕೆರೆ ಕಟ್ಟೆಗಳಿಗೆ ಭೇಟಿ ನೀಡುತ್ತಿದ್ದೆವು. ಕೆಲವೊಮ್ಮೆ ಐದರಿಂದ ಹತ್ತು ಟನ್‌ಗಳಷ್ಟು ಮೀನು ಹಿಡಿಯುತ್ತಿದ್ದೆವು. ನಾವು ಹಿಡಿದ ಮೀನಿ ನ ಗಾತ್ರ ಏನೇ ಇರಲಿ, ನಮ್ಮ ಕೂಲಿ ಅದೇ ಆಗಿರುತ್ತದೆ.
"ಒಂದು ಕಾಲದಲ್ಲಿ ಮದುರೈ ಸುಮಾರು 200 ಕೆರೆಗಳನ್ನು ಹೊಂದಿತ್ತು, ಆದರೆ ತ್ವರಿತ ನಗರೀಕರಣದಿಂದ, ಈ ಕೆರೆಗಳು ಕಣ್ಮರೆಯಾಗುತ್ತಿವೆ. ಹೀಗಾಗಿ ಮೀನುಗಾರಿಕೆಗೆ ಬೇರೆ ಕಡೆ ಹೋಗಬೇಕಾಗಿದೆ. ಕೆರೆಗಳು ಕಣ್ಮರೆಯಾಗುತ್ತಿರುವುದರಿಂದ ನಮ್ಮಂತಹ ಸಾಂಪ್ರದಾಯಿಕ ಮೀನುಗಾರರ ಬದುಕು ದುಸ್ತರವಾಗುತ್ತಿದೆ. ಮೀನು ವ್ಯಾಪಾರಿಗಳ ಮೇಲೂ ಇದು ಪರಿಣಾಮ ಬೀರಿದೆ.
“ಅಪ್ಪನ ಒಡಹುಟ್ಟಿದವರು ಮೂವರು ಮತ್ತು ನನಗೂ ಮೂವರು ಒಡಹುಟ್ಟಿದವರು. ನಾವೆಲ್ಲರೂ ಮೀನು ಹಿಡಿಯುತ್ತೇವೆ. ನನಗೆ ಮದುವೆಯಾಗಿ ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದಾರೆ. ನಮ್ಮ ಹಳ್ಳಿಯ ಯುವಕರು ಈಗ ಶಾಲಾ-ಕಾಲೇಜಿಗೆ ಹೋಗುತ್ತಾರೆ ಆದರೆ ಅವರು ಮೀನುಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಶಾಲಾ-ಕಾಲೇಜು ಮುಗಿದ ನಂತರ ಮೀನುಗಾರಿಕೆಯಲ್ಲಿ ಕಾಲ ಕಳೆಯುತ್ತಾರೆ."

ಮಧುರೈನ ಜವಾಹರಲಾಲ್ಪುರಂ ಪ್ರದೇಶದಲ್ಲಿ ಚಿನ್ನ ಕಮ್ಮ ( ಸಣ್ಣ ಕೆರೆ ) ದಡ . ಈ ದಾರಿಯಾಗಿಯೇ ಲೇಖಕರು ಮೀನು ಕೊಳ್ಳಲು ಹೋಗುತ್ತಿದ್ದರು


ಎಡ: ಅಣೆಕಟ್ಟಿನಿಂದ ನೀರನ್ನು ಹೊರಬಿಟ್ಟಾಗ ಕೆರೆಗಳು ಜೀವಂತವಾಗುತ್ತವೆ ಎಂದು ಸ್ಥಳೀಯ ಮೀನುಗಾರರು ಹೇಳುತ್ತಾರೆ. ಬಲ: ವೈ.ಪುದುಪಟ್ಟಿ ಗ್ರಾಮದ ಸಿ.ಪಿಚೈ ಅವರು ಸೂಕ್ಷ್ಮ ಮೀನುಗಾರಿಕೆ ಕೌಶ ಲಕ್ಕೆ ಹೆಸರುವಾಸಿಯಾಗಿದ್ದಾರೆ

ಉತ್ತರ ಮಧುರೈನ ಕುನ್ನತ್ತೂರಿನ ಕೆರೆಯಲ್ಲಿ ಮೀನು ಹಿಡಿಯಲು ಮೀನುಗಾರರು ತಯಾರಿ ನಡೆಸುತ್ತಿದ್ದಾರೆ. ಮೀನುಗಾರಿಕೆ ಮತ್ತು ಸಾರಿಗೆಗೆ ಅಗತ್ಯವಿರುವ ಎಲ್ಲಾ ಉಪಕರಣಗಳನ್ನು ಸಾಗಿಸಲು ಅವರು ಮಿನಿ ಟ್ರಕ್ ಅನ್ನು ಬಾಡಿಗೆಗೆ ಪಡೆಯುತ್ತಾರೆ

ಹೆಚ್ಚು ಹೆಚ್ಚು ಮೀನು ಹಿಡಿಯುವ ಸಲುವಾಗಿ ಮೀನುಗಾರರು ಕೆರೆಯ ಸುತ್ತ ಸುತ್ತುತ್ತಾರೆ

ಅವರು ಕೆರೆಯ ಆಳಕ್ಕೆ ಹೋಗಿ ತಮ್ಮ ಬಲೆಗಳನ್ನು ಎಸೆಯುತ್ತಾರೆ

ಹೆಚ್ಚಿನ ಮೀನುಗಳನ್ನು ಬಲೆಗೆ ಬೀಳಿಸುವ ಪ್ರಯತ್ನದಲ್ಲಿ ಮೀನುಗಾರರು ಆಳವಾದ ನೀರಿನಲ್ಲಿ ಹೋರಾಟ ನಡೆಸುತ್ತಾರೆ

ಜವಾಹರಲಾಲ್ ಪುರಂನ ದೊಡ್ಡ ಕೆರೆಯಲ್ಲಿ ಮೀನುಗಾರರು ಬಲೆ ಎಳೆಯುತ್ತಿದ್ದಾರೆ . ಸರೋವರದ ತಳದಲ್ಲಿ ಕಲ್ಲುಗಳು ಮತ್ತು ಮುಳ್ಳುಗಳಿವೆ ಎಂದು ಮೊಕ್ಕ ( ಎಡ ತುದಿ ) ಹೇಳುತ್ತಾರೆ . ' ಮುಳ್ಳು ಚುಚ್ಚಿದರೆ ನಮಗೆ ಸರಿಯಾಗಿ ನಡೆಯಲೂ ಸಾಧ್ಯವಾಗುವುದಿಲ್ಲ . ಅದಕ್ಕೇ ಬಲೆ ಬೀಸುವಾಗ ತುಂಬಾ ಜಾಗ್ರತೆ ವಹಿಸಬೇಕು ʼ

ಕುನ್ನತ್ತೂರಿನ ಸಣ್ಣ ಸರೋವರದಲ್ಲಿ ಬಲೆಯನ್ನು ದಡಕ್ಕೆ ಎಳೆಯು ತ್ತಿರುವುದು

ಮೀನುಗಾರರು ಬಲೆಯ ಮೀನುಗಳನ್ನು ಆಳವಿಲ್ಲದ ನೀರಿಗೆ ಎಳೆಯುತ್ತಾರೆ, ಅಲ್ಲಿ ಮೀನುಗಳನ್ನು ಸಂಗ್ರಹಿಸಲು ಮತ್ತು ಹಿಡಿದಿಡಲು ತಾತ್ಕಾಲಿಕ ರಚನೆಗಳನ್ನು ನಿರ್ಮಿಸಲಾಗಿದೆ


ಸಿ. ಪಿಚೈ (ಎಡ) ತನ್ನ ಕೈಯಲ್ಲಿ ಕ ನ್ನಡಿ ಕಾಟ್ಲಾ ಮೀನನ್ನು ಹಿಡಿದಿದ್ದಾನೆ. ರಾಮನ್ (ಬಲ) ತಾನು ಹಿಡಿದ ಕಾಟ್ಲಾ ಮೀನನ್ನು ತೋರಿಸುತ್ತಿದ್ದಾರೆ

ಮು ಳ್ಳು ರೋಹು ಕೆಂಡ ಮೀನಿನೊಡನೆ ಎಂ. ಮರುಧು

ಮೀನುಗಾರರು ದಿನವಿಡೀ ಹಿಡಿದ ಮೀನುಗಳನ್ನು ತಾಜಾವಾಗಿಡಲು ʼ ಆಪಾ ʼ ದಲ್ಲಿ ಸಂಗ್ರಹಿಸುತ್ತಾರೆ . ಸಂಜೆ ಅವುಗಳನ್ನು ಮಾರುಕಟ್ಟೆ ಗೆ ತೆಗೆದುಕೊಂಡು ಹೋಗುತ್ತಾರೆ

ಜವಾಹರಲಾಲ್‌ಪುರದ ದೊಡ್ಡ ಕೆರೆಯ ಮೇಲೆ ಕಾಣುವ ಪಕ್ಷಿಗಳಲ್ಲಿ ನೀರ್ ಕಾಗಮ್ ( ನೀರುಕಾಗೆ ) ಒಂದಾಗಿದೆ

ಕುನ್ನತ್ತೂರು ಕೆರೆಯ ಬಳಿಯ ಉಬ್ಬಿನ ಮೇಲೆ ಕುಳಿತು ಮಧ್ಯಾಹ್ನದ ಊಟ ಮಾಡುತ್ತಿರುವ ಮೀನುಗಾರರು

ಮೀನುಗಾರರು ಮನೆಗೆ ಹೋಗುವಾಗ, ಸಾಗಿಸಲು ಸುಲಭವಾಗು ವಂತೆ ತಮ್ಮ ಬಲೆಗಳನ್ನು ಒಟ್ಟಿಗೆ ಕಟ್ಟುತ್ತಾರೆ

ಮೀನುಗಾರರು ತಮ್ಮ ತೆಪ್ಪ ಗಳನ್ನು ದಡಕ್ಕೆ ತಳ್ಳುತ್ತಿದ್ದಾರೆ . ಇದು ಭಾರವಾಗಿರುತ್ತದೆ ಮತ್ತು ಅದು ಅವರು ಹಿಡಿದ ಮೀನುಗಳಿಂದ ತುಂಬಿರುತ್ತದೆ

ಅವರು ಮೀನುಗಳನ್ನು ಇತರ ಜಿಲ್ಲೆಗಳಲ್ಲಿ ಮಾರಾಟಕ್ಕಾಗಿ ಸಾಗಿಸಲು ತೆಪ್ಪದಿಂದ ಐಸ್ ಬಾಕ್ಸ್ ಗೆ ವರ್ಗಾಯಿಸುತ್ತಿದ್ದಾರೆ

ಮಧುರೈ ಒಂದು ಕಾಲದಲ್ಲಿ ಸುಮಾರು 200 ಕೆರೆಗಳನ್ನು ಹೊಂದಿತ್ತು, ಆದರೆ ತ್ವರಿತ ನಗರೀಕರಣದಿಂದಾಗಿ ನೂರಾರು ಜನರಿಗೆ ಜೀವನೋಪಾಯವನ್ನು ಒದಗಿಸುವ ಈ ಜಲಮೂಲಗಳು ಈಗ ಕಣ್ಮರೆಯಾಗುತ್ತಿವೆ

ಕುನ್ನತ್ತೂರಿನಲ್ಲಿ ಮೀನುಗಾರರು ಮೀನು ತುಂಬಿದ ಐಸ್ ಬಾಕ್ಸ್‌ಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಟ್ರಕ್‌ಗೆ ತುಂಬುತ್ತಿದ್ದಾರೆ

ಮೀನುಗಾರರಿಂದ ನೇರವಾಗಿ ಮೀನು ಖರೀದಿಸಲು ಸ್ಥಳೀಯ ಮೀನು ಮಾರಾಟಗಾರರು ತಮ್ಮ ಗೋಣಿ ಚೀಲಗಳೊಂದಿಗೆ ಜವಾಹರಲಾಲ್‌ಪುರಂನ ದೊಡ್ಡ ಕೆರೆಯ ಬಳಿ ಕಾಯುತ್ತಿದ್ದಾರೆ

ಮೀನುಗಾರಿಕೆ ಅವಧಿ ಮುಗಿದ ತಕ್ಷಣ ನೀರು ಬತ್ತಿಹೋಗುತ್ತದೆ ಮತ್ತು ಮೀನುಗಾರರು ಕೊರವ ಮತ್ತು ವೆರಳ್ ಮೀನುಗಳನ್ನು ಹಿಡಿಯಲು ಕೆರೆಯಲ್ಲಿ ಉಳಿದ ನೀರನ್ನು ಹೊರತೆಗೆಯುತ್ತಾರೆ

ಕೋಡಿಕು ಳಂ ಬಳಿಯ ಚಿಕ್ಕಕೆರೆಯಲ್ಲಿ ನೀರು ಬತ್ತಿ ಹೋಗಿದ್ದರೂ , ಮೀನುಗ ಳು ಸಿಗುತ್ತವೆ

ಸ್ಥಳೀಯ ಉ ಳು ವಾ ಮೀನು ಮಧುರೈ ಯ ಲ್ಲಿ ನೀವು ತಿನ್ನಬಹುದಾದ ಅತ್ಯಂತ ರುಚಿಯಾದ ಮೀನು

ಕಲ್ಲಂಧಿರಿ
ಗ್ರಾಮದ
ಕುಟುಂಬವೊಂದು
ಹಬ್ಬದ
ಸಂದರ್ಭದಲ್ಲಿ
ಹಿಡಿದ
ಮೀನುಗಳನ್ನು
ಪ್ರದರ್ಶಿಸು
ತ್ತಿರುವುದು
ಅನುವಾದ : ಶಂಕರ . ಎನ್ . ಕೆಂಚನೂರು